ಇಂದಿನ ಸಾಮಾಜಿಕ ಬದುಕಿನಲ್ಲಿ ಸಮಾನತೆಯ ಜಿಜ್ಞಾಸೆ ತಾಂಡವವಾಡುತ್ತಿದೆ. ಸಮಾನ ಬದುಕು ಮರಿಚಿಕೆಯೇ ಸರಿ. ಅಸ್ಪಷ್ಟ ಸಮಾನತೆಯ ನಿಲುವು ಗೊಂದಲವನ್ನು ಸೃಷ್ಟಿಸಿ ಮುಗ್ಧ ಜನರ ಮನೋ ಲಹರಿಯನ್ನು ಛಿದ್ರಗೊಳಿಸಿದೆ ಎಂಬುದನ್ನು ಪ್ರಶ್ನಾತೀತವಾಗಿ ನೋಡುವ ಅಗತ್ಯವಿಲ್ಲ. ಸಮಾನತೆಯ ತಕ್ಕಡಿ ಸಮ ಕಂಡುಕೊಳ್ಳದೆ ಇರುವುದರಿಂದ ಜನಸಾಮಾನ್ಯನ ಹತಾಶಭಾವ, ಆರ್ಥಿಕ ಅಸಮತೋಲನ, ಮನೋಬೇನೆಗಳನ್ನು ನೋಡುವುದು ಸಾಮಾನ್ಯವಾಗಿ ಬಿಟ್ಟಿವೆ. ಇಂತಹ ನಕಾರಾತ್ಮಕ ಅಂಶಗಳಿಂದ ಸಮಾಜದ ಬದುಕಿನಲ್ಲಿ ಅಸೂಯೆ, ದ್ವೇಷ, ದಳ್ಳುರಿ ಉದ್ಭವವಾಗಿವೆ.
ಇದರೊಂದಿಗೆ ಜನ ಸಾಮಾನ್ಯರಿಗೆ ಆಮಿಷ ಮತ್ತು ಧರ್ಮಗಳ ಚಟುವಟಿಕೆಗಳಲ್ಲಿ ಒಂದಾದ ಭಯೋತ್ಪಾದನೆ ಇಡೀ ರಾಷ್ಟ್ರ ದ ಅಥವ ಸಮಾಜದ ಶಾಂತಿ ಹಾಗು ಸ್ವಸ್ಥವನ್ನು ಹಾಳು ಮಾಡುತ್ತಿದೆ. ಜನ ಸಾಮಾನ್ಯನ ಭಯವನ್ನು ಗುರಿಯಾಗಿಸಿಕೊಂಡಿರುವ ಕೆಲ ಸಂಘಟನೆಗಳು ತಲೆ ಎತ್ತಿ, ತಮ್ಮದೇ ಆದ ಗುಂಪುಗಳನ್ನು ನಿರ್ಮಿಸಿ ಮುಗ್ಧ ಜನರನ್ನು ಹೆದರಿಸಿ, ಹಣ ಸುಲಿಗೆ ಮಾಡುತ್ತಿರುವರು. ಇವರ ಮನೋ ವಿಕೃತಿಗೆ ಸ್ಪಂದಿಸದೆ ಇದ್ದರೆ ಪೈಶಾಚಿಕ ಕೃತ್ಯ ಎಸಗುವುದಕ್ಕೂ ಹೇಸುವುದಿಲ್ಲ. ಇಂತಹ ಹಾಳು ವಾತಾವರಣದಲ್ಲಿ ನ್ಯಾಯವಾಗಿ ಬದುಕುವ, ನಿಷ್ಠೆಯಿಂದ ಕೆಲಸ ಮಾಡುವ, ಪ್ರಾಮಾಣಿಕವಾಗಿ ಆದಾಯ ತೆರಿಗೆ ಕಟ್ಟುತ್ತಿರುವ, ದ್ವೇಷ ಅಸೂಯೆಗಳನ್ನು ಅರಿಯದೆ ಇರುವ, ಜನಸಾಮಾನ್ಯನ ಪಾಡನ್ನು ಯಾರು ಅರ್ಥ ಮಾಡಿಕೊಳ್ಳುವರು? ಅವರ ಅಸಾಹಾಯಕತೆಯ ಕೂಗನ್ನು ಯಾರು ಕೇಳುವರು?
ನಾಮ, ರೂಪ ಮತ್ತು ಜಾತಿಗೆ ಮೀಸಲಿಟ್ಟ ನಾವು, ಮನುಷ್ಯತ್ವ ಎನ್ನುವ ಪ್ರಪಂಚಕ್ಕೆ ಒಮ್ಮೆಯೂ ಕಾಣದೇ ಇರುವಂತಹ ಈ ಮನಸ್ಸನ್ನು ಇಣುಕಿ ನೋಡಿದಾಗ ಅನೇಕ ತರಹದ ನಕಾರಾತ್ಮಕ ಕೋನಗಳನ್ನು ನೋಡಲು ಸಿಗುವುದು. ಅಂತಹವುಗಳಲ್ಲಿ ಸ್ವಧರ್ಮ, ಸ್ವಜನಪಕ್ಷಪಾತ, ಅಂತಸ್ತು, ಧೋರಣೆ, ಅನೀತಿ, ಅನಿಷ್ಠಗಳು. ಇವುಗಳನ್ನೆ ಬಂಡವಾಳ ಎಂದು ಕೊಂಡಿರುವ ಕೆಲವರಲ್ಲಿ ಜ್ಞಾನ ಪರ, ಸಾಧನ ಪರ, ಪರಿಶ್ರಮ ಪರ ಮತ್ತು ಸಹಾಯ ಪರ ತಳಹಾದಿ ಕಾಣುತ್ತಿರುವುದು ಶೋಚನೀಯ. ರಾಷ್ಟ್ರ ದ ಕೆಲ ಸಿರಿವಂತರು ಮತ್ತು ಉದ್ಯಮಿಗಳ ಮೋಸ ಹಾಗು ವಂಚನೆ, ರಾಜಕೀಯ ದೊಂಬಿ ಮತ್ತು ಲಂಚಾವತಾರ, ಇವುಗಳಿಂದ ಜನಸಾಮಾನ್ಯನ ಮನಸ್ಸು ನುಚ್ಚು ನೂರಾಗುತ್ತಿರುವುದು ಹೊಸದೇನಲ್ಲ. ಇವೆಲ್ಲದಕ್ಕು ಮುಕ್ತಿ ಎಂದು? ಇದೇ ಇಂದಿನ ಜನಸಾಮಾನ್ಯನ ಕೊರಗು ಮತ್ತು ಕೂಗು.

ಇತ್ತೀಚಿನ ಘಟನೆಯೊಂದು ಸ್ವಾಭಿಮಾನ ಮೆರೆಯುವ ಸಾಮಾನ್ಯನಿಗೆ ಆಘಾತ ತರುವಂತಹ ವಿಷಯ. ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳಲ್ಲಿ ಕೆಲಸ ಮಾಡುವವರು (moles) ನಡೆದುಕೊಳ್ಳುವಂತಹ ಅವ್ಯವಹಾರಗಳು ದೇಶದ ಸುಭದ್ರತೆಗೆ ಎಚ್ಚರಿಕೆಯ ಘಂಟೆ. ನಾವು ಸರ್ಕಾರಕ್ಕೆ ನೀಡುತ್ತಿರುವ ಕರದಲ್ಲಿ ಭದ್ರತೆಯನ್ನು ನೀಡಬೇಕಾದ ಸರ್ಕಾರವೇ ಅಭದ್ರತೆಯನ್ನು ಸೃಷ್ಟಿಸಿದರೆ ಸರಿಯಾದವನ ಅಳುವನ್ನು ಯಾರ ಮುಂದೆ ತೋಡಿಕೊಳ್ಳಬೇಕು? ನಮ್ಮ ಅಸ್ಥಿತ್ವವಾದರೂ ಏನು? ನಮ್ಮನ್ನು ಕೇಳುವವರು ಯಾರು? ಪಕ್ಷ ಮತ್ತು ಪ್ರತಿಪಕ್ಷಗಳು ಪರಸ್ಪರ ಕೈ ಮಿಲಾಯಿಸಿ ದೇಶವನ್ನು ಲೋಟಿ ಮಾಡಿದರೆ ನಾವು ನಮ್ಮ ದೇಶದವರು ಎಂಬ ಸ್ವಾಭಿಮಾನ ಬರುವುದೇ? ಮುಂದೆ ಹೀಗೆ ಆಗದೇ ಇರಲಿ ಎನ್ನುವುದನ್ನು ಆಶಿಸೋಣ.
ಯಾವುದೇ ಜನ ಆರಿಸಿದ ಪಕ್ಷವು ಚುನಾಯಿತರಾದಾಗ ತಮ್ಮ ಅಹಂನ್ನು ಮತ್ತು ಸೋತ ಪಕ್ಷಗಳ ಕಾಲು ಎಳೆಯುವುದನ್ನು ಬಿಟ್ಟು ದೇಶದ ಪ್ರಗತಿಪರ ಚಿಂತನೆ ಮಾಡುವುದನ್ನು ಕಲಿಯಬೇಕು. ಈಗ ಆಗುತ್ತಿರುವುದೇನು? ಜನ ಸಾಮಾನ್ಯನ ಮುಗ್ಧತೆಯನ್ನು ಕಸಿದು, ಆಮಿಷಗಳಿಂದ ಬಂಧಿಸಿ, ಪ್ರವೃತ್ತಿಯನ್ನು ವೃತ್ತಿಯಾಗಿಸುವ ಇವರು ರಾಕ್ಷಸರಲ್ಲವೆ. ಶೋಷಣೆಗೆ ಒಳಗಾದವರು ಎನ್ನುವ ಕಾರಣಕ್ಕೆ ಷಡ್ಐಶ್ವರ್ಯಗಳನ್ನು ಸರ್ಕಾರವೇ ಅವರಿಗೆ ನೀಡಿದಾಗ ಅವನು ಆಲಸ್ಯ ಭರಿತಾನಾಗುವುದಿಲ್ಲವೆ. ಇದರಿಂದ ಸಾಮಾಜಿಕ ಅತಂತ್ರಗಳು ಕಾಣುವುದಿಲ್ಲವೆ, ಸಾಮಾನ್ಯನ ಭಾವನೆಗಳು ಜಿಜ್ಞಾಸೆಯ ಕಡೆ ವಾಲುವುದಿಲ್ಲವೆ. ಸ್ವಾಭಿಮಾನ, ಸಕಾರಾತ್ಮಕ ಚಿಂತನೆ, ಹೃದಯ ಭಾವ ಸೃಜನಶೀಲತೆ ಪಡೆಯುವುದು ಸಾಧ್ಯವೇ? ಇದನ್ನು ಪರಿವರ್ತಿಸುವುದಾದರೂ ಹೇಗೆ? ಜ್ಞಾನ, ಪರಿಶ್ರಮ ಮತ್ತು ವೃತ್ತಿ ನಿಷ್ಠೆಗಳಿಂದ ಆಸ್ತಿವಂತನಾದರೆ ತಪ್ಪೇನಿಲ್ಲ.
ಆದರೆ ಅಡ್ಡದಾರಿಯಿಂದ ಸಿರಿವಂತನಾಗುವವನನ್ನು ಅನೇಕ ಮಾನದಂಡಗಳಿಂದ ಮೊದಲೇ ಗುರುತಿಸಿ, ಚಿವುಟಿ ಮುಟ್ಟುಗೋಲು ಹಾಕಿ ಇದೇ ಸಂಪತ್ತನ್ನು ರಾಷ್ಟದ ಬೊಕ್ಕಸಕ್ಕೆ ಸೇರಿಸಿ ದೇಶದ ಸಂಪನ್ಮೂಲಗಳನ್ನು ವೃದ್ಧಿಸಿದರೆ ಸಾಮಾನ್ಯನು ಸಂತೋಷಪಡುವುದರಲ್ಲಿ ಎರಡು ಮಾತಿಲ್ಲ. ಈ ಅವಕಾಶದಿಂದ ಉದ್ಯೋಗ, ನೀರು, ಆಹಾರ, ಸಂಪರ್ಕ ಇಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಿದರೆ ದೇಶವು ಸುಭಿಕ್ಷೆ ಮತ್ತು ಸುಭದ್ರತೆಯನ್ನು ಕಾಣುವುದರಲ್ಲೂ ಸಹ ಸಂದೇಹವಿಲ್ಲ. ಮಾನವನ ಸಾಕ್ಷಿಭಾವ ಮತ್ತು ಮನೋಭಿಮಾನಗಳನ್ನು ಇಮ್ಮಡಿಸಿದರೆ ಕ್ಷಣಾರ್ದದಲ್ಲಿ ಸಂತೋಷ ಸಿಗುವುದು.
ನನ್ನನ್ನು ಯಾವಾಗಲೂ ಕಾಡುವ ಪ್ರಶ್ನೆ “ಸರಿಯಾದವನು”, ಯಾರು ಸರಿ ಅಥವಾ ಯಾರು ಸರಿಯಿಲ್ಲ. ನಾನು ಸರಿ ಅಂದರೆ ಇನ್ನೊಬ್ಬನಿಗೆ ಸರಿಯಿಲ್ಲ. ಈ ಅಜ್ಞಾತ ಸ್ಥಿತಿಯಲ್ಲಿ ಸರಿಯಾದವ ಎಂಬುವನು ಯಾರು? ಯಾವುದೇ ವ್ಯಕ್ತಿಯನ್ನು ಉದಾಹರಿಸಿ ತರ್ಕಿಸುವುದು ಬೇಡ. ಒಮ್ಮೆ ಅಕ್ಕಪಕ್ಕ, ಸ್ನೇಹಿತರ ಮತ್ತು ನೆಂಟಿಷ್ಟರ ಚೌಕಟ್ಟಿನಲ್ಲಿ ನಮ್ಮನ್ನು ಸೇರಿಸಿ ನೋಡಿದರೆ ನಮಗೆ ಕಾಣುವುದು ಕಡು ಬಡ ಮತ್ತು ಅತಿ ಶ್ರೀಮಂತಿಕೆಯ ಕುಟುಂಬಗಳು, ಉದಾಹರಣೆಗೆ ನಾವು ವಾಸವಿರುವ ರಸ್ತೆಯಲ್ಲಿ 10 ಮನೆಗಳನ್ನು ಪ್ರಾಯೋಗಿಕವಾಗಿ ಗುರುತಿಸಿದಾಗ, ಸರಿಯಾಗಿದ್ದೀವಿ ಎನ್ನುವ ಮಾಪನಗಳು ಯಾವುದು ಎಂದರೆ ಸುಖ, ಸಂಪತ್ತು, ಸಂಸ್ಕೃತಿ, ಆಡಂಬರ, ವೈಭವ, ಆರೋಗ್ಯ (ಶರೀರ ಮತ್ತು ಮಾನಸಿಕ). ನಾನು ಮಧ್ಯದಲ್ಲಿ ಇದ್ದು ಸರಿಯಾದವನು ಅನ್ನುವುದಾದರೆ ಹತ್ತಿರದ ಶ್ರೀಮಂತನನ್ನು ದೂರವಿಡುವುದೆ ಆಥವಾ ಬಡವನನ್ನು ಮಾತನಾಡಿಸದೆ ಇರುವುದೇ? ಬುದ್ಧನು ಹೇಳಿದ ಪ್ರಕಾರ ಬದುಕು ಎಂದೆಂದಿಗೂ ಸಂಸಾರ ವಿಧಿ ಅಡಿಯಲ್ಲಿ ಇರುವುದರಿಂದ ಮತ್ತು ಸಂಚಲನಾ ತತ್ವವನ್ನು ಹೊಂದಿರುವುದರಿಂದ ಮನುಷ್ಯನು ಯಾವಾಗಲು ನೀರಿನಂತೆ ಬೆರೆತರೆ ಮತ್ತು ಸಂಧರ್ಭಾನುಸಾರ ಪರಿವರ್ತನೆಯನ್ನು ಕಂಡು ಕೊಂಡಾಗ ಮಾತ್ರ “ಸರಿಯಾದವನು” ಎಂಬುದಾಗಿ ಕರೆಯಬಹುದು.
ಈ ತತ್ವಗುಣವನ್ನು ಅಳವಡಿಸಿ ಬೆರೆತು, ಜೀವಿಸಿ, ಸಂತೃಪ್ತಿ ಕಾಣುವವನೇ ಸಮಾನಿತನು.
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

