ಕನಸುಗಳು ಮಕ್ಕಳಿಗೆ ಮಾತ್ರ ಅಲ್ಲ, ತಂದೆ-ತಾಯಿಗಳಿಗೂ ಇರುತ್ತವೆ. ಆದರೆ, ಆ ಕನಸುಗಳಿಗೆ ಹತ್ತಾರು ವರುಷಗಳ ಪರಿಶ್ರಮದ ಹಿನ್ನೆಲೆ ಇರುತ್ತದೆ. ಇಡೀ ಬದುಕಿನ ಜೀವನಾನುಭವ ಇರುತ್ತದೆ.
ಅವು ಜಾಹೀರಾತಿನಿಂದ ಪ್ರೇರಣೆ ಪಡೆದಿರುವುದಿಲ್ಲ, ರೀಲ್ಸ್, ಆಲ್ಬಂ, ಸಿನೆಮಾಗಳಿಂದ ಪ್ರಚೋದನೆಗೊಂಡಿರುವುದಿಲ್ಲ, ಹುಡುಗಾಟಿಕೆಯ / ಬೂಟಾಟಿಕೆಯ / ಒಣಪ್ರತಿಷ್ಠೆಯ / ತೋರಿಕೆಯ / ಅಡ್ಡದಾರಿಯ / ಯಾರದೋ ಒಳಸಂಚಿಗೆ ಬಲಿಯಾಗಬೇಕಾದ್ದಂತೂ ಅಲ್ಲವೇ ಅಲ್ಲ. ಈ ಮಾತುಗಳು ಕೇಳಲು, ಓದಲು ಕಠಿಣವೆನಿಸಬಹುದು.
ನೆನಪಿಡಿ; ಅವು ಅವರು ಅನುದಿನವೂ ಜಟಿಲ ಬದುಕಿನ ಹಲ ಬಗೆಯ ರೂಕ್ಷ ಪರೀಕ್ಷೆಗಳನು ಎದುರಿಸಿ, ಸೆಣೆಸಿ, ಅನುಭವಿಸಿ ಪಕ್ವವಾದ ಪಕ್ಕಾ ಪ್ರಾಕ್ಟಿಕಲ್ ಕನಸುಗಳು.
ತಾವು ಅರೆಹೊಟ್ಟೆಯಿದ್ದರೂ, ಹರುಕು ಬಟ್ಟೆ ಹಾಕಿಕೊಂಡಿದ್ದರೂ, ಅವಮಾನಗಳನು ನುಂಗಿಕೊಂಡರೂ, ಮಕ್ಕಳಿಗೆ ತಮ್ಮ ಸಾಧ್ಯತೆಗಳನು ಮೀರಿ,
ಸೌಲಭ್ಯಗಳನು ಒದಗಿಸಿರುತ್ತಾರೆ. ದೇಹವನು, ಆತ್ಮಗೌರವವನು ಬಲಿಗೊಟ್ಟು, ಮಕ್ಕಳಿಗೆ ಅವಕಾಶಗಳನು ಸೃಷ್ಠಿಸಿಕೊಟ್ಟಿರುತ್ತಾರೆ.
ಆ ಅವಕಾಶಗಳನು ಬಳಸಿಕೊಂಡು, ತಮ್ಮದೇ ಬದುಕನು ಕಟ್ಟಿಕೊಳ್ಳಲು, ಹೊರಡುವ ಮಕ್ಕಳು ಆ ಹಂತದಲಿ ತೆಗೆದುಕೊಳ್ಳುವ ತೀರ್ಮಾನಗಳು ಹಾಗೂ ತಿರುವುಗಳು,
ತಂದೆ-ತಾಯಿಯ ಇಷ್ಟು ವರ್ಷಗಳ ಸತತ ತಪಸ್ಸಿನ ಪ್ರತಿಫಲವನು ನಿರ್ಧರಿಸುತ್ತದೆ, ಅಲ್ಲದೇ ಆ ಎಲ್ಲಾ ಬೆವರು, ನಿದ್ರಾರಾಹಿತ್ಯ, ಅವಮಾನ, ನೋವುಗಳಿಗೆ ಸಾಂತ್ವನ-ಸಮಾಧಾನ ಸಿಗುವ ಸಾರ್ಥಕತೆಯನು ಬಯಸುತ್ತದೆ.
ಮಕ್ಕಳಿಗೆ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸಿ ಎಂಬ ಮಾತಿನಂತೆ; ತಾವು ತಮ್ಮ ಬದುಕಿನ ದುಡಿಮೆಯನು ಅನುಭವಿಸದಿದ್ದರೂ ಮಕ್ಕಳ ಭವಿಷ್ಯ ರೂಪಿಸಲು ತಮ್ಮದೆನ್ನುವ ಎಲ್ಲವನ್ನೂ ಆ ನಿಟ್ಟಿನಲಿ ತೊಡಗಿಸುತ್ತಾರೆ. ಮೇಣದಬತ್ತಿಯಂತೆ ಕರಗುತ್ತಾರೆ.
ತಮ್ಮ ನಿವೃತ್ತಿಯ ಹಂತದಲಿ ಮನೆ ಕಟ್ಟಿಸುತ್ತಾರೆ, ತಾವು ಬದುಕಬಹುದಾದ ಇನ್ನು ಕೆಲವೇ ಕೆಲವು ವರ್ಷಗಳಿಗಾಗಿ. ಬಹುತೇಕ ಅದು ಅವರಿಗಾಗಿ ಅಲ್ಲ; ಮಕ್ಕಳೊಂದಿಗಿರಲು. ವಿಪರ್ಯಾಸವೆಂದರೆ ಆ ಮನೆಯಲಿ ತಂದೆ-ತಾಯಿಯರಿಬ್ಬರೇ ವಿಷಾದದ ನಿಟ್ಟುಸಿರಿನೊಂದಿಗೆ ಅನಿಶ್ಚಿತ ನಾಳೆಗಳ ಅಸ್ಪಷ್ಠ ನಿರೀಕ್ಷೆಗಳೊಂದಿಗೆ ಕಾಲಹಾಕುತ್ತಿರುತ್ತಾರೆ.
ಇನ್ನು ವಿಷಯಕ್ಕೆ ಬರೋಣ. ತಂದೆ-ತಾಯಿಯರ ಪರಿಶ್ರಮದಿಂದ ಆಸ್ತಿಯಾಗಿ ಗಿಣಿಯಂತೆ ರೂಪುಗೊಂಡ ಮಕ್ಕಳನು ಹೊತ್ತೋಯ್ಯಲು ಹದ್ದುಗಳು ಹೊಂಚುಹಾಕುತ್ತಲೇ ಇರುತ್ತವೆ. ಹೆಸರು, ಖ್ಯಾತಿ, ಆಸ್ತಿ, ಬಣ್ಣದ ಬದುಕಿನ ಆಮಿಷಗಳನ್ನೊಡ್ಡಿ ತಮ್ಮದಾವುದೋ ಒಳ ಸಂಚಿಗೆ, ದುರುದ್ದೇಶಕ್ಕೆ ಗಿಣಿಯನ್ನು ಬಳಸಿಕೊಂಡು ಬಲಿ ಹಾಕಲು ಹಾತೊರೆಯುತ್ತಿರುತ್ತವೆ.
ತಂದೆ-ತಾಯಿಯರ ಸಾಂಪ್ರದಾಯಿಕ ಹಿನ್ನೆಲೆ, ಸಾತ್ವಿಕ ಆಚಾರ, ಧಾರ್ಮಿಕ ಮೌಲ್ಯ, ಸಾಮಾಜಿಕ ಗೌರವವನು ನಾಶಪಡಿಸಲು, ಆ ಮೂಲಕ ಇಡೀ ಕೌಟುಂಬಿಕ ವ್ಯವಸ್ಥೆಯನು ಬುಡಮೇಲು ಮಾಡುವ ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿ ಅಕ್ಕರೆ, ಆಸ್ಥೆಯಿಂದ ಸಾಕಿದ ಗಿಣಿಯನು ಹಾದಿ ತಪ್ಪಿಸುವ, ವಂಚನೆಗೀಡುಮಾಡುವ, ಪ್ರೀತಿ, ಪ್ರೇಮದ ನೆಪದಲಿ ಕುಟುಂಬದ ಇಡೀ ಸಂಪತ್ತನು ದೋಚುವ ಕಾರ್ಯತಂತ್ರವನು ಹೆಣೆಯಲಾಗುತ್ತಿದೆ.
ಆಸ್ತಿ-ಸಂಪತ್ತಿನ ವಿಷಯ ಹಾಳಾಗಲಿ; ಗಿಣಿಯನು ಕಳೆದುಕೊಂಡ ಕುಟುಂಬವು ಇದ್ದರೂ ಸತ್ತಂತೆ ಬದುಕಿನಿಡೀ ಜೀವಂತ ಶವದಂತೆ ಕೊರಗಿ, ನರಳಿ, ನಿಟ್ಟುಸಿರಿನ ಬೇಗುದಿಯಲಿ ಬೆಂದು ಛಿದ್ರಛಿದ್ರವಾಗಿ ನಾಶವಾಗುವುದಿದೆಯಲ್ಲ, ಅದು ಹೃದಯ ವಿದ್ರಾವಕ.
ಕಣ್ಣೆದುರೇ ಗಿಣಿ ಹಾದಿ ತಪ್ಪುವುದನು ನೋಡಿ, ಬುದ್ಧಿ ಮಾತು ಹೇಳಿದಾಗಲೂ ಹೆತ್ತವರ ಮಾತಿಗೆ ಕಿವಿಗೊಡದೇ ಹಣ, ಖ್ಯಾತಿ, ಯೌವ್ವನದ ಮದದಲ್ಲಿ ಕಣ್ಣಿದ್ದೂ ಕುರುಡಿಯಾಗಿ, ಕಿವಿಯಿದ್ದೂ ಕಿವುಡಿಯಾಗಿ, ಮೆದುಳಿದ್ದೂ ಅವಿವೇಕಿಯಾಗಿ ವರ್ತಿಸಿದಾಗ, ತನ್ನೆಲ್ಲ ಪ್ರಯತ್ನಗಳಲಿ ಸೋತ ಹತಾಶ ತಂದೆಯಿಂದ ಇತ್ತೀಚೆಗೆ ಹತಳಾದ ಟೆನ್ನಿಸ್ ಆಟಗಾರ್ತಿಯ ಸುದ್ಧಿ ಕೇಳಿ ಇದೆಲ್ಲಾ ಬರೆಯಬೇಕಾಯ್ತು.
– ಜೀವಾಳ

