ಹಾಸನ- ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿಗಾಗಿ ಏನೆಲ್ಲಾ ಮಾಡುತ್ತಿದ್ದಾರೆ ಎಂಬುದು ಇಡೀ ದೇಶಕ್ಕೆ ಗೊತ್ತು. ಗ್ಯಾರಂಟಿ ಭಾಗ್ಯ ಅಂತಾರೆ, ಈಗ ಭಾಗ್ಯನೂ ಇಲ್ಲ ಕಾಮಗಾರಿಗೆ ದುಡ್ಡು ಇಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ವಿ.ಸೋಮಣ್ಣ ವ್ಯಂಗ್ಯವಾಡಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ ತೆರಿಗೆ ಹಣ ರಾಜ್ಯಕ್ಕೆ ಬರುತ್ತಿಲ್ಲ ಎಂಬ ಸಿಎಂ ಆರೋಪಕ್ಕೆ ಸಿದ್ದರಾಮಯ್ಯ ಈಗ ಪುಸ್ತಕಾನೆ ಓದುತ್ತಿಲ್ಲ. ಹಿಂದೆ ಇದ್ದ ಸಿದ್ದರಾಮಯ್ಯ ಇವತ್ತಿಲ್ಲ. ಕುರ್ಚಿಗೋಸ್ಕರ ಏನೆಲ್ಲ ಮಾಡ್ತಿದ್ದಾರೆ ಅಂತ ಇಡೀ ದೇಶಕ್ಕೆ ಗೊತ್ತು ಎಂದು ತಿರುಗೇಟು ನೀಡಿದರು.
ಯಾವುದೇ ಕೆಲಸ ಮಾಡೋದಕ್ಕೂ ಅವರ ಹತ್ತಿರ ಸಂಪತ್ತಿಲ್ಲ. ಹಾಗಾಗಿ ಜನರನ್ನ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಮೋದಿ ಸರ್ಕಾರ ನೂರು ಪಟ್ಟು ಕೆಲಸ ಮಾಡುತ್ತಿದೆ. ಈಶಾನ್ಯ ರಾಜ್ಯಗಳಿಗೆ ಹೋದರೆ ಅಭಿವೃದ್ಧಿ ಗೊತ್ತಾಗುತ್ತದೆ ಎಂದರು.
ನೀವು ಮತ್ತು ನಿಮ್ಮ ಅಧಿಕಾರಿಗಳನ್ನ ಒಂದು ವಾರ ಕಕೊರ್ಂಡ್ ಬನ್ನಿ. ಮೋದಿ ಕಚೇರೀಲಿ ಬೇಡ, ನನ್ನ ಕಚೇರೀಲಿ ಕುಳಿತು, ಆಡಳಿತ ಅಂದ್ರೇನು, ಪಾರದರ್ಶಕತೆ ಅಂದ್ರೇನು, ಸಾಮಾನ್ಯ ಜನರಿಗೆ ಹೇಗೆ ಸವಲತ್ತು ನೀಡಬಹುದು ಎಂಬುದನ್ನ ಬಂದು ನೋಡ್ರಿ, ಆಮೇಲಾದ್ರು ಒಂದು ಹಂತಕ್ಕೆ ತರೋಣ ಎಂದೆ. ಕೇಂದ್ರ ಮತ್ತು ರಾಜ್ಯ ಒಂದು ನಾಣ್ಯದ ಎರಡು ಮುಖವಾಗಿ ಒಟ್ಟಾಗಿ ಕೆಲಸ ಮಾಡಿದ್ರೆ ಹೇಗೆಲ್ಲಾ ಕೆಲಸ ಆಗುತ್ತೆ ಅನ್ನೋದಕ್ಕೆ ಅನೇಕ ಉದಾಹರಣೆ ಕೊಟ್ಟಿದ್ದೇವೆ. ಆದರೆ ಅವರಿಗೆ ಸತ್ಯ ಮಾತಾಡೋಕೆ ತಯಾರಿಲ್ಲ. ಏನೊ ಒಂದು ಹೇಳೋದು ತಪ್ಪಿಸಿಕೊಳ್ಳೋದು ಅಷ್ಟೇ. ಇನ್ನೊಬ್ಬರ ಹೆಗಲ ಮೇಲೆ ಗನ್ ಇಟ್ಟು ಹೊಡೆಯೋದನ್ನ ಬಿಟ್ಟು ಅವರ ಗನ್ ಪರಿಸ್ಥಿತಿ ಏನಾಗಿದೆ ನೋಡಿಕೊಂಡು ಕೆಲಸ ಮಾಡಿದ್ರೆ ಇನ್ನೂ ಚನ್ನಾಗಿ ಆಗಬಹುದು ಎಂದು ಸಲಹೆ ನೀಡಿದರು.
ಪ್ರಧಾನಿ ಮೋದಿ ಅವರು, ಭವಿಷ್ಯದ ಭಾರತಕ್ಕೆ ಒಂದು ಸಂದೇಶ ಕೊಡುತ್ತಿದ್ದಾರೆ. ಈಗ ಆಗಿರುವ ಕಹಿ ಘಟನೆ ಸಂಬಂಧ ಹೇಗೆ ನಡೆದುಕೊಳ್ಳಬೇಕು ಎಂಬ ರಾಜತಾಂತ್ರಿಕ ತೀರ್ಮಾನವನ್ನ ಇಡೀ ವಿಶ್ವವೇ ಮೆಚ್ಚಿಕೊಳ್ತಿದೆ ಎಂದರು.
ರೈಲ್ವೆ ಯೋಜನೆಗಳಿಗೂ ರಾಜ್ಯ ಸರ್ಕಾರ ತನ್ನ ಪಾಲು ಕೊಡುತ್ತಿಲ್ಲ. ಆದರೂ ಹಲವು ಕೆಲಸಕ್ಕೆ ಚಾಲನೆ ನೀಡಲಾಗಿದೆ. ಗ್ಯಾರಂಟಿ ಭಾಗ್ಯ ಅಂದ್ರು, ಈಗ ಭಾಗ್ಯನೂ ಇಲ್ಲಾ, ಕಾಮಗಾರಿಗೆ ದುಡ್ಡು ಸಹ ಇಲ್ಲ ಎಂದು ಲೇವಡಿ ಮಾಡಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಮುಖಂಡರಾದ ಶೋಭನ್ ಬಾಬು, ಹೆಚ್.ಎನ್.ನಾಗೇಶ್, ಚನ್ನಕೇಶವ, ಕಟ್ಟಾಯ ಶಿಕುಮಾರ್, ನಾಗೇಶ್ ಇತರರು ಇದ್ದರು.
