ಬೆಂಗಳೂರು, ಜೂನ್ 26 – ಅಪಘಾತ ಪ್ರಕರಣಗಳಲ್ಲಿ ಸಂತ್ರಸ್ತರ ವಿವಾಹಿತ ಪುತ್ರಿಯರೂ ವಿಮಾ ಪರಿಹಾರ ಪಡೆಯಲು ಅರ್ಹರಾಗಿದ್ದಾರೆ ಎಂಬ ಮಹತ್ವದ ತೀರ್ಪನ್ನು ಕರ್ನಾಟಕ ಹೈಕೋರ್ಟ್ ನೀಡಿದೆ. ಈ ಮೂಲಕ ವಾರಸತ್ವ ಮತ್ತು ವಿಮಾ ಹಕ್ಕುಗಳಲ್ಲಿ ಲಿಂಗ ಹಾಗೂ ವೈವಾಹಿಕ ಸ್ಥಿತಿಯ ಆಧಾರದ ಮೇಲೆ ತಾರತಮ್ಯ ಮಾಡುವ ಪ್ರವೃತ್ತಿಗೆ ತೆರೆ ಎಳೆದಿದೆ.
ವಿವರಣೆ ಇಲ್ಲಿದೆ:
2012ರಲ್ಲಿ ಹುಬ್ಬಳ್ಳಿಯ ರೇಣುಕಾ ಎಂಬವರು ಯಮನೂರು ಮಾರ್ಗವಾಗಿ ಪ್ರಯಾಣಿಸುತ್ತಿದ್ದಾಗ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದರು. ಬಳಿಕ ಅವರ ಪತಿ ಮತ್ತು ವಿವಾಹಿತ ಪುತ್ರಿಯರು ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮಂಡಳಿ ಪ್ರಕರಣದ ವಿಚಾರಣೆ ನಡೆಸಿ, ಇಬ್ಬರಿಗೂ ಒಟ್ಟು ₹5.91 ಲಕ್ಷ ಪರಿಹಾರವನ್ನು ಬಡ್ಡಿ ಸಹಿತವಾಗಿ ಪಾವತಿಸಲು ವಿಮಾ ಸಂಸ್ಥೆಗೆ ಆದೇಶಿಸಿತ್ತು.
ಆದೇಶದ ವಿರುದ್ಧ ವಿಮಾ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿದ್ದು, “ವಿವಾಹಿತ ಪುತ್ರಿಯರು ಮೃತ ಮಹಿಳೆಗೆ ಆರ್ಥಿಕವಾಗಿ ಅವಲಂಬಿತರಲ್ಲ, ಆದ್ದರಿಂದ ಅವರು ಪರಿಹಾರಕ್ಕೆ ಅರ್ಹರಲ್ಲ” ಎಂದು ವಾದ ಮಾಡಿತು.
ಹೈಕೋರ್ಟ್ನ ಖಡಕ್ ಸ್ಪಷ್ಟನೆ
ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ಪೀಠ, ಈ ವಾದವನ್ನು ತಳ್ಳಿ ಹಾಕಿತು. “ಅವಲಂಬನೆ ಎಂದರೆ ಕೇವಲ ಆರ್ಥಿಕ ಸಹಾಯವಲ್ಲ; ಭಾವನಾತ್ಮಕ, ಮಾನಸಿಕ ಸಂಬಂಧಗಳೂ ಇದಕ್ಕೆ ಒಳಪಡುತ್ತವೆ. ವಿಮಾ ಪರಿಹಾರ ನಿಗಧಿಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ತಾರತಮ್ಯ ಮಾಡುವಂತಿಲ್ಲ,” ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಇದನ್ನು ಓದಿ: ಬೆಂಗಳೂರು : ಜೆಲ್ಲಿ ಚಾಕೊಲೇಟ್ ನಲ್ಲಿ ಗಾಂಜಾ ಇಟ್ಟು ಸಾಗಣೆ ಮಾಡುವಾಗಲೇ ಪೊಲೀಸ್ ಬಲೆಗೆ ಬಿದ್ದ ಆರೋಪಿಗಳು
ಮಹತ್ವದ ಉಲ್ಲೇಖ
ನ್ಯಾಷನಲ್ ಇನ್ಶುರೆನ್ಸ್ ಕಂಪನಿ Vs ಬೀರೇಂದರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿರುವ ಹೈಕೋರ್ಟ್, “ವಯಸ್ಕ, ಸಂಪಾದನೆ ಮಾಡುತ್ತಿರುವ, ವಿವಾಹಿತ ಮಕ್ಕಳೂ ತಮ್ಮ ಪೋಷಕರ ಸಾವಿನ ನಂತರ ವಿಮಾ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ” ಎಂದು ನಿಲುವು ಸ್ಪಷ್ಟಪಡಿಸಿತು.
ಸಾಮಾಜಿಕ ಪರಿಧಿಯಲ್ಲಿ ತೀರ್ಪಿನ ಪ್ರಭಾವ
ಈ ತೀರ್ಪು ಲಿಂಗಸಮಾನತೆಯ ದೃಷ್ಟಿಯಿಂದ ಹಾಗೂ ಮಹಿಳಾ ಹಕ್ಕುಗಳ ಕಾನೂನು ಭದ್ರತೆಯ ದೃಷ್ಟಿಯಿಂದ ಅತ್ಯಂತ ಪ್ರಭಾವಶಾಲಿ ಕ್ರಮವಾಗಿದೆ. ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣುಮಕ್ಕಳ ಸ್ಥಾನವನ್ನು ಕೇವಲ ವಿವಾಹದ ಆಧಾರದ ಮೇಲೆ ನಿರ್ಧರಿಸಬಾರದು ಎಂಬ ಸಂದೇಶವನ್ನು ಇದು ಧ್ವನಿಸುತ್ತಿದೆ.
