ಕಾಯದ ಕಾರ್ಪಣ್ಯದಲ್ಲಿ ಪ್ರಜ್ಞೆಯ ಉಸಿರು… ಪತ್ರಕರ್ತೆ ಕುಸುಮಾ ಶಾನಭಾಗ ವಿಧಿವಶ ನೆನಪುಗಳ ಬೆನ್ನೇರಿದ ಬದುಕಿಗೆ ವಿದಾಯ

ಹಿರಿಯ ಪತ್ರಕರ್ತೆ, ಸ್ತ್ರೀ ಚಿಂತಕಿ ಹಾಗೂ ಲೇಖಕಿ ಕುಸುಮಾ ಶಾನಭಾಗ (78) ಅವರು ಜೂನ್ 22ರಂದು ಬೆಂಗಳೂರಿನಲ್ಲಿ ನಿಧನರಾದರು. ಕೊಡಗಿನಲ್ಲಿ ಜನಿಸಿ, ಪ್ರಜಾವಾಣಿ ದಿನಪತ್ರಿಕೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಅವರು, ಲೈಂಗಿಕ ಕಾರ್ಯಕರ್ತೆಯರ ಜೀವನವನ್ನು ಹತ್ತು ವರ್ಷಗಳಿಗೂ ಹೆಚ್ಚು ಕಾಲ ಅಧ್ಯಯನ ಮಾಡಿದ್ದರು. ಇವರ ಪ್ರಮುಖ ಕೃತಿಗಳಲ್ಲಿ ‘ನೆನಪುಗಳ ಬೆನ್ನೇರಿ’ ಕಥಾಸಂಕಲನ, ‘ಮಣ್ಣಿಂದ ಎದ್ದವರು’ ಕಾದಂಬರಿ ಹಾಗೂ ‘ಕಾಯದ ಕಾರ್ಪಣ್ಯ’ ಎಂಬ ಲೈಂಗಿಕ ಕಾರ್ಯಕರ್ತೆಯರ ಕುರಿತ ಕಥನ ಪ್ರಖ್ಯಾತ. ‘ಕೆಂಡಸಂಪಿಗೆ’ ಪತ್ರಿಕೆಯಲ್ಲಿ ಅವರ ಅನೇಕ ಬರಹಗಳು ಪ್ರಕಟವಾಗಿವೆ. ಕುಸುಮಾ ಅವರು ಖ್ಯಾತ ಕಾದಂಬರಿಕಾರ ಭಾರತೀಸುತ ಅವರ ಪುತ್ರಿಯಾಗಿದ್ದರು. ‘ಎಡಕಲ್ಲು ಗುಡ್ಡ’, ‘ಹುಲಿಯ ಹಾಲಿನ ಮೇವು’, ‘ಗಿರಿಕನ್ಯೆ’, ‘ಬಯಲುದಾರಿ’ ಅವರ ತಂದೆಯ ಕೃತಿಗಳಲ್ಲಿ ಪ್ರಮುಖವಾಗಿವೆ. ದೇಹದಾನಕ್ಕೆ ಇಚ್ಛೆ ವ್ಯಕ್ತಪಡಿಸಿದ್ದರೂ, ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಾರಣ ದೇಹವನ್ನು ಆಸ್ಪತ್ರೆಗೆ ಸ್ವೀಕರಿಸಲು ಸಾಧ್ಯವಾಗಲಿಲ್ಲ.