ಬೆಂಗಳೂರು: ಭಾರತೀಯ ಸಂವಿಧಾನದ ಆಶಯಗಳು ಮಣ್ಣುಪಾಲಾಗಬಾರದೆಂದರೆ ಡಾ. ಬಿ.ಆರ್. ಅಂಬೇಡ್ಕರ್ ರೂಪಿಸಿದ ಪ್ರಜಾಪ್ರಭುತ್ವ ವ್ಯವಸ್ಥೆಯ ದಿಕ್ಕು–ದೆಸೆಗಳು ಮತ್ತು ಮೌಲ್ಯಗಳನ್ನು ಅರಿತು ಅವುಗಳೊಂದಿಗೆ ಬೆರೆತು ನಡೆಯಬೇಕಿದೆ ಎಂದು ಕವಿ, ಸಾಂಸ್ಕೃತಿಕ ಚಿಂತಕ ಹಾಗೂ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ರಾಮಲಿಂಗೇಶ್ವರ್ ಸಿಸಿರಾ ಅಭಿಪ್ರಾಯಪಟ್ಟರು.

ಅವರು ಬೆಂಗಳೂರಿನ ಕುರುಬರಹಳ್ಳಿಯ ರಾಜರಾಜೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಭುವನೇಶ್ವರಿ ಕಲಾ ಬಳಗದ ಎಲ್. ಬಸವಲಿಂಗ ಅವರ ಆಯೋಜನೆಯಲ್ಲಿ ನಡೆದ ಗಣರಾಜ್ಯೋತ್ಸವ ಹಾಗೂ ಸಂಕ್ರಾಂತಿ ಸುಗ್ಗಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಇಂದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದ ಅಂಚಿನಲ್ಲಿದೆ ಎಂಬುದನ್ನು ಸಮಾಜ ಗಂಭೀರವಾಗಿ ಗಮನಿಸಬೇಕಿದೆ. ಭ್ರಷ್ಟಾಚಾರಕ್ಕೆ ಇಳಿಯುವ ರಾಜಕೀಯ ನಾಯಕರು ಹಾಗೂ ಅವರಿಗೆ ಸಹಕಾರ ನೀಡುವ ಕೆಲ ಅಧಿಕಾರಿಗಳು ಇಡೀ ಸಮಾಜವನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಯುವಜನರು ಮತ್ತು ಮಹಿಳೆಯರು ಎಚ್ಚೆತ್ತುಕೊಂಡು ಮನೆಮನೆಗಳಿಂದಲೇ ವಚನಕಾರರು, ಕೀರ್ತಿ ನೇಕಾರರು, ಹಿರಿಯ ಸಾಹಿತಿಗಳು, ಮಹಾತ್ಮ ಗಾಂಧೀಜಿ ಹಾಗೂ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳ ಮೂಲಕ ಸಮಾಜವನ್ನು ಜಾಗೃತಗೊಳಿಸುವ ಕಾರ್ಯದಲ್ಲಿ ತೊಡಗಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಂಗ್ಲ ಭಾಷೆಯ ಪ್ರಾಧ್ಯಾಪಕ ಹಾಗೂ ಸಮಾಜಸೇವಕರಾದ ಡಾ. ವಿ. ಮುರುಳಿ ಮೋಹನ್ ಅವರನ್ನು ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಭುವನೇಶ್ವರಿ ಕಲಾ ಬಳಗದ ಅಧ್ಯಕ್ಷ ಎಲ್. ಬಸವಲಿಂಗ ವಹಿಸಿದ್ದರು.

ವೇದಿಕೆಯಲ್ಲಿ ಬಿಜಿಎಸ್ ನಗೆಕೂಟದ ರೆಡ್ಡಿ, ದೇವಾಲಯ ಟ್ರಸ್ಟ್ನ ಬಾಲಾಜಿ, ಹ.ನ. ವಸಂತಕುಮಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಮಾರಂಭದ ಅಂಗವಾಗಿ ಕವಿಗೋಷ್ಠಿ, ಗೀತಗಾಯನ ಹಾಗೂ ನೃತ್ಯ ಪ್ರದರ್ಶನಗಳನ್ನು ವಿವಿಧ ಕಲಾವಿದರು ಮತ್ತು ಕವಿಗಳು ಮನಮೋಹಕವಾಗಿ ನಡೆಸಿಕೊಟ್ಟರು.

