
ಬೆಂಗಳೂರು: ಈಗಾಗಲೇ ಬಿಎಂಟಿಸಿ, ಕೆಎಸ್ಆರ್ಟಿಸಿ ಹಾಗೂ ನಮ್ಮ ಮೆಟ್ರೋ ದರ ಏರಿಕೆಯಿಂದ ತತ್ತರಿಸಿರುವ ರಾಜಧಾನಿ ಬೆಂಗಳೂರಿನ ಜನತೆಗೆ ರಾಜ್ಯ ಸರ್ಕಾರ ಮತ್ತೊಂದು ದರ ಹೆಚ್ಚಳ ಶಾಕ್ ನೀಡಲು ಮುಂದಾಗಿದೆ.
2014 ರಿಂದ ಬೆಂಗಳೂರಿನಲ್ಲಿ ನೀರಿನ ದರ ಪರಿಷ್ಕರಿಸಲಾಗಿಲ್ಲ. ಹೀಗಾಗಿ ಬೆಂಗಳೂರು ಜಲ ಮಂಡಳಿ(BWSSB)ಯು 7-8 ಪೈಸೆ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ ರಾಜ್ಯ ಸರ್ಕಾರ ಪ್ರತಿ ಲೀಟರ್ಗೆ ಕೇವಲ ಒಂದು ಪೈಸೆ ಹೆಚ್ಚಳವನ್ನು ಪರಿಗಣಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ.
ಇಂದು ವಿಧಾನ ಪರಿಷತ್ತಿನಲ್ಲಿ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಎಂಎಲ್ಸಿ ರಾಮೋಜಿ ಗೌಡ ಅವರು ಬೆಂಗಳೂರಿನ ಪೂರ್ವ ಭಾಗಗಳಲ್ಲಿ ನೀರಿನ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದಾಗ ಡಿಸಿಎಂ ಈ ಹೇಳಿಕೆ ನೀಡಿದ್ದಾರೆ.
2014 ರಿಂದ ನೀರಿನ ದರವನ್ನು ಹೆಚ್ಚಿಸಲಾಗಿಲ್ಲ. ಇದರಿಂದಾಗಿ BWSSB ವಾರ್ಷಿಕ 1,000 ಕೋಟಿ ರೂ. ನಷ್ಟ ಅನುಭವಿಸುತ್ತಿದೆ. ಹೀಗಾಗಿ ನಾವು ಕನಿಷ್ಠ ಪಕ್ಷ ಒಂದು ಪೈಸೆಯಾದರೂ ನೀರಿನ ದರ ಏರಿಕೆ ಮಾಡಲು ತೀರ್ಮಾನಿಸಿದ್ದೇವೆ. ಮಂಡಳಿಯ ವಿದ್ಯುತ್ ಬಿಲ್ ಸಹ ಏರಿಕೆಯಾಗುತ್ತಲೇ ಇದೆ. ಹೀಗಾಗಿ ಮಂಡಳಿಯವರು 7-8 ಪೈಸೆ ಏರಿಕೆಗೆ ಮುಂದಾಗಿದ್ದರು. ನಾನು ಸದ್ಯಕ್ಕೆ 1 ಪೈಸೆಯಷ್ಟು ಹೆಚ್ಚಳ ಮಾಡಿ ಸಾಕು ಎಂದು ಹೇಳಿದ್ದೇನೆ ಎಂದರು.