ರಾಮನಾಥಪುರ, ಏ.6: ಕಾವೇರಿ ನದಿ ದಂಡೆಯಲ್ಲಿರುವ, ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಚತುರ್ಯುಗಮೂರ್ತಿ ಶ್ರೀ ರಾಮೇಶ್ವರಸ್ವಾಮಿ ದೇವಾಲಯದ ವಾರ್ಷಿಕ ದಿವ್ಯ ರಥೋತ್ಸವವು ಏಪ್ರಿಲ್ 20ರಂದು ಸೋಮವಾರ ಬೆಳಿಗ್ಗೆ 11.55ಕ್ಕೆ ಸಲ್ಲುವ ಶುಭ ಮಿಥುನ ಲಗ್ನದಲ್ಲಿ ಶ್ರೀ ಪಾರ್ವತೀ ಸಮೇತ ಶ್ರೀ ರಾಮೇಶ್ವರಸ್ವಾಮಿಯವರ ಸಾನ್ನಿಧ್ಯದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಈ ರಥೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮಾಜಿ ಸಚಿವರು ಹಾಗೂ ಶಾಸಕರಾದ ಎ. ಮಂಜು ಅವರಿಗೆ ದೇವಾಲಯದ ಸಮಿತಿಯವರು ಆಹ್ವಾನ ಪತ್ರಿಕೆ ನೀಡಿ, ರಥೋತ್ಸವದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ದೇವಾಲಯದ ಮುಖ್ಯ ಅರ್ಚಕರಾದ ಶ್ರೀನಿವಾಸ್, ಸಹ ಅರ್ಚಕರಾದ ರಘು, ಸಮಿತಿಯ ಸದಸ್ಯರಾದ ಎಂ.ಎನ್. ಕುಮಾರಸ್ವಾಮಿ, ಸಿದ್ದರಾಜು, ಗಂಗೂರು ಭರತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉಳಿಕೆ ಕಾಮಗಾರಿಗೆ ಒತ್ತಾಯ
ಇದೇ ವೇಳೆ, ಕಾವೇರಿ ನದಿ ದಂಡೆಯಲ್ಲಿರುವ ರಾಮನಾಥಪುರದ ಐತಿಹಾಸಿಕ ಶ್ರೀ ರಾಮೇಶ್ವರ ದೇವಾಲಯದ ಆವರಣದ ಸುತ್ತಮುತ್ತಲಿನ ಪೌಳಿಗಳು ಹಾಗೂ ಸುತ್ತಲಿನ 36 ಶಿವಲಿಂಗಗಳ ಗೋಪುರಗಳು ಹಾಳಾಗುತ್ತಿರುವ ಹಿನ್ನೆಲೆ, ಅವುಗಳ ಸಂರಕ್ಷಣೆ ಹಾಗೂ ಉಳಿಕೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಒತ್ತಾಯಿಸಲಾಯಿತು.
ಈ ಕಾಮಗಾರಿಗಾಗಿ ₹4 ಕೋಟಿ 44 ಲಕ್ಷ ಅನುದಾನಕ್ಕೆ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲರು ಈಗಾಗಲೇ ಅಂಕಿತ ಹಾಕಿದ್ದು, ಶೀಘ್ರವೇ ಹಣ ಬಿಡುಗಡೆ ಮಾಡಿಸಿ ದೇವಾಲಯದ ಸುತ್ತಲಿನ ಪೌಳಿಗಳ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ ಸೇರಿದಂತೆ ಸಮಿತಿಯವರು ಶಾಸಕರಾದ ಎ. ಮಂಜು ಅವರಿಗೆ ಮನವಿ ಸಲ್ಲಿಸಿದರು.
– ಕುಮಾರಸ್ವಾಮಿ ಎಂ.ಎನ್.
