ಹಾಸನ: ರಾಜ್ಯ ಈಗ “ರಾಕ್ಷಸರ ಕೈಗೆ ಸಿಕ್ಕಿ ಲೂಟಿಯಾಗುತ್ತಿದೆ” ಎಂದು ಆರೋಪಿಸಿದ ಅವರು, ಇದನ್ನು ತಡೆದು ರಾಮರಾಜ್ಯ ನಿರ್ಮಾಣಕ್ಕಾಗಿ ಕುಮಾರಸ್ವಾಮಿ ಮೂರನೇ ಬಾರಿ ಮುಖ್ಯಮಂತ್ರಿ ಆಗಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ನಗರ ಹೊರವಲಯದ ಬೂವನಹಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಜನತಾ ಸಮಾವೇಶದಲ್ಲಿ ಮಾತನಾಡಿದ ಅವರು, ದೇವೇಗೌಡರು ಹಾಗೂ ಕುಮಾರಸ್ವಾಮಿ ಇಬ್ಬರೂ ಶತಾಯುಷಿಗಳಾಗಿ ರಾಜ್ಯದ ಜನರ ಸೇವೆ ಮಾಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಯಾರೂ ಕಿಂಚಿತ್ತೂ ಚಿಂತೆ ಮಾಡಬೇಕಾಗಿಲ್ಲ. ಹಾಸನಾಂಬೆ ದೇವಿಯ ಅನುಗ್ರಹ, ಜನರ ಆಶೀರ್ವಾದ, ತಂದೆ–ತಾಯಿಗಳ ಪುಣ್ಯಕಾರ್ಯಗಳು ಹಾಗೂ ಕಾರ್ಯಕರ್ತರ ಹಾರೈಕೆ ಅವರ ರಕ್ಷಣೆಯಾಗಿದೆ ಎಂದರು.
“ನಾನು ಯಾವ ಹಳ್ಳಿಗೆ ಹೋದರೂ ಜನರು ನನ್ನ ತಂದೆಯ ಆರೋಗ್ಯದ ಬಗ್ಗೆ ಕಾಳಜಿ ತೋರಿಸುತ್ತಾರೆ. ಜನರ ಆಶೀರ್ವಾದದಿಂದ ಅವರು ಆರೋಗ್ಯವಾಗಿದ್ದಾರೆ. 2028ರ ವಿಧಾನಸಭಾ ಚುನಾವಣೆಯ ನಂತರ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡುವುದೇ ನನ್ನ ಗುರಿ,” ಎಂದು ನಿಖಿಲ್ ಹೇಳಿದರು.
“ಮೂರು ಬಾರಿ ರಾಜಕೀಯ ಷಡ್ಯಂತ್ರಗಳಿಂದ ನನ್ನನ್ನು ಸೋಲಿಸಲಾಯಿತು. ಮುಂದೆ ನನ್ನ ರಾಜಕೀಯ ಭವಿಷ್ಯ ಏನಾಗುತ್ತದೆ ಎಂಬುದು ಹಾಸನಾಂಬೆ ತೀರ್ಮಾನಿಸುತ್ತಾಳೆ. ಆದರೆ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದೊಂದೇ ಈಗ ನನ್ನ ಮುಂದಿರುವ ಏಕೈಕ ಗುರಿ,” ಎಂದು ಸ್ಪಷ್ಟಪಡಿಸಿದರು.
ಈ ಗುರಿಗಾಗಿ ದಿನಕ್ಕೆ 18 ಗಂಟೆ ದುಡಿಯಲು ಸಿದ್ಧನಿದ್ದೇನೆ. ಕಾರ್ಯಕರ್ತರು ಕರೆದ ಕಡೆಗೆ ಹೋಗಿ ಅವರು ನೀಡುವ ಕೆಲಸವನ್ನು ನಿಷ್ಠೆಯಿಂದ ಮಾಡುವುದಾಗಿ ಬದ್ಧತೆಯನ್ನು ವ್ಯಕ್ತಪಡಿಸಿದರು.