“ಯುದ್ಧಗಳು ಹೀಗೆಯೇ ಮುಂದುವರೆದರೆ ಒಂದು ದಿನ ಈ ಭೂಮಿ ಮನುಷ್ಯರೇ ಇಲ್ಲದ ಮರುಭೂಮಿಯಂತಾಗುತ್ತದೆ”.! ಎಂಬ ಕನಕದಾಸರ ಯುದ್ಧದ ಕುರಿತಾದ ಮಾತಿನ ಮರ್ಮವನ್ನು ಈ ಜಗತ್ತು ಇಂದಿಗೂ ಅರ್ಥ ಮಾಡಿಕೊಂಡಂತೆ ಕಾಣುತ್ತಿಲ್ಲ, ಇಡೀ ವಿಶ್ವ ಎರಡು ಮಹಾಯುದ್ಧಗಳ ಕಾರ್ಕೋಟಕ ವಿಷವನ್ನುಂಡರೂ ಸಹ ಯುದ್ಧಕ್ಕಾಗಿ ಮನುಷ್ಯ ಹಾತೋರೆಯುತ್ತಿರುವುದು ವಿಪರ್ಯಾಸದ ಸಂಗತಿ. ಪ್ರಸ್ತುತ ಭಾರತ-ಪಾಕಿಸ್ತಾನದ ನಡುವೆ ನಡೆಯುತ್ತಿರುವ ಕದನವನ್ನು ಇಡೀ ವಿಶ್ವವೇ ಗಮನಿಸುತ್ತಿದೆ.
ಮೊನ್ನೆ ನಾನು ಊಟಕ್ಕೆಂದು ನನ್ನ ಪರಿಚಿತರ ಮನೆಗೆ ತೆರಳಿದ್ದಾಗ ಸುಮಾರು ಹತ್ತೆನ್ನೆರಡು ವರ್ಷದ ಬಾಲಕರಿಬ್ಬರು ಭಾರತ-ಪಾಕಿಸ್ತಾನ ಯುದ್ಧದ ಬಗ್ಗೆ ಚರ್ಚೆಗಿಳಿದಿದ್ದರು ಒಬ್ಬ “ಲೋ ಭುವನ ರಷ್ಯಾ ನಮ್ಮ ಭಾರತಕ್ಕೆ ಸಪೋರ್ಟ್ ಮಡುತ್ತೆ ಕಣಾ, ಈ ಅಮೇರಿಕದವರು ನಮಗೆ ಸಪೋರ್ಟ್ ಮಾಡ್ತಾರೆ ಅನ್ನೋದು ನನಗ್ಯಾಕೋ ಡೌಟು” ಎಂದಾಗ ಪ್ರತ್ಯುತ್ತರಿಸಿದ ಬಾಲಾಜಿ “ಯಾವ ದೇಶ ಸಪೋರ್ಟ್ ಮಾಡಿದ್ರೂ ಮಾಡದೇ ಇದ್ರೂ ನಮ್ಮ ಇಂಡಿಯನ್ ಆರ್ಮಿ ಸ್ಟ್ರಾಂಗ್ ಇದೆ ಕಣೋ ಒಂದು ಮುಷ್ಟಿಯಷ್ಟಿರೋ ಪಾಕಿಸ್ತಾನವನ್ನು ಕಣ್ಮುಚ್ಚಿ ಕಣ್ತೆರೆಯೊದ್ರೊಳಗೆ ಚಚ್ಚಿ ಉಡಾಯಿಸ್ತಾರೆ ನಮ್ ಇಂಡಿಯನ್ ಆರ್ಮಿ ನೋಡ್ಕಂಡಿರು” ಎಂದು ಇನ್ನೂ ಏನನೋ ಜಾಗತಿಕ ಯುದ್ಧ ವಿಚಾರಗಳನ್ನ ಆ ಪುಟ್ಟ ಬಾಲಕರಿಬ್ಬರೂ ಗಹನವಾಗಿ ಚರ್ಚಿಸುತ್ತಿದ್ದುದನ್ನು ನೋಡಿ ನನಗೆ ಆಶ್ಚರ್ಯವಾಯಿತು, ಈ ಬಾಲಕರು ಈ ಪುಟ್ಟ ವಯಸ್ಸಿಗೆ ಅದೇಷ್ಟು ದೊಡ್ಡ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾರೆ ಅವರ ಪ್ರತೀ ಮಾತಿನಲ್ಲಿಯೂ ʼನನ್ನ ಭಾರತʼ ಎಂದು ಆ ಬಾಲಕರು ಹೇಳಿಕೊಳ್ಳುವ ರೀತಿ-ರಿವಾಜುಗಳಿಗೆ ಎಂತವರೂ ಬೆರಗಾಗಲೇಬೇಕು ಬಿಡಿ.
ಮಾತು ಮಾತನಾಡುತ್ತಲೇ ಅದರಲ್ಲೊಬ್ಬ ನನ್ನ ಕಡೆ ನೋಡಿ “ಅಣ್ಣಾ ಯುದ್ದ ಹೀಗೆ ಕಂಟಿನ್ಯೂ ಆದರೆ ಏನಾಗುತ್ತೆ”? ಎಂದು ಕೇಳಿದಾಗ ಕಕ್ಕಾಬಿಕ್ಕಿಯಾದ ನಾನು “ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿ ಶಾಂತಿ ಒಪ್ಪಂದ ಮಾಡಿಸುತ್ತೆ ಕಣೋ” ಎಂದಷ್ಟೇ ಹೇಳಿ ಸುಮ್ಮನಾದೆ ಅವರಿಬ್ಬರೂ ಮಾತ್ರ ಕ್ಷಿಪಣಿ, ಮದ್ದು, ಗುಂಡು ದಾಳಿ ಇನ್ನೂ ಏನೇನೋ ಯುದ್ಧ ಸಂಬಂಧಿತ ವಿಚಾರಗಳನ್ನು ಚರ್ಚಿಸುತ್ತಾ ಕುಳಿತರು. ಟಿವಿಯಲ್ಲಿಯೂ ಸಹ ಯುದ್ದೋನ್ಮಾದದ ಕಹಳೆ ಮೊಳಗುತ್ತಿತ್ತು ನನ್ನ ಮನಸ್ಸಿನಲ್ಲಿಯೂ ಸಹ ಪಾಕಿಸ್ತಾನದ ಉದ್ಧಟತನ ಜಾಸ್ತಿಯಾಯ್ತು ಈ ಬಾರಿ ಏನಾದರೂ ಸರಿ ಕಾಶ್ಮೀರದ ಗಡಿಯಾಚೆಗಿನ ಪಾಕಿಸ್ತಾನಿ ಭಯೋತ್ಪಾದಕರನ್ನು ಸದೆಬಡಿಯಲೇಬೇಕು ಕಾಶ್ಮೀರದ ಪ್ರವಾಸಿಗರನ್ನು ಬರ್ಬರವಾಗಿ ಹತ್ಯೆಗೈದ ಕೃತ್ಯಕ್ಕೆ ಪ್ರತೀಕಾರ ತೀರಿಸಿಕೊಳ್ಳಲೇ ಬೇಕು ಎಂದೆನಿಸಿತು. ಆ ಸಮಯದಲ್ಲಾಗಲೇ ʼಅಪರೇಷನ್ ಸಿಂದೂರʼ ದ ಮೂಲಕ ಪಾಕಿಸ್ತಾನದ ಪ್ರಮುಖ ಉಗ್ರರ ತಾಣಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ ಎಂಬ ವಾರ್ತೆ ಪ್ರತೀ ಭಾರತೀಯರ ಮೈರೋಮಾಂಚನಗೊಳಿಸಿತು.
ದಾಳಿ ಪ್ರತಿ ದಾಳಿಗಳು ಭಾರತ-ಪಾಕಿಸ್ತಾನದ ನಡುವೆ ಗಡಿಯಾಚೆ ನಡೆಯುತ್ತಿದೆ ಎಂಬ ಸುದ್ದಿ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವಾಗಲೇ ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ರವರ ನೇತೃತ್ವದಲ್ಲಿ ಉಭಯ ರಾಷ್ಟ್ರಗಳು ʼಕದನ ವಿರಾಮʼ ಕ್ಕೆ ಒಪ್ಪಿಗೆ ನೀಡಿವೆ ಎಂದು ಟ್ವಿಟ್ಟರ್ ಇತ್ಯಾದಿ ಸಾಮಾಜಿಕ ಜಾಲತಾಣಗಳ ಮೂಲಕ ಸುದ್ದಿ ಸಮರೋಪಾದಿಯಲ್ಲಿ ಸಂಚರಿಸಿ ಬಹುತೇಕ ಭಾರತೀಯರು ʼಕದನ ವಿರಾಮʼ ಘೋಷಣೆಗೆ ಅಸಮಧಾನ ವ್ಯಕ್ತಪಡಿಸಿದರು. ಕದನ ವಿರಾಮ ಘೋಷಣೆಯಾಗಿಯೂ ನರಿ ಬುದ್ದಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಭಾರತದ ಗಡಿಯ ಮೇಲೆ ಶೆಲ್ ದಾಳಿ ನಡೆಸಿತು, ದೇಶವ್ಯಾಪಿ ಭಾರತದಲ್ಲಿ ಐಪಿಎಲ್ ಟೂರ್ನಿ ಮುಂತಾದ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಭಾರತೀಯ ಸೇನೆಗೆ ಬೆಂಬಲ ನೀಡಿ ʼಅಪರೇಷನ್ ಸಿಂದೂರವನ್ನುʼ ಇನ್ನಷ್ಟು ತೀವ್ರಗೊಳಿಸಿ ಪಾಕಿಸ್ತಾನದ ಸೊಕ್ಕು ಮುರಿಯುವಂತೆ ಇಡೀ ಭಾರತ ಆಗ್ರಹಿಸಿತು.
ಭಾರತ-ಪಾಕಿಸ್ತಾನಗಳ ನಡುವೆ ಯುದ್ಧ ನಡೆಯತ್ತಿರುವುದು ಇದೇ ಮೊದಲೇನಲ್ಲ 1947 ರಿಂದಲೂ ಯುದ್ಧಗಳು ನಡೆಯುತ್ತಲೇ ಬಂದಿವೆ, ಈ ಎರಡೂ ರಾಷ್ರ್ಟಗಳ ನಡುವಿನ ಯುದ್ಧಗಳನ್ನು ಧರ್ಮ-ಅಧರ್ಮಗಳ ನಡುವೆ ನಡೆಯುವ ಯುದ್ಧವೆಂತಲೇ ಗುರುತಿಸಿಕೊಂಡಿದ್ದು ಧರ್ಮದ ಪ್ರತೀಕವಾಗಿ ಭಾರತವಿದ್ದರೆ ಅಧರ್ಮದ ಪ್ರತೀಕವಾಗಿ ಪಾಕಿಸ್ತಾನ ಗುರುತಿಸಿಕೊಂಡಿದೆ. 1947 ರ ಆಗಸ್ಟ್ 14 ರಂದು ಪಾಕಿಸ್ತಾನದ ಉದಯವಾಗಿ ಪಾಕಿಸ್ತಾನದ ಜನಕ ಮಹಮ್ಮದ-ಅಲಿ-ಜಿನ್ನಾರ ಕರೆಗೆ ಓಗೊಟ್ಟು ಅಖಂಡ ಭಾರತದಲ್ಲಿದ್ದ ಮುಸಲ್ಮಾನರು ತಮ್ಮದೇ ಆದ ಪ್ರತ್ಯೇಕ ರಾಷ್ಟ್ರವೊಂದು ಬೇಕೆಂದು ಒತ್ತಾಯಿಸಿ ಹಿಂದೂಗಳ ರಕ್ತದೋಕುಳಿಯನ್ನರಿಸಿ ʼತಮಗೇ ಸ್ವರ್ಗ ದಕ್ಕುವುದೆಂದು ಭಾವಿಸಿʼ ದಕ್ಕಿಸಿಕೊಂಡ ದೇಶವದು. ಈ ವೇಳೆಯಲ್ಲಿ ಕೆಲವರು ಪಾಕಿಸ್ತಾನಕ್ಕೆ ವಲಸೆ ಹೋದರು ಭಾರತ-ಪಾಕಿಸ್ತಾನಗಳ ನಡುವೆ ಮಾನವನ ಇತಿಹಾಸದಲ್ಲಿಯೇ ಕಂಡು ಕೇಳರಿಯದಂತಹ ಬೃಹತ್ ವಲಸೆ ರಾತ್ರಿ ಮುಗಿದು ಬೆಳಗಾಗುವುದರೊಳಗೆ ನಡೆಯಿತು ಎಂದು ಇತಿಹಾಸಕಾರರು ಈ ವಲಸೆಯನ್ನು ಬಣ್ಣಿಸಿದ್ದಾರೆ.
ಆಗಿನ ಬ್ರಿಟಿಸ ವೈಸ್ರಾಯ್ ಮೌಂಟ್ ಬ್ಯಾಟನ್ ಪಾಕಿಸ್ತಾನದೊಡನೆ ಕಾಶ್ಮೀರವನ್ನು ವಿಲೀನಗೊಳಿಸುವಂತೆ ರಾಜಾಹರಿಸಿಂಗರ ಮೇಲೆ ಒತ್ತಾಯ ಮಾಡಿದಾಗ ರಾಜಾಹರಿಸಿಂಗ್ ಕಾಶ್ಮೀರವನ್ನು ಪಾಕಿಸ್ತಾನದಲ್ಲಿ ವಿಲೀನಗೊಳಿಸಿದರೆ ಅಲ್ಲಿನ ಹಿಂದೂಗಳು ನಾಮವೇಶವಾಗುತ್ತಾರೆಂದರಿತು ಸರ್ದಾರ್ ಪಟೇಲರೊಂದಿಗೆ ಮಾತುಕತೆ ನಡೆಸಿ ಗೊಂದಲದ ನಡುವೆ ಭಾರತದೊಂದಿಗೆ ಕಾಶ್ಮೀರವನ್ನು ವಿಲೀನಗೊಳಿಸಲು ಯೋಚಿಸಿದರು. ಅಂದಿನಂದಲೂ ಯುದ್ಧಗಳು ಗತಿಸಿ ಕೊನೆಗೂ ಕಾಶ್ಮೀರ ಭಾರತದ ಶಿರದಂತೆ ವಿಲೀನವಾಯಿತು ಅಂದಿನಿಂದಲೂ ಪಾಕಿಸ್ತಾನಿ ಭಯೋತ್ಪಾದಕರ ಮುಖೇನ ಕಾಶ್ಮೀರದಲ್ಲಿ ಶಾಂತಿ ಕದಡಿಸಿ ಕಬಳಿಸುವ ಸಂಚು ಮಾಡಿಕೊಂಡೇ ಬಂದಿದ್ದು ಕಾಶ್ಮೀರಕ್ಕಾಗಿ ಭಾರತ-ಪಾಕಿಸ್ತಾನಗಳ ನಡುವೆ ನಡೆದ ಯುದ್ಧಗಳ ವಿವರ ಇಂತಿದೆ.
1947-48 ರಲ್ಲಿ ಭಾರತ-ಪಾಕಿಸ್ತಾನದ ನಡುವೆ ಕಾಶ್ಮೀರ ಮತ್ತು ಜಮ್ಮುವಿನ ರಾಜಪ್ರಭುತ್ವದ ರಾಜ್ಯಗಳು ಭಾರತಕ್ಕೆ ಸೇರಬೇಕೆ ಅಥವಾ ಪಾಕಿಸ್ತಾನಕ್ಕೆ ಸೇರಬೇಕೆ ಇಲ್ಲವೇ ಸ್ವತಂತ್ರವಾಗಿ ಉಳಿಯಬೇಕೆ ಎಂಬ ಪ್ರಸ್ತಾಪ ಬಂದಾಗ ಜಮ್ಮು ಮತ್ತು ಕಾಶ್ಮೀರವು ಬಹುಸಂಖ್ಯಾತ ಮುಸ್ಲಿಂ ಸಂಖ್ಯಾ ಬಲವನ್ನು ಮತ್ತು ಗಮನಾರ್ಹ ಹಿಂದೂ ಜನಸಂಖ್ಯೆಯನ್ನು ಹೊಂದಿದ್ದರೂ ಎಲ್ಲವನ್ನೂ ಹಿಂದೂ ಮಹಾರಾಜ ಹರಿಸಿಂಗ್ ಆಳುತ್ತಿದ್ದಾಗ ಪಾಕಿಸ್ತಾನದ ಸೈನ್ಯದ ಬೆಂಬಲದೊಂದಿಗೆ ಗುಡ್ಡಗಾಡು ಇಸ್ಲಾಮಿಕ್ ಪಡೆಗಳು ದಾಳಿ ಮಾಡಿದವು, ಆಗ ಮಹರಾಜ ಹರಿಸಿಂಗ್ ಭಾರತೀಯ ಮಿಲಿಟರಿ ಸಹಾಯ ಪಡೆದು ರಾಜಪ್ರಭುತ್ವದ ರಾಜ್ಯವನ್ನು ಭಾರತದೊಂದಿಗೆ ವಿಲೀನಗೊಳಿಸಲು UN ಭದ್ರತಾ ಮಂಡಳಿಯು ಏಪ್ರಿಲ್ 22 1948 ರಂದು ನಿರ್ಣಯ 47 ಅನ್ನು ಅಂಗೀಕರಿಸಿ ನಿಯಂತ್ರಣ ರೇಖೆ ಏರ್ಪಟ್ಟ ಪರಿಣಾಮವಾಗಿ ಜನವರಿ 1 1949 ರಾತ್ರಿ ಔಪಚಾರಿಕ ಕದನ ವಿರಾಮ ಘೋಷಣೆಯಾಗಿ ಪಾಕಿಸ್ತಾನದ ಸರಿಸುಮಾರು 3 ನೇ 1 ಭಾಗವನ್ನು ಪಡೆದು ಪಾಕಿಸ್ತಾನ ನಿಯಂತ್ರಿತ ಪ್ರದೇಶಗಳನ್ನು ಪಡೆಯಿತು. (ಅಜಾದ್ ಕಾಶ್ಮೀರ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್) ಈ ರೀತಿಯಾದ ನಿಯಂತ್ರಣ ಪಡೆದ ಪಾಕಿಸ್ತಾನ ಭಾರತದ ಆಡಳಿತದ ವಿರುದ್ದ ದಂಗೆ ಎಬ್ಬಿಸಲು ಪಾಕಿಸ್ತಾನದ ಸೇನೆ ಜಮ್ಮು ಮತ್ತು ಕಾಶ್ಮೀರಕ್ಕೆ ಪಡೆಗಳನ್ನು ಕಳುಹಿಸಿತು. ಹದಿನೇಳು ದಿನಗಳ ಕಾಲ ನಡೆದ ಯುದ್ಧದಲ್ಲಿ ಅಪಾರ ಸಾವು-ನೋವು ಸಂಭವಿಸಿ ಭಾರತವು ಪಶ್ಚಿಮ ಪಾಕಿಸ್ತಾನದ ಮೇಲೆ ಪೂರ್ಣ ದಾಳಿ ನಡೆಸಿ ಸೇಡು ತೀರಿಸಿಕೊಂಡಿತು, ʼಸೋವಿಯತ್ ಒಕ್ಕೂಟ ಮತ್ತು USA ರಾಜತಾಂತ್ರಿಕ ಹಸ್ತಕ್ಷೇಪ ಮತ್ತು ನಂತರದ ತಾಷ್ಕೆಂಟ್ ಘೋಷಣೆಯಾಗಿ ಕದನ ವಿರಾಮ ಘೋಷಣೆಯಾಗಿ ಯುದ್ಧ ಕೊನೆಗೊಂಡು ಭಾರತವು ಪಾಕಿಸ್ತಾನದ ವಿರುದ್ದ ಮೇಲುಗೈ ಸಾದಿಸಿತು.

1971 ರಲ್ಲಿ ಬಾಂಗ್ಲಾದೇಶದ ವಿಮೋಚನ ಯುದ್ಧವು ಪಾಕಿಸ್ತಾನದ ರಾಜಕೀಯ ನಾಯಕರ ನಡುವೆ ನಡೆದ ಕದನದ ಬಿಕ್ಕಟ್ಟಿನಿಂದ ಉಲ್ಬಣಗೊಂಡಿತು, ಭಾರತವು ಬಾಂಗ್ಲಾದೇಶ ವಿಮೋಚನಾ ಚಳುವಳಿಯಲ್ಲಿ ಮಧ್ಯ ಪ್ರವೇಶಿಸಿತು ಇದರಿಂದ ಹಗೆತನಗೊಂಡು ಪಕಿಸ್ತಾನ ಭಾರತದ ಪಶ್ಚಿಮದ ಗಡಿಗಳ ಮೇಲೆ ದಾಳಿ ಮಾಡಿತಾದರೂ ಭಾರತೀಯ ಸೇನೆ ತನ್ನ ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ದಾಳಿಯಲ್ಲಿ ಸಿಂಧ್ ವಲಯಗಳಲ್ಲಿ (ಪಾಕಿಸ್ತಾನಿ ಪಂಜಾಬ್ ಮತ್ತು ಪಾಕಿಸ್ತಾನಿ ಕಾಶ್ಮೀರ) ಭಾರತವು ಭೂಮಿಯನ್ನು ಪಡೆದುಕೊಂಡಿತು, ಆದರೆ ʼ1972 ರ ಸಿಮ್ಲಾ ʼ ಕರಾರಿನಂತೆ ಅದನ್ನು ಸದ್ಭಾವನೆಯ ಸಂಕೇತವಾಗಿ ಪಾಕಿಸ್ತಾನಕ್ಕೆ ಹಿಂತಿರುಗಿಸಿತು,ನಂತರ “ಪೀಪಲ್ಸ್ ರಿಪಬ್ಲಿಕ್ ಆಫ್ ಬಾಂಗ್ಲಾದೇಶ” ವನ್ನು ರಚಿಸಲಾಯಿತು.
ಈ ಯುದ್ದ ದಲ್ಲಿ ಪಾಕಿಸ್ತಾನದ ಪಾಯುಪಡೆ ಮತ್ತು ನೌಕಪಡೆಗೆ ತೀವ್ರ ನಷ್ಟವಾಯಿತು ಎಂದು ಪಾಕಿಸ್ತಾದ ಲೇಖಕರೊಬ್ಬರ ಮಾತುಗಳಲ್ಲಿ ಕಾಣಬಹುದು. ಯುದ್ಧಗಳ ಸೋಲಿನಿಂದ ಪಾಕಿಸ್ತಾನದ ಆರ್ಥಿಕತೆ ದುರ್ಬಲವಾಗಿದ್ದರೂ, 1999 ರಲ್ಲಿ ಪಾಕಿಸ್ತಾನಿ ಪಡೆಗಳು ನಿಯಂತ್ರಣ ರೇಖೆ (LOC) ಭಾರತದ ಭೂಪ್ರದೇಶವನ್ನು ವಶಪಡಿಸಿಕೊಂಡವು ಇದಕ್ಕೆ ಪ್ರತಿಯಾಗಿ ಭಾರತವು ಮಿಲಿಟರಿ ಮತ್ತು ರಾಜತಾಂತ್ರಿಕ ದಾಳಿಯನ್ನು ನಡೆಸುವಲ್ಲಿ ಯಶಸ್ವಿಯಾಯಿತು. USA ಪಾಕಿಸ್ತಾನಕ್ಕೆ ರಾಜತಾಂತ್ರಿಕ ಒತ್ತಡ ಹೇರಿತಾದರೂ ಪಾಕಿಸ್ತಾನ ಅಪಾರ ಪ್ರಮಾಣದ ಸೈನಿಕರನ್ನು ಕಳೆದುಕೊಂಡು ಸೋತು ಸುಣ್ಣವಾಗಿ 1999 ರ ಜುಲೈನಲ್ಲಿ ಕಾರ್ಗಿಲ್ ಯುದ್ಧಗಳು ಮುಕ್ತಾಯಗೊಂಡವು ಕಾರ್ಗಿಲ್ ಯುದ್ಧವು ಪಾಕಿಸ್ತಾನಿ ಸೇನೆಗೆ ಒಂದು ಪ್ರಮುಖ ಮಿಲಿಟರಿ ಸೋಲಾಗಿ ಪರಿಣಮಿಸಿತು.
ಇದಲ್ಲದೆ 1965 ರಲ್ಲಿ ಕಚ್ ಸಂಘರ್ಷ,1984-2003 ರಲ್ಲಿ ಸಿಯಾಚಿನ್ ಸಂಘರ್ಷ, 1986-1987 ರಲ್ಲಿ ಭಾರತ-ಪಾಕಿಸ್ತಾನ ಬಿಕ್ಕಟ್ಟು, 1999 ರಲ್ಲಿ ಪಾಕಿಸ್ತಾನಿ ಅಟ್ಲಾಂಟಿಕ್ ಗುಂಡಿನ ದಾಳಿ, 2001-2002 ರ ಭಾರತ-ಪಾಕಿಸ್ತಾನ ಬಿಕ್ಕಟ್ಟು, 2008 ರ ಮುಂಬೈ ದಾಳಿ,2011 ರ ಭಾರತ-ಪಾಕಿಸ್ತಾನ ಗಡಿ ಘರ್ಷಣೆ, 2012 ರಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಭಾರತೀಯ ಸೈನಿಕನ ಶಿರಚ್ಛೇದನ, 2014-2015 ರ ಭಾರತ ಭಾರತ-ಪಾಕಿಸ್ತಾನ ಗಡಿ ಘಟನೆಗಳು, 2019 ರ ಭಾರತ-ಪಾಕಿಸ್ತಾನ CRPF ಬೆಂಗಾವಲು ಪಡೆಯ ಮೇಲೆ ನಡೆದ (ಪುಲ್ವಾಮ) ಆತ್ಮಾಹುತಿ ದಾಳಿ , 2020-2021 ರಲ್ಲಿ ಭಾರತ-ಪಾಕಿಸ್ತಾನಗಡಿ ಘಟನೆಗಳು ಹೀಗೆ ಹಲವು ಪ್ರಾದೇಶಿಕ ಸಂಘರ್ಷಗಳೊಂದಿಗೆ ಪಾಕಿಸ್ತಾನವು ಉಗ್ರ ಸಂಘಟನೆಗಳನ್ನು ಸಾಕಿಕೊಂಡು ಭಾರತದ ಮೇಲೆ ಪದೇ ಪದೇ ದಾಳಿ ನಡೆಸಿ ಏಪ್ರಿಲ್ 23 2025 ರಂದು ಜಮ್ಮು ಮತ್ತು ಕಾಶ್ಮೀರದ ಬೈಸರನ್ ಕಣಿವೆಯಲ್ಲಿ ಇಸ್ಲಾಮಿಕ್ ಭಯೋತ್ಪಾದಕ ದಾಳಿ ನಡೆಸಿ ಕಾಶ್ಮೀರಿ ಪ್ರವಾಸಿಗರನ್ನು ಕೊಂದು ಹಾಕಿತು ಪ್ರಮುಖವಾಗಿ 25 ಹಿಂದೂ, 1 ಕ್ರಿಶ್ಚಿಯನ್ ಮತ್ತು ಸ್ಥಳಿಯ ಮುಸ್ಲಿಂ ಸಾವನ್ನಪ್ಪಿದರು. ಪಾಕಿಸ್ತಾನದ ಮೂಲದ ಲಷ್ಕರ್-ಎ-ತೈಬಾ ವಿಶ್ವಸಂಸ್ಥೆಯಿಂದ ಭಯೋತ್ಪಾದಕ ಗುಂಪು ಎಂದು ಗುರುತಿಸಿರುವ ಸಂಘಟನೆ ಜೊತೆ ಸಂಬಂಧ ಹೊಂದಿರುವ ರೆಸಿಸ್ಟನ್ಸ್ ಫ್ರಂಟ್ (TRF) ಈ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಯನ್ನು ಪಾಕಿಸ್ತಾನ ಬೆಂಬಲಿಸುತ್ತಿದೆ ಎಂದು ಆರೋಪಿಸಿ ಗಡಿಗಳನ್ನು ಮುಚ್ಚಿಸಿ ಮತ್ತು ಸಿಂಧೂ ಜಲ ಒಪ್ಪಂದದಿಂದ ಹಿಂದೆ ಸರಿಯಿತು.
ಭಾರತವು ಮೇ 7 2025 ರಂದು ʼಅಪರೇಷನ್ ಸಿಂಧೂರ ಸಮರʼ ಸಾರಿ ಕ್ಷಿಪಣಿ ದಾಳಿ ನಡೆಸಿ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾ ಉಗ್ರಗಾಮಿಗಳ ಶಿಬಿರಗಳನ್ನು ಗುರಿಯಾಗಿಸಿಕೊಂಡು ಗಡಿ ಘರ್ಷಣೆ ಮತ್ತು ಡ್ರೋನ್ ದಾಳಿ ನಡೆಸಿ ಪಾಕಿಸ್ತಾನಿ ಉಗ್ರರ ನೆಲೆಗಳನ್ನು ಸದೆಬಡೆಯಿತು. ಪಾಕಿಸ್ತಾನವು ಭಾರತೀಯರ ಈ ದಾಳಿ ಪಾಕಿಸ್ತಾನಗಳ ಮಸೀದಿ ಮತ್ತು 31 ಪಾಕಿಸ್ತಾನಿ ನಾಗರೀಕರನ್ನು ಕೊಂದಿವೆ ಎಂದು ಆರೋಪಿಸಿ ʼಅಪರೇಷನ್ ಸಿಂದೂರʼದ ವಿರುದ್ದ ಭಾರತೀಯ ಮಿಲಿಟರಿ ನೆಲೆಗಳನ್ನು ಟಾರ್ಗೇಟ್ ಮಾಡಿ ಅಪರೇಷನ್ ʼಬನ್ಯನ್- ಆಲ್ – ಮಾರ್ಸಸ್ʼ ಕಾರ್ಯಾಚರಣೆ ಪ್ರಾರಂಭಿಸಿತು ʼಬನ್ಯನ್- ಆಲ್ – ಮಾರ್ಸಸ್ʼ ಎಂಬುದು ಅರೇಬಿಕ್ ಪದವಾಗಿದ್ದು ಇದರ ಅರ್ಥ ʼಮುರಿಯಲಾಗದ ಗೋಡೆʼ ಎಂಬುದಾಗಿದೆ. ಈ ಹೆಸರು ಕುರಾನಿನ ಒಂದು ಪದ್ಯದಿಂದ ಆಯ್ದುಕೊಳ್ಳಲಾಗಿದೆ ಇದು “ ಖಂಡಿತವಾಗಿಯೂ ಅಲ್ಲಾಹನು ತನ್ನ ಕಾರಣಕ್ಕಾಗಿ ಘನ ಶ್ರೇಣಿಯಲ್ಲಿ ಹೋರಾಡುವವರನ್ನು ಅವರು ಒಂದು ಮುರಿಯಲಾರದ ಗೋಡೆಯಂತೆ ಪ್ರೀತಿಸುತ್ತಾನೆ” ಎಂಬುದಾಗಿದೆ ಎಂಬುದು ಆಶ್ಚರ್ಯದ ಸಂಗತಿ. ಸಿಂದೂರವು ಹಿಂದೂ ಮಹಿಳೆಯರು ತಮ್ಮ ವಿವಾಹಿತ ಸ್ಥಿತಿಯನ್ನು ಸೂಚಿಸಲು ಹಣೆಯ ಮೇಲೆ ಬಳಸುವ ಕೆಂಪು ಬಣ್ಣ ಹಿಂದಿನ ಪಹಲ್ಗಾಮ್ ದಾಳಿಯಲ್ಲಿ ಹಿಂದೂ ಪುರುಷರನ್ನು ಆಯ್ದವಾಗಿ ಗುರಿಯಾಗಿಸಿಕೊಂಡು ಅವರ ಹೆಂಡತಿಯರನ್ನು ವಿಧವೆಯರನ್ನಾಗಿ ಮಾಡಿದ್ದರಿಂದ ಇದು ಸಂಭವಿಸಿದೆ ಇದು ಪಾಕಿಸ್ತಾನದ ಅಧರ್ಮದ ವಿರುದ್ದ ಮಾಡಿದ ಧರ್ಮ ಯುದ್ಧವಾಗಿದೆ. ಮೂರು ದಿನಗಳ ಕದನದ ನಂತರ ಭಾರತ-ಪಾಕಿಸ್ತಾನ ಮೇ 10 ರಂದು ಸಂಜೆ 5 ಗಂಟೆಗೆ USA ಅಧ್ಯಕ್ಷ ಟ್ರಂಪ್ ನೇತೃತ್ವದಲ್ಲಿ ʼಕದನ ವಿರಾಮʼ ಘೋಷಿಸಿಕೊಂಡವಾದರೂ ಗಡುವಿನ ನಂತರ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಢ್ರೋನ್ ದಾಳಿ ನಡೆಸಿ ಅಪರೇಷನ್ ಸಿಂದೂರ ಮುಂದುವರೆದಿದೆ.
ಭಾರತ-ಪಾಕಿಸ್ತಾನಗಳ ನಡುವೆ ನಡೆದ ಕದನಗಳಿಂದ ಉಭಯ ರಾಷ್ಟ್ರಗಳು ಒಂದೊಂದು ದಾಳಿಯನ್ನು ರಾಷ್ಟ್ರೀಯ ವಾರ್ಷಿಕ ಆಚರಣೆಗಳನ್ನಾಗಿ ಆಚರಿಸಿಕೊಳ್ಳುತ್ತವೆ ಉದಾ- ಪಾಕಿಸ್ತಾನದಲ್ಲಿ ಮೇ 28 1998 ರಿಂದ ಯೂಮ್ – ಎ – ತಕ್ಬೀರ್ (ಶ್ರೇಷ್ಠತೆಯ ದಿನ) ಎಂದು ಆಚರಿಸಿದರೆ , ಭಾರತದಲ್ಲಿ ಜುಲೈ 26 1999 ರಂದು ʼಕಾರ್ಗಿಲ್ ವಿಜಯ ದಿವಸ್ʼ ಆಗಿ ಆಚರಿಸುತ್ತಾರೆ. ಭಾರತ ಮತ್ತು ಪಾಕಿಸ್ತಾನ ಯುದ್ಧಗಳು ಚಲನಚಿತ್ರ ಮತ್ತು ನಾಟಕಕಾರರಿಗೆ ಮೂಲ ಸಾಮಾಗ್ರಿ ಒದಗಿಸಿ ತಮ್ಮ ತಮ್ಮ ರಾಷ್ಟ್ರದ ಪ್ರೇಕ್ಷಕರನ್ನು ಮೆಚ್ಚಿಸಲು ಯುದ್ಧದ ಘಟನೆಗಳನ್ನು ಚಲನಚಿತ್ರ, ನಾಟಕಗಳನ್ನಾಗಿಸಿದ್ದಾರೆ. ಇಲ್ಲಿ ನಾವು ಪ್ರಮುಖವಾಗಿ ಗಮನಿಸಬೇಕಾದ ಅಂಶಗಳೆಂದರೆ ಭಾರತ-ಪಾಕಿಸ್ತಾನಗಳ ನಡುವೆ ಯುದ್ಧಗಳು ಏರ್ಪಟ್ಟಾಗ ಇತರ ರಾಷ್ಟ್ರಗಳ ಒಳಗೊಳ್ಳುವಿಕೆಯನ್ನು 1965 ರ ಯುದ್ಧದಲ್ಲಿ ಸೋವಿಯತ್ ಒಕ್ಕೂಟ (USSR) ತಟಸ್ಥವಾಗಿ ಉಳಿದು ಭಾರತ-ಪಾಕಿಸ್ತಾನ ಶಾಂತಿ ಒಪ್ಪಂದವಾಯಿತು, 1971 ರ ಯುದ್ಧ ಸಮಯದಲ್ಲಿ ಸೋವಿಯತ್ ಒಕ್ಕೂಟ (USSR) ಭಾರತಕ್ಕೆ ರಾಜತಾಂತ್ರಿಕ ಮತ್ತು ಮಿಲಿಟರಿ ಸಹಾಯವನ್ನು ನೀಡಿತು, 1965 ರಲ್ಲಿ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಅಮೇರಿಕಾವು ಪಾಕಿಸ್ತಾನಕ್ಕೆ ಯಾವುದೇ ಮಿಲಿಟರಿ ನೆರವು ನೀಡಿರಲಿಲ್ಲ, 1971 ರ ಯುದ್ಧವು USA ಸಂಸ್ಥಾನವು USA ಎಂಟರ್ ಪ್ರೈಸ್ ಅನ್ನು ಹಿಂದೂ ಮಹಾಸಾಗರಕ್ಕೆ ಕಳಿಸುವ ಮೂಲಕ ಪಾಕಿಸ್ತಾನಕ್ಕೆ ರಾಜತಾಂತ್ರಿಕ ಮತ್ತು ಮಿಲಿಟರಿ ನೆರವು ನೀಡಿದೆ.1999 ರ ಕಾರ್ಗಿಲ್ ಯುದ್ಧದ ಸಮಯದಲ್ಲಿ USA ಪಾಕಿಸ್ತಾನವನ್ನು ಬೆಂಬಲಿಸಲಿಲ್ಲ ಮತ್ತು ಯುದ್ಧವನ್ನು ಕೊನೆಗೊಳಿಸುವಂತೆ ಪಾಕಿಸ್ತಾನದ ಆಡಳಿತದ ಮೇಲೆ ಒತ್ತಡ ಹೇರಿತು.
ಚೀನಾ ರಾಜತಾಂತ್ರಿಕ ಬೆಂಬಲದೊಂದಿಗೆ ಪಾಕಿಸ್ತಾನಕ್ಕೆ ವಿವಿಧ ಯುದ್ಧಗಳಲ್ಲಿ ಸಹಾಯ ಮಾಡಿದ ನಿದರ್ಶನಗಳಿವೆ, ರಷ್ಯಾ ಭಾರತಕ್ಕೆ ಶಸ್ತ್ರಾಸ್ತ್ರಗಳು ಮತ್ತು ಇತರ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಮಾರಾಟ ಮಾಡುವಾಗ ರಷ್ಯಾ ಎರಡೂ ಕಡೆಯವರಿಗೂ ಯುದ್ಧರಹಿತ ನೀತಿಯನ್ನು ಕಾಯ್ದುಕೊಂಡಿತು, ರಷ್ಯಾ 2001-2002 ರಲ್ಲಿ ಶಾಂತಿ ಮಾತುಕತೆಗೆ ಸಹಾಯ ಮಾಡಿತು ಮತ್ತು 2008 ರ ಬಿಕ್ಕಟ್ಟನ್ನು ಬೇರೆಡೆಗೆ ತಿರುಗಿಸಲು ಸಹಾಯ ಮಾಡಿತು, 2025 ರ ಮೇ 10 ರಲ್ಲಿ ಅಮೇರಿಕಾ ಮಧ್ಯ ಪ್ರವೇಶಿಸಿ ಕದನ ವಿರಾಮ ಘೋಷಿಸಿದರೂ, ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಭಾರತದ ಮೇಲೆ ದಾಳಿ ನಡೆಸಿ ಮತ್ತೆ ನರಿ ಬುದ್ದಿ ತೋರಿಸಿದೆ ಕಾಶ್ಮೀರದದಲ್ಲಿನ 26 ಜನ ಪ್ರವಾಸಿಗರ ಹತ್ಯೆಗೆ ಪ್ರತೀಕಾರವಾಗಿ ಭಾರತ ಅಪರೇಷನ್ ಸಿಂದೂರ ಮುಂದುವರೆಸಿ ಸೂಕ್ತವಾದ ರಾಜತಾಂತ್ರಿಕ ಮಿಲಿಟರಿ ದಾಳಿಯ ಮೂಲಕ ಭಯೋತ್ಪಾದನೆಗೆ ಪ್ರಚೋದಿಸುವ ಪಾಕಿಸ್ತಾನದ ಸೊಕ್ಕನ್ನು ಅಡಗಿಸಲು ಉಗ್ರರ ನಿಗ್ರಹಕ್ಕೆ ಯುದ್ದವೇ ಲೇಸು.! ಕಾಶ್ಮೀರದ ಮಣ್ಣಿಗಾಗಿ ಅದೆಷ್ಟು ನಮ್ಮ ಸೈನಿಕರ ರಕ್ತ ಮಣ್ಣಲ್ಲಿ ಮಣ್ಣಾಯಿತೋ, ಇನ್ನೆಷ್ಟು ರಕ್ತ ಕಾಶ್ಮೀರಿಗಾಗಿ ಹರಿಯುವುದೋ ಗೊತ್ತಿಲ್ಲ ಭಾರತದ ಮೇಲೆ ಪಾಕಿಸ್ತಾನ ಉಗ್ರರ ಮೂಲಕ ಪದೇ ಪದೇ ದಾಳಿ ಮಾಡಿ ಪುಂಡಾಟಿಕೆ ಮುಂದುವರೆಸಿದೆ ರಾಜಕೀಯ, ಪಕ್ಷ, ಅಧಿಕಾರ ಇದ್ದದ್ದೇ ದೇಶ ಮೊದಲು ಎಂಬುದನ್ನು ನಾವೆಲ್ಲರೂ ಮನಗಾಣಬೇಕಿದೆ.

-
-
-
-
-
-
-
-
-
-
-
-
-
-
-
- ಕೆ.ಶ್ರೀಧರ್ (ಕೆ.ಸಿರಿ)
-
-
-
-
-
-
-
-
-
-
-
-
-
-

[…] ಕುಸಿದುಬಿದ್ದ ಮುರಿಯಲಾಗದ ಗೋಡೆ-ಸಲಾಂ ಭಾರತ… […]