ಹಾಸನ: ಮುಂದಿನ ಚುನಾವಣೆಗಳ ಮೈತ್ರಿ ಕುರಿತು ಅಂತಿಮ ತೀರ್ಮಾನವನ್ನು ಕೇಂದ್ರ ನಾಯಕತ್ವವೇ ಕೈಗೊಳ್ಳಲಿದೆ ಎಂದು ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಕುರಿತು ಅನಾವಶ್ಯಕ ಚರ್ಚೆ ಮಾಡುವ ಅಗತ್ಯವಿಲ್ಲ ಎಂದರು. “ನಾವು ಅವರನ್ನು ಗೌರವಿಸುವಷ್ಟೇ ಅವರು ನಮ್ಮನ್ನು ಗೌರವಿಸಬೇಕು. ಟಿಕೆಟ್ ನೀಡುವ ಅಧಿಕಾರ ಸ್ಥಳೀಯ ಮಟ್ಟದಲ್ಲಿ ಯಾರಿಗೂ ಇಲ್ಲ. ಅದು ಮೇಲ್ಮಟ್ಟದಲ್ಲಿ, ಹೈಕಮಾಂಡ್ ನಿರ್ಧಾರದಂತೆ ನಡೆಯುತ್ತದೆ. ಸಣ್ಣ ಕಾರಣಗಳನ್ನು ಇಟ್ಟುಕೊಂಡು ಹೇಳಿಕೆ ನೀಡುವುದು ಸೂಕ್ತವಲ್ಲ,” ಎಂದು ಸ್ಪಷ್ಟಪಡಿಸಿದರು.
“ಯಾರೇ ಹೇಳಿಕೆ ನೀಡಲಿ, ಟಿಕೆಟ್ ಕೊಡುವುದು ಬಿಜೆಪಿ ಹೈಕಮಾಂಡ್. ಎಲ್ಲ ತೀರ್ಮಾನಗಳು ರಾಷ್ಟ್ರಮಟ್ಟದಲ್ಲಿ ಆಗುತ್ತವೆ. ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಜನತಾದಳ ಪ್ರಭಾವ ಇರುವುದರಿಂದ ಅಪಸ್ವರಗಳು ಸಹಜ. ಅಂತಿಮವಾಗಿ ವರಿಷ್ಠರು ಕೂತು ತೀರ್ಮಾನ ಮಾಡುತ್ತಾರೆ,” ಎಂದು ಹೇಳಿದರು.
“113 ಸ್ಥಾನ ಗೆದ್ದರೆ ಯಾರು ಬೇಕಾದರೂ ಸಿಎಂ ಆಗಬಹುದು”
2028ರಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ ಎಂಬ ನಿಖಿಲ್ ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, “ಜನತಾದಳ 113 ಸ್ಥಾನ ಗೆದ್ದರೆ ಯಾರು ಬೇಕಾದರೂ ಸಿಎಂ ಆಗಬಹುದು. ಅದನ್ನು ತಡೆಯಲು ನಾವು ಯಾರು? ಅದೇ ರೀತಿ ನಾವು 113 ಗೆದ್ದರೆ ನಮ್ಮವರೇ ಸಿಎಂ ಆಗುತ್ತಾರೆ,” ಎಂದು ಹೇಳಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ದೇಶದಲ್ಲಿ Indian National Congress ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ ಅಧಿಕಾರದಲ್ಲಿದೆ ಎಂದು ಆರೋಪಿಸಿದ ಅವರು, ಕರ್ನಾಟಕವನ್ನು ‘ಎಟಿಎಂ’ ಮಾಡಿಕೊಂಡು ಇತರೆ ರಾಜ್ಯಗಳ ಚುನಾವಣೆಗೆ ಹಣ ಹರಿಸಲಾಗುತ್ತಿದೆ ಎಂದು ಟೀಕಿಸಿದರು. ಅಬಕಾರಿ ಇಲಾಖೆಯಲ್ಲಿ 6000 ಕೋಟಿ ರೂಪಾಯಿ ಹಗರಣ ನಡೆದಿದೆ ಎಂದು ಆರೋಪಿಸಿ, ಈ ವಿಚಾರದಲ್ಲಿ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ ಎಂದರು.
ವಿಶೇಷ ಅಧಿವೇಶನ ಕರೆದಿದ್ದು 30 ರಿಂದ 40 ಕೋಟಿ ರೂ. ವೆಚ್ಚವಾಗಿದೆ. ಆ ಹಣವನ್ನು ಬಡವರಿಗೆ ನೀಡಬಹುದಿತ್ತು ಎಂದು ಅಭಿಪ್ರಾಯಪಟ್ಟ ಅವರು, ಅಧಿವೇಶನಕ್ಕೆ ರಾಜ್ಯಪಾಲರನ್ನು ಕರೆದು ಅವಮಾನಿಸಲಾಗಿದೆ ಎಂದು ದೂರಿದರು.
“1982ರಿಂದ ಸಿದ್ದರಾಮಯ್ಯ ಅವರನ್ನು ನೋಡುತ್ತಿದ್ದೇನೆ. ಆಗಿನ ಸಿದ್ದರಾಮಯ್ಯ ಮತ್ತು ಈಗಿನ ಸಿದ್ದರಾಮಯ್ಯ ನಡುವೆ ವ್ಯತ್ಯಾಸ ಇದೆ. ಕಾಂಗ್ರೆಸ್ ನೆಲಕಚ್ಚುತ್ತಿದೆ. ಈಗ ಚುನಾವಣೆ ನಡೆದರೂ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ,” ಎಂದು ಹೇಳಿದರು. ಕೆಲವು ಎಡಪಂಥೀಯ ಸಂಘಟನೆಗಳೊಂದಿಗೆ ಒಪ್ಪಂದ ಮಾಡಿಕೊಂಡು ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಟೀಕಿಸಿದರು.
“ಓಟ್ ಚೋರಿ ಮಾಡಿ ಆಡಳಿತ ನಡೆಸಬಾರದು; ಜನಮನ ಗೆದ್ದು ಆಡಳಿತ ನಡೆಸಬೇಕು. ಕಾಂಗ್ರೆಸ್ ಇದೇ ರೀತಿ ಮುಂದುವರಿದರೆ ಜನರು ತಕ್ಕ ಶಿಕ್ಷೆ ನೀಡುತ್ತಾರೆ,” ಎಂದು ಎಚ್ಚರಿಸಿದರು.