ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿಯ ಬಾಂಡಿ ಬೀಚ್ನಲ್ಲಿ ಹನುಕ್ಕಾ ಹಬ್ಬದ ಸಂಭ್ರಮದಲ್ಲಿದ್ದ ಯಹೂದಿ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆದ ಭೀಕರ ಗುಂಡಿನ ದಾಳಿಯಲ್ಲಿ 16 ಮಂದಿ ಮೃತಪಟ್ಟಿದ್ದಾರೆ ಎಂದು ನ್ಯೂ ಸೌಥ್ ವೇಲ್ಸ್ ಪೊಲೀಸರು ಅಧಿಕೃತವಾಗಿ ದೃಢಪಡಿಸಿದ್ದಾರೆ. ಕಳೆದ ಮೂರು ದಶಕಗಳಲ್ಲಿ ದೇಶ ಕಂಡ ಅತ್ಯಂತ ಭೀಕರ ದಾಳಿಗಳಲ್ಲಿ ಇದೊಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ದಾಳಿಗೆ ಕಾರಣರಾದವರು ತಂದೆ–ಮಗ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದ್ದು, ಸಾಜಿದ್ ಅಕ್ರಮ್ ಮತ್ತು ನವೀದ್ ಅಕ್ರಮ್ ಎಂಬವರನ್ನು ಪೊಲೀಸರು ಗುರುತಿಸಿದ್ದಾರೆ.
ಏನಿದು ಘಟನೆ?
ಭಾನುವಾರ (ಡಿ.15) ಸಿಡ್ನಿಯ ಬಾಂಡಿ ಬೀಚ್ನಲ್ಲಿ ಎಂಟು ದಿನಗಳ ಕಾಲ ನಡೆಯುವ ‘ಹನುಕ್ಕಾ ಬೈ ದಿ ಸೀ’ ಹಬ್ಬ ಆರಂಭವಾಗಿತ್ತು. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನರು ಉತ್ಸವದಲ್ಲಿ ಭಾಗಿಯಾಗಿದ್ದರು. ಸಂಭ್ರಮದ ನಡುವೆ ಏಕಾಏಕಿ ಗುಂಡಿನ ಸದ್ದು ಕೇಳಿ ಬಂದಿದ್ದು, ಕಪ್ಪು ಬಟ್ಟೆ ಧರಿಸಿದ್ದ ಇಬ್ಬರು ಬಂದೂಕುಧಾರಿಗಳು ಜನರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ.
ಈ ದಾಳಿಯಿಂದ ಜನರಲ್ಲಿ ಭೀತಿ ಉಂಟಾಗಿ ದಿಕ್ಕಾಪಾಲಾಗಿ ಓಡಲು ಆರಂಭಿಸಿದ್ದಾರೆ. ತಮ್ಮ ಜೀವ ಉಳಿಸಿಕೊಳ್ಳಲು ಸುರಕ್ಷಿತ ಸ್ಥಳಗಳತ್ತ ಜನರು ಧಾವಿಸಿದರೂ, ಕೆಲವರು ದಾಳಿಕೋರರ ಗುಂಡಿಗೆ ಬಲಿಯಾಗಿದ್ದಾರೆ. ಮೃತರಲ್ಲಿ 10 ವರ್ಷದ ಮಗು ಹಾಗೂ 87 ವರ್ಷದ ವೃದ್ಧ ಸೇರಿರುವುದು ಸಾರ್ವಜನಿಕರನ್ನು ಮತ್ತಷ್ಟು ಕಲುಷಿತಗೊಳಿಸಿದೆ.
ಇದನ್ನು ಓದಿ: Watch Video- ಬಾಂಡಿ ಬೀಚ್ ಗುಂಡಿನ ದಾಳಿ: ಉಗ್ರನಿಂದ ರೈಫಲ್ ಕಿತ್ತುಕೊಂಡ ಸಾಮಾನ್ಯ ನಾಗರಿಕನ ಧೈರ್ಯಕ್ಕೆ ಶ್ಲಾಘನೆ
ಯಾರು ಈ ಹಂತಕರು?
ನ್ಯೂ ಸೌಥ್ ವೇಲ್ಸ್ ಪೊಲೀಸರು ಮತ್ತು ಭದ್ರತಾ ಪಡೆಗಳು ನಡೆಸಿದ ತನಿಖೆಯಲ್ಲಿ, ದಾಳಿ ನಡೆಸಿದವರು ತಂದೆ ಮತ್ತು ಮಗ ಎಂಬುದು ಪತ್ತೆಯಾಗಿದೆ.
50 ವರ್ಷದ ಸಾಜಿದ್ ಅಕ್ರಮ್ ಸ್ಥಳೀಯ ಹಣ್ಣಿನ ಅಂಗಡಿ ಮಾಲೀಕನಾಗಿದ್ದ ಎನ್ನಲಾಗಿದೆ. ಈತ ನಾಗರಿಕರು ಹಾಗೂ ಪೊಲೀಸರ ಪ್ರತಿದಾಳಿಯಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇನ್ನು ಮಗ ನವೀದ್ ಅಕ್ರಮ್ ದಾಳಿಯ ಸ್ಥಳದಲ್ಲೇ ಬಂಧಿತನಾಗಿದ್ದು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ ಪ್ರಸ್ತುತ ಪೊಲೀಸ್ ಭದ್ರತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಇಬ್ಬರನ್ನು ಹೊರತುಪಡಿಸಿ ದಾಳಿಯಲ್ಲಿ ಇನ್ನಾರೂ ಭಾಗಿಯಾಗಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದಾಳಿ ಯಹೂದಿಗಳನ್ನು ಗುರಿಯಾಗಿಸಿಕೊಂಡೇ ನಡೆಸಲಾಗಿದೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದ್ದು, ನಿಖರ ಉದ್ದೇಶವನ್ನು ತನಿಖೆ ಮೂಲಕ ತಿಳಿದುಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಮೀನುಗಾರಿಕೆ ನೆಪದಲ್ಲಿ ಹೊರಟಿದ್ದರು
ದಾಳಿ ನಡೆಸುವ ಮೊದಲು, ಆರೋಪಿಗಳು ತಮ್ಮ ಕುಟುಂಬದವರಿಗೆ ವಾರಾಂತ್ಯದ ಮೀನುಗಾರಿಕೆಗಾಗಿ ಜರ್ವಿಸ್ ಬೇಗೆ ಹೋಗುತ್ತಿರುವುದಾಗಿ ಸುಳ್ಳು ಹೇಳಿ ಮನೆಯಿಂದ ಹೊರಟಿದ್ದರು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಆರೋಪಿಗಳ ಬಳಿ ಬಂದೂಕು ಪರವಾನಗಿ ಇತ್ತೇ? ಅವರು ಶಸ್ತ್ರಾಸ್ತ್ರಗಳನ್ನು ಹೇಗೆ ಪಡೆದರು? ಅವರಿಗೆ ಯಾರಾದರೂ ಸಹಕಾರ ನೀಡಿದ್ದಾರೇ? ಎಂಬ ಎಲ್ಲಾ ಅಂಶಗಳ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಆರೋಪಿಗಳ ವಾಹನದಲ್ಲಿ ಸುಧಾರಿತ ಸ್ಫೋಟಕ ಸಾಧನಗಳು ಪತ್ತೆಯಾಗಿದ್ದು, ದಾಳಿಯ ಹಿಂದೆ ಇನ್ನಷ್ಟು ದೊಡ್ಡ ಸಂಚು ಇದೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ.
ಈ ಘಟನೆಯ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದಾದ್ಯಂತ ಭದ್ರತೆ ಹೆಚ್ಚಿಸಲಾಗಿದ್ದು, ಸಿಡ್ನಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
