ಹಾಸನ: ಪತ್ರಕರ್ತ ಹಾಗೂ ಲೇಖಕ ಮಲ್ನಾಡ್ ಮೆಹಬೂಬ್ ರಚಿಸಿರುವ ‘ಮೂಲ ನಿವಾಸಿ ಮುಕ್ತ ಭಾರತ’ ಕೃತಿಯ ಬಿಡುಗಡೆ ಸಮಾರಂಭ ಫೆಬ್ರವರಿ 15ರಂದು ಬೆಳಗ್ಗೆ 11 ಗಂಟೆಗೆ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆಯಲಿದೆ ಎಂದು ಪತ್ರಕರ್ತ ನಾಗರಾಜ್ ಹೆತ್ತೂರು ತಿಳಿಸಿದರು.
ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃತಿಯನ್ನು ಹಾಸನದ ಕಲಾ ಮತ್ತು ವಿಜ್ಞಾನ ಸ್ನಾತಕೋತ್ತರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಇರ್ಷಾದ್ ಬಿಡುಗಡೆ ಮಾಡಲಿದ್ದಾರೆ. ಅಲೂರಿನ ಕನ್ನಡ ಉಪನ್ಯಾಸಕರಾದ ರೋಹಿತ್ ಅಗಸರವಳ್ಳಿ ಕೃತಿಯ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತೆ ನಜ್ಞಾ ನಜೀರ್ ಚಿಕ್ಕನೆರಳೆ (ಬೆಂಗಳೂರು) ಹಾಗೂ ಮಂಡ್ಯದ ಪ್ರಕಾಶಕರಾದ ಮಹಮ್ಮದ್ ಅಜರುದ್ದೀನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಿಐಟಿಯು ಹಾಸನ ಅಧ್ಯಕ್ಷ ಧರ್ಮೇಶ್ ವಹಿಸಲಿದ್ದಾರೆ. ಕೃತಿಯ ವಿಷಯಾವಳಿಯನ್ನು ಆಧಾರವಾಗಿಟ್ಟುಕೊಂಡು ವಿಶೇಷ ಸಂವಾದ ಕಾರ್ಯಕ್ರಮವೂ ನಡೆಯಲಿದೆ ಎಂದು ತಿಳಿಸಿದರು.
ಕೃತಿಯ ಉದ್ದೇಶ
‘ಮೂಲ ನಿವಾಸಿ ಮುಕ್ತ ಭಾರತ’ ಕೃತಿ ಸಮಾಜದಲ್ಲಿ ಚಿಂತನೆಗೆ ಪ್ರೇರಣೆ ನೀಡುವ ಉದ್ದೇಶ ಹೊಂದಿದ್ದು, ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಅಪವಾದ ರಾಜಕಾರಣ, ವಿಕೃತ ಇತಿಹಾಸ ನಿರ್ಮಾಣ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಅರ್ಧಸತ್ಯಗಳ ಪರಿಣಾಮಗಳನ್ನು ವಿಶ್ಲೇಷಿಸುತ್ತದೆ ಎಂದು ವಿವರಿಸಿದರು.
ಲೇಖಕರಾದ ಮಲ್ನಾಡ್ ಮೆಹಬೂಬ್ ಅವರಿಗೆ ಇದು ಆರನೇ ಕೃತಿಯಾಗಿದೆ. ಜನಪರ ಸಂಘಟನೆಗಳ ಒಕ್ಕೂಟ, ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ದಲಿತ, ಮಹಿಳಾ, ಕಾರ್ಮಿಕ ಮತ್ತು ವಿದ್ಯಾರ್ಥಿ ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ವಿಚಾರಗಳನ್ನು ಕೇಳಲು, ಚರ್ಚಿಸಲು ಮತ್ತು ಅರಿತುಕೊಳ್ಳಲು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಲೇಖಕ ಮಲ್ನಾಡ್ ಮೆಹಬೂಬ್ ಹಾಗೂ ಪತ್ರಕರ್ತ ತೌಫಿಕ್ ಅಹಮದ್ ಉಪಸ್ಥಿತರಿದ್ದರು.