ಹಾಸನ: ಎಲ್ಲರೂ ಒಳ್ಳೆಯವರ ಸಂಗದಲ್ಲಿ ಇರಬೇಕು. ನೀತಿವಂತರಾಗಿರಬೇಕು, ಅನ್ಯಾಯಕ್ಕೆ ಕೈ ಹಾಕಬಾರದು, ಸನ್ಮಾರ್ಗದಲ್ಲಿ ನಡೆಯಬೇಕೆಂಬುದನ್ನೇ ಭಗವಾನ್ ಬುದ್ದ, ಕನಕ ದಾಸರು, ವಿವೇಕಾನಂದರು, ಗಾಂಧೀಜಿ ಹೇಳಿದ್ದಾರೆ. ಆದರೆ ನಾವು ಅದಕ್ಕೆ ಪೂರಕವಾಗಿ ನಡೆಯುತ್ತಿಲ್ಲ. ಮಾರಕವಾಗಿ ನಡೆಯುತ್ತಿದ್ದೇವೆ ಎಂದು ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ ಬೇಸರ ವ್ಯಕ್ತಪಡಿಸಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಂದು ಹಮ್ಮಿಕೊಳ್ಳಲಾಗಿದ್ದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬುದ್ಧ ಅವರು ಸಮಾಜಕ್ಕಾಗಿ ಸಲ್ಲಿಸಿದ ಸೇವೆ ಅವೀಸ್ಮರಣಿಯ, ಎರಡೂವರೆ ಸಾವಿರ ವರ್ಷಗಳ ಹಿಂದೆ ವಾಸವಿದ್ದು, ಅಂದು ಅವರು ಆಡಿದ ನುಡಿಮುತ್ತು ಇಂದಿಗೂ ಪ್ರಸ್ತುತ ಮತ್ತು ಶಾಶ್ವತವಾಗಿವೆ ಎಂದರು.
ಅವರ ಸದಾಶಯದಂತೆ ನಾವುಗಳೆಲ್ಲಾ ಬದುಕು ಸಾಗಿಸಬೇಕಾಗಿದೆ. ಸತ್ಯದ ಅನ್ವೇಷಣೆಗೆ ಹೊರಟ ಸಿದ್ದಾರ್ಥನಿಗೆ ಜ್ಞಾನೋದಯವಾಗಿದ್ದು, 12 ವರ್ಷಗಳ ನಂತರ. ಬುದ್ಧ ಯಾವತ್ತೂ ದೈವದ ಬಗ್ಗೆ, ಆತ್ಮದ ಬಗ್ಗೆ ಚರ್ಚೆ ಮಾಡಲಿಲ್ಲ. ಬದಲಾಗಿ ಪ್ರಸ್ತುತದ ಬಗ್ಗೆ. ಭೂತ ಕಾಲದ ಬಗ್ಗೆ ಬಗ್ಗೆ ಏನೂ ಹೇಳಲಿಲ್ಲ, ಭವಿಷ್ಯ ಕಾಲದ ಬಗ್ಗೆ ಚಿಂತನೆ ನಡೆಸಲಿಲ್ಲ. ಅವರ ವಿಚಾರ ಇರುವುದು ಕೇವಲ ವರ್ತಮಾನಕ್ಕಷ್ಟೇ ಎಂದರು.
ಬುದ್ಧ ಮಹಾನ್ ಮೇಧಾವಿ, ಜಗತ್ತಿನಲ್ಲಿ ಎಲ್ಲರೂ ದುಃಖದಲ್ಲೆ ಇರುತ್ತಾರೆ. ಆಸೆಯೇ ದುಃಖಕ್ಕೆ ಮೂಲ, ಅದನ್ನು ತ್ಯಜಿಸಿ ಹೊರ ಬರುವುದೇಗೆ, ಮಾರ್ಗಗಳಾವುವು ಎಂಬುದನ್ನು ಅಷ್ಟಮಾರ್ಗದ ಮೂಲಕ ತೋರಿಸಿದರು ಎಂದರು.
ಸರಿಯಾದ ಕ್ರಿಯೆ, ಸರಿಯಾದ ಆಲೋಚನೆ, ಸರಿಯಾದ ದೃಷ್ಟಿ, ಸವಿಸ್ತಾರವಾದ ಚಿಂತನೆ, ಏಕಾಗ್ರತೆ, ಸರಿಯಾದ ಜೀವನ ಉಪಾಯ ಇಂತಹ ಅಷ್ಟ ಮಾರ್ಗಗಳನ್ನು ಹಾಕಿಕೊಟ್ಟಿದ್ದಾರೆ ಎಂದು ಹೇಳಿದರು.
ಎರಡು ಸಾವಿರ ವರ್ಷಗಳ ಹಿಂದಿನ ಸತ್ಯದ ಮಾತುಗಳನ್ನು ಇಂದಿಗೂ ಕೂಡ ಅನುಷ್ಠಾನಕ್ಕೆ ತರಲು ಆಗದೆ ಎಡವುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಂದೆಯಾದರೂ ಪ್ರತಿಯೊಬ್ಬರೂ ಶಾಂತಿ, ಸಮಾಧಾನ, ಒಳ್ಳೆಯದನ್ನು ಬೆಳೆಸಿಕೊಂಡು ಒಳ್ಳೆಯರಾಗಿ ಒಳ್ಳೆಯ ಸಮಾಜ ಕಟ್ಟಿ ಸಾಮರಸ್ಯದಿಂದ ಬದುಕೋಣ ಎಂದು ಕರೆ ನೀಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಹೆಚ್.ಎಲ್. ಮಲ್ಲೇಶ್ಗೌಡ ಮಾತನಾಡಿ, ಬುದ್ಧ ತನ್ನ ಕಾಲಮಾನದಲ್ಲಿ ಜಗತ್ತು ಎಂತಹ ಸತ್ಯಗಳಿಂದ ದೂರವಾಗಿದೆ ಎಂದು ಮತ್ತೊಮ್ಮೆ ನೆನಪಿಸಿಕೊಟ್ಟಿದ್ದಾರೆ.
ಬ್ರಹ್ಮ, ವಿಷ್ಣು, ಮಹೇಶ್ವರ ಇದ್ದ ಹಾಗೆ ಬುದ್ಧ, ಬಸವ ಹಾಗೂ ಗಾಂಧೀಜಿ ನಮ್ಮ ಪರಂಪರೆಯ ತ್ರಿಮೂರ್ತಿಗಳು ಎಂದು ಬಣ್ಣಿಸಿದರು.
ಬೆಂಗಳೂರಿನ ಅಕ್ಕ ಐ.ಎ.ಎಸ್. ಅಕಾಡೆಮಿ ಮುಖ್ಯಸ್ಥ ಡಾ. ಶಿವಕುಮಾರ್ ಉಪನ್ಯಾಸ ನೀಡಿ, ಬುದ್ಧ ಪೂರ್ಣಿಮೆಯನ್ನು ಭಗವಾನ್ ಬುದ್ಧನ ಜನ್ಮ, ಸತ್ಯದ ಜ್ಞಾನ ಮತ್ತು ಮಹಾ ಪರಿನಿರ್ವಾಣ ಎಂದು ಪರಿಗಣಿಸಲಾಗಿದೆ. ಬುದ್ಧ ಪೂರ್ಣಿಮೆ ಬುದ್ದನ ಜೀವನಕ್ಕೆ ಸಂಬಂಧಿಸಿಲ್ಲ. ಆದರೆ ಈ ಪೂರ್ಣಿಮಾ ದಿನದಂದು ಕಾಡಿನಲ್ಲಿ ಅಲೆದಾಡುವ ಮತ್ತು ಕಠಿಣ ತಪಸ್ಸು ಮಾಡಿದ ನಂತರ, ಬುದ್ದನು ಬೋಧ ಗಯಾದಲ್ಲಿನ ಬೋಧಿ ವೃಕ್ಷದ ಕೆಳಗೆ ಸತ್ಯದ ಜ್ಞಾನವನ್ನು ಪಡೆದನು ಎನ್ನುವ ಕಾರಣಕ್ಕಾಗಿ ಆಚರಿಸಲಾಗುತ್ತದೆ. ಗೌತಮ ಬುದ್ದರು ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಅನುಸರಿಸಲು ಜನರನ್ನು ಪ್ರೇರೇಪಿಸಿದವರು ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಟಿ ಶಾಂತಲಾ, ಜಿಪಂ ಉಪ ನಿರ್ದೇಶಕ ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆ ಡಿಡಿ ದೂದ್ ಫೀರ್, ಕನ್ನಡ- ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಹೆಚ್.ಪಿ. ತಾರಾನಾಥ್, ದಮ್ಮಾಚಾರಿ, ಭಾರತಿಯ ಬೌದ್ಧ ಮಹಾಸಭಾ ಅಧ್ಯಕ್ಷ ಬಸವರಾಜು, ಬೌದ್ಧ ಮಹಾಸಭಾ ಹಾಸನ ಜಿಲ್ಲಾಧ್ಯಕ್ಷ ಮಲ್ಲಯ್ಯ ಬೌದ್ಧ, ಎನ್.ಬಿ. ವೀರಭದ್ರಯ್ಯ, ಅನಂತಸ್ವಾಮಿ, ತೋಟೇಶ್, ಆರ್ಪಿಐ ರಾಜ್ಯಾಧ್ಯಕ್ಷ ಸತೀಶ್ ಇತರರು ಉಪಸ್ಥಿತರಿದ್ದರು. ಇದಕ್ಕೂ ಮುನ್ನಡಿಸಿ ಕಚೇರಿ ಆವರಣದಿಂದ ಕಲಾಭವನದವರೆಗೆ ಬುದ್ಧರ ಭಾವಚಿತ್ರ ಹೊತ್ತ ಮೆರವಣಿಗೆ ಸಾಗಿತು. ವಿವಿಧ ಭೌದ್ಧ ಸಮಾಜಗಳ ನೂರಾರು ಮಂದಿ ಮೆರವಣಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
