
ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಸರ್ವ ಶ್ರೇಷ್ಠ ಮಾಹಾನ್ ಬುದ್ಧ, ಹುಟ್ಟಿದ್ದು, ಬೆಳೆದಿದ್ದು ಮತ್ತು ಅಸ್ತಂಗತವಾಗಿದ್ದು ಭಾರತದಲ್ಲಾದರೂ, ಬೌದ್ಧ ತತ್ವ ಮಾತ್ರ ಭಾರತದ ಆಗ್ನೇಯ ಭಾಗದಲ್ಲಿ ಬರುವ ಅನೇಕ ರಾಷ್ಟ್ರಗಳಿಗೆ ತಲುಪಿತು. ದಕ್ಷಿಣ ಏಶಿಯಾದ ರಾಷ್ಟಗಳು ಬೌದ್ಧಧರ್ಮವನ್ನು ಚೀನಾ ಹಾಗು ಜಪಾನ್ ಸೇರಿದಂತೆ ಸ್ವೀಕಾರಾ ಮಾಡಿದರು. ಗೌತಮ ಬುದ್ಧ ಅಗಣಿತ ದಾರ್ಶನಿಕ. ಬುದ್ಧನ ಬೋಧನೆ ತುಂಬಾ ಸರಳವಾದದ್ದು. ಮೊದಲನೆಯದಾಗಿ ಜೀವನ ಎಂಬುದು ಭೋಗ ವಾದವಲ್ಲ. ಎರಡನೆಯದು ಆಸೆ ಎಂಬುದು ದುಃಖಕ್ಕೆ ಕಾರಣ. ಮೂರನೆಯದು ಮನುಷ್ಯ ಮನಸ್ಸು ಮಾಡಿದರೆ ಆಸೆಗಳಿಂದ ದೂರ ಉಳಿಯಬಹುದು. ನಾಲ್ಕನೆಯ ತತ್ವ, ಇಂದ್ರಿಯ ನಿಗ್ರಹ ಹಾಗು ಅತಿ ಭೋಗಗಳ ಮಧ್ಯ ಮಾರ್ಗವನ್ನು ಅನುಸರಿಸಿದರೆ ನಿರ್ವಾಣ ತಲುಪಬಹುದು. ಬೌದ್ಧಧರ್ಮದಲ್ಲಿ ಬಹು ಪ್ರಚಲಿತವಾದ ಎರಡು ಮಾರ್ಗಗಳಿವೆ. ಹಿನಾಯಾನ ಮತ್ತು ಮಹಾಯಾನಾ.
ಈ ಎರಡರ ಬೌದ್ಧಿಕ ಕುರುಹುಗಳನ್ನು ನಾವು ಮಹಾರಾಷ್ಟ್ರದಲ್ಲಿರುವ ಅಜಂತಾ ಗುಹೆಗಳಲ್ಲಿ ನೋಡಬಹುದು. ಸರಿ ಸುಮಾರು 200 ಬಿ ಸಿ ಮತ್ತು 600 ಎ ಸಿ, ಅಂದರೆ 800 ವರ್ಷಗಳ ಕಾಲ ಅಲ್ಲಿಯ ಬೃಹತ್ ಶಿಲೆಗಳನ್ನು ಕೊರೆದು ಕೆತ್ತಲ್ಪಟ್ಟ ಗುಹೆಗಳ ಶಿಲ್ಪವೈಭವ ಬೌದ್ಧ ಧರ್ಮದ ಎರಡು ಮಾರ್ಗಗಳನ್ನು ಇಲ್ಲಿ ಕಾಣಬಹುದು. ಸುಮಾರು 29 ಗುಹೆಗಳು ಇವೆ, ಆದರೆ ನಮಗೆ ನೋಡಲು 11 ಗುಹೆಗಳು ಮಾತ್ರ ಲಭ್ಯ. ಉಳಿದಿದ್ದು ವಿದ್ಯಾರ್ಥಿ ನಿಲಯ ಮತ್ತು ಕೆಲವನ್ನು ಹಣ ಮುಗ್ಗಟ್ಟಿನಿಂದ ಅರ್ಧಕ್ಕೆ ನಿಲ್ಲಿಸಲಾಗಿದೆ. ಈ ಗುಹೆಗಳು ಸಹ್ಯಾದ್ರಿಯ ತಪ್ಪಲ್ಲಲ್ಲಿ ಇದ್ದು ಅರ್ಧಚಂದ್ರಾಕೃತಿಯಲ್ಲಿ ಇವೆ. ಈ ಎಲ್ಲಾ ಬೌದ್ಧ ಗುಹೆಗಳು ಏಕ ಶಿಲಾ ಕೆತ್ತನೆಗಳು. ವಿಷೇಶತೆಯಂದರೆ ಗುಹೆಗಳನ್ನು ಹೊರಗಿನಿಂದ ಒಳಗೆ ಕೆತ್ತಲ್ಪಟ್ಟವು. ಇಂತಹ ಗುಹೆಗಳನ್ನು ಬಾಗಲಕೋಟೆ ಬಾದಾಮಿಯಲ್ಲಿ ಸಹ ನೂಡಬಹುದು. ಈ ಗುಹೆಗಳಿಗೆ ಪ್ರೋತ್ಸಾಹ ಧನವನ್ನು ನೀಡಿದವರು “ಶಾತವಾಹನ, ವಾಕಾಟಾಕ ಹಾಗೂ ಗುಪ್ತ” ರಾಜ ವಂಶಸ್ಥರು. ಹಿನಾ ಎಂದರೆ “ಚಿಕ್ಕ“, ಯಾನ ಅಥವ ಮಾರ್ಗ. ಹಾಗೆಯೇ ಮಹಾಯಾನ ಅಥವಾ ದೊಡ್ಡ ಮಾರ್ಗ.
ಹಿನಾಯಾನ ಸೈದ್ಧಾಂತಿಕವಾಗಿ ಶಿಸ್ತುಕ್ರಮ ಮತ್ತು ಧ್ಯಾನ ಹೇಳಿಕೊಡುವ ಮೊದಲನೆ ಬೌದ್ಧ ಗ್ರಂಥ. ಈ ಕಾಲಘಟ್ಟದಲ್ಲಿ ಕೆತ್ತಲ್ಪಟ್ಟ ಮಂದಿರಗಳಲ್ಲಿ ಮಂಟಪ ಪ್ರಧಾನವಾಗಿದ್ದು, ವಿದ್ಯಾರ್ಥಿಗಳ ವಿಶ್ರಾಂತಿ ಕೊಠಡಿಗಳನ್ನು ಕಾಣಬಹುದು. ಈ ಮಂಟಪಗಳಲ್ಲಿ 2500 ವರ್ಷಗಳ ಹಿಂದೆ ಬುದ್ದನ ಚರಿತ್ರೆಯ “ಜಾತಕ ಕತೆ” ಗಳನ್ನು ಆಧಾರಿಸಿದ ಚಿತ್ರ ಕಲೆಗಳನ್ನು ನೋಡಲು ಸಿಗುವುದು. ಇವು ಯುನೆಸ್ಕೊದಿಂದ ಸಂರಕ್ಷಿಸಲ್ಪಟ್ಟಿದೆ. ಇಂತಹ ಚಿತ್ರ ಕಲೆಗಳನ್ನು ನಾವು ಶ್ರವಣಬೆಳಗೊಳದ ಯಕ್ಷಣಿ ಕೂಷ್ಮಾಂಡ ದೇವಿಯ ದೇಗುಲದಲ್ಲಿ ನೋಡಬಹುದು. ಇಲ್ಲಿ ತೀರ್ಥಂಕರಗಳನ್ನು ಮತ್ತು ಮಹಾವೀರರನ್ನು ಪ್ರಧಾನವಾಗಿ ತೋರಿಸಿ ಚಿತ್ರಕಲೆ ಚಿತ್ರಸಲಾಗಿದೆ. ಸಾವಿರಾರು ವರ್ಷಗಳು ಕಳೆದರೂ ಈ ಚಿತ್ರ ಕಲೆಗಳು ಕಳೆಗೊಳ್ಳದೆ ಇರುವುದು ವಿಸ್ಮಯಕರ ಅಂಶ. ಆಗ ಬೌದ್ದರು ಆರಾಧಿಸುತ್ತಿದ್ದ ಮಂದಿರ, ಸ್ತೂಪ ವಿಹಾರ. ಅಂದಿನ ಶ್ರೇಷ್ಠ ಬೌದ್ಧ ಸನ್ಯಾಸಿಗಳ ಕಾಲಾ ನಂತರ ಅವರ ವಸ್ತು, ಬೂದಿ ಮತ್ತು ಮೂಳೆಗಳನ್ನು ಇಟ್ಟು, ಇವುಗಳ ಮೇಲೆ ಸ್ತೂಪಗಳನ್ನು ರಚಿಸುತ್ತಿದ್ದರು. ಈ ಸ್ತೂಪಗಳಲ್ಲಿ ಬುದ್ದ ನೆಲೆಸಿದ್ದಾನೆ ಎಂಬ ಅಚಲವಾದ ನಂಬಿಕೆ ಬೌದ್ಧರಿಗೆ ಇತ್ತು. ಇಂತಹ ಎರಡು ಸ್ತೂಪ ಮಂದಿರಗಳು ಇಲ್ಲಿ ನೋಡಬಹುದು.
ಮಹಾಯಾನ ಬೌದ್ಧ ಧರ್ಮ ಗ್ರಂಥದ ಮೂಲ ತತ್ವ ನಿರ್ವಾಣದ ದಾರಿ. ಇಲ್ಲಿ ಹೇಳಿದ 8 ತತ್ವ ನಿಯಮಗಳನ್ನು ಪಾಲಿಸಿ ಪ್ರಾರ್ಥನೆಯ ಮೂಲಕ ಮುಕ್ತಿಯನ್ನು ಪಡೆಯುವುದು. ಈ ಗ್ರಂಥ ಜ್ಞಾನ ಭಂಡಾರವೂ ಹೌದು. ಈ ಕಾಲಘಟ್ಟದಲ್ಲಿ ಕೆತ್ತಲ್ಪಟ್ಟ ಮಂದಿರಗಳಲ್ಲಿ ಬುದ್ಧನ ವಿಗ್ರಹಳನ್ನು ಕೆತ್ತಿ, ಪ್ರತಿಷ್ಠಾಪಿಸಿ ಬೌದ್ಧರು ಆರಾಧಿಸುತ್ತಿದ್ದರು. ಇಂತಹ ದಕ್ಷಿಣ ಭಾರತ ದೇವಸ್ಥಾನ ವಾಸ್ತುಶಿಲ್ಪಿಯಲ್ಲಿ ಕೆತ್ತಲ್ಪಟ್ಟ ಮಂದಿರಗಳನ್ನು ಅಜಾಂತಾ ಗುಹೆಗಳಲ್ಲಿ ಕಾಣಬಹುದು.
ಇಂತಹ ಸ್ತೂಪಗಳು ಆಗ್ನೇಯ ಎಶಿಯಾ ದೇಶಗಳಲ್ಲಿ ಒಂದಾದ ಥೈಲಾಂಡ್ ದೇಶದಲ್ಲಿ ಹೇರಳವಾಗಿ ಕಾಣಲು ಸಿಗುವುದು. ಹಿನಾಯಾನ ಬೌದ್ಧ ತತ್ವವನ್ನು ಅನುಸರಿಸುವ ದೇಶವೆಂದರೆ, ಅದು ಥೈಲಾಂಡ್. ಹಿನಾಯಾನ ಬೌದ್ಧ ಗ್ರಂಥದ ವೀರ ಕಾವ್ಯಗಳು ಎರಡು. ಒಂದು ‘ಹಟ ಯೋಗ’, ಮತ್ತೊಂದು ‘ತಂತ್ರಜ್ಞಾನ’. ಸಂಕ್ಷಿಪ್ತವಾಗಿ ತಂತ್ರ ವಿಜ್ಞಾನದ ಸಾರ ‘ ನೀನು ನಿನ್ನನ್ನು ಬ್ರಹ್ಮನಲ್ಲಿ ಒಂದಾಗಿಸು’. ಬುದ್ಧ ತನ್ನ ಬೌದ್ಧ ತತ್ವಗಳಲ್ಲಿ ತಿಳಿಸಿದ್ದ ಕೆಲವು ಅಂಶಗಳು “ಪ್ರೀತಿ, ಕರುಣೆ ಮತ್ತು ವಾತ್ಸಲ್ಯ”. ಯಾರು ಈ ಮೂರು ಅಂಶಗಳನ್ನು ಪ್ರತಿಪಾದಿಸುತ್ತಾರೊ ಅಂದು ಆ ವ್ಯಕ್ತಿ ವಿಶ್ವವನ್ನು ಗೆಲ್ಲಲು ಸಾಧ್ಯ ಎಂಬುದಾಗಿ ಭಗವಾನ್ ಬುದ್ಧರು ಬೋಧನೆ ಮಾಡುತ್ತಿದ್ದರು. ಈ ಸ್ಥಿತಿಯನ್ನು ತಲುಪಲು ಮೂರು ಮುಖ್ಯವಾದ ಗುಣಲಕ್ಷಣಗಳನ್ನು ಅಳವಡಿಸಿಕೊಳ್ಳಬೇಕು. ಈ ಗುಣಗಳು ‘ಧ್ಯಾನ, ಪ್ರಾರ್ಥನೆ ಮತ್ತು ಪರಿಶ್ರಮ’.
ತಂತ್ರದ ಮೂಲ ವಿಷಯ ಬಹುಪಾಲು ಜನರಿಗೆ ತಿಳಿದಿಲ್ಲ. ತಂತ್ರವನ್ನು ತಪ್ಪಾಗಿ ಅರ್ಥೈಸಿ ಮುಗ್ಧರನ್ನು ನಾನಾ ಸಮಸ್ಯೆಗಳಿಗೆ ದೂಡಿದ್ದಾರೆ. ತಾಂತ್ರಿಕರು ತಂತ್ರದಲ್ಲಿ ಇಲ್ಲದ ವಿಚಾರಗಳನ್ನು ಮುಗ್ಧರ ತಲೆಗಳಿಗೆ ತುಂಬಿ ಮೋಸಮಾಡಿರುವುದನ್ನು ಕೇಳುತ್ತಲೇ ಇರುತ್ತೀವಿ. ತಂತ್ರದ ಮೂಲಕ ಶಕ್ತಿವೃದ್ದಿ, ವಶೀಕರಣ, ಮಾಠ, ವಾಮಾಚಾರ, ಮೋಹ, ಧನೋತ್ಪತ್ತಿ, ಇತ್ಯಾದಿಗಳೆಲ್ಲ ಸುಳ್ಳು. ಆದರೆ ಒಂದು ನುಡಿ ಸತ್ಯ ‘ಮಾಡುವ ಕರ್ತವ್ಯವನ್ನು ಹೃದಯದಿಂದ ಮಾಡಿದರೆ ಸಿದ್ದಿಯನ್ನು ಪಡೆಯಬಹುದು’.
ಥೈಲಾಂಡ್ ಬೌದ್ಧ ಧರ್ಮ ಅನುಸರಿಸಿದರೂ ಭೋಗ ಮತ್ತು ಯೋಗ ಎರಡನ್ನೂ ಕಂಡುಕೊಳ್ಳುವ ದೇಶ. ಈ ವಿಚಾರವಾಗಿ ನನ್ನ ಪುಸ್ತಕದಲ್ಲಿ ಉಲ್ಲೇಖಿಸಿದ ಸಾರವನ್ನು ನಾನು ಇಲ್ಲಿ ತಿಳಿಸುವ ಪ್ರಯತ್ನ ಮಾಡುವೆ. ಧ್ಯಾನದಿಂದ ಮುಕ್ತಿಯ ಕಡೆ ಎನ್ನುವುದಾದರೆ ಭೋಗ ಮತ್ತು ಯೋಗ ಎರಡು ಮುಖಗಳ ಒಂದೇ ನಾಣ್ಯ. ಹೀಗಿರುವುದರಿಂದ ಭೋಗಕ್ಕೂ ಮತ್ತು ಯೋಗಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಯೋಗದಿಂದ ಭೋಗ ಮತ್ತು ಭೋಗದಿಂದ ಯೋಗ, ಹಾಗೆಯೇ ಸಂಭೋಗದಿಂದ ಸಂಯೋಗ ಮತ್ತು ಸಂಯೋಗದಿಂದ ಸಂಭೋಗ. ಇವೆರೆಡು ಲಭಿಸಬೇಕಾದರೆ ವಿಶ್ವ ಪ್ರೇಮ ಹಾಗೂ ಪವಿತ್ರ ಪ್ರೀತಿಗಳಿಂದ ಮಾತ್ರ ಸಾಧ್ಯ. ಒಟ್ಟಾರೆ ಅನುಭೋಗಿಸಿದವನಿಗೆ ಭೋಗ, ತಿಳಿದವನಿಗೆ ಯೋಗ.
ಈ ವಿಚಾರಗಳೆಲ್ಲವನ್ನು ಮನಗೊಂಡು ನಾನು ಎರಡನೇ ಬಾರಿ ಥೈಲಾಂಡ್ ಪ್ರವಾಸಕ್ಕೆ ಸಿದ್ದನಾದೆ. 12 ವರ್ಷಗಳ ಹಿಂದೆ ನಾನು ಬ್ಯಾಂಗ್ಕಾಕ್ ಮತ್ತು ಪಟ್ಟಾಯ ಪ್ರವಾಸ ಮಾಡಿದ್ದೆ. ಇವೆರಡರ “ಬ್ಯಾಂಗ್ಕಾಕಿನಲ್ಲಿ ಬುದ್ಧ” ಪ್ರವಾಸ ಕಥನ ಸಹ ಬರೆದಿದ್ದೆ. ನಾವು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೀದಾ ಮೂರು ವರೆ ತಾಸು ಕ್ರಮಿಸಿ ಫುಕೆಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದೆವು. ನಮಗೆ ಥೈಲ್ಯಾಂಡ ವಿಸಾ ಶುಲ್ಕ ಇರಲಿಲ್ಲ. ಅಲ್ಲಿಯ ಸರ್ಕಾರ ಪ್ರವಾಸಕ್ಕೆಂದು ಉತ್ತೇಜನ ನೀಡಲು ಈ ಕ್ರಮವನ್ನು ಅನುಸರಿಸಿತ್ತು. ಇದರಿಂದಾಗಿ ಈ ಪುಟ್ಟ ದ್ವೀಪ ಅಂತರರಾಷ್ಟ್ರೀಯ ಪ್ರವಾಸಿಗರನ್ನು ಹೆಚ್ಚು ಹೆಚ್ಚು ಆಕರ್ಷಸಿತ್ತು. ಈ ಪುಟ್ಟ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಾತ್ರೆಯೇ ನೆರೆದಿತ್ತು. ಅಲ್ಲೆ ನಮ್ಮ ನಾಮಫಲಕ ಅಂಟಿಸಿದ್ದ ಹತ್ತಿರ ಒಬ್ಬಾಕೆ ನಮನ್ನು ಸ್ವಾಗತಿಸಿ ನಮಗೆಂದೇ ಪೂರ್ವ ನಿಯೋಜಿಸಿದ್ದ ಟ್ಯಾಕ್ಸಿ ಚಾಲಕನಿಗೆ ಪರಿಚಯಿಸಿ ಹೋಟೆಲ್ಗೆ ಕರೆದೊಯ್ಯಲು ಸಮ್ಮತಿಸಿದಳು…
ಮುಂದುವರೆಯುವುದು…
– ಡಾ|| ಎ.ಎಂ. ನಾಗೇಶ್
