
ಥೈಲ್ಯಾಂಡ ಮೊದಲ ಅಧಿಕೃತ ಹೆಸರು “ಸಿಯಾಮ್”. ತದನಂತರ “ಥಾಯಲಾಂಡಾ” ಎಂದು ಹೆಸರಿಟ್ಟರು. ಥೈ ಭಾಷೆಯಲ್ಲಿ ಈ ಹೆಸರಿನ ಮೂಲ ಅರ್ಥ “ಮುಕ್ತ ದೇಶ” ಎಂದು. ಯಾವುದಕ್ಕೂ ನಿರ್ಬಂಧವಿಲ್ಲ ಎನ್ನುವ ಸಂದೇಶ. ಇದರಿಂದಲೇ ಈ ದೇಶ ವಯಸ್ಕರ ಸ್ವರ್ಗ.
ಫುಕೆಟ್ ಇಂದ ಕ್ರಾಬಿಗೆ ಮೂರು ತಾಸಿನ ಪ್ರಯಾಣ, ಮಾಡುತ್ತಿರುವಾಗ ನಮಗೆ ಗೋವಾ ಮತ್ತು ಪುದುಚೆರಿ ಪ್ರವಾಸ ಮಾಡುತ್ತಿದ್ದೇವೆ ಎನ್ನುವ ಅನುಭವ. ಮಾರ್ಗ ಮಧ್ಯದಲ್ಲಿ “ವೈಟ್ ಟೆಂಪಲ್” ಬುದ್ಧನ ದೇವಸ್ಥಾನ ಅಥವ ಮಾನಸ್ಟ್ರಿ ಬೇಟಿ ಮಾಡಿದೆವು. ಆ ದಿವಸ ಆವ್ ನಾಂಗ್ ಬೀಚನಲ್ಲಿ ಕಡಲ ಸ್ನಾನ. ಮರು ದಿನ “ಫೋರ್ ಐ ಲ್ಯಾಂಡ್” ಟೂರ್.
ನಾವು ಇಪ್ಪತ್ತು ಆಸನವಿದ್ದ ಲಾಂಗ್ ಬೋಟ್ ಹಿಡಿದು ಆವ್ ನಾಂಗ್ ಬೀಚ್ ಇಂದ ನಾಲ್ಕು ಪುಟ್ಟ ಪುಟ್ಟ ದ್ವೀಪಗಳಿಗೆ ಸಾಗಿದೆವು. ಲಾಂಗ್ ಬೋಟ್ ಹತ್ತುವ ಮುನ್ನ ನಾವು ಕೆಲವು ಮೀಟರ್ಸ ಅಷ್ಟು ತೀರದಲ್ಲಿ ಸಾಗಿ ಏಣಿ ಹತ್ತಿ ಕೂರಬೇಕು. ಅಲೆಗಳಿಗೆ ಬಟ್ಟೆಗಳು ಒದ್ದೆ ಆಗುವ ಸಂದರ್ಭ ಇರುತ್ತದೆ. ಹತ್ತುವಾಗ ಮತ್ತು ಇಳಿಯುವಾಗ ನಿಮ್ಮ ವಸ್ತುಗಳ ಬಗ್ಗೆ ನಿಗ ವಹಿಸಬೇಕು. ನಮ್ಮ ಒಂದು ಫೋನ್ ಸಮುದ್ರ ನೀರಿನಿಂದ ನಿಷ್ಕ್ರಿಯೆ ಆಯಿತು.
ನಾವು ಸಾಗುವ ದಾರಿಯಲ್ಲಿ ಅಲ್ಲಲ್ಲಿ ಭೂ ಪದರಗಳ ಘರ್ಷಣೆಯಿಂದ ಉಂಟಾದ ಸುಣ್ಣದ ಕಲ್ಲಿನ ಎತ್ತರದ ಬೆಟ್ಟದ ಆಕೃತಿ ಬಂಡೆಗಳನ್ನ ನೋಡಿದೆವು. ಇಂತಹ ಬೃಹತ್ ಬಂಡೆಗಳು ನೀರಿನ ಹೊಡೆತಕ್ಕೆ ಕರಿಗಿ ಕೆಲವು ಮೀಟರ್ಸ ಅಷ್ಟು ಕೊರಕಲು ಉಂಟಾಗಿ ಗುಹೆಗಳು, ಕುಳಿ ರಂಧ್ರಗಳು, ನೀರಿನ ಸಣ್ಣ ಸಣ್ಣ ತೊರೆಗಳು ಆಗಿವೆ. ನಾವು ನೋಡಿದ ಮೊದಲ ದ್ವೀಪ “ರೈಲೇ ಬೇ”. ಭೌಗೋಳಿಕವಾಗಿ ಈ ಸ್ಥಳ ಕುದುರೆಲಾಳ ಆಕಾರದ ಬೀಚ್ ಇದ್ದು ಚಿಕ್ಕದಾದ ಗುಹೆ ಇದೆ.
ಈ ಗುಹೆಯ ಒಳಗೆ ನೂರಾರು ವರ್ಷಗಳಿಂದ ನೀರು ಹನಿ ಹನಿಯಾಗಿ ಮೇಲ್ಛಾವಣಿಯಿಂದ ಹರಿದು ಆದ ಸುಣ್ಣ, ಅಮೋನಿಯ ಮತ್ತು ಇತರೆ ಖನಿಜಗಳ ತೂಗು ಕಂಬಗಳನ್ನು ಮತ್ತು ಇದೇ ನೀರು ಭೂಮಿಯ ಮೇಲೆ ಬಿದ್ದ ಸ್ಥಳದಲ್ಲಿ ಲಿಂಗಾಕೃತಿಯಂತ ಅರ್ಧ ಕಂಬಗಳನ್ನು ನೋಡಬಹುದು. ಇಲ್ಲಿ ಪ್ರವಾಸಿಗರು ಕಡಲ ಸ್ನಾನ ಮತ್ತು ಮೌಂಟನ್ ಕ್ಲೃಂಬಿಗ್ ಮಾಡುತ್ತಾರೆ. ಎರಡನೆ ದ್ವೀಪ “ಚಿಕನ್ ನೆಕ್” ದ್ವೀಪ. ಈ ಸ್ಥಳದಲ್ಲಿ ಸಮುದ್ರ ತಿಳಿ ಇರುವುದರಿಂದ ಪ್ರವಾಸಿಗರು “ಸ್ನೋರ್ಲಕಿಂಗ್” ಮಾಡುತ್ತಾರೆ. ಮಾಡುವರಿಗೆ ತರವಾರಿ ಬಣ್ಣ ಬಣ್ಣದ ಮೀನುಗಳು ಕಾಣುತ್ತದೆ. ಇಲ್ಲಿಯ ಗುಡ್ಡ ನೋಡಲು ಕೋಳಿ ಆಕಾರ ಹೊಂದಿದೆ. ಆದುದರಿಂದ ಚಿಕನ್ ನೆಕ್ ಎಂಬ ಹೆಸರು. ಮೂರನೆ ದ್ವೀಪದ ಹೆಸರು “ಟು ಐಲಾಂಡ್”. ಚಿಕ್ಕ ಎರೆಡು ದ್ವೀಪಗಳು ಮರಳಿನ ದಿಬ್ಬದಿಂದ ಕೂಡಿ ಕೊಂಡಿದೆ. ಅಲೆಗಳ ಸೆಳತ ಹೆಚ್ಚಾದಾಗ ಎರಡು ಬೇರ್ಪಡುತ್ತದೆ. ಆದುದರಿಂದ ಈ ಹೆಸರು. ನಾಲ್ಕನೆಯ ದ್ವೀಪ “ಪೋಡಾ ಐಲಾಂಡ್” ದ್ವೀಪ. ಮೂರಕ್ಕೆ ಹೋಲಿಸಿದರೆ ಇದು ದೊಡ್ಡ ದ್ವೀಪ. ಈ ಸ್ಥಳದಲ್ಲಿ ಅನೇಕ ಪ್ರವಾಸಿಗರು ಸಮುದ್ರ ಸ್ನಾನ ಮಾಡುತ್ತಾರೆ.
ನಾವು ಫುಕೆಟ್ ಇಂದ ಫಿ ಫಿ ದ್ವೀಪಗಳ ಸಮೂಹಕ್ಕೆ ಬಿಗ್ ಬೋಟ್ ಹಿಡಿದು ಹೊರಟೆವು. ಸುಮಾರು ಎರಡು ಗಂಟೆಗಳ ಪ್ರಯಾಣ. ಈ ಚಿಕ್ಕ ಹಡಗಿನ ಮೇಲ್ಛಾವಣಿಯ ಡೆಕ್ ಮೇಲೆ ನಿಂತು ಮುಕ್ತ ಸಮುದ್ರ ಮತ್ತು ತಂಗಾಳಿಯ ನಡುವೆ ಸಾಗುತ್ತಿದ್ದ ಅನುಭವ ಚೆನ್ನಾಗಿತ್ತು. ಚಿಕ್ಕ ದ್ವೀಪವನ್ನು ‘ಬೇ’ ಮತ್ತು ದೊಡ್ಡದಾದ ದ್ವೀಪವನ್ನು ‘ಡಾನ್’ ಎಂದು ಕರೆಯುತ್ತಾರೆ. ಚಿಕ್ಕ ದ್ವೀಪದಲ್ಲಿ ‘ಮಾಯಾ ಬೀಚ್, ದ ಬೀಚ್ ಮತ್ತು ಮಂಕೀ ಬೇ’ ತೋರಸಿ ದೊಡ್ಡ ದ್ವೀಪದಲ್ಲಿ ನಿಲ್ಲಿಸುತ್ತಾರೆ. ಎರೆಡು ಸಾವಿರ ಇಸವಿಯಲ್ಲಿ ಲಿಯನಾರ್ಡೋ ಡಿ ಕಾಪ್ರಿಯೋ ನಟಿಸಿರುವ ‘ದಿ ಬೀಚ್’ ಈ ಸ್ಥಳದಲ್ಲಿ ಚಿತ್ರಿಕರಸಿಲಾಗಿತ್ತು. ಆದುದರಿಂದ ಈ ಬೀಚ್ ನ್ನು “ದ ಬೀಚ್” ಎಂದು ಕರೆಯುತ್ತಾರೆ. ಇದರ ಮೂಲ ಹೆಸರು ‘ಕೊ ಫಿ ಫಿ ಲೆ ಬೀಚ್’ ಈ ದ್ವೀಪದಲ್ಲಿ ವಾಟರ್ ಸ್ಪೋರ್ಟ್ಸ ಹೆಚ್ಚು. ಸ್ನೋರ್ಲಕಿಂಗ್ ಮತ್ತು ಸ್ಕೂಬಾ ಡೈವಿಂಗ್ ಆಟಗಳನ್ನು ಆಡಲು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಈ ಆಟಗಳನ್ನು ಆಡದೇ ಇರೊಂತಹವರಿಗೆ ಈ ದ್ವೀಪ ಸಮೂಹಕ್ಕೆ ಹೋಗುವುದು ದಂಡ.
ಸಾವಿರ ಒಂಬೈನೋರು ಎಪ್ಪತ್ ನಾಲ್ಕನೆಯ ಇಸವಿಯಲ್ಲಿ ಕಾ ಫಿಂಗ್ ಕಾನ್ ದ್ವೀಪದಲ್ಲಿ ರೋಜರ್ ಮೂರ್ ನಟಿಸಿರುವ ಜೇಮ್ಸ ಬಾಂಡ್ ಚಿತ್ರ ‘ದ ಮ್ಯಾನ್ ವಿತ್ ಗೋಲ್ಡನ್ ಗನ್’ ಚಿತ್ರೀಕರಿಸಿದ ನಂತರ ‘ಜೇಮ್ಸ ಬಾಂಡ್ ದ್ವೀಪ ‘ ಎಂದು ಮರು ನಾಮಕರಣ ಮಾಡಿದರು. ಇಲ್ಲಿಗೆ ನಾವು ಮತ್ತೆ ನಲವತ್ತರಿಂದ ಐವತ್ತು ಪ್ರವಾಸಿಗರು ಕೂರುವ ಲಾಂಗ್ ಟೃಲ್ ಬೋಟ್ನಿಂದ ಪ್ರಯಾಣ ಬೆಳಸಿದೆವು. ಇಂತಹ ದೋಣಿಗಳಿಗೆ ಚಿಕ್ಕ ಚಿಕ್ಕ ಬಂದರು ಇರುತ್ತೆ. ಈ ಬೋಟ್ ಉಪ್ಪು ನೀರಿನಲ್ಲಿ ಬೆಳೆಯುವ ಪೊದೆ ಅಥವ ಮ್ಯಾಂಗ್ರೂವ್ ಅರಣ್ಯ ಮತ್ತು ಸುಣ್ಣದ ಕಲ್ಲಿನ ಗುಡ್ಡಗಳ ಮಧ್ಯೆ ಸಾಗುವುದರಿಂದ ನನಗೆ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಸುಂದರ್ಬನ್ ನೆನೆಪಿಗೆ ಬಂತು.
ಸುಮಾರು ಅರ್ಧ ಗಂಟೆ ಸಾಗಿದ ಮೇಲೆ ಜೇಮ್ಸ ಬಾಂಡ್ ದ್ವೀಪ ಸಿಗುತ್ತದೆ. ಇಲ್ಲಿಯ ವಿಶೇಷತೆ ಎನೆಂದರೆ ಸುಣ್ಣದ ಕಲ್ಲಿನ ಸ್ಥಳಾಕೃತಿ. ಈ ಕಲ್ಲಿನ ಸುತ್ತ ನೀರಿದ್ದು ಅರ್ಧ ಚಂದ್ರಾಕೃತಿಯ ಕಡಲು ತೀರವಿದೆ. ಇಲ್ಲಿ ಚಿಕ್ಕ ಗುಹೆಯನ್ನೂ ಸಹ ಕಾಣಬಹುದು. ಈ ಜಾಗ ಪ್ರವಾಸಿಗರ ಫೋಟೋ ಮತ್ತು ಸೆಲ್ಫೀಗೆ ಹೇಳಿ ಮಾಡಿಸಿದಂತ ತಾಣ. ಇಲ್ಲಿಂದ ನಮ್ಮ ಪ್ರಯಾಣ “ಟಾಲು ಕೇವ್ಸ್”. ನಮ್ಮನ್ನು ಇಬ್ಬರಂತೆ ಚಿಕ್ಕ ಗಾಳಿ ದೋಣಿ ಅಥವ ಕ್ಯಾನೋದಲ್ಲಿ ಕೂರಿಸಿ ಅಂಬಿಕನೊಬ್ಬ ಹಾಯಿಸುತ್ತಾ ಪೊದೆ ಮತ್ತು ಸುಣ್ಣದ ಕಲ್ಲಿನ ಬಂಡೆಗಳ ಕೊರಕಲ ಗುಹೆಯೊಳಗೆ ಹಾದು ಹೋಗುತ್ತಾನೆ. ಈ ಅನುಭವ ಅವಿಸ್ಮರಣೀಯ. ದೋಣಿ ಚಿಕ್ಕದಾಗಿದ್ದು ಕೂರಲು ಅನಾನುಕೂಲವೇ. ದಪ್ಪನೆಯರಿಗೆ ಮೂವತ್ತು ನಿಮಿಷ ಕೂರುವುದು ಕಷ್ಟಕರ. ನಮಗೆ ಸೊಂಟದ ನೋವು ಶುರುವಾಗಿ ಬಿಡುತ್ತದೆ. ಆದರೆ ಇಲ್ಲಿಯ ಪ್ರಕೃತಿಯ ಸೌಂದರ್ಯ ನಮ್ಮ ನೋವನ್ನು ಮರೆಸಿಬಿಡುತ್ತೆ. ನಮ್ಮ ನಾವಿಕ ಹದಿಹರೆಯವನಾಗಿದ್ದು ತನ್ನ ಹಳ್ಳಿಯಿಂದ ಬಂದವನಾಗಿದ್ದ. ರಜಾ ದಿನವಾದ್ದರಿಂದ ನಾವಿಕನಾಗಿ ದುಡಿದು ನಾವು ಕೊಡುವ ಟಿಪ್ಸ ಇಂದ ತನ್ನ ಓದಿಗೆ ವಿನಿಯೋಗ ಮಾಡಿಕೊಳ್ಳುತ್ತೇನೆಂದು ತಿಳಿಸಿದ.
ಇಲ್ಲಿಂದ ಹತ್ತಿರದಲ್ಲೇ ಇದ್ದ ‘ಪನಯೀ’ ದ್ವೀಪ ಹಳ್ಳಿಗೆ ನಮ್ಮ ದೋಣಿಯ ಗೈಡ್ ಕರದೋಯ್ದು ಅಲ್ಲಿಯ ಹೋಟೆಲ್ನಲ್ಲಿ ಮಧ್ಯಾಹ್ನದ ಊಟವನ್ನು ಮಾಡಿಸಿ ಫುಕೆಟ್ ಬಂದರಿಗೆ ಕರೆದುಕೊಂಡು ಬಂದರು. ಇಲ್ಲಿಗೆ ನಮ್ಮ ಎಲ್ಲಾ ದ್ವೀಪಗಳ ಟೂರ್ ಮುಗಿಯಿತು.
ಮುಂದುವರೆಯುವುದು…
– ಡಾ|| ಎ.ಎಂ. ನಾಗೇಶ್
