ಚಾಮರಾಜನಗರ:- ಭಕ್ತರ ಹರ್ಷೋದ್ಘಾರ, ಭಕ್ತಿಯ ಝೇಂಕಾರದ ನಡುವೆ ಸಾಗಿದ ಶ್ರೀಚಾಮರಾಜೇಶ್ವರ ತೇರಿನ ವೈಭವ ಜೋರಾಗಿತ್ತು.
ನಗರದ ಇತಿಹಾಸ ಪ್ರಸಿದ್ಧ ಶ್ರೀಚಾಮರಾಜೇಶ್ವರ ರಥೋತ್ಸವವಿಂದು ವಿಜೃಂಭಣೆಯಿಂದ ನೆರವೇರಿತು. ಎಂ.ಎಸ್.ಐ.ಎಲ್ ನಿಗಮದ ಅಧ್ಯಕ್ಷ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿ ಬೆಳಗ್ಗೆ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ನಂತರ ರಥದಲ್ಲಿ ಮೂರ್ತಿ ಇಡಲಾಯಿತು. ಕೆಂಪನಂಜಾಂಬಾ ಅಮ್ಮನವರ ಸಮೇತ ಶ್ರೀಚಾಮರಾಜೇಶ್ವರ ರಥವು ಸಿಂಗಾರಗೊಂಡು ಕಂಗೊಳಿಸುತ್ತಿತ್ತು. ಮುಂದೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಉತ್ಸವಮೂರ್ತಿ ನಮಿಸುತ್ತಾ ಸಾಗಲು ಸಿದ್ಧಗೊಂಡಿತ್ತು. ದೇಗುಲದ ಆವರಣದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು.

ರಥಕ್ಕೆ ಚಾಲನೆ ದೊರೆಯುತ್ತಿದ್ದಂತೆಯೇ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು. ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮತ್ತು ಇತರರು ಇದ್ದರು.
ರಥ ಸಾಗಲು ಆರಂಭಿಸುತ್ತಿದ್ದಂತೆಯೇ ಯುವಕರ ಸಿಳ್ಳೆ, ತಪ್ಪಾಳೆ, ಕೂಗು ಮುಗಿಲು ಮುಟ್ಟಿತು. ತೇರು ಎಳೆಯುತ್ತಿದ್ದವರು ಉತ್ಸಾಹದಿಂದ ಮುಂದೆ ಸಾಗಿದರು. ರಥದ ಬೀದಿ, ಶ್ರೀವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ರಸ್ತೆ, ತರಕಾರಿ ಮಾರುಕಟ್ಟೆ ರಸ್ತೆಯಲ್ಲಿ ರಥ ಸಾಗಿತು. ಮಧ್ಯೆ ಮಧ್ಯೆ ನಿಲ್ಲುತ್ತಿದ್ದ ರಥಕ್ಕೆ ಭಕ್ತರು ಪೂಜೆ ಸಲ್ಲಿಸಿದರು. ರಥೋತ್ಸವದಲ್ಲಿ ತೇರು ಎಳೆದ ಭಕ್ತರಲ್ಲಿ ಯುವಕರೇ ಹೆಚ್ಚಾಗಿದ್ದರು. ರಥ ಎಳೆಯುವಾಗ ಸ್ನೇಹಿತರಿಗೆ ಬಣ್ಣಗಳನ್ನು ಎರಚಿದರು. ಹೂ-ಹಣ್ಣು, ದವನ ಎಸೆದರು. ಹಳ್ಳಿಗಳಿಂದ ಬಂದಿದ್ದ ಜನರು ದೇವಸ್ಥಾನದ ಸುತ್ತಮುತ್ತ ನಿಂತು ರಥೋತ್ಸವವನ್ನು ಕಣ್ತುಂಬಿಕೊಂಡರು.

ದೊಡ್ಡ ಕಟ್ಟಡಗಳ ಮೇಲೂ ನಿಂತಿದ್ದವರು ರಥಕ್ಕೆ ಅಲ್ಲಿಂದಲೇ ನಮಿಸುತ್ತಿದ್ದ ದೃಶ್ಯಗಳು ಕಂಡುಬಂದವು.
ಅಚ್ಚುಕಟ್ಟಾದ ವ್ಯವಸ್ಥೆ: ರಥೋತ್ಸವವು ಸುಸೂತ್ರವಾಗಿ ನಡೆಯಲು ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು.
ರಥೋತ್ಸವ ಆರಂಭಕ್ಕೂ ಮುನ್ನ ದೇಗುಲದ ಅರ್ಚಕರು ವಿಶೇಷ ಪೂಜೆಗಳನ್ನು ನೆರವೇರಿಸಿದರು. ಸಂಪ್ರದಾಯಗಳ ಪಾಲನೆ ಮಾಡಿದರು.
ವಿವಿಧ ಕೋಮುಗಳ ಮುಖಂಡರ ಪೂಜೆಯೂ ನಡೆಯಿತು. ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಂದ ರಥೋತ್ಸವಕ್ಕೆ ಚಾಲನೆ ದೊರೆಯಿತು.

ರಥವು ಸುಗಮವಾಗಿ ಸಾಗಿತು. ಎಲ್ಲೂ ಅಡೆ-ತಡೆಗಳು ಉಂಟಾಗಲಿಲ್ಲ. ಅವಘಡಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲಾಗಿತ್ತು. ರಥದ ಹಿಂದೆ ಅಗ್ನಿಶಾಮಕ ದಳ ಮತ್ತು ಆ್ಯಂಬುಲೆನ್ಸ್ ವಾಹನ ಸಾಗಿಬಂತು. ಪೊಲೀಸರ ಬಿಗಿಬಂದೋಬಸ್ತ್ ಏರ್ಪಡಿಸಲಾಗಿತ್ತು. ದೇವಸ್ಥಾನಕ್ಕೆ ಬರುವ ದಾರಿಗಳಲ್ಲಿ ಬ್ಯಾರಿಗೇಟ್ ಹಾಕಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಸಾರ್ವಜನಿಕರು ನಡೆದುಕೊಂಡು ಬರಲು ಮಾತ್ರ ಅವಕಾಶ ನೀಡಲಾಗಿತ್ತು.
ನವ ಜೋಡಿಗಳ ಕಲರವ:

ರಥೋತ್ಸವದಲ್ಲಿ ನವಜೋಡಿಗಳ ಕಲರವವಿತ್ತು. ಆಷಾಢ ಮಾಸದಲ್ಲಿ ನಡೆಯುತ್ತಿರುವ ಜಾತ್ರೆಯಲ್ಲಿ ನವ ದಂಪತಿಗಳು ಭಾಗವಹಿಸಿ ಪೂಜೆ ಸಲ್ಲಿಸಿದರು. ಸೆಲ್ಫಿ ಪೋಟೋಗಳನ್ನು ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಬಳಿಕ ರಥೋತ್ಸವದಲ್ಲಿ ಪಾಲ್ಗೊಂಡರು. ಜನ ಜಂಗುಳಿ ನಡುವೆ ಹೊಸ ಜೋಡಿಗಳ ಓಡಾಟ ಜಾತ್ರೆಗೆ ಮೆರುಗು ತಂದಿತ್ತು. ಇವರಿಂದ ಜಾತ್ರೆಯಲ್ಲಿ ಖರೀದಿ ಭರಾಟೆಯೂ ಜೋರಾಗಿತ್ತು.

ಶ್ರೀಚಾಮರಾಜೇಶ್ವರ ಸ್ವಾಮಿ ರಥೋತ್ಸವ ಪ್ರಯುಕ್ತ ಅಲ್ಲಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಅನ್ನ ಸಂತರ್ಪಣೆಯು ನಡೆಯಿತು.
-ಶ್ರೀ ಸಾಯಿ ಎಸ್ ಮಂಜು
