
ಒಂದು ಉತ್ತಮ ಸಮಾಜದ ಸ್ವಾಸ್ಥ್ಯ ಪೊಲೀಸರ ಮೇಲಿನ ಸಕಾರಾತ್ಮಕ ಭಯ ಹಾಗೂ ಭರವಸೆಯ ಮೇಲೆ ನಿಂತಿದೆ
ಇತ್ತೀಚಿಗೆ ನಡೆದ ಕೆಲವು ಘಟನೆಗಳು, ಕರುನಾಡಿಗೆ ಕಾರ್ಮೋಡ ಆವರಿಸಿದಂತೆ ಆಗಿದೆ. ಕೆಲ ದಿನಗಳ ಹಿಂದೆ ನಡೆದ ಬ್ಯಾಂಕ್ ದರೋಡೆ ಪ್ರಕರಣಗಳು, ನಾಗರಿಕ ಸಮಾಜಕ್ಕೆ ನಿದ್ದೆಗೆಡುವಂತೆ ಮಾಡಿದೆ. ಹುಬ್ಬಳ್ಳಿಯಲ್ಲಿ ಹಾಡು ಹಗಲೇ ಎಟಿಎಂ ಯಂತ್ರಕ್ಕೆ ಹಣ ತುಂಬಲು ಬಂದಿದ್ದ ವಾಹನದ ಮೇಲೆ ದಾಳಿ ಮಾಡಿದ ದರೋಡೆಕೋರರು ಒಂದು ಪೆಟ್ಟಿಗೆ ತುಂಬಾ ಹಣವನ್ನು ದೋಚಿಕೊಂಡು ಅದರ ಬೆಂಗಾವಲಿನಲ್ಲಿದ್ದ ಒಬ್ಬ ಭದ್ರತಾ ಸಿಬ್ಬಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಿ ಹಣ ದೋಚಿಕೊಂಡು ಪರಾರಿಯಾಗಿದ್ದಾರೆ.
ಇದೆಲ್ಲ ನಡೆದದ್ದು, ಮಧ್ಯಾಹ್ನ 12:00 ಸಮಯದಲ್ಲಿ, ಹಾಗೆ ಸಾರ್ವಜನಿಕರ ಎದುರಿನಲ್ಲಿಯೇ ಎಂಬುದು ಆಶ್ಚರ್ಯ. ಈ ಘಟನೆಯನ್ನು ಕಣ್ಣಾರೆ ಕಂಡ ಜನಗಳು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಹಾಗೂ ಇದೇ ರೀತಿಯ ಮತ್ತೊಂದು ಪ್ರಕರಣವೆಂದರೆ ಈ ಘಟನೆ ನಡೆದ, ಎರಡು ದಿನಗಳ ಅಂತರದಲ್ಲಿ ಮಂಗಳೂರಿನಲ್ಲಿ ಬ್ಯಾಂಕ್ ದರೋಡೆ ಮಾಡಿ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದರೋಡೆಕೋರರು ಲೀಲಾಜಾಲವಾಗಿ ದೋಚಿಕೊಂಡು ಪರಾರಿಯಾದರು.
ಹೀಗಿರುವಾಗ ಸಾರ್ವಜನಿಕ ವಲಯದಲ್ಲಿ ಕಾಡಿದ ಮೊದಲ ಪ್ರಶ್ನೆಯೆಂದರೆ ರಾಜ್ಯದಲ್ಲಿ ಕಾನೂನು ಎಂಬುದೇ ಇಲ್ಲವೇ..? ಪೊಲೀಸರು ಏನು ಮಾಡುತ್ತಿದ್ದಾರೆ ..? ಎಂಬ ಆಕ್ರೋಶಮಿಶ್ರಿತ ಅಭಿಪ್ರಾಯಗಳು. ಈ ಎರಡು ಘಟನೆಯನ್ನು ನೋಡಿದಾಗ ದರೋಡೆಕೋರರಿಗೆ ಪೊಲೀಸ್ ವ್ಯವಸ್ಥೆ ಮೇಲೆ ಭಯ ಎಂಬುದೇ ಇಲ್ಲ ಎಂಬ ಅನ್ನಿಸಿಕೆ ಸಾರ್ವಜನಿಕರಿಗೆ ಬಾರದೆಯಿರದು. ಈ ರೀತಿಯ ಘಟನೆಗಳಿಗೆ ಬಹುಮುಖ್ಯ ಕಾರಣ ದರಡೆಕೋರರಿಗೆ ಇರುವ ಮನಸ್ಥಿತಿ. ಪೊಲೀಸರ ಮೇಲೆ ಭಯವೇ ಇಲ್ಲದ ವಾತಾವರಣ. ಇಲ್ಲಿ ಗಮನಿಸಬೇಕಾದ ವಿಷಯ ಹಾಗೂ ಮೂಡುವ ಪ್ರಶ್ನೆಯೆಂದರೆ, ಪೊಲೀಸರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರ ? ಎಂಬುದು.
ಹೌದು….ಪೋಲಿಸರ ಕರ್ತವ್ಯದ ಸುತ್ತ, ವಿಮರ್ಶೀಸುತ್ತಾ ಹೋದರೆ, ನಮಗೆ ಕಂಡು ಬರುವ ಉತ್ತರ, ಕಾನೂನು ಎಂಬ ಸರ್ಪಗಾವಲಿನಲ್ಲಿ ಪೊಲೀಸರ ಕರ್ತವ್ಯಕ್ಕೆ ಮಿತಿಗಳನ್ನು ಹೇರಿ, ಕರ್ತವ್ಯ ನಿರ್ವಹಿಸುವಂತೆ ಮಾಡಿರುವುದು ಕಂಡು ಬರುತ್ತದೆ. ಉದಾಹರಣೆಗೆ 2019 ರಲ್ಲಿ ತೆಲಂಗಾಣ ರಾಜ್ಯದಲ್ಲಿ ದಂತವೈದ್ಯಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು. ಘಟನೆಯ ನಂತರ ಶೀಘ್ರವೇ ಆರೋಪಿಗಳನ್ನು ಕೂಡ ಬಂಧಿಸಲಾಯಿತು. ನಂತರ ಇಡೀ ದೇಶವೇ ಆರೋಪಿಗಳನ್ನು ಎನ್ಕೌಂಟರ್ ಮಾಡಬೇಕು ಎಂಬ ಧ್ವನಿ ದೇಶಾದ್ಯಂತ ಕೇಳಿಬಂದಿತ್ತು. ಆ ಸಂದರ್ಭದಲ್ಲಿ ಪ್ರಭಾ ವಕ್ಕೆ ಒಳಗಾದ ಪೊಲೀಸರು ಆರೋಪಿತರುಗಳನ್ನು ಎನ್ಕೌಂಟರ್ ಮಾಡಿದ್ದರು. ಎನ್ಕೌಂಟರ್ ಮಾಡಿದ ಪೊಲೀಸ್ ಅಧಿಕಾರಿಯ ಕಾರ್ಯದ ಬಗ್ಗೆ ದೇಶಾದ್ಯಂತ ಹೊಗಳಿಕೆಯ ಮಹಾಪೂರವೇ ಹರಿಯಿತು. ಆದರೆ,ಈ ಘಟನೆಯ ನಂತರ ಪೊಲೀಸ್ ಇಲಾಖೆಯಲ್ಲಿ ನಡೆದ ಸಂಗತಿಯೇನೆಂದರೆ, ಎನ್ಕೌಂಟರ್ ಮಾಡಿದ ಪೊಲೀಸರ ಮೇಲೆ ಕೊಲೆ ಪ್ರಕರಣ ದಾಖಲಿಸಲಾಯಿತು.ಈ ವಿಚಾರ ಸಮಾಜದ ಯಾವ ವರ್ಗಕ್ಕೂ ತಿಳಿಯಲೇ ಇಲ್ಲ. ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ, ಈ ಘಟನೆಯಿಂದ ಆರೋಪಿಗಳ ವಿರುದ್ಧ ಪೊಲೀಸ್ರು ಕೆಲವು ಸೂಕ್ಷ್ಮ ಕ್ರಮಗಳನ್ನು ಕೈಗೊಳ್ಳಲು ಯಾವ ಧೈರ್ಯವೂ ಉಳಿದುಕೊಳ್ಳುವುದಿಲ್ಲ.
ಯಾವುದೇ ಒಂದು ಪ್ರಕರಣಗಳಲ್ಲಿ ಆರೋಪಿಗಳನ್ನು ಸೆರಿಹಿಡಿದ 24 ಗಂಟೆಗಳ ಒಳಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಹಾಗೂ ಆರೋಪಿಗಳಿಗೆ ಭೌತಿಕ ಹಿಂಸೆ ನೀಡುವಂತಿಲ್ಲ. ಇಲ್ಲಿ ಒಬ್ಬ ಕಳ್ಳತನದ ಆರೋಪಿಯನ್ನು ಸೆರೆಹಿಡಿದು ಆತನಿಗೆ ಬರೀ ಮಾತಿನ ಮೂಲಕವೇ ಆತ ಕದ್ದಿರುವ ವಸ್ತುಗಳನ್ನು ಹಿಂತಿರುಗಿಸುವ ಎಂದು ಕೇಳಿದರೆ, ಆತ ಆ ವಸ್ತುಗಳನ್ನು ವಾಪಸ್ ಕೊಡಲು ಸಾಧ್ಯವೇ …? ಎಂಬುದನ್ನು ಗಮನಿಸಬೇಕು. ನಮ್ಮ ಎಲ್ಲಾ ವಿಚಾರಣೆಯು 24 ಗಂಟೆಗಳ ಒಳಗೆ ಪೂರ್ಣಗೊಳ್ಳಬೇಕು. ಇಲ್ಲಿ ಯಾವುದಾದರೂ ಕಾನೂನು ಉಲ್ಲಂಘನೆಯಾದರೆ ಅದರಿಂದ ತೊಂದರೆಗೆ ಒಳಗಾಗುವುದು ಪೊಲೀಸರ ವಿನಃ ಆರೋಪಿಗಳಲ್ಲ.
ಇನ್ನು ಮುಂದುವರಿದು ಹೇಳುವುದಾದರೆ ಒಂದು ಪೊಲೀಸ್ ಠಾಣೆಯಲ್ಲಿ ವರ್ಷಕ್ಕೆ ಸರಾಸರಿ 300 ಪ್ರಕಾರಗಳು ದಾಖಲಾಗುತ್ತವೆ. ಈ ಎಲ್ಲಾ ಪ್ರಕರಣಗಳ ಚಾರ್ಜ್ ಶೀಟ್ ಅನ್ನು ಒಂದು ನಿಯಮಿತ ಕಾಲಮಿತಿಯ ಒಳಗೆ ಕೋರ್ಟಿಗೆ ಸಲ್ಲಿಸಬೇಕಾಗುತ್ತದೆ. ಚಾರ್ಜ್ ಶೀಟ್ ತಯಾರಿಸುವ ಸಿಬ್ಬಂದಿಗಳಿಗೆ ನೂರೆಂಟು ಕೆಲಸಗಳು. ಉದಾಹರಣೆಗೆ ಗಣ್ಯರ ಭದ್ರತೆಯ ಜವಾಬ್ದಾರಿ, ಹಬ್ಬ-ಹರಿದಿನಗಳ ಉಸ್ತುವಾರಿ, ರಾತ್ರಿ ಗಸ್ತಿನ ಕರ್ತವ್ಯಗಳು, ಕೋರ್ಟ್ ಸೂಚಿಸುವ ಕೆಲಸಗಳು, ಹೀಗೆ ಇನ್ನು ಹಲವಾರು. ಈ ಎಲ್ಲಾ ಕೆಲಸಗಳ ನಡುವೆ ತನಿಖೆ ನಡೆಸಿ ಚಾರ್ಜ್ ಶಿಟ್ ತಯಾರಿಸಬೇಕು. ಇಲ್ಲಿ ಒಂದು ಚಾರ್ಜ್ ಶೀಟ್ ತಯಾರಿಸಲು ಪೊಲೀಸರಿಗೆ ಇರುವ ಸಮಯ ಸರಿ ಸುಮಾರು ಒಂದು ಕಾಲು ದಿನ. ಈ ಒಂದು ಕಾಲ ದಿನಗಳಲ್ಲಿ ಪ್ರಕರಣದ ಎಲ್ಲಾ ಸಾಕ್ಷಿಗಳನ್ನು ಸಂಗ್ರಹಿಸಿ ಒಂದು ಉತ್ತಮ ಚಾರ್ಜ್ ಶೀಟ್ ಸಿದ್ಧಪಡಿಸಲು ಸಾಧ್ಯವೇ ಎಂಬುದೇ ಯಕ್ಷಪ್ರಶ್ನೆ.
ಸಮಾಜದಲ್ಲಿ ಮುಖ್ಯವಾಗಿ, ಆರೋಪಿಗಳಿಗೆ ಅಥವಾ ತಪ್ಪು ಮಾಡುವವರಿಗೆ ಪೊಲೀಸ್ ವ್ಯವಸ್ಥೆಯ ಮೇಲೆ ಭಯವಿದ್ದೇ ಇರುತ್ತದೆ. ಈ ಕಾರಣಕ್ಕಾಗಿಯೇ ಅದಷ್ಟೇ ತಪ್ಪುಗಳು ಆಗದೇ ಇರಲು ಸಾಧ್ಯವಾಗಿದೆ ಎನ್ನಬಹುದು. ನಾವು ಇಲ್ಲಿ ಪೊಲೀಸರ ಮೇಲೆ ಇಲ್ಲಸಲ್ಲದ ಮಿತಿಗಳನ್ನು ಹೇರಿ ಭಯವನ್ನು ಸಂಪೂರ್ಣವಾಗಿ ತೆಗೆದು ಹಾಕಿದರೆ, ದಿನದಿಂದ ದಿನಕ್ಕೆ ಕಳ್ಳತನ, ದರೋಡೆ, ಕೊಲೆ ಮುಂತಾದ ಸಮಾಜಘಾತುಕ ಘಟನೆಗಳು ಸಾಮಾನ್ಯವಾಗುವುದೆಂತು ಖಂಡಿತ.
ಇಲ್ಲಿ ಪೊಲೀಸರ ಮೇಲೆ ಕಾನೂನಿನ ಮಿತಿಗಳು ಇರಲೇ ಬಾರದು ಎಂದು ಅಲ್ಲ, ಆದರೆ ಅವರ ಸಂಪೂರ್ಣ ಕಾರ್ಯ ಸ್ವರೂಪವನ್ನೇ ಬದಲಾಯಿಸುವುದು ಬೇಡ. ಕರೋನದ ಸಮಯದಲ್ಲಿ ಜನಸಾಮಾನ್ಯರು ಮಾರಣಾಂತಿಕ ವೈರಸ್ಸಿಗೆ ಹೆದರಿ ಮನೆಯಲ್ಲಿ ಇದುದ್ದಕ್ಕಿಂತಲೂ, ಪೊಲೀಸರ ಲಾಟಿ ಏಟಿಗೆ ಹೆದರಿ ಮನೆಯಲ್ಲಿ ಇದ್ದದ್ದೇ ಹೆಚ್ಚು. ಇಲ್ಲಿ ಕೆಲಸ ಮಾಡಿದ್ದು ಪೊಲೀಸರ ಮೇಲಿನ ಭಯವೇ ವಿನಃ ಬೇರೇನೂ ಅಲ್ಲ ಎಂಬುದು ಸ್ಪಷ್ಟ. ಇಲ್ಲಿ ಭಯ ಎಂಬುದು ಒಂದು ಸಕಾರಾತ್ಮಕ ರೀತಿಯಲ್ಲಿ ಇರಲಿ ಎಂದು ಹೇಳುತ್ತಿದ್ದೇನೆ ಅಷ್ಟೇ.
ಒಂದು ದೇಶದ ಕಾನೂನು ಯಾವಾಗಲೂ ಆ ದೇಶದ ಜನರ ಬುದ್ಧಿಮಟ್ಟವನ್ನು ಆಧರಿಸಿರಬೇಕು. ಯಾವ ರೀತಿಯ ಬುದ್ದಿ ಮಟ್ಟದ ಜನಗಳಿಗೆ ಯಾವ ಕಾನೂನು ಇರಬೇಕು ಎಂಬುದನ್ನು ಮನಗಣಬೇಕು. ಅಂದರೆ “ದಡ್ಡನಿಗೆ ದೊಣ್ಣೆ ಪೆಟ್ಟು ಬುದ್ಧಿವಂತನಿಗೆ ಮಾತಿನ ಪೆಟ್ಟು” ಎನ್ನುವ ಹಾಗೆ ಇಲ್ಲಿ ದೇಶದ ಕಾನೂನುಗಳ ಎಲ್ಲಾ ನಿಯಮಗಳನ್ನು ಪೊಲೀಸರ ಮೇಲೆ ಏರಿ ಕಾನೂನು ವ್ಯವಸ್ಥೆ ಕಾಪಾಡು ಎಂದರೆ “ಅಂಕುಶವೇ ಇಲ್ಲದೆ ಆನೆಯನ್ನು ನಿಯಂತ್ರಿಸು” ಎಂದು ಹೇಳಿದಂತೆ ಅಲ್ಲವೇ. ಒಂದು ಒಳ್ಳೆ ಸಮಾಜದ ಸ್ವಾಸ್ಥ್ಯ ಆ ಸಮಾಜದ ಪೊಲೀಸರ ಮೇಲಿನ ಸಕಾರಾತ್ಮಕ ಭಯ ಹಾಗೂ ಭರವಸೆಯ ಮೇಲೆ ನಿಂತಿದೆ ಎನ್ನುವುದನ್ನು ತಿಳಿಯಬೇಕಾಗಿದೆ.
- ಕೀರ್ತಿ ಎಂ. ಹಾಸನ
🫡👌👌
ಧನ್ಯವಾಧಗಳು
ಉತ್ತಮವಾದ ,ಚಿಂತನಾರ್ಹವಾದ ಲೇಖನ ಅಭಿನಂದನೆಗಳು
ಧನ್ಯವಾದಗಳು