ನವದೆಹಲಿ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದ ಎನ್ಕೌಂಟರ್ನಲ್ಲಿ ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ.
ಹತ್ಯೆಗೀಡಾದ ಮೂವರು ಭಯೋತ್ಪಾದಕರಲ್ಲಿ ಇಬ್ಬರನ್ನು ಗುರುತಿಸಲಾಗಿದೆ.
ಹತ್ಯೆಯಾದ ಭಯೋತ್ಪಾದಕರನ್ನು ಶೋಪಿಯಾನ್ನ ಚೋಟಿಪೋರಾ ಹಿರ್ಪೋರಾದ ಎಲ್ಇಟಿ ವಿಭಾಗದ ಎ ಕಾರ್ಯಕರ್ತ ಶಾಹಿದ್ ಕುಟ್ಟಯ್ ಹಾಗೂ ಶೋಪಿಯಾನ್ನ ವಂಡುನಾ ಮೆಲ್ಲೋರಾದ ಸಿ ವರ್ಗದ ಉಗ, ಅದ್ಘಾನ್ ಶಫಿ ದಾರ್ ಎಂದು ಗುರುತಿಸಲಾಗಿದೆ.
2023 ರ ಮಾರ್ಚ್ 8 ರಂದು ಲಷ್ಕರ್ ಸೇರಿಕೊಂಡಿದ್ದ ಶಾಹಿದ್, 2024 ರ ಏಪ್ರಿಲ್ 8 ರಂದು ಡ್ಯಾನಿಶ್ ರೆಸಾರ್ಟ್ ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಭಾಗಿಯಾಗಿದ್ದ. ಈ ಘಟನೆಯಲ್ಲಿ ಇಬ್ಬರು ಜರ್ಮನ್ ಪ್ರವಾಸಿಗರು ಮತ್ತು ಚಾಲಕ ಗಾಯಗೊಂಡಿದ್ದರು.
ಅಲ್ಲದೇ ಈತ 2024 ರ ಮೇ 18 ರಂದು ಶೋಪಿಯಾನ್ ಹಿರ್ಪೋರಾದಲ್ಲಿ ನಡೆದ ಬಿಜೆಪಿ ಸರಪಂಚ್ ಹತ್ಯೆಯಲ್ಲಿ ಕೂಡ ಭಾಗಿಯಾಗಿದ್ದ. ಇನ್ನು 2025 ರ ಫೆಬ್ರವರಿ 3 ರಂದು ಕುಲ್ಯಾಮ್ನ ಬೆಹಿಬಾಗ್ನಲ್ಲಿ ನಡೆದ ಟಿಎ ಸಿಬ್ಬಂದಿಯ ಹತ್ಯೆಯಲ್ಲಿ ಕೂಡ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಎರಡನೇ ಭಯೋತ್ಪಾದಕ ಅದ್ಯಾನ್ ಶಫಿ ದಾರ್ 2024 ರ ಅಕ್ಟೋಬರ್ 18 ರಂದು ಲಷ್ಕರ್ ಸೇರಿದ್ದು, ಅಂದೇ ಶೋಪಿಯಾನ್ ವಾಚಿಯಲ್ಲಿ ವಲಸೆ ಕಾರ್ಮಿಕನ ಕೊಲೆಯಲ್ಲಿ ಭಾಗಿಯಾಗಿರುವ ಆರೋಪ ಈತನ ಮೇಲಿದೆ. ಇನ್ನು ಮೂರನೇ ಭಯೋತ್ಪಾದಕನ ಗುರುತನ್ನು ಪರಿಶೀಲಿಸಲಾಗುತ್ತಿದೆ.
