ನಾವು ಉತ್ಪಾದಿಸುವ ಸರಕು-ಸೇವೆಗಳ ಮೌಲ್ಯವು ಅದಕ್ಕಿರುವ ಬೇಡಿಕೆಯನ್ನಾಧರಿಸಿರುತ್ತದೆ.
ತೆರೆದ ಮಾರುಕಟ್ಟೆಯ ಸನ್ನಿವೇಶದಲ್ಲಿ ನನಗೆ ಅನುಕೂಲವಿದೆಯೆಂದು ಜಗತ್ತಿಗೆ ಅಗತ್ಯವಿಲ್ಲದ ವಸ್ತುವನ್ನು ಬೆಳೆದು/ತಯಾರಿಸಿ, ನನ್ನ ಉತ್ಪಾದನೆಗೆ ಬೆಲೆ ಇಲ್ಲವೆಂದು ಕೈಕೈ ಹಿಸುಕಿಕೊಂಡು, ತಾ ಮಾಡಿಕೊಂಡ ಪ್ರಮಾದಕ್ಕೆ ಯಾರನ್ನೋ ದೂಷಿಸಿದರೆ ಯಾರೂ ಏನನ್ನೂ ಹೇಳಲಿಕ್ಕಾಗದು.
ನನ್ನ ಸರಕು ಅಥವಾ ಸೇವೆ ತೆರೆದ ಮಾರುಕಟ್ಟೆಯಲ್ಲಿ ಅಗತ್ಯ ಬೆಲೆಯನ್ನು ಪಡೆಯುತ್ತಿಲ್ಲವೆಂದರೆ; ಒಂದೋ ನಾನು ಗುಣಮಟ್ಟವನ್ನು ಕಾಯ್ದುಕೊಂಡಿಲ್ಲ ಇಲ್ಲವೇ ಅಗತ್ಯಕ್ಕಿಂತ ಹೆಚ್ಚಾಗಿ ಉತ್ಪಾದಿಸಿ, ಪೂರೈಸುತಿದ್ದೇನೆ ಎಂದೇ ಅರ್ಥ.
ಮಾರುಕಟ್ಟೆಯಲ್ಲಿ ತನ್ನ ಕೃಷಿ ಉತ್ಪನ್ನಗಳ ಮೌಲ್ಯ ನಿರ್ಧರಿಸುವ ಸಕಲ ಅಧಿಕಾರ ರೈತನದ್ದೇ.
ಜೊತೆಗೆ ನಿರ್ಧರಿಸಲಾಗದ ಅಸಹಾಯಕತನ ಸಹಾ ರೈತನದ್ದೇ.
ಶೀಘ್ರವಾಗಿ ಸಂಪತ್ತು ಪಡೆಯಬೇಕು; ಇಡೀ ರೈತ ಸಮುದಾಯಕ್ಕೆ ಸಿಗಬೇಕಾದ ಲಾಭದ ಸಿಂಹಪಾಲು ತನಗೇ ದಕ್ಕಬೇಕು; ಮಳೆಹಾನಿ, ಬರ, ಬೆಳೆಹಾನಿ ಎಂಬ ಕಾರಣದಿಂದ ಸರ್ಕಾರ ಅರ್ಥಿಕವಾಗಿ ಸದಾ ತನ್ನ ಬೆಂಗಾವಲಿಗೆ ನಿಲ್ಲಬೇಕೆಂಬ ಪರಾವಲಂಬಿ ಮನಸ್ಥಿತಿ; ತನ್ನ ಕುರಿತು ನಿಜ ಕಾಳಜಿ ಇಲ್ಲದವರ ಮೇಲೆ ನಾಯಕತ್ವಕ್ಕಾಗಿನ ಅವಲಂಬನೆ….. ಹೀಗೆ ಹತ್ತಾರು ಕಾರಣಗಳು.
ಅನ್ನದಾತರಾದ ರೈತ ಬಂಧುಗಳೇ,
ಎಲ್ಲಾ ಆಹಾರ ಬೆಳೆಗಳನ್ನು ಮಾರುಕಟ್ಟೆಯ ಬೇಡಿಕೆಯ 85% ಮಾತ್ರ ಬೆಳೆಯಿರಿ.
ನಿಮ್ಮ ಕೃಷಿ ಭೂಮಿಗೆ ನಿಯಮಿತವಾಗಿ ವಿಶ್ರಾಂತಿ ನೀಡಿ. ಮುಂದಿನ ಬೆಳೆಗೆ ಭೂಮಿಯೂ ಸಡಗರದಿಂದ ಸಜ್ಜುಗೊಳ್ಳುತ್ತದೆ.
ಇದರಿಂದ ಬೀಜ, ಗೊಬ್ಬರ, ನೀರು, ಔಷದಿ, ಸಮಯ ಹಾಗೂ ಶ್ರಮ ಉಳಿತಾಯವಾಗುತ್ತದೆ.
ಜೊತೆಗೆ ಉತ್ಪಾದನಾ ವೆಚ್ಚವೂ ಗಣನೀಯವಾಗಿ ಕಡಿಮೆಯಾಗುತ್ತದೆ.
ಅಗತ್ಯ ಮೀರಿದ ಉತ್ಪಾದನೆಯಿಂದ ಆಗುವ ಸಂಪನ್ಮೂಲಗಳ ಅಪವ್ಯಯವನ್ನು ತಪ್ಪಿಸಬಹುದು. ಮಾರುಕಟ್ಟೆಯ ನಿಯಂತ್ರಣ ರೈತರ ಹಿಡಿತದಲ್ಲಿರುತ್ತದೆ.
ಕೃಷಿಕರ ಶ್ರಮದ ಉತ್ಪಾದನೆಗೆ ನ್ಯಾಯವಾದ ಬೆಲೆ ಸಿಗುತ್ತದೆ.
ಅಗತ್ಯವಿರುವವರು ರೈತರು ಹೇಳಿದ ನ್ಯಾಯಸಮ್ಮತವಾದ ಬೆಲೆ ಕೊಟ್ಟು ಖರೀದಿಸುತ್ತಾರೆ.
ನಾವು ಉತ್ಪಾದಿಸುವ ಸರಕು-ಸೇವೆಗಳನ್ನು ಬೇಡಿಕೆಯ ಮಿತಿಯಲ್ಲಿಯೇ ಪೂರೈಕೆ ಮಾಡುವ ವ್ಯಾವಹಾರಿಕ ಜಾಣ್ಮೆಯನ್ನು ಮೈಗೂಡಿಸಿಕೊಳ್ಳದಿದ್ದಲ್ಲಿ,
ಇದು ಎಂದೆಂದಿಗೂ ಮುಗಿಯದ ಮೂರ್ಖತನವಾಗಿರುತ್ತದೆ.

-ಧನಂಜಯ ಜೀವಾಳ ಬಿ.ಕೆ.
9448421946. ಮೂಡಿಗೆರೆ.
