ಕೆ.ಆರ್.ಪೇಟೆ: ವೈದ್ಯಕೀಯ ಸೇವಾ ಕ್ಷೇತ್ರದಲ್ಲಿ ಪ್ಯಾರಾ ಮೆಡಿಕಲ್ ಸಿಬ್ಬಂದಿಗಳ ಪಾತ್ರವು ನಿರ್ಣಾಯಕವಾಗಿದ್ದು, ಆರೋಗ್ಯವಂತ ಸಮಾಜದ ನಿರ್ಮಾಣದಲ್ಲಿ ಇವರ ಕೊಡುಗೆ ಅಪಾರವಾಗಿದೆ ಎಂದು ಪ್ರಗತಿಪರ ಚಿಂತಕ ಬಳ್ಳೇಕೆರೆ ಮಂಜುನಾಥ್ ಹೇಳಿದರು.
ಅವರು ಇಂದು ಕೃಷ್ಣರಾಜಪೇಟೆ ಪಟ್ಟಣದ ವೈವಿದ್ಯ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ವಾರ್ಷಿಕೋತ್ಸವ ಸಮಾರಂಭ ವೈವಿದ್ಯೋತ್ಸವ – 2025ನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಬರುವ ಬಡ ರೋಗಿಗಳಿಗೆ ತಮ್ಮ ನಗುಮುಗದೊಂದಿಗೆ ಪ್ರಾಮಾಣಿಕವಾದ ಸೇವೆಯನ್ನು ನೀಡುತ್ತಾ , ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಅಪಾರವಾದ ಕೊಡುಗೆಯನ್ನು ನೀಡುತ್ತಿರುವ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಉಜ್ವಲವಾದ ಭವಿಷ್ಯವಿದೆ. ಪ್ಯಾರಾ ಮೆಡಿಕಲ್ ಶಿಕ್ಷಣವನ್ನು ಮುಗಿಸಿದ ಪ್ರತಿಯೊಬ್ಬ ವಿದ್ಯಾರ್ಥಿಗೂ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಉತ್ತಮವಾದ ಅವಕಾಶಗಳಿರುವುದರಿಂದ, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ತಾವು ಶಿಕ್ಷಣವನ್ನು ಸಂಪೂರ್ಣಗೊಳಿಸಿಕೊಂಡ ನಂತರ ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆಯಲು ಬರುವ ಮಧ್ಯಮ ವರ್ಗ ಹಾಗೂ ಬಡ ಕುಟುಂಬದ ಜನರಿಗೆ ಬದ್ಧತೆಯಿಂದ ಸೇವೆ ನೀಡಿ, ಆ ಭಗವಂತನು ಮೆಚ್ಚುವಂತೆ ಕೆಲಸ ಮಾಡಬೇಕು ಎಂದು ಬಳ್ಳೆಕೆರೆ ಮಂಜುನಾಥ್ ಕಿವಿಮಾತು ಹೇಳಿದರು.

ಪಟ್ಟಣದ ಖ್ಯಾತ ವಕೀಲರಾದ ರಮ್ಯಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಆರೋಗ್ಯ ಕ್ಷೇತ್ರದಲ್ಲಿ ಉತ್ತಮವಾದ ಸೇವೆ ಸಲ್ಲಿಸಲು ಪ್ಯಾರಾ ಮೆಡಿಕಲ್ ಸಿಬ್ಬಂದಿಗಳಿಗೆ ವಿಫಲವಾದ ಅವಕಾಶಗಳಿವೆ ಆದ್ದರಿಂದ ಪ್ಯಾರಾ ಮೆಡಿಕಲ್ ಶಿಕ್ಷಣ ಮುಗಿಸಿರುವ ವಿದ್ಯಾರ್ಥಿಗಳು ಹೆಚ್ಚಿನ ಹಣ ಸಂಪಾದಿಸಲು ಆಸೆ ಪಡೆದೆ ತಮಗೆ ಸಿಗುವ ಅವಕಾಶ ದಲ್ಲಿಯೇ ಬಡಜನರಿಗೆ ಉತ್ತಮ ವಾದ ಸೇವೆಯನ್ನು ಸಲ್ಲಿಸಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಸಾಹಿತಿಗಳು ಹಾಗೂ ಪತ್ರಕರ್ತರಾದ ಬಲ್ಲೇನಹಳ್ಳಿ ಮಂಜುನಾಥ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿಅಧ್ಯಕ್ಷ ಕೆ.ಆರ್.ನೀಲಕಂಠ, ವೈವಿದ್ಯಾ ಪ್ಯಾರಾ ಮೆಡಿಕಲ್ ಕಾಲೇಜಿನ ಕಾರ್ಯದರ್ಶಿ ಚಂದ್ರಮೋಹನ್ ಕಾರ್ಯಕ್ರಮದಲ್ಲಿ ಮಾತನಾಡಿ ದರು. ಕಾಲೇಜಿನ ಪ್ರಾಂಶುಪಾಲೆ ಡಾ.ಕಾವ್ಯಶ್ರೀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಸೈಯ್ಯದ್ ಖಲೀಲ್, ಉಪನ್ಯಾಸಕರಾದ ಅರ್ಪಿತಾ, ಬಿಂದುಶ್ರೀ, ರಕ್ಷಿತಾ, ವಿದ್ಯಾರ್ಥಿ ನಾಯಕರಾದ ರಂಜಿತಾ, ಅಮೃತಾ, ಹರ್ಷಿತಾ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿದ್ಯಾರ್ಥಿ ಗಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
-ಶ್ರೀನಿವಾಸ್ ಆರ್.
