ಹಾಸನ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಾವಿರ ದಿನಗಳ ಸಂಭ್ರಮಾಚರಣೆಗೆ ಸಜ್ಜಾಗಿರುವ ಸಂದರ್ಭದಲ್ಲಿ, ಈ ಅವಧಿಯಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು ಸಾವಿರ ಸಮಸ್ಯೆಗಳನ್ನು ಸೃಷ್ಟಿಸಿದೆ ಎಂದು ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ದರೋಡೆ, ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ ಎಂದು ಆರೋಪಿಸಿದರು. ಸರ್ಕಾರ ಗ್ಯಾರೆಂಟಿ ಯೋಜನೆಗಳ ಹೆಸರಿನಲ್ಲಿ ಲೂಟಿ ನಡೆಸುತ್ತಿದೆ ಎಂದು ಟೀಕಿಸಿದರು.
ಗೃಹಲಕ್ಷ್ಮಿ ಹಣ ವಿತರಣೆಯಲ್ಲಿ ವಿಳಂಬ
ಗೃಹಲಕ್ಷ್ಮಿ ಯೋಜನೆ ಅಡಿ ತಿಂಗಳಿಗೆ ₹2,000 ನೀಡುವುದಾಗಿ ಘೋಷಿಸಿದ್ದರೂ, ಅದು ಸಮಯಕ್ಕೆ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ ಎಂದು ದೂರಿದರು. “ಜನವರಿ, ಫೆಬ್ರವರಿ ತಿಂಗಳ ಹಣ ಏಕೆ ನೀಡಲಿಲ್ಲ ಎಂದು ಕೇಳಿದಾಗ ಉತ್ತರ ಕೊಡಲಾಗಲಿಲ್ಲ. ಕೇಳಿದರೆ ಅದು ಸಂಬಳವಲ್ಲ ಎಂದು ಮಂತ್ರಿಗಳು ಹೇಳುತ್ತಾರೆ. ಗೃಹಲಕ್ಷ್ಮಿ ಕೊಡಬೇಕಾದದ್ದು ಯಾವ ಲಕ್ಷ್ಮಿ ಕೊಟ್ಟಿರಿ, ಆದರೆ ಹೋಗಿದ್ದು ಬೆಳಗಾವಿ ಲಕ್ಷ್ಮಿಗೆ,” ಎಂದು ವ್ಯಂಗ್ಯವಾಡಿದರು.
ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ಗ್ಯಾರೆಂಟಿ ಹಣ ನೀಡಿಲ್ಲ ಎಂದು ಆರೋಪಿಸಿದ ಅವರು, 42 ಸಾವಿರ ಕೋಟಿ ರೂ. ಪ್ರತ್ಯೇಕ ಮೀಸಲಾತಿ ಎಂಬುದು ತಪ್ಪು ಮಾಹಿತಿ ಎಂದರು. ದಲಿತರು, ರೈತರು, ಹಿಂದುಳಿದ ವರ್ಗಗಳು ಹಾಗೂ ಸ್ವಸಹಾಯ ಸಂಘಗಳಿಗೆ ವಂಚನೆ ಆಗಿದೆ ಎಂದು ಆರೋಪಿಸಿದರು.
ರೈತರು ಮತ್ತು ಸಂಘಗಳಿಗೆ ಬಡ್ಡಿ ಮನ್ನಾ ಬೇಡಿಕೆ
ಅಲ್ಪಸಂಖ್ಯಾತರಿಗೆ ₹718 ಕೋಟಿ ‘ಒನ್ ಟೈಂ ಸೆಟಲ್ಮೆಂಟ್’ ನೀಡಿರುವುದನ್ನು ಸ್ವಾಗತಿಸಿದ ಅವರು, ಇದೇ ರೀತಿಯಲ್ಲಿ ರೈತರು ಹಾಗೂ ಬಡ್ಡಿ ಹೊರೆ ಹೊತ್ತಿರುವ ಸ್ವಸಹಾಯ ಸಂಘಗಳಿಗೆ ಸಹ ಬಡ್ಡಿ ಮನ್ನಾ ನೀಡಬೇಕು ಎಂದು ಒತ್ತಾಯಿಸಿದರು.
ರಾಜಕೀಯ ಅಸ್ಥಿರತೆ ಆರೋಪ
ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ ಎಂದು ಹೇಳಿದ ಅವರು, “ಅಧಿಕಾರ ನಾನು ಕೊಡಲ್ಲ, ನಾನು ಬಿಡಲ್ಲ ಎಂಬ ಜಂಜಾಟ ನಡೆಯುತ್ತಿದೆ. ಸಿಎಂ ಯಾವುದೇ ಕಾರಣಕ್ಕೂ ಅಧಿಕಾರ ಬಿಡಲ್ಲ ಎನ್ನುತ್ತಾರೆ. ಡಿಕೆಶಿ ಅಧಿಕಾರ ಕಿತ್ತುಕೊಳ್ಳುತ್ತೇನೆ ಎನ್ನುತ್ತಾರೆ,” ಎಂದು ಟೀಕಿಸಿದರು.
30 ಶಾಸಕರು ಕುಟುಂಬ ಸಮೇತರಾಗಿ ವಿದೇಶ ಪ್ರವಾಸಕ್ಕೆ ತೆರಳುತ್ತಿರುವ ವಿಚಾರವನ್ನು ಪ್ರಶ್ನಿಸಿ, ಅದು ವೈಯಕ್ತಿಕ ಹಣವೇ ಅಥವಾ ಸರ್ಕಾರದ ಹಣವೇ ಎಂಬ ಗೊಂದಲ ಇದೆ ಎಂದು ಹೇಳಿದರು. “ವಿದೇಶಕ್ಕೆ ಹೋಗಿ ಏನು ಕಲಿತು ಬಂದು ಇಲ್ಲಿ ಜಾರಿಗೊಳಿಸುತ್ತೀರಿ?” ಎಂದು ಪ್ರಶ್ನಿಸಿದರು.
ಸಾರಿಗೆ, ಶಿಕ್ಷಣ ಕ್ಷೇತ್ರಗಳಲ್ಲಿ ವೈಫಲ್ಯ
ಶಕ್ತಿ ಯೋಜನೆ ಜಾರಿಗೆ ತಂದ ಬಳಿಕ ಸಾರಿಗೆ ಇಲಾಖೆಗೆ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ಆರೋಪಿಸಿದರು. ಹಳೆಯ ಬಸ್ಗಳನ್ನು ರಸ್ತೆಗಿಳಿಸಲಾಗಿದ್ದು, ಸಮರ್ಪಕ ಸೇವೆ ಸಿಗುತ್ತಿಲ್ಲ ಎಂದರು. ಶಾಲಾ ಮಕ್ಕಳನ್ನು ಟಿಪ್ಪರ್ ವಾಹನಗಳಲ್ಲಿ ಪ್ರವಾಸಕ್ಕೆ ಕರೆದೊಯ್ಯುತ್ತಿರುವ ಘಟನೆಗಳು ಸರ್ಕಾರಕ್ಕೆ ನಾಚಿಕೆ ತರಬೇಕಾದವು ಎಂದು ಟೀಕಿಸಿದರು.
ಇಂದಿರಾ ಕಿಟ್ ವಿತರಣೆ ವಿಳಂಬ, ರೈತರ ಸಮಸ್ಯೆಗಳ ಕಡೆ ನಿರ್ಲಕ್ಷ್ಯ ಹಾಗೂ ಜಾಹೀರಾತುಗಳಿಗೆ ಹೆಚ್ಚು ಒತ್ತು ನೀಡುವುದು ಸೇರಿದಂತೆ ಹಲವು ವಿಚಾರಗಳಲ್ಲಿ ಸರ್ಕಾರ ವೈಫಲ್ಯ ಕಂಡಿದೆ ಎಂದು ಆರೋಪಿಸಿದ ಅವರು, “ಕೆಲಸ ಮಾಡದೆ ಜಾಹೀರಾತುಗಳಲ್ಲಿ ಒಳ್ಳೆಯ ಹೆಸರು ಪಡೆಯಲು ಸಾಧ್ಯವಿಲ್ಲ. ರಾಜ್ಯದ ಜನರಿಗೆ ಈ ಸರ್ಕಾರ ಹೊರೆಯಾಗುತ್ತಿದೆ,” ಎಂದು ಹೇಳಿದರು.
