
ಮೊದಲೇ ತಿಳಿಸಿದಂತೆ ಫುಕೆಟ್ ದ್ವೀಪ ದೊಡ್ಡದಲ್ಲ. ನಮ್ಮ ಸಿಟಿ ಟೂರ್ ಪ್ಯಾಕೇಜಿನಲ್ಲಿ ಗೋಡಂಬಿ ಸಂಸ್ಕರಣಾ ಘಟಕ ಮತ್ತು ‘ಬಿಗ್ ಬೀ’ ಉದ್ಯಾನವನ ಇತ್ತು. ಯಾವುದೇ ವಸ್ತುವನ್ನು ಖರೀದಿಸಬೇಕೆಂದರೆ ತುಟ್ಟಿ ಬೆಲೆಯನ್ನು ಇಲ್ಲಿ ನೀಡಬೇಕು. ಈ ದ್ವೀಪದಲ್ಲಿ ಕುಡಿಯುವ ನೀರು ಸಿಗುವುದಿಲ್ಲ. ಯಾವುದೇ ಸಿಹಿ ಸರೋವರ ಅಥವ ಹೊಂಡಗಳಿಲ್ಲ. ಇವರು ಕುಡಿಯುವದಕ್ಕೆ ಮಿನರಲ್ ಬಾಟ್ಲ ನೀರೇ ಗತಿ. ಆದುದರಿಂದ ಹೋಟೆಲ್ಸಲ್ಲಿ ಕುಡಿಯುವ ಬಿಸಿ ನೀರಿಗೂ ಬೆಲೆ ತೆತ್ತಬೇಕು. ನಾವು ನೆನಪಿನ ಕುರುಹವಾಗಿ ಕೆಲವು ಬಗೆ ಬಗೆಯ ರುಚಿ ಲೇಪನ ಮಾಡಿದ್ದ ಗೋಡಂಬಿಯನ್ನು ಖರೀದಿಸಿದೆವು. ಬೀ ಉದ್ಯಾನವನದಲ್ಲಿ ಅಷ್ಟಾಗಿ ಸಿಹಿ ಅಲ್ಲದ ಬೆಟ್ಟದ ಹೂವಿನ ನೈಸರ್ಗಿಕ ಜೇನುತುಪ್ಪ ಕೊಂಡೆವು.
ನಮ್ಮ ಮುಂದಿನ ಸ್ಥಳ ‘ವಾಟ್ ಚಲಾಂಗ್ ಲಾ’ ಬೌದ್ಧ ವಿಹಾರ. ಫುಕೆಟ್ ದ್ವೀಪದಲ್ಲಿ ಹಲವಾರು ಬೌದ್ಧ ದೇವಸ್ಥಾನಗಳಿದ್ದರೂ ಈ ದೇವಸ್ಥಾನ ಅತ್ಯಂತ ಪ್ರಾಮುಖ್ಯ ಮತ್ತು ಶಕ್ತಿಪ್ರದಾಯಕ ಬುದ್ಧ ವಿಹಾರ. ಪ್ರಪಂಚಾದ್ಯಂತ ಭೌಧ್ದ ಧರ್ಮದವರು ತೀರ್ಥಯಾತ್ರೆಗೆಂದೇ ಈ ದೇವಸ್ಥಾನಕ್ಕೆ ಬಂದು ಹರಕೆ ತೀರಿಸುವಂತೆ ಕೇಳಿಕೊಳ್ಳುತ್ತಾರೆ ಮತ್ತು ಹರಕೆ ಈಡೇರಿದರೆ ಮತ್ತೆ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಇಲ್ಲಿಯ ಜನರಿಗೆ ರೋಗ ರುಜಿನಗಳು ಬಂದರೆ ಇಲ್ಲಿಗೆ ಬಂದು ವಾಸಿ ಆಗಲೆಂದು ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಈ ವಿಹಾರದ ಪ್ರಾಂಗಣ ವಿಶಾಲವಾಗಿದೆ. ಈ ದೇವಸ್ಥಾನವನ್ನು ಹತ್ತೊಂಬತ್ತನೆಯ ಶತಮಾನದಲ್ಲಿ ಕಟ್ಟಲ್ಪಟ್ಟಿದೆ. ಥೈ ವಾಸ್ತುಶಿಲ್ಪದಿಂದ ಅಲಂಕೃತಗೊಂಡಿದೆ. ಬುದ್ಧರಿಗೆ ಇಬ್ಬರು ಪೂಜ್ಯ ಅನುಯಾಯಿಗಳು ಇಲ್ಲಿ ವಾಸ ಮಾಡಿದ್ದರಂತೆ. 1897 ಇಸವಿಯಂದು ಚೀನಾ ಮೇಲೆ ಯುದ್ಧ ಮಾಡಿದಾಗ ಈ ಬಿಕುಗಳು ಅಥವ ಸನ್ಯಾಸಿಗಳು ಅಂದು ಗಾಯಗೊಂಡ ಸೈನಿಕರನ್ನು ತಮ್ಮ ದಿವ್ಯ ಶಕ್ತಿ ಮತ್ತು ಗಿಡ ಸೊಪ್ಪುಗಳಿಂದ ವಾಸಿ ಮಾಡಿದ್ದರಂತೆ. ಇವರ ಜ್ಞಾಪಕಾರ್ಥಕವಾಗಿ ಕಟ್ಟಿಸಿದ ದೇವಸ್ಥಾನ. ಇದರ ಪಕ್ಕದಲ್ಲೆ ಬಹುಮಹಡಿ ಎರಡು ನೂರು ಅಡಿ ಎತ್ತರದ ಮಾರ್ಡನ್ ಸ್ತೂಪವಿದೆ. ಮೂರನೆ ಅಂತಸ್ತಿನಲ್ಲಿ ಬುದ್ಧನ ಮೂಳೆಯನ್ನು ನಿರ್ವಾತ ಗಾಜಿನ ಬಟ್ಟಲಲ್ಲಿ ಸಂರಕ್ಷಿಸಲ್ಪಟ್ಟಿದೆ ಎಂಬುದು ಇಲ್ಲಿಯ ಪ್ರಜೆಗಳ ನಂಬಿಕೆ. ದೇವಸ್ಥಾನಕ್ಕೆ ನೆಡೆದು ಹೋಗುವ ದಾರಿಯಲೆಲ್ಲಾ ಹುಳ ಉಪ್ಪಟಗಳ ತಿಂಡಿ ತಿನಿಸುಗಳು. ಜೀವಂತ ಕಪ್ಪೆ, ಹಾವು ಮತ್ತು ಇತರೆ ಜಲಚರಗಳನ್ನು ಇಲ್ಲಿ ಮಾರಲಾಗುತ್ತೆ.
ಇಲ್ಲಿಂದ ನಾವು ಚಿಕ್ಕದಾದ ಸಾಕಿದ ಆನೆ ಉದ್ಯಾನವನವನ್ನು ತಲುಪಿದೆವು. ಮೊದಲೇ ತಿಳಿಸಿದಂತೆ ಆನೆ ಮತ್ತು ಥೈಲಾಂಡ ಪ್ರಜೆಗಳಿಗೆ ಬಲವಾದ ಅಭಿನವ ಸಂಬಂಧ. ಇಲ್ಲಿಯ ಮಾವುತನ ಜೊತೆ ಮಗು ಇದ್ದ ಹಾಗೆ ಆನೆ ವರ್ತಿಸುತಿತ್ತು. ನಾವು ಬಾಳೆಹಣ್ಣು ನೀಡಿದರೆ ನಮ್ಮನ್ನು ಅಪ್ಪಿ ಧನ್ಯವಾದ ಅರ್ಪಿಸುತಿತ್ತು. ಏನೇ ಆದರೂ ಆನೆಯ ಸಂಘ ಭಯ ಮತ್ತು ರೋಮಾಂಚಕ. ಹತ್ತಿರದಲ್ಲೆ ಇದ್ದ ‘ಕರೇನ್ ಪಾಯಿಂಟ್’ ವೀಕ್ಷಣೆಯ ಸ್ಥಳ. ಇಲ್ಲಿಂದ ಫುಕೇಟ್ ಸೊಗಸಾಗಿ ಕಾಣುತ್ತೆ. ಈ ಜಾಗದಲ್ಲಿ ಸಾಕಿದ ಗಿಡುಗವನ್ನು ಹಣ ನೀಡಿ ತಮ್ಮ ಮುಂಗಕೈ ಮೇಲೆ ನಿಲ್ಲಿಸಿಕೊಂಡು ಫೋಟೊ ಕ್ಲಕ್ಕಿಸಿ ಕೂಳ್ಳಬಹುದು. ಟೈಗರ್ ಪಾರ್ಕಲ್ಲಿ ತುಂಬ ತರಬೇತಿ ನೀಡಿದ ಹುಲಿಗಳು ಇರುತ್ತವೆ. ನಾವು ಇವುಗಳ ಹಿಂದೆ ನಿಂತು ಅಥವ ಹುಲಿ ಕಾಲು, ಹೋಟ್ಟೆ ಹಾಗು ಬಾಲವನ್ನು ಸವರುತ್ತಾ ಫೋಟೋ ತೆಗೆಸಿಕೊಂಡೆವು. ಈ ಹುಲಿಗಳನ್ನು ನೋಡಿದರೆ ಮತ್ತು ಬರುವ ಔಷಧೀಯನ್ನು ನೀಡಿರಬಹುದೆಂಬ ಸಂಶಯ ಬರುತ್ತಿತ್ತು.
ಸಾಯಂಕಾಲ ನಾವು ಕೆಲವು ಮಾರುಕಟ್ಟೆಗಳಿಗೆ ಬೇಟಿ ನೀಡಿದೆವು. ಇಲ್ಲಿ ಸಾಕಷ್ಟು ಶಾಪಿಂಗ್ ಸ್ಥಳಗಳಿವೆ. ಪ್ರಮುಖವಾದದು ‘ನಾಕಾ ಮಾರುಕಟ್ಟೆ’. ಇದು ಅಗ್ಗದ ದರದ ಮಾರುಕಟ್ಟೆ. ನಾನು ಈ ಹಿಂದೆ ಮೈನ್ ಲ್ಯಾಂಡಿನ ‘ಪಟ್ಟಾಯ’ ಬೇಟಿ ನೀಡಿದ್ದೆ. ಈ ಸಿಟಿಗೆ ಹೋಲಿಸಿದರೆ ಫುಕೆಟ್ ನಗರದ ‘ಬಾಂಗ್ಲ ರಸ್ತೆ’ ಅಲ್ಪ ಸಭ್ಯವಾದ ಸ್ಥಳ. ಈ ರಸ್ತೆಯನ್ನು ದಾಟಿದರೆ ಪಟಾಂಗ್ ಬೀಚ್ಗೆ ಬರುತ್ತೇವೆ. ಇಲ್ಲಿ ನಡೆಯುತ್ತಿರುವಾಗ ಯಾವುದೋ ಮಾಯಾ ಲೋಕದಲ್ಲಿ ಇದ್ದೇವೆ ಎಂದು ಬಾಸವಾಗುತಿತ್ತು. ಪಬ್, ಮದ್ಯ ಪ್ರಿಯರ ಗೃಹಗಳು, ತರಾವರಿ ಮಾಂಸಹಾರಿ ಹೋಟೆಲ್ಗಳು, ಹಾಡುವ ಗಾಯಕ ಗಾಯಕಿಯರು, ತುಂಡು ಉಡುಗೆಯ ಲಲನೆಯರು ಮತ್ತು ಲೇಡಿ ಬಾಯ್ಸ, ವಯೋಮಾನರಗೆಂದೇ ಅನೇಕ ಶೋಗಳು, ಬಂದ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದವು. ಕಿವುಡಾಗಿಸುವ ಸಂಗೀತ ಮತ್ತು ಅಲಂಕೃತ ಬೆಳಕಿನ ಚಿತ್ತಾರದಿಂದ ಈ ರಸ್ತೆ ಕಂಗೊಳಿಸುತ್ತಿತ್ತು. ಇಲ್ಲಿ ಸಮಯ ಹರಿಯುವುದೇ ಗೊತ್ತಾಗುವುದಿಲ್ಲ. ಆದರೇ ಶಾಪಿಂಗ್ ಮಾತ್ರ ಬಲು ತುಟ್ಟಿ.
ನಾನು ಮತ್ತು ನನ್ನ ಶ್ರೀಮತಿ ನಾಕಾ ಬಜಾರ್ ಸುತ್ತು ಹೊಡೆದ ಮೇಲೆ ಈ ಬಜಾರ್ ಮುಂದಿನ ಕಟ್ಟೆ ಮೇಲೆ ಕೂತಿದ್ದವು. ಪಕ್ಕದಲ್ಲೇ ಜಾಗ ಇದ್ದಿದ್ದರಿಂದ ಸುಮಾರು 28ರಿಂದ 30 ವರ್ಷಗಳ ಹೆಂಗಸು ನಮ್ಮನ್ನು ಕುರಿತು ‘ಮೇ ಐ ಸಿಟ್ ಹಿಯರ್’ ಎಂದ ಕೇಳಿದಳು. ನಾವು ಸರಿ ಎಂದು ಸಮ್ಮತಿಸಿದೆವು. ನನ್ನಾಕೆ ಆಕೆಯನ್ನು ಉದ್ದೇಶಿಸಿ ‘ಯು ಆರ್ ಫ್ರಮ್ ವಿಚ್ ಕಂಟ್ರಿ’ ಎಂದನ್ನಲು ಆಕೆ ‘ಫ್ರಮ್ ಫ್ರಾನ್ಸ’ ಎಂದೆನ್ನತ್ತಾ ನಮ್ಮನ್ನು ಸಹ ವಿಚಾರಿಸಿದಳು. ಈಕೆ ಸಿಂಗಲ್. ಅನೇಕ ದೇಶಗಳನ್ನು ಸುತ್ತಿ ಬಂದಿದ್ದಾಳೆ. ನನ್ನ ಕುತೂಹಲಕ್ಕೆ ‘ಹಾವ್ ಯು ವಿಸಿಟೆಡ್ ಇಂಡಿಯಾ’ ಪ್ರಶ್ನೆಗೆ ಇಲ್ಲವೆಂದಳು. ಎಷ್ಟೇ ಆದರೂ ನಮ್ಮ ಭಾರತ. ನಾವು ಆಕೆಯನ್ನು ಆಮಂತ್ರಿಸಿದೆವು. ಆಕೆ ಹೇಳಿದ ಉತ್ತರಕ್ಕೆ ನಮಗೆ ಕಸಿವಿಸಿ ಮತ್ತು ಬೇಜಾರು ತಂದಿತ್ತು. ‘ ಐ ಹರ್ಡ ಇಂಡಿಯಾ ಈಸ್ ನಾಟ್ ಸೇಫ್ ಫಾರ್ ವುಮನ್’ ತಿಳಿಸಿದಳಾಕೆ. ಆಗ ನಮಗೆ ಅನ್ನಿಸಿದ್ದು ಭಾರತದ ಬಗ್ಗೆ ಹೊರ ದೇಶದ ಪ್ರಜೆಗಳಿಗೆ ಒಳ್ಳೆಯ ಅಭಿಪ್ರಾಯ ಏನಾದರೂ ಬಂದರೆ ನಮ್ಮ ಪ್ರವಾಸೋದ್ಯಮ ಹೇಗೆ ಬೆಳೆಯಬಹುದು? ನಾವು ಆಕೆಯನ್ನು ಉದ್ದೇಶಿಸಿ ‘ನೌ ಇಂಡಿಯಾ ಹ್ಯಾಸ್ ಚೇಂಜಡ್’ ಎಂದು ಮನವರಿಕೆ ಮಾಡಿ ಕೊಟ್ಟೆವು.
ಕೊನೆಯದಾಗಿ ಮೊದಲೇ ತಿಳಿಸಿದಂತೆ, ‘ಯೋಗ’ ತಿಳಿದವನಿಗೆ, ‘ಭೋಗ’ ಅನುಭೋಗಿಸುವನಿಗೆ. ಭಗವಾನ್ ಬುದ್ಧ ತಿಳಿಸಿದಂತೆ “ನೀನು ಯೋಗಿಯೋ ಅಥವ ಭೋಗಿಯೋ ಆದರೇ ನೀ ಇವೆರಡರ ಮಧ್ಯದ ಮಾರ್ಗ ಕಂಡುಕೊಂಡರೇ ಮುಕ್ತಿ ಸಹ ಸಾಧ್ಯ”. ನನ್ನ ವೈಯಕ್ತಿಕ ಅಭಿಪ್ರಾಯ ಹೇಳಬೇಕೆಂದರೆ ಶಾಸ್ತ್ರವಿರಲಿ, ಸಂಪ್ರದಾಯವಿರಲಿ, ಆದರೆ ಇವರೆಡರ ಮಧ್ಯೆ ಪ್ರೀತಿ ಮತ್ತು ಶ್ರದ್ಧೆ ಇದ್ದರೆ ಪ್ರಪಂಚವನ್ನೇ ಗೆಲ್ಲಬಹುದು.
ನಮ್ಮ ವಾರದ ಪ್ರವಾಸ ಮುಗಿಸಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಇಳಿದೆವು. ನನ್ನಾಕೆ ಮಾತ್ರ ನಮ್ಮ ವಿಮಾನವನ್ನು ಅತ್ಯಂತ ಸುರಕ್ಷಿತವಾಗಿ ಇಳಿಸಿದ್ದರಿಂದ ಪೈಲಟ್ಗೆ ಧನ್ಯವಾದವನ್ನು ಮರೆಯದೆ ತಿಳಿಸಿದಳು..
ಮುಗಿಯಿತು…
– ಡಾ|| ಎ.ಎಂ. ನಾಗೇಶ್
