ಬೆಂಗಳೂರು: ಪಿಂಚಣಿ ಪಡೆಯುವವರ ಆದಾಯದ ಮೇಲೆ ಪ್ರಸ್ತುತ ತೆರಿಗೆ ವ್ಯವಸ್ಥೆ ಹೆಚ್ಚಿನ ಪರಿಣಾಮ ಬೀರುತ್ತಿದ್ದು, ಇದನ್ನು ಇತರೆ ಸ್ಥಿರ ಬಡ್ಡಿ ಸಾಧನಗಳಂತೆ ಸರಿಹೊಂದಿಸುವ ಅಗತ್ಯವಿದೆ ಎಂದು ಲೈಫ್ ಇನ್ಸೂರೆನ್ಸ್ ಕೌನ್ಸಿಲ್ನ ಇನ್ಸೂರೆನ್ಸ್ ಅವೇರ್ನೆಸ್ ಕಮಿಟಿ (IAC–ಲೈಫ್) ಸಹ-ಅಧ್ಯಕ್ಷ ವೆಂಕಿ ಅಯ್ಯರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಮಾತನಾಡಿದ ಅವರು, “ಪಿಂಚಣಿಗೆ ವಿಧಿಸುವ ತೆರಿಗೆಯನ್ನು ಸ್ಥಿರ ಬಡ್ಡಿ ಹೂಡಿಕೆಗಳ ಮಾದರಿಯಲ್ಲಿ ರೂಪಿಸಬೇಕು. ಅಂದರೆ ಪಿಂಚಣಿ ಮೊತ್ತದ ಮೇಲೆ ಅಲ್ಲ, ಕೇವಲ ಅದರ ಬಡ್ಡಿ ಅಥವಾ ಲಾಭದ ಮೇಲಷ್ಟೇ ತೆರಿಗೆ ವಿಧಿಸುವ ವ್ಯವಸ್ಥೆಗೆ ಅವಕಾಶ ಇದೆ ಎಂದು ನಾವು ನಂಬಿದ್ದೇವೆ” ಎಂದು ಹೇಳಿದರು.
ಈ ರೀತಿಯ ತೆರಿಗೆ ಸುಧಾರಣೆಯಿಂದ ನಿವೃತ್ತಿಯ ನಂತರ ಪಿಂಚಣಿ ಪಡೆಯುವವರ ನೈಜ ಆದಾಯ ಹೆಚ್ಚಾಗಲಿದ್ದು, ಜೀವನ ವಿಮಾ ಪರಿಹಾರಗಳ ಮೂಲಕ ದೀರ್ಘಾವಧಿಯ ಉಳಿತಾಯಕ್ಕೆ ಉತ್ತೇಜನ ದೊರೆಯಲಿದೆ ಎಂದು ಅವರು ವಿವರಿಸಿದರು.
ಇದೇ ವೇಳೆ, ತಮ್ಮ ಪಿಂಚಣಿ ಮೊತ್ತವನ್ನು ಒಟ್ಟಾಗಿ ಪಡೆಯದೇ ಹಂತ ಹಂತವಾಗಿ ಪಡೆಯುವ ಪಿಂಚಣಿದಾರರಿಗೆ ಮಾನಕ ಕಡಿತ (ಸ್ಟ್ಯಾಂಡರ್ಡ್ ಡಿಡಕ್ಷನ್) ನೀಡಬೇಕು ಎಂಬುದನ್ನು ವೆಂಕಿ ಅಯ್ಯರ್ ಸಲಹೆ ನೀಡಿದರು. ಇದರಿಂದ ಎಲ್ಲ ಪಿಂಚಣಿದಾರರಿಗೂ ಸಮಾನ ತೆರಿಗೆ ವ್ಯವಸ್ಥೆ (ಟ್ಯಾಕ್ಸ್ ಪ್ಯಾರಿಟಿ) ಖಚಿತವಾಗುತ್ತದೆ ಎಂದು ಅವರು ಹೇಳಿದರು.
ಪಿಂಚಣಿದಾರರ ಆರ್ಥಿಕ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರವು ಈ ಪ್ರಸ್ತಾವನೆಗಳನ್ನು ಪರಿಗಣಿಸಬೇಕು ಎಂಬುದು ಲೈಫ್ ಇನ್ಸೂರೆನ್ಸ್ ಕೌನ್ಸಿಲ್ನ ಅಭಿಪ್ರಾಯವಾಗಿದೆ.