ಟಿ.ನರಸೀಪುರ : ಭಾರತದಲ್ಲಿ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರಲು ಅಂಬೇಡ್ಕರ್ ಅವರು ರೂಪಿಸಿದ ಪ್ರಜಾ ಪ್ರತಿನಿಧಿ ಕಾಯ್ದೆ ಮತ್ತು ಕಾರ್ಯಾಂಗದ ಅಂಶಗಳಿಂದ ಆಡಳಿತದಲ್ಲಿ ಹಿಡಿತ ಸಾಧಿಸಲು ಸಾಧ್ಯವಾಯಿತೆಂದು ಜಿ.ಪಂ ಯೋಜನಾ ನಿರ್ದೇಶಕ ತಾ.ಪಂ ಆಡಳಿತಾಧಿಕಾರಿ ಕೆ.ಬಿ.ಪ್ರಭುಸ್ವಾಮಿ ಸ್ಮರಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅಂಬೇಡ್ಕರ್ ಜಯಂತಿ ಭಾರತದಲ್ಲಷ್ಟೇ ಅಲ್ಲ, ಜಗತ್ತಿನಾದ್ಯಂತ ಆಫ್ರಿಕನ್, ಇಂಗ್ಲೆಂಡ್ ಹೇಳಿದಂತೆ 137 ರಾಷ್ಟ್ರಗಳಲ್ಲಿ ಹಬ್ಬದಂತೆ ಆಚರಣೆಯಾಗುತ್ತಿರುವುದು ನಿಜಕ್ಕೂ ಭಾರತೀಯರೆಲ್ಲರೂ ಹೆಮ್ಮೆಪಡುವಂತಹ ಸಂಗತಿಯಾಗಿದೆ ಎಂದರು.
ಸಾಮಾಜಿಕ ವ್ಯವಸ್ಥೆಯನ್ನು ಅರಿತು ದೇಶದ ಆಡಳಿತದಲ್ಲಿ ಸುಧಾರಣೆ ತರಲು ಪ್ರಜಾಪ್ರಭುತ್ವ ಮತ್ತು ರಾಜಕೀಯ ಚಿಂತನೆಗಳನ್ನು ಸಂವಿಧಾನದ ಮೂಲಕ ಆಡಳಿತಕ್ಕೆ ಕಾನೂನನ್ನ ಬರವಣಿಗೆಯ ರೂಪವನ್ನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶ ಕಂಡಂತಹ ಜಾಗತಿಕ ನಾಯಕ ಎಂದು ಜಿ.ಪಂ ಯೋಜನಾ ನಿರ್ದೇಶಕರಾದ ತಾ.ಪಂ ಆಡಳಿತಾಧಿಕಾರಿ ಕೆ.ಬಿ.ಪ್ರಭುಸ್ವಾಮಿ ಬಣ್ಣಿಸಿದರು.
ದೇಶದೆಲ್ಲೆಡೆ ಹಬ್ಬದಂತೆ ಆಚರಣೆಯಾಗುವ ಅಂಬೇಡ್ಕರ್ ಜಯಂತಿ ವಿಶ್ವ ಜ್ಞಾನದ ದಿನವಾಗಿ ಜಗತ್ತಿನಾದ್ಯಂತ ಆಚರಣೆ ಆಗಲು ಅವರಲ್ಲಿದ್ದ ಅಗಾಧವಾದ ಜ್ಞಾನ, ವೈಜ್ಞಾನಿಕ ಚಿಂತನೆಗಳು ಪ್ರಮುಖ ಕಾರಣವಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರಲು ಅಂಬೇಡ್ಕರ್ ಅವರು ರೂಪಿಸಿದ ಪ್ರಜಾ ಪ್ರತಿನಿಧಿ ಕಾಯ್ದೆ ಮತ್ತು ಕಾರ್ಯಾಂಗದ ಅಂಶಗಳಿಂದ ಆಡಳಿತದಲ್ಲಿ ಹಿಡಿತ ಸಾಧಿಸಲು ಸಾಧ್ಯವಾಯಿತು ಎಂದು ಕೆ.ಬಿ.ಪ್ರಭುಸ್ವಾಮಿ ತಿಳಿಸಿದರು.
ಮುಖ್ಯ ಭಾಷಣಕಾರ ವಕೀಲ ಬಿ.ಆರ್.ರಂಗಸ್ವಾಮಿ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅಂಬೇಡ್ಕರ್ ಅವರು ಜನ್ಮದಿನದಂದು ವಿಶ್ವ ಜ್ಞಾನದ ಸಂಕೇತವಾಗಿದ್ದಾರೆ. ಅಸಮಾನತೆಯನ್ನು ಅರಿತು, ಸಮಾಜದಲ್ಲಿ ಸಮಾನತೆ ಎಲ್ಲರಿಗೂ ಸಿಗಬೇಕು. ಮಹಿಳೆಯು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಹಿಂದೂ ಕೋಡ್ಬಿಲ್ ಲೋಕಸಭೆಯಲ್ಲಿ ಮಂಡನೆ ಯಾಗದಿದ್ದಕ್ಕೆ ಕಾನೂನು ಸಚಿವ ಹುದ್ದೆಯನ್ನು ತ್ಯಜಿಸಿದರು. ಶೋಷಿತರು ದಲಿತ ಸಮುದಾಯಗಳು ನನ್ನಂತೆ ವಿದ್ಯಾವಂತರಾಗಿ ಉತ್ತಮ ಬದುಕನ್ನು ನಡೆಸಬೇಕೆಂಬ ಕನಸನ್ನ ಕಂಡಿದ್ದರು. ಬಲಿಷ್ಠವಾದ ಭಾರತವನ್ನು ಪ್ರಬುದ್ಧ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಬೇಕೆಂಬ ಹಂಬಲ, ತುಡಿತ ಅವರಲ್ಲಿತ್ತು ಎಂದು ತಿಳಿಸಿದರು.
ತಾಲ್ಲೂಕು ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ ಮಾತನಾಡಿ, ಸಮುದಾಯವೊಂದಕ್ಕೆ ನಾಯಕರೆಂದು ಬಿಂಬಿಸಲಾಗಿರುವ ಅಂಬೇಡ್ಕರ್ ಅವರನ್ನ ಸಂವಿಧಾನ ಮತ್ತು ಮೀಸಲಾತಿಗಷ್ಟೇ ಸೀಮಿತಗೊಳಿಸಿರುವ ಭಾರತೀಯರ ಚಿಂತನೆ ಬದಲಾಗಬೇಕು. ಭಾರತವನ್ನು ಸ್ವಾತಂತ್ರಗೊಳಿಸಬೇಕು. ಸಮಾನತೆಯ ಅವಕಾಶವನ್ನ ಎಲ್ಲಾ ವರ್ಗದ ಜನರಿಗೂ ಕಲ್ಪಿಸಬೇಕೆಂದು ಹೋರಾಟವನ್ನು ಮಾಡುತ್ತಿದ್ದ ಅಂಬೇಡ್ಕರ್ ಅವರು ಕೂಡ ಸ್ವತಂತ್ರ ಹೋರಾಟಗಾರರೇ ಆಗಿದ್ದಾರೆ ಎಂಬುದನ್ನು ಮನಗಾಣಬೇಕು. ಸನಾತನ ಧರ್ಮಕ್ಕಿಂತಲೂ ಹಿಂದೆ ಭಾರತದಲ್ಲಿ ಹುಟ್ಟಿದಂತಹ ಬೌದ್ಧ ಧರ್ಮವನ್ನು ಸ್ವೀಕರಿಸಿದ ಅಂಬೇಡ್ಕರ್ ಅವರು ಭಾರತೀಯರ ಹೆಮ್ಮೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಿದ್ದ ತಹಸೀಲ್ದಾರ್ ಟಿ.ಜಿ. ಸುರೇಶಾಚಾರ್ ಮಾತನಾಡಿದರು. ಜಿ.ಪಂ ಮಾಜಿ ಅಧ್ಯಕ್ಷ ಎಸ್.ಎನ್.ಸಿದ್ಧಾರ್ಥ, ಭೂ ನ್ಯಾಯ ಮಂಡಳಿ ಸದಸ್ಯ ಕುಕ್ಕೂರು ಗಣೇಶ್, ಪುರಸಭಾ ಅಧ್ಯಕ್ಷೆ ವಸಂತ ಶ್ರೀಕಂಠ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ತುಂಬಲ ಪ್ರಕಾಶ್, ಪುರಸಭಾ ಮಾಜಿ ಅಧ್ಯಕ್ಷರಾದ ಟಿ.ಎಂ. ನಂಜುಂಡಸ್ವಾಮಿ, ಎನ್.ಸೋಮು, ಸದಸ್ಯ ಮಂಜು ಬಾದಾಮಿ, ಜಿ.ಪಂ ಮಾಜಿ ಸದಸ್ಯ ಹೊನ್ನ ನಾಯಕ ಎಸ್ಸಿ, ಎಸ್ಟಿ ಹಿತ ರಕ್ಷಣಾ ಸಮಿತಿ ಸದಸ್ಯ ಸೋಸಲೆ ಮಹದೇವಸ್ವಾಮಿ, ತಾ.ಪಂ. ಮಾಜಿ ಉಪಾಧ್ಯಕ್ಷ ಬಿ. ಮರಯ್ಯ, ಮಾಜಿ ಸದಸ್ಯರಾದ ರಾಮಲಿಂಗಯ್ಯ, ಬಸವರಾಜು ಕಾರ್ಯನಿರ್ವಾಹಕ ಅಧಿಕಾರಿ ಪಿ.ಎಸ್. ಅನಂತರಾಜು, ದಲಿತ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷ ತುಂಬ ಮಂಜುನಾಥ್,ಸೋಸಲೆ ಶಿವಕುಮಾರ್ ಬಡ್ಡು,ಮೂಗೂರು ಸಿದ್ದರಾಜು ಸೇರಿದಂತೆ ಇತರರಿದ್ದರು.
ವರದಿ- ಎಂ.ನಾಗೇಂದ್ರಕುಮಾರ್
ಟಿ.ನರಸೀಪುರ

ಬರವಣಿಗೆಯ ಶೈಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸಾರ್