ಒಮ್ಮೆ ನನ್ನ ಹತ್ತಿರದ ಸಂಬಂಧಿಕರೊಬ್ಬರ ಮನೆಗೆ ಮಡದಿಯ ಜೊತೆಗೆ ಹೋಗಿದ್ದೆ. ತುಂಬಾ ಅನುಕೂಲಸ್ಥ ಕುಟುಂಬ ಅದು. ಆದರದಿಂದ ನಮ್ಮನ್ನು ಬರಮಾಡಿಕೊಂಡರು. ಪರಸ್ಪರ ಉಭಯ ಕುಶಲೋಪರಿ ವಿಚಾರಿಸಿಕೊಂಡೆವು.
ಅವರಿಗೆ ಒಂದು ವರ್ಷದ ಮಗುವಿತ್ತು. ಅದು ಯಾಕೋ ಜೋರಾಗಿ ಅಳುತ್ತಾ ರಚ್ಚೆ ಹಿಡಿಯಿತು. ಅಪರೂಪದ ಅತಿಥಿಗಳಾಗಿ ಹೋಗಿದ್ದ ನಮ್ಮನ್ನು ನೋಡಿ ಹೆದರಿರಬೇಕು ಅಂದುಕೊಂಡೆವು. ‘ಒಳಗೆ ಕರ್ಕೊಂಡು ಹೋಗಿ, ನಮ್ಮನ್ನು ಕಂಡು ಗಾಬರಿ ಆಗಿರಬೇಕು’ ಅಂದಾಗ ಮಗುವಿನ ತಾಯಿ ‘ಹಾಗೇನಿಲ್ಲ ಮಾಮ, ನಿದ್ದೆ ಮಾಡಿ ತುಂಬಾ ಹೊತ್ತಾಯ್ತು.
ಅವನು ಯಾವಾಗಲೂ ಹಾಗೇನೇ. ನಿದ್ದೆ ಬಂತು ಅಂದರೆ ಹೀಗೆ ಅಳೋಕೆ ಶುರು ಮಾಡ್ತಾನೆ’ ಅಂದಳು. ಆಗ ನಾನು ನನ್ನವಳ ಕಡೆಗೆ ನೋಡಿ ಸದ್ಯ ನಮ್ಮ ನೋಡಿ ಹೆದರಿಲ್ಲ ಅಂತ ಕೊಂಚ ನಿಟ್ಟುಸಿರು ಬಿಟ್ಟೆ. ನನ್ನವಳು ‘ಹಾಗಾದ್ರೆ ತಡ ಯಾಕೆ, ರೂಂಗೆ ಹೋಗಿ ಮಲಗಿಸಬಾರದೇ?’ ಅಂದಳು. ಆಗ ತಾಯಿ ಮಗೂನ ಎತ್ಕೋಂಡು ಬೆಡ್ ರೂಮ್ ಕಡೆಗೆ ಹೋದಳು.
ಹಾಗೇ ನೆಂಟರ ಜೊತೆ ಸ್ವಲ್ಪ ಹೊತ್ತು ಹರಟೆ ಹೊಡೆಯುತ್ತಾ ಕುಳಿತೆವು. ಇದ್ದಕ್ಕಿದ್ದಂತೆ ಬೆಡ್ ರೂಮ್ ಕಡೆಯಿಂದ ‘ಲಕ್ಸು ಸೋಪು ಹಾಕಿ ಜಳಕ ಮಾಡಿ ಜಸ್ಟ್ ಬಂದೀನಿ….’ ಎಂಬ ಫಿಲ್ಮ್ ಸಾಂಗ್ ಕೇಳಿಬಂತು. ಆಗ ‘ಏನಿದು, ಮಗು ಮಲಗೋವಾಗ ಈ ಹಾಡು ಹಾಕಿದಾಳಲ್ಲ ನಿಮ್ಮ ಮಗಳು?’ ಅಂತ ಮಗುವಿನ ಅಜ್ಜಿಯನ್ನು ಕೇಳಿದೆ. ಅದಕ್ಕೆ ಅವರು ‘ಅಯ್ಯೋ! ಹಾಗೇನಿಲ್ಲ, ನಮ್ಮ ಪಾಪು ಈ ಥರ ಚಿತ್ರ ಗೀತೆ ಕೇಳಿಕೊಂಡೇ ಮಲಗೋದು ರೂಢಿಯಾಗಿಬಿಟ್ಟಿದೆ’ ಅಂದ್ರು. ‘ಮಗೂ ರೂಢಿ ಮಾಡಿಕೊಂಡಿರೋದ ಅಥವಾ ನೀವು ಅಭ್ಯಾಸ ಮಾಡಿರೋದ?’ ಅಂತ ಕೇಳಿದೆ. ‘ಅದರಲ್ಲೇನಿದೆ, ಎರಡೂ ಒಂದೇ ಅಲ್ಲವಾ. ಹೇಗಾದರೂ ಇರಲಿ, ಮಗು ನಿದ್ದೆ ಮಾಡಿದರೆ ಸಾಕಲ್ಲವೇ’ ಅಂದರು. ಮುಂದುವರೆದು ‘ನಿಮಗೆ ಗೊತ್ತಲ್ವ ಮನೇಲಿ ವಿಪರೀತ ಕೆಲಸ. ಮಗುವನ್ನು ಮಲಗಿಸಿದ ನಂತರ ಕೆಲಸ ಮಾಡೋಕೆ ಫ್ರೀಯಾಗುತ್ತೆ. ಅದಕ್ಕೆ ಮೊಬೈಲ್ ನಲ್ಲಿ ನೆಚ್ಚಿನ ಸಿನಿಮಾ ಹಾಡು ಹಾಕಿ ಮಲಗಿಸ್ತಾಳೆ. ನನ್ನ ಮಗಳ ಟೆಕ್ನಿಕ್ ಇದು. ಮಗೂ ಕೂಡ ರೂಢಿ ಮಾಡಿಕೊಂಡುಬಿಟ್ಟಿದೆ’ ಅಂತ ಮಗುವಿನ ಅಜ್ಜಿ ವಿವರಣೆ ನೀಡಿದಾಗ ‘ಯಾವುದಾದರೂ ಲಾಲಿ ಹಾಡು, ಜೋಗುಳದ ಪದ ಹಾಡಿ ಮಲಗಿಸಬಹುದಲ್ಲವೆ?’ ಎಂದು ಸಲಹೆ ನೀಡಿದೆ. ಸ್ವಲ್ಪ ಅಣಕು ಸ್ವರದಲ್ಲಿ ‘ನೀವು ಚೆನ್ನಾಗಿ ಹೇಳಿದಿರಿ.
ಈ ಕಾಲದಲ್ಲಿ ಜೋಗುಳದ ಹಾಡೇ? ಚಾನ್ಸೇ ಇಲ್ಲ. ಅವೆಲ್ಲ ನಮ್ಮ ನಿಮ್ಮ ಅಮ್ಮಂದಿರ ಕಾಲಕ್ಕೆ ಹೋದವು. ಈಗ ಕಾಲ ಬದಲಾಗಿದೆ. ಕಾಲಕ್ಕೆ ತಕ್ಕಂತೆ ನಾವೂ ನಡಕೋಬೇಕಲ್ಲವೆ? ಇಲ್ಲಾಂದ್ರೆ ಹಳೇ ಕಾಲದ ಗುಗ್ಗುಗಳು ಅಂದುಕೋತಾರೆ’. ಅಂತ ನಕ್ಕರು.
ನೋಡಿ! ನಾವು ಎಂಥಾ ಮನೋಸ್ಥಿತಿಯ ಕಾಲಘಟ್ಟದಲ್ಲಿ ಜೀವನ ಮಾಡ್ತಾ ಇದೇವೆ. ಯಾರೋ ಏನೋ ಅಂದುಕೊಳ್ಳುತ್ತಾರೆ ಎಂದು ಆಲೋಚಿಸಿ ನಮ್ಮತನವನ್ನು ಮರೆಯುತ್ತಿದ್ದೇವೆ.
ನಮಗಾಗಿ ಬದುಕುವುದಕ್ಕಿಂತ ಬೇರೆಯವರ ಮೆಚ್ಚುಗೆಗಾಗಿ ಹಪಹಪಿಸುತ್ತಿದ್ದೇವೆ. ತಾಯಿಯ ಕೊರಳಿನೊಂದಿಗೆ ಮಗುವಿನ ಕರುಳಬಳ್ಳಿಯ ಬಾಂಧವ್ಯವನ್ನು ಬೆಸೆಯುವ ಮತ್ತು ಜೋಗುಳದ ಮೂಲಕ ಮಲಗಿಸುವ ಕ್ರಿಯೆ ಭಾವನಾತ್ಮಕವಾದುದು, ನವಿರಾದುದು. ಏಕೆಂದರೆ ಮಗುವಿನ ಪರಿಕಲ್ಪನೆಯೆ ಸೂಕ್ಷ್ಮ ಸ್ವರೂಪದ್ದು. ತನ್ನ ಮಗುವನ್ನು ಅಕ್ಕರೆಯಿಂದ ಮಲಗಿಸುವ ಕ್ರಮಕ್ಕೆ ಜೋಗುಳ, ಲಾಲಿಪದ, ದೂರಿ ಹಾಡು, ತೊಟ್ಟಿಲ ಹಾಡುಗಳೆಂದು ಕರೆಯಲಾಗಿದೆ. ತಾಯಿ ಮಗುವನ್ನು ತೋಳಿನ ಮೇಲೆ, ಹಾಸಿಗೆ ಮೇಲೆ ಇಲ್ಲವೆ ತೊಟ್ಟಿಲಲ್ಲಿ ಮಲಗಿಸಿ ಮೆದುವಾಗಿ ತೂಗುತ್ತಾ ಹೇಳುವ ಒಂದು ಆತ್ಮೀಯ ಪ್ರಕಾರ ಜೋಗುಳವಾಗಿದೆ. ಜೋಗುಳದ ಹಾಡಿನಲ್ಲಿ ತೊಟ್ಟಿಲನ್ನು ಕಾಯುವುದಕ್ಕಾಗಿ ದೇವತೆಗಳನ್ನು ಆಹ್ವಾನಿಸುವ ಪದ್ದತಿಯು ಕೆಲವು ಭಾಗಗಳಲ್ಲಿದೆಯಂತೆ. ಜೋಗುಳವೆಂದರೆ ಒಂದರ್ಥದಲ್ಲಿ ಮಗುವಿನ ಹಿತಕ್ಕಾಗಿ ತಾಯಿಯು ಹಾಡುವ ಪ್ರಾರ್ಥನಾ ಗೀತೆಗಳೆನ್ನಬಹುದು.
ನಮ್ಮ ಜನಪದರ ಜೀವನದಲ್ಲಿ ಹಾಸುಹೊಕ್ಕಾಗಿದ್ದ ಜೋಗುಳದ ಪದಗಳು ಅಥವಾ ಲಾಲಿ ಹಾಡುಗಳು ಇಂದಿಗೂ ಅರ್ಥಂವಂತಿಕೆ ಉಳಿಸಿಕೊಂಡಿವೆಯಾದರೂ ಆಧುನಿಕ ತಾಯಂದಿರ ಅಭಿರುಚಿ, ಅವಧಾನ ಬದಲಾದಂತೆ ಅವು ಬಳಕೆಯಲ್ಲಿ ಇಲ್ಲದೆ ಮೂಲೆಗುಂಪಾಗಿವೆ. ಕೆಲವು ಮೂಲ ಜೋಗುಳದ ಪದಗಳನ್ನು ಹೀಗೆ ಮೆಲುಕು ಹಾಕಬಹುದು.
ತೊಟ್ಟೀಲದಾಗೊಂದು ತೊಳದ ಮುತ್ತಿನ ಕಂಡೆ
ಹೊಟ್ಟಿ ಮ್ಯಾಲಾಗಿ ಮಲಗ್ಯಾನ | ಕಂದೈಗ
ಮುತ್ತಿನ ದೃಷ್ಠಿ ತೆಗೆದೇನ ||
ಜೋಗುಳ ಹಾಡಿದರ ಆಗಳೇ ಕೇಳ್ಯಾನ
ಹಾಲ ಹಂಬಲ ಮರತಾನ | ಕಂದೈಗ
ಜೋಗುಳದಾಗ ಅತಿಮುದ್ದು ||
ಅತ್ತಿಯ ಮರಕೆ ಹತ್ತೀತೊ ಗುಮ್ಮ
ಹತ್ತೆಂಟು ಹಣ್ಣ ಮೆದ್ದಿತೊ ಗುಮ್ಮ
ಗುಮ್ಮ ಬತ್ತದೆ ಕಂದ ಸುಮ್ಮನೆ ಮಲಗು ಜೋಜೋ…||
ಇವೇ ಮೊದಲಾದ ಜೋಗುಳದ ಪದಗಳನ್ನು ನಮ್ಮ ಪೂರ್ವಜರು ಸ್ವತಃ ಕಟ್ಟಿ ಹಾಡುತ್ತಾ ತಾಯ್ತನದ ಭಾವನಾತ್ಮಕ ಆನಂದವನ್ನು ಅನುಭವಿಸುತ್ತಿದ್ದರು. ಇತ್ತೀಚಿನ ದಶಕಗಳಲ್ಲಿ ಕೆಲವರು ಕವಿಗಳು ಬರೆದ ಲಾಲಿ ಹಾಡುಗಳು ತುಂಬಾ ಜನಪ್ರಿಯವಾಗಿವೆ.
ಅವುಗಳನ್ನು ನೆನಪಿಸಿಕೊಳ್ಳುವುದಾದರೆ, ಕೆ.ಎಸ್. ನರಸಿಂಹಸ್ವಾಮಿ ವಿರಚಿತ
“ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು
ನಿದ್ದೆ ಬರುವಳು ಹೊದ್ದು ಮಲಗು ಮಗುವೆ…
ಜೋ…ಜೋಜೋಜೋ…. ಗೀತೆಯು ಅತ್ಯಂತ ಸೊಗಸಾದ ಲಾಲಿ ಪದಕ್ಕೆ ಸಮನಾಗಿದೆ.
ಹಾಗೆಯೇ, ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟರ
ಮಲಗೋ ಮಲಗೆನ್ನ ಮರಿಯೆ
ಬಣ್ಣದ ನವಿಲಿನ ಗರಿಯೆ,
ಎಲ್ಲಿಂದ ಬಂದೆ ಈ ಮನೆಗೆ
ನಂದನ ಇಳಿದಂತೆ ಬುವಿಗೆ?….. ಕವಿತೆಯು ಸುಶ್ರಾವ್ಯವಾಗಿದ್ದು ಮಕ್ಕಳು ನಿದ್ರೆಗೆ ಜಾರಲು ಸೆಳೆಯುವಂತಿದೆ.
ಈ ರೀತಿಯ ಭಾವಗೀತೆಗಳು ಅತ್ಯಂತ ಪ್ರಸಿದ್ಧವಾದ ಲಾಲಿ ಹಾಡುಗಳಂತೆ ಭಾಸವಾಗುತ್ತವೆ. ಇವಲ್ಲದೆ ಕೆಲವು ಸಿನಿಮಾ ಹಾಡುಗಳು ಕೂಡಾ ಮಕ್ಕಳಿಗೆ ಖುಷಿಪಡಿಸಿ ನಿದ್ರಾದೇವಿಯ ವಶವಾಗುವಂತೆ ಮಾಡಲು ಜೋಗುಳದ ಪದಗಳಾಗಿ ಬಳಕೆಯಾಗುತ್ತಿವೆ.
ಜೋ…ಜೋ ಲಾಲಿ ನಾ ಹಾಡುವೆ
ಚಿನ್ನಾ ನಿನ್ನಾ ಮುದ್ದಾಡುವೆ
ಹೂವಂಥ ಕನಸು ತಾ ಮೂಡಿ ಬರಲಿ
ನಗುವ ಅಳುವ ಕಣ್ಣಲ್ಲಿ ಇಂದು… (ಚಿತ್ರ:-ಚಿನ್ನಾ ನಿನ್ನಾ ಮುದ್ದಾಡುವೆ) ಗೀತೆಯು ಬಹಳಷ್ಟು ಖ್ಯಾತಿ ಪಡೆದಿರುವುದು ಎಲ್ಲಾ ಚಿತ್ರ ಪ್ರೇಮಿಗಳ ಮನಗೆದ್ದಿರುವುದಕ್ಕೆ ನಿದರ್ಶನವಾಗಿದೆ.
ಹಾಗೆಯೇ ಬಾಲಕೃಷ್ಣನನ್ನು ಮಲಗಿಸಲು ಯಶೋಧೆಯು ಹಾಡುವ ಲಾಲಿ ಹಾಡಿನಂತಿರುವ
ಲಾಲಿ ಲಾಲಿ ಲಾಲಿ ಲಾಲಿ
ಶ್ರೀಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ…(ಚಿತ್ರ:-ಸ್ವಾತಿಮುತ್ತು) ಹಾಡಂತೂ ಎಲ್ಲಾ ಆಧುನಿಕ ತಾಯಂದಿರಿಗೂ ಬಾಯಿಪಾಠವಾಗಿದೆ.
ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ಶ್ರೀನಿವಾಸನನ್ನು ನಿದ್ರೆಗೆ ಜಾರಿಸಲು ಮಹಾಭಕ್ತ ಬಾಲಾಜಿಯು ಹಾಡುವ
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ
ಮನವೆಂಬ ಮಲ್ಲಿಗೆಯ
ಹೂವ ಹಾಸಿಗೆ ಮೇಲೆ…. ಗೀತೆಯು ಕೂಡಾ ಸುಪ್ರಸಿದ್ಧ ಲಾಲಿ ಹಾಡಿನಂತೆ ಇಂದಿಗೂ ನಾಲಿಗೆಯಲ್ಲಿ ನಲಿದಾಡುತ್ತಿದೆ.
ವರನಟ ಡಾ.ರಾಜ್ ಕುಮಾರ್ ಅಭಿನಯದ ಭಕ್ತಪ್ರಹ್ಲಾದ ಚಿತ್ರದಲ್ಲಿ ಅಳವಡಿಸಿರುವ
“ಲಾಲಿ ಲಾಲಿ ಸುಕುಮಾರ
ಲಾಲಿ ಮುದ್ದು ಬಂಗಾರ
ಅಮ್ಮನ ಬಾಳಿನ ನೆಮ್ಮದಿಗೆ
ಕಂದಾ ನೀನೆ ಆಧಾರ…. ಗೀತೆಯನ್ನು ಕೇಳದವರುಂಟೆ,!? ಇನ್ನು ಭಾಗ್ಯವಂತ ಚಿತ್ರದಲ್ಲಿ ತಾತನನ್ನು ಮಲಗಿಸಲು ಪುನೀತ್ ರಾಜಕುಮಾರ್ ಹಾಡಿರುವ
“ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ
ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ
ನೋಡು ಎಂಥ ಚಂದ
ರಾತ್ರಿಯಾಯ್ತು ಮಲಗು ನನ್ನ ಪುಟ್ಟ ಕಂದ…” ಗೀತೆಯಂತೂ ಅತ್ಯಂತ ಜನಪ್ರಿಯತೆ ಪಡೆದುಕೊಂಡಿದೆ.
ಕಾಲಾಂತರದಲ್ಲಿ ಬದಲಾದ ಜನಸಾಮಾನ್ಯರ ಅಭಿರುಚಿಯಂತೆ ಮಕ್ಕಳನ್ನು, ಕೆಲವೊಮ್ಮೆ ಹಿರಿಯರನ್ನೂ ಮಲಗಿಸಲು ಇಂತಹ ಹಾಡುಗಳನ್ನು ಹೇಳುವ ಅಥವಾ ಕೇಳಿಸುವ ಹವ್ಯಾಸವು ಮನಸ್ಸಿಗೆ ಸಂತಸ ಮತ್ತು ಮುದ ನೀಡುತ್ತದೆ.
ಈಗಿನ ಕಾಲಘಟ್ಟದಲ್ಲಿ ಅಂಥ ಆಸಕ್ತಿಯೇ ಇಲ್ಲ. ಅದೂ ಹೋಗಲಿ, ಈಗಿನವರಿಗೆ ಬಿದಿರಿನ ತೊಟ್ಟಿಲನ್ನು ತೊಲೆಗೆ ಹಗ್ಗದಿಂದ ಕಟ್ಟಿ ಅದರಲ್ಲಿ ಮಗುವನ್ನು ಮಲಗಿಸಿ ಹಾಡಿಕೊಂಡು ತೂಗುವಷ್ಟು ಪುರುಸೊತ್ತಾದರು ಇದೆಯೇ!? ಉಹ್ಞೂಂ, ಅತ್ತಿತ್ತ ಕಬ್ಬಿಣದ ಸ್ಟ್ಯಾಂಡ್ ಗಳ ಮೇಲೆ ಹೊಯ್ದಾಡುವ ಬಣ್ಣದ ತೊಟ್ಟಿಲುಗಳು ಬಂದ ಮೇಲೆ ಬಿದಿರಿನ ತೊಟ್ಟಿಲುಗಳು ಸೌದೆ ಒಲೆಗಳಲ್ಲಿ ಉರುವಲಾಗಿ ಭಸ್ಮವಾಗಿ ಹೋಗಿವೆ.
ಸಾಲದೆಂಬಂತೆ ಹಳೆಯ ಸೀರೆಗಳನ್ನು ತೊಲೆಗೆ ಅಥವಾ ಕಂಬಿಗೆ ಕಟ್ಟಿ ಅದರೊಳಗೆ ಮಗುವನ್ನು ತೂಗುವುದೂ ಇದೆ. ಇಂತಹವರು ಜೋಗುಳದ ಹಾಡನ್ನು ಹೇಳುವುದು ತುಂಬಾ ದೂರದ ಮಾತಾಗಿದೆ. ಪೂರ್ವಿಕರ ಇಂತಹ ಅತ್ಯುತ್ತಮ ಸಂಪ್ರದಾಯಗಳು ಕಾಲಾನುಕ್ರಮದಲ್ಲಿ ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸಲ್ಪಟ್ಟಿದ್ದರೆ ಸಂಸ್ಕೃತಿಯ ಮೂಲ ಸ್ವರೂಪವನ್ನು ಉಳಿಸಿಕೊಳ್ಳಬಹುದಿತ್ತು. ಆದರೆ ಈಗ ಹಾಗಾಗಿಲ್ಲವೆಂಬುದೇ ಬೇಸರದ ವಿಷಯ. ಮಾಡರ್ನ್ ಮಮ್ಮಿಗಳ ವಿಚಿತ್ರವಾದ ಅಭಿರುಚಿಯಿಂದ ಮೂಲ ಜೋಗುಳದ ಹಾಡುಗಳು, ಲಾಲಿ ಪದಗಳ ಜಾಗದಲ್ಲಿ ಅಸಂಬದ್ಧ ಸಿನಿಮಾ ಗೀತೆಗಳು ವಿಜೃಂಭಿಸುತ್ತಿವೆ. ಇದರಿಂದ ಮುಗ್ಧ ಮಕ್ಕಳ ಮನೋವಿಕಾಸ ಎಷ್ಟರಮಟ್ಟಿಗೆ ಸಚ್ಚಿಂತನೆಯ ನೆಲೆಯಲ್ಲಿ ರೂಪುಗೊಳ್ಳಬಹುದೆಂಬುದು ಚಿಂತಿಸಬೇಕಾದ ಬೆಳವಣಿಗೆಯಲ್ಲವೆ. ‘ಬೆಳೆವ ಸಿರಿ ಮೊಳಕೆಯಲ್ಲಿ’ ಎಂಬಂತೆ ತಾಯಿಯ ಗರ್ಭದಿಂದಲೇ ಮಗುವು ಕಲಿಕೆಯನ್ನು ಆರಂಭಿಸುತ್ತದೆ ಎಂದು ಮನೋವಿಜ್ಞಾನಿಗಳು ಹೇಳುತ್ತಾರೆ.
ಹಾಗಿದ್ದ ಮೇಲೆ ಒಳ್ಳೆಯ ವಿಚಾರಗಳನ್ನು, ಸಂಸ್ಕೃತಿ ಸದಾಚಾರಗಳನ್ನು ಪೋಷಕರು ಬಾಲ್ಯದಲ್ಲಿಯೇ ಬಿತ್ತವುದು ಉಚಿತವೆನಿಸುವ ಜೊತೆಗೆ ಜೋಗುಳದ ಹಾಡುಗಳು ಕೂಡಾ ಮಗುವಿನ ಆಹ್ಲಾದಕರ ಬೆಳವಣಿಗೆಗೆ ಪೂರಕವಾಗುತ್ತದೆ ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕಿದೆ.
~~~~~~~~~~~~~~~~

~ಹೊ.ರಾ.ಪರಮೇಶ್ ಹೊಡೇನೂರು
#7022765372
