ಕೆ.ಆರ್.ಪೇಟೆ,ಜ.14: ನಮ್ಮ ರಾಜ್ಯ ಕಾಂಗ್ರೆಸ್ ಸರ್ಕಾರವು ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನವು ಬಡಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸಿವೆ.
ಇಂತಹ ಮಹತ್ತರ ಯೋಜನೆಗಳನ್ನು ಬಿಜೆಪಿ ಪಕ್ಷವು ನಕಲು ಮಾಡಿ ಬೇರೆ ಬೇರೆ ರಾಜ್ಯಗಳ ಚುನಾವಣೆಗಳಲ್ಲಿ ಪ್ರಚಾರ ಮಾಡಿಕೊಂಡು ಅಧಿಕಾರಕ್ಕೇರಲು ಪ್ರಯತ್ನಿಸಿದೆ ಹಾಗಾಗಿ ಗ್ಯಾರಂಟಿ ಯೋಜನೆಗಳನ್ನು ಟೀಕಿಸಲು ರಾಜ್ಯದ ಬಿಜೆಪಿ ನಾಯಕರಿಗೆ ನೈತಿಕ ಹಕ್ಕಿಲ್ಲ ಎಂದು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಎ.ಬಿ.ಕುಮಾರ್ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲಿ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ, ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹ ಜ್ಯೋತಿ, ಯುವನಿಧಿ ಯೋಜನೆಗಳು ಬಡವರಿಗೆ ನೆಮ್ಮದಿಯ ಬದುಕು ನೀಡಿವೆ.

ಕೇಂದ್ರ ಸರ್ಕಾರದ ಬೆಲೆ ಏರಿಕೆಯನ್ನು ಎದರಿಸಲು ನಮ್ಮ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಹೆಚ್ಚು ಪ್ರಯೋಜನಕಾರಿಯಾಗಿವೆ.
ಐದು ಯೋಜನೆಗಳಿಗೆ ವರ್ಷಕ್ಕೆ ಸುಮಾರು 60ಸಾವಿರ ಕೋಟಿಯಂತೆ ಇದೂವರೆವಿಗೂ ಸುಮಾರು 150ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳು ಬಡವರಿಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆಯನ್ನು ಒದಗಿಸಿವೆ ಎಂದರು. ಈ ಗ್ಯಾರಂಟಿ ಯೋಜನೆಗಳನ್ನು ಪಕ್ಷಾತೀತವಾಗಿ ಎಲ್ಲಾ ವರ್ಗದ ಅರ್ಹರಿಗೆ ಒದಗಿಸಿಕೊಡಲಾಗುತ್ತಿದೆ ಆದರೂ ವಿರೋಧ ಪಕ್ಷಗಳು ಕೇವಲ ಟೀಕೆಗಾಗಿ ಟೀಕೆ ಮಾಡುತ್ತಿವೆ ಇದು ಸರಿಯಲ್ಲ. ಬಿಜೆಪಿಯು ಧರ್ಮಾಧಾರಿತ ರಾಜಕೀಯ ಮಾಡುತ್ತಿದೆ ಆದರೆ ಕಾಂಗ್ರೆಸ್ ಪಕ್ಷವು ಜನಾಧಾರಿತ, ಬಡವರಾಧಾರಿತವಾಗಿ ಸೇವೆಯನ್ನು ಮಾಡುತ್ತಿದೆ. ನಮ್ಮ ಕಾಂಗ್ರೆಸ್ ಪಕ್ಷವು ಜಾರಿಗೊಳಿಸಿದ್ದ ಮನರೇಗಾ ಯೋಜನೆಯನ್ನು ಬದಲಾವಣೆ ಮಾಡುವ ಮೂಲಕ ಗಾಂಧೀಜೀಯವರ ಕನಸಿನ ಗ್ರಾಮಾಭಿವೃದ್ಧಿ ಯೋಜನೆಯನ್ನು ಬುಡಮೇಲು ಮಾಡಲು ಮುಂದಾಗಿರುವುದು ಸರಿಯಲ್ಲ. ಹಾಗಾಗಿ ನರೇಗಾ ಯೋಜನೆಯನ್ನು ಯಾಥಾಸ್ಥಿತಿಯಲ್ಲಿ ಮುಂದುವರೆಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್ ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡಿದರು.

ಆಹಾರ ಇಲಾಖೆಯ ಆಹಾರ ಇಲಾಖೆಯ ನಿರೀಕ್ಷಕ ಗಣೇಶ್, ಚೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮೀಗೌಡ, ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಸಿಡಿಪಿಓ ಶಾಂತವ್ವ.ಎಸ್.ಹಾವಣ್ಣನವರ್, ಜಿಲ್ಲಾ ಉದ್ಯೋಗಾಧಿಕಾರಿ ವಿ.ನವೀನ್ಕುಮಾರ್, ಬಸ್ ಡಿಪೋ ಅಧಿಕಾರಿ ನಾಗರಾಜು ಅವರು ತಮ್ಮ ತಮ್ಮ ಇಲಾಖೆಯ ಪ್ರಗತಿಯ ವರದಿಯನ್ನು ಮಂಡಿಸಿದರು.

ಸಭೆಯಲ್ಲಿ ಗ್ಯಾರಂಟಿ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಸುಷ್ಮಾ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾದ ಮೆಣಸ ಸಿ.ಆರ್.ಪಿ.ಕುಮಾರ್, ಬೂಕನಕೆರೆ ರೂಪಾಚಂದ್ರಶೇಖರ್, ಬೊಮ್ಮೇನಹಳ್ಳಿ ಲತಾಹರೀಶ್, ಕನಕದಾಸನಗರ ಶಿವಮ್ಮ, ಕೆ.ಎಸ್.ಆರ್.ಟಿ.ಸಿ ಶಿವಣ್ಣ, ಸಿಂಗನಹಳ್ಳಿ ಗೋಪಾಲ್, ಬಂಡಿಹೊಳೆ ಯೋಗೇಶ್(ಉಮೇಶ್), ಹಾಫೀಜ್ಉಲ್ಲಾ, ಗೋವಿಂದನಹಳ್ಳಿ ಶ್ಯಾಮಣ್ಣ, ಬೂಕನಕೆರೆ ಬಿ.ಸಿ.ಮಾಧು, ದೊಡ್ಡತಾರಹಳ್ಳಿ ಸೋಮಶೇಖರ್, ಶಿವಲಿಂಗಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ವಿಷಯ ನಿರ್ವಾಹಕಿ ನಂದಿನಿ ಇತರರು ಉಪಸ್ಥಿತರಿದ್ದರು.
-ಶ್ರೀನಿವಾಸ್ ಆರ್.
