ರಾಮನಾಥಪುರ – ಹೋಬಳಿ ಕೇರಳಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹೊನ್ನೇನಹಳ್ಳಿಯಲ್ಲಿ ಶಾರದ ಪೂಜೆ ಅಂಗವಾಗಿ ಕಳೆದ ಒಂದು ವರ್ಷದಿಂದ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಿದ ದಾನಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.

ಕಾರ್ಯಕ್ರಮದ ಸಂದರ್ಭದಲ್ಲಿ ಶಾಲೆಯ ಅಭಿವೃದ್ಧಿಗಾಗಿ ಹಲವಾರು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅವುಗಳೆಂದರೆ:
- ಐಟಿಸಿ ಕಂಪನಿಯ CSR ಸಹಕಾರದಿಂದ ಹೈಟೆಕ್ ಶೌಚಾಲಯ ನಿರ್ಮಾಣ
- ಶುದ್ಧ ಕುಡಿಯುವ ನೀರಿನ ಘಟಕದ ವ್ಯವಸ್ಥೆ
- ಶಾಲಾ ಮಕ್ಕಳಿಗೆ ಕೈ ತೊಳೆಯುವ ಘಟಕ
- ಸುಸಜ್ಜಿತ ಬೆಂಚು ಹಾಗೂ ಕುರ್ಚಿಗಳ ವ್ಯವಸ್ಥೆ
- ಕಾನ್ವೆಂಟ್ ಮಾದರಿ ಕಲಿಕೆಗೆ ವೈಟ್ಬೋರ್ಡ್ ಹಾಗೂ ಮಾರ್ಕರ್ ವ್ಯವಸ್ಥೆ
- ದಾನಿಗಳಿಂದ ಸ್ಮಾರ್ಟ್ ಟಿವಿ ವ್ಯವಸ್ಥೆ
- ಅಂಗನವಾಡಿ ಮಕ್ಕಳಿಗೆ ಎಲ್ಕೆಜಿ ಮಾದರಿ ಶಿಕ್ಷಣಕ್ಕಾಗಿ LED ಸ್ಲೇಟ್, ಪುಸ್ತಕಗಳು ಹಾಗೂ ಬ್ಯಾಗ್ಗಳ ವ್ಯವಸ್ಥೆ
- ಗ್ರಾಮ ಪಂಚಾಯತಿ ಹಾಗೂ ಹಿರಿಯ ವಿದ್ಯಾರ್ಥಿಗಳ ಸಹಕಾರದಿಂದ ಶಾಲಾ ಮೇಲ್ಛಾವಣಿ ದುರಸ್ತಿ, ಸುಣ್ಣ-ಬಣ್ಣ ಹಾಗೂ ಸ್ಪೀಕರ್ ವ್ಯವಸ್ಥೆ 🔧
- ಹೈವೇ ಪ್ರಾಧಿಕಾರದ ವತಿಯಿಂದ ಶಾಲಾ ಕಾಂಪೌಂಡ್ ನವೀಕರಣ

ಹೀಗೆ ಹಲವು ಮಾದರಿ ಕೊಡುಗೆಗಳ ಮೂಲಕ ಮುಚ್ಚಿಹೋಗುವ ಹಂತದಲ್ಲಿದ್ದ ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಿ ಮಾದರಿ ಶಾಲೆಯಾಗಿ ರೂಪಿಸಲು ಶ್ರಮಿಸುತ್ತಿರುವ ಶ್ರೀಯುತ ಯಜಮಾನ್ ಈಶ್ವರಗೌಡರು, ಹನ್ಯಾಳು ಹಾಗೂ ಅವರ ಕುಟುಂಬದ ವಿಶೇಷ ಕಾಳಜಿಗೆ ಕಾರ್ಯಕ್ರಮದಲ್ಲಿ ಅಭಿನಂದನೆ ಸಲ್ಲಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಯುತ ಯಜಮಾನ್ ಈಶ್ವರಗೌಡರು, “ಇದೇ ಶಾಲೆಯಲ್ಲಿ ಸುಮಾರು 30 ವರ್ಷಗಳ ಹಿಂದೆ ನನ್ನ ಇಬ್ಬರು ಮಕ್ಕಳು ಪ್ರಾಥಮಿಕ ಶಿಕ್ಷಣ ಮುಗಿಸಿ ಇಂದು ರಾಜ್ಯ ಸರ್ಕಾರದ ಹಾಗೂ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಶಾಲೆಯಲ್ಲಿ ಓದಿದ ಅನೇಕರು ಇಂದು ಉತ್ತಮ ಸ್ಥಾನದಲ್ಲಿದ್ದಾರೆ. ಎಲ್ಲರ ಸಹಕಾರದಿಂದ ಹೊನ್ನೇನಹಳ್ಳಿ ಗ್ರಾಮದ ಪ್ರಾಥಮಿಕ ಶಾಲೆಯನ್ನು ಇದೇ ಗ್ರಾಮದ *ದಿ॥ ಕಾಳಮ್ಮ ಅಣ್ಣೆಗೌಡರು ಹಾಗೂ ದಿ॥ ಲಕ್ಷ್ಮಮ್ಮ* ದಂಪತಿಗಳ ಹೆಸರಿನಲ್ಲಿ ದತ್ತು ಪಡೆದು ಇನ್ನಷ್ಟು ಅಭಿವೃದ್ಧಿಪಡಿಸುವ ಸಂಕಲ್ಪವಿದೆ,” ಎಂದು ಹೇಳಿದರು.

ಸದರಿ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಲೋಕೇಶ್ , ಶಿಕ್ಷಣ ಇಲಾಖೆಯ ಸಿ ಆರ್ ಪಿ ವಿಶ್ವೇಶ್ವರಯ್ಯ, ಗ್ರಾಮದ ಅಡ್ವೊಕೇಟ್ ಚೆಲುವರಾಜು ಹಾಗೂ ಮಹೇಶ್ , ಮುಖ್ಯೋಪಾಧ್ಯಾಯರಾದ ರಾಜಶೇಖರ್, ಅಂಗನವಾಡಿ ಶಿಕ್ಷಕಿ ಕಾಂತಾಮಣಿ, ಸಹ ಶಿಕ್ಷಕಿಯರಾದ ದೀಪಿಕಾ, ಹೆಲ್ಪರ್ ಸಿಂಚನ ಹಾಗೂ ಅಡುಗೆಯವರಾದ ಸುಜಾತ ಮತ್ತು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ಶರಣ. ಎಂ.ಎನ್. ಕುಮಾರಸ್ವಾಮಿ, ಲೇಖಕರು, ರಾಮನಾಥಪುರ.
