ಮಾನವನ ಸತತ ಪ್ರಯತ್ನಗಳು ಬದುಕುವುದಕ್ಕಾಗಿಯೇ ಹೊರತು ಮತ್ತೇನಕ್ಕೂ ಅಲ್ಲ. ಪ್ರತಿಕ್ಷಣ, ಪ್ರತಿದಿನವೂ ಹೋರಾಟವೇ ಜೀವನವಾಗಿದೆ—ತುತ್ತು ಹೊಟ್ಟೆಗಾಗಿ, ನೆಮ್ಮದಿಗಾಗಿ, ಸ್ವಾತಂತ್ರ್ಯದ ಬದುಕಿಗಾಗಿ. 20–21ನೇ ಶತಮಾನಗಳಲ್ಲಿ ನಡೆದ ಕ್ರಾಂತಿಗಳ ತೀವ್ರತೆಯೂ ಬದುಕುವುದಕ್ಕಾಗಿ ನಡೆದ ಹೋರಾಟಗಳೇ ಹೊರತು ಬೇರೆ ಯಾವುದಕ್ಕೂ ಅಲ್ಲ. ಬಲಿಷ್ಠರಿಗಿಂತಲೂ ಸಾಮಾನ್ಯ ಜನರು ಹೆಚ್ಚು ಸಾವಿಗೀಡಾದರು. ಆದರೆ ಆ ನಿರಂತರ ಹೋರಾಟದ ಪ್ರತಿಫಲವಾಗಿ ನಾವು ಇಂದು ಪ್ರತಿಕ್ಷಣ ಬದುಕುತ್ತಿದ್ದೇವೆ ಎಂದು ನೆನೆಸಿಕೊಂಡಾಗ ಮೈ ರೋಮಾಂಚನಗೊಳ್ಳುತ್ತದೆ.
ಮಹಾ ಪಲಾಯನ ಓದುವಾಗ ನನ್ನ ಮುಖದಲ್ಲಿ ಮೂಡಿದ ವಿಸ್ಮಯವನ್ನು ಹೇಳಲು ಪದಗಳಿಲ್ಲ. ಪರದೇಶದವರಿಂದ ಬಂಧಿತರಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿ, ಬಂಧಿಖಾನೆಯಿಂದ ತಪ್ಪಿಸಿಕೊಂಡು ಹೊರಟ ಒಂದು ತಂಡ—ನಡೆದು ನಡೆದು ವರ್ಷಗಳ ನಂತರ ತಲುಪಿದ ಬದುಕು. ಬದುಕುಳಿದವರೂ ಮಾನಸಿಕ ಅಸ್ವಸ್ಥತೆಯಿಂದ ಹೊರಬರಲು ಮತ್ತೆ ತಿಂಗಳುಗಳ ಕಾಲ ಹೋರಾಡಬೇಕಾದ ಸ್ಥಿತಿ. ಇಷ್ಟೆಲ್ಲಾ ಅನುಭವಗಳ ಬಳಿಕವೂ ಮತ್ತೆ ಸೈನ್ಯದಲ್ಲೇ ಸೇವೆ ಸಲ್ಲಿಸಲು ಇಚ್ಛೆ ವ್ಯಕ್ತಪಡಿಸುವ ಮನಸ್ಥಿತಿ—ಇವೆಲ್ಲವೂ “ಬದುಕಿನ ನಿಜವಾದ ಅರ್ಥವೇನು?” ಎಂಬ ಪ್ರಶ್ನೆಯನ್ನು ನಮ್ಮೊಳಗೆ ಹುಟ್ಟಿಸುತ್ತವೆ.
ನಾವು ಇಂದು ಪ್ರೀತಿ–ಪ್ರೇಮ, ಸ್ವಾರ್ಥ, ಭ್ರಷ್ಟಾಚಾರದ ನೆರಳಿನಲ್ಲೇ ಬದುಕು ಸಾಗಿಸುತ್ತಿದ್ದೇವೆ. ಅಲ್ವಸುಖಿಗಳಾಗಿ ದಿನಗಳನ್ನು ಕಳೆಯುತ್ತಿದ್ದೇವೆ ಹೊರತು, ಹಿಂದಿನ ಆ ಕರಾಳ ಬದುಕಿನ ತೀವ್ರತೆ ನಮ್ಮೊಳಗೆ ಇಲ್ಲ. ಇಂದಿನ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸ್ಥಿತಿಗಳು ಸಾಕಷ್ಟು ಮಟ್ಟಿಗೆ ಸುಧಾರಿಸಿದ್ದರೂ, ಒಂದು ಪ್ರಶ್ನೆ ಮಾತ್ರ ಉಳಿಯುತ್ತದೆ—
ಮಾನಸಿಕ ಸ್ಥಿತಿಯೇನು?
ಒಟ್ಟಾರೆ ಮಹಾ ಪಲಾಯನ ಓದಿ ನಾನು ಮೂಕವಿಸ್ಮಿತನಾಗಿದ್ದೇನೆ. ಇದು ಕೇವಲ ಇತಿಹಾಸವಲ್ಲ; ಬದುಕಿನ ಅರ್ಥವನ್ನು ಮರುಪರಿಶೀಲಿಸಿಕೊಳ್ಳುವಂತೆ ಮಾಡುವ ಕನ್ನಡಿ.
– ಮೌನಾತ್ಮ
