ಹಾಸನ: ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರದಲ್ಲಿ ಯಾವುದೇ ಅಬಕಾರಿ ಹಗರಣ ನಡೆದಿಲ್ಲ ಎಂಬುದನ್ನು ನ್ಯಾಯಾಲಯದ ತೀರ್ಪು ಸ್ಪಷ್ಟಪಡಿಸಿದ್ದು, ಇದು ಸತ್ಯಕ್ಕೆ ದೊರೆತ ಜಯವಾಗಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಅಗಿಲೆ ಯೋಗೀಶ್ ಹೇಳಿದರು.
ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ವಿರುದ್ಧ ಕೇಂದ್ರ ತನಿಖಾ ದಳ (ಸಿಬಿಐ) ಮೂಲಕ ಪ್ರಕರಣ ದಾಖಲಿಸಿ ಸಾಂವಿಧಾನಿಕ ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯ ಸೂಚಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಕ್ಷ ಪಕ್ಷಗಳು ಎಎಪಿಯನ್ನು ಭ್ರಷ್ಟಾಚಾರಿಗಳೆಂದು ಬಿಂಬಿಸಲು ಪ್ರಯತ್ನಿಸಿದ್ದರೂ, ನ್ಯಾಯಾಲಯದ ತೀರ್ಪಿನಿಂದ ಆ ಆರೋಪಗಳಿಗೆ ಅಂತಿಮ ತೆರೆ ಬಿದ್ದಿದೆ ಎಂದು ಅವರು ಅಭಿಪ್ರಾಯಪಟ್ಟರು.
2022ರ ಮಾರ್ಚ್ನಲ್ಲಿ ಪಂಜಾಬ್ ರಾಜ್ಯದಲ್ಲಿ ಭರ್ಜರಿ ಜಯ ಸಾಧಿಸಿದ ಬಳಿಕ ಎಎಪಿ ವಿವಿಧ ರಾಜ್ಯಗಳಲ್ಲಿ ಬೆಳೆಯುತ್ತಿರುವುದರಿಂದ ರಾಜಕೀಯ ಭೀತಿಗೆ ಒಳಗಾಗಿ ಈ ರೀತಿಯ ಷಡ್ಯಂತ್ರ ನಡೆಸಲಾಗಿದೆ ಎಂದು ದೂರಿದರು. ಅಬಕಾರಿ ಪ್ರಕರಣದ ಮೊದಲ ದೂರು ಸಲ್ಲಿಸುವ ಪ್ರಕ್ರಿಯೆಯಲ್ಲೂ ರಾಜಕೀಯ ಪ್ರೇರಣೆ ಇತ್ತೆಂದು ಆರೋಪಿಸಿದರು.
ಭಾರತದ ನ್ಯಾಯಾಂಗ ವ್ಯವಸ್ಥೆ ಯಾವುದೇ ಭೇದಭಾವವಿಲ್ಲದೆ ಸತ್ಯದ ಪರ ನಿಂತಿದೆ ಎಂಬುದನ್ನು ಈ ತೀರ್ಪು ಸಾಬೀತುಪಡಿಸಿದೆ. ನ್ಯಾಯಾಲಯ ನೀಡಿದ ಕ್ಲೀನ್ ಚಿಟ್ನಿಂದ ಪಕ್ಷದ ವಿರುದ್ಧ ಆರೋಪ ಮಾಡಿದವರಿಗೆ ಮುಖಭಂಗವಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ಆನಂದ್ ತೇಜೂರು, ವಿಜಯ್ ಕುಮಾರ್, ವಿಕಾಶ್, ಮಂಜಣ್ಣ ಹಾಗೂ ಗೌರಮ್ಮ ಉಪಸ್ಥಿತರಿದ್ದರು.
