
ಹಾಸನ -ಕಾಂಗ್ರೆಸ್ ಸರ್ಕಾರದ್ದು ಮುಚ್ಚುವ ಕೆಲಸವೇ ಹೊರತು ಅಭಿವೃದ್ಧಿ ಮಾಡಲ್ಲ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕಿಡಿ ಕಾರಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಾಸನ ವಿವಿಯನ್ನು ಮುಚ್ಚ ಕೂಡದು. ಬದಲಾಗಿ ಪೂರಕ ಸೌಲಭ್ಯ ಕೊಟ್ಟು ಮತ್ತೊಂದು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಹಾಸನ ಕೃಷಿ ಕಾಲೇಜನ್ನು ಮಂಡ್ಯ ಯೂನಿ ವರ್ಸಿಟಿಗೆ ಸೇರಿಸುವುದು ಬೇಡ, ಬೆಂಗಳೂರು ವಿವಿ ವ್ಯಾಪ್ತಿಯಲ್ಲೇ ಇರಲಿ ಎಂದು ಮನವಿ ಮಾಡಿದ ಅವರು, ಅಧಿವೇಶನದಲ್ಲಿ ಈ ಬಗ್ಗೆ ಹೋರಾಟ ಮಾಡುತ್ತೇವೆ.
ಈ ಸಂಬಂಧ ಈಗಾಗಲೇ ಜಿಲ್ಲೆಯ ನಾಲ್ವರು ಶಾಸಕರೂ ಸಿಎಂಗೆ ಪತ್ರ ಬರೆದಿದ್ದು, ನಮ್ಮ ಹೋರಾಟಕ್ಕೆ ಬಿಜೆಪಿ ಶಾಸಕರ ಸಹಕಾರ ಕೋರುತ್ತೇವೆ ಎಂದರು.
ಅತಿವೃಷ್ಟಿ ಪರಿಹಾರಕ್ಕೆಂದು ಜಿಲ್ಲೆಗೆ ಸರ್ಕಾರದಿಂದ 12 ಕೋಟಿ ಬಂದಿದೆ. ಆದರೆ ಡಿಸಿ ಅದನ್ನು ಹಾಗೆಯೇ ಇಟ್ಟುಕೊಂಡಿದ್ದಾರೆ. ಕನಿಷ್ಠ ರಸ್ತೆ ಗುಂಡು ಮುಚ್ಚಲು ಹಣ ನೀಡುತ್ತಿಲ್ಲ ಎಂದು ದೂರಿದರು.
ಸರ್ಕಾರದ ಹಣಕ್ಕೆ ಡಿಸಿಯವರು ಹಣ್ಣು, ಕಾಯಿ ಒಡೆದು ದೀಪ ಹಚ್ಚಿ ಪೂಜೆ ಮಾಡಲಿ ಎಂದು ಲೇವಡಿ ಮಾಡಿದರು.
ಇದೇ ಧೋರಣೆ ಮುಂದುವರೆದರೆ
ಡಿಸಿ ಕಚೇರಿ ಎದುರು ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
ಸರ್ಕಾರಿ ನೌಕರರಿಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ, ಅಧಿಕಾರಿಗಳು ಲೂಟಿ ಮಾಡಲೆಂದೇ ಜಿ.ಪಂ. ಚುನಾವಣೆ ಮುಂದೂಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮಂಡ್ಯ ಜಿಲ್ಲೆಗೆ ಚೆಲುವರಾಯಸ್ವಾಮಿ ಅವರು ಏನು ಬೇಕೋ ಅದನ್ನು ಮಾಡಲಿ. ಮಂಡ್ಯ ಅಭಿವೃದ್ಧಿಯನ್ನು ಹೇಗೆ ಬೇಕಾದರೂ ಮಾಡಿಕೊಳ್ಳಲಿ. ಅದಕ್ಕೆ ನಮ್ಮ ವಿರೋಧ ಇಲ್ಲ, ಆದರೆ ಹಾಸನ ವಿಷಯಕ್ಕೆ ಬರುವುದು ಬೇಡ ಎಂದರು. ದೇವೇಗೌಡರ ಮೂಲಕ ಕೇಂದ್ರಕ್ಕೆ ಪತ್ರ ಬರೆಸಿ ಬೆಂಗಳೂರು,
ಹಾಸನ ಕೃಷಿ ಕಾಲೇಜಿಗೆ ಹೊಸ ಕೋರ್ಸ್ ತರಲು ಪ್ರಯತ್ನ ಮಾಡಲಾಗುತ್ತಿದೆ. ಅಂತೆಯೇ ನೀವೂ ಸಹ ಹೊಸ ಕೋರ್ಸ್ ಕೊಟ್ಟು ಮಕ್ಕಳಿಗೆ ನೆರವಾಗಿ ಎಂದು ಸಲಹೆ ನೀಡಿದರು.
ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಅಧಿಕಾರಿಗಳೇ ಸೆಕೆಂಡ್ಸ್ ಮಾರಿಸುತ್ತಿದ್ದಾರೆ. ಅಬಕಾರಿ ಇಲಾಖೆ ಒಂದೂ ಪ್ರಕರಣ ದಾಖಲಿಸಿಲ್ಲ. ಪೆಟ್ಟಿಗೆ ಅಂಗಡಿಗಳಲ್ಲಿ ಯಾವ ಬ್ರಾಂಡ್ ಬೇಕಾದರೂ ಸಿಗುತ್ತಿದೆ ಎಂದು ದೂರಿದರು.
400 ಎಕರೆ ಪ್ರದೇಶದಲ್ಲಿ ತೋಟಗಾರಿಕೆ ವಿವಿ ಮಾಡಲು ಹೊರಟೆ ಅದನ್ನು ಏನು ಮಾಡಿದರು, ಈಗ ಕೃಷಿ ಕಾಲೇಜು ಮೇಲೆ ಕಣ್ಣಿಟ್ಟಿದ್ದಾರೆ ಎಂದರು. ಈ ಬಾರಿ ಜಿಲ್ಲೆಗೆ ಉತ್ತಮ ಬಜೆಟ್ ಕೊಟ್ಟರೆ ಸ್ವಾಗತ, ಇಲ್ಲದಿದ್ದರೆ, ಕಾಲ ಬಂದಾಗ ಮಾಡುತ್ತೇವೆ ಎಂದರು.
ಹಾಸನ ಜಿಲ್ಲಾಸ್ಪತ್ರೆಯಲ್ಲಿ ಲೂಟಿ ನಡೆಯುತ್ತಿದೆ. ಹಿಮ್ಸ್ ನಿರ್ದೇಶಕರ ಮಾತು ನಡೆಯುತ್ತಿಲ್ಲ. ಕೆಲವರು ನಡೆದಿದ್ದೇ ದಾರಿ ಎಂದು ದೂರಿದರು.