ಒಂದು ದೇಶ ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿ ಯಲ್ಲಿರಬೇಕು ಅಂದ್ರೆ ಅಲ್ಲಿ ಭೌಗೋಳಿಕ ಸಂಪತ್ತು ಹೇರಳವಾಗಿರಬೇಕು, ಮುಖ್ಯವಾಗಿ ನೀರಿನಂತಹ ಸೌಲಭ್ಯಗಳು ಸಮೃದ್ಧವಾಗಿರಬೇಕು. ಆದರೆ ಈ ಮಾತನ್ನು ಸುಳ್ಳು ಮಾಡಿದೆ ಕುವೈತ್. ಈ ದೇಶದಲ್ಲಿ ಎಲ್ಲಿ ನೋಡಿದರೂ ಮರುಭೂಮಿ, ಇಲ್ಲಿ ನದಿ ಇಲ್ಲ, ಸರೋವರಗಳಂತೂ ಇಲ್ವೇ ಇಲ್ಲ.
ಒಟ್ಟಿನಲ್ಲಿ ಸಿಹಿ ನೀರಿನ ಮೂಲಗಳೇ ಇಲ್ಲ. ಹೀಗಿದ್ದರೂ ಕೂಡ ಸುಮಾರು 4.9 ಮಿಲಿಯನ್ ಜನರ ಬದುಕನ್ನು ನೀರಿನ ಕೊರತೆಯ ನಡುವೆಯೂ ಯಶಸ್ವಿಯಾಗಿ ನಿರ್ವಹಿಸುತ್ತಿದೆ ಈ ಕುವೈತ್.
ಪ್ರಕೃತಿ ಕೈಕೊಟ್ಟರೂ, ಕೈ ಹಿಡಿಯಿತು ತಂತ್ರಜ್ಞಾನ
ಪರ್ಷಿಯನ್ ಕೊಲ್ಲಿಯ ಉತ್ತರ ತುದಿಯಲ್ಲಿ ಇರುವ ಈ ಸಣ್ಣ ಗಲ್ಫ್ ರಾಷ್ಟ್ರ ಸಂಪೂರ್ಣವಾಗಿ ಒಣ ಮರುಭೂಮಿ ಭೂಭಾಗದಿಂದ ಆವೃತ್ತವಾಗಿದ್ದು, ಸಿಹಿ ನೀರಿನ ಸೌಲಭ್ಯವಿಲ್ಲದಿದ್ದರೂ ತನ್ನ ಬುದ್ಧಿವಂತಿಕೆಯಿಂದ ಕುಡಿಯುವ ನೀರಿನ ಕೊರತೆ ಎದುರಾಗದಂತೆ ಕಾರ್ಯನಿರ್ವಹಿಸುತ್ತಿದೆ.
ಈ ದೇಶದಲ್ಲಿ ಆದಾಯಕ್ಕೇನು ಕೊರತೆ ಇಲ್ಲ, ಅಪಾರ ತೈಲ ಸಂಪತ್ತನ್ನು ಹೊಂದಿರುವ ಮೂಲಕ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ದೊಡ್ಡ ಪಾತ್ರವಹಿಸಿದೆ. ಹೇರಳ ತೈಲ ಸಂಪತ್ತಿರುವ ಈ ದೇಶ ಸ್ವಂತವಾಗಿ ಯಾವುದೇ ಶಾಶ್ವತ ನದಿ ಅಥವಾ ನೈಸರ್ಗಿಕ ಸಿಹಿನೀರಿನ ಮೂಲವನ್ನು ಹೊಂದಿಲ್ಲ.
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಪ್ರಕಾರ, ಕುವೈತ್ನ ಆಂತರಿಕ ನವೀಕರಿಸಬಹುದಾದ ಸಿಹಿನೀರಿನ ಸಂಪನ್ಮೂಲಗಳು ಶೂನ್ಯ (ಜಿರೋ) ಎಂದಿದೆ. ಕುಡಿಯುವ ನೀರು, ಆಹಾರ ಉತ್ಪಾದನೆ, ಕೈಗಾರಿಕೆ, ನಗರಾಭಿವೃದ್ಧಿ ಎಲ್ಲವೂ ಈ ದೇಶದಲ್ಲಿ ಪ್ರಕೃತಿಯ ಬದಲಿಗೆ ಎಂಜಿನಿಯರಿಂಗ್, ನೀತಿ ಮತ್ತು ಶಕ್ತಿ-ತೀವ್ರ ತಂತ್ರಜ್ಞಾನಗಳ ಮೇಲೆ ಬಲವಾಗಿ ನಿಂತಿದೆ. ಸಿಹಿ ನೀರೇ ಇಲ್ಲದ ಈ ದೇಶ, ಜನರಿಗೆ ಮತ್ತು ಇತರೆ ಕೆಲಸಗಳಿಗೆ ಹೇಗೆ ನೀರನ್ನು ಪೂರೈಸುತ್ತಿದೆ ಅನ್ನೋ ಬುದ್ಧಿವಂತ ನಡೆಗಳ ಬಗ್ಗೆ ಇಲ್ಲಿದೆ ನೋಡಿ.
ನದಿಯೂ ಇಲ್ಲ… ಮಳೆಯೂ ಇಲ್ಲ
FAO ವರದಿಯ ಪ್ರಕಾರ, ಕುವೈತ್ನಲ್ಲಿ ನದಿಗಳು ಅಥವಾ ಸರೋವರಗಳಂತಹ ನೈಸರ್ಗಿಕ ಸಿಹಿನೀರಿನ ಸಂಪನ್ಮೂಲಗಳೇ ಇಲ್ಲ. ವರ್ಷಕ್ಕೆ ಸರಾಸರಿ 120 ಮಿಲಿಮೀಟರ್ಗಿಂತಲೂ ಕಡಿಮೆ ಮಳೆಯಷ್ಟೇ ಇಲ್ಲಿ ಬೀಳುತ್ತದೆ.
ಬಿದ್ದರೂ ಕೂಡ, ತೀವ್ರ ಬಿಸಿಲು ಮತ್ತು ವೇಗದ ಆವಿಯಾಗುವಿಕೆಯಿಂದ ಮಳೆನೀರು ನೆಲಕ್ಕೆ ಇಳಿಯುವ ಮುನ್ನ ವಾತಾವರಣವನ್ನು ಸೇರಿ ಹೋಗುತ್ತದೆ. ದೇಶದ ಮಣ್ಣು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿಲ್ಲದ ಕಾರಣ, ಅಂತರ್ಜಲ ಸಂಪನ್ಮೂಲಗಳೂ ಅತ್ಯಂತ ಸೀಮಿತ. ಕೆಲವೊಮ್ಮೆ ಭಾರೀ ಮಳೆಯಾದಾಗ ಮಾತ್ರವೇ ಒಣ ನದಿಪಾತ್ರಗಳು ತುಂಬಿಕೊಳ್ಳುತ್ತವೆ.
ಬಹ್ರತ್ ಅಲ್ ಅಬ್ರಾಕ್, ಬಹ್ರತ್ ಅಲ್ ಮಿರ್ಫಿ, ಶೈಬ್ ರುಜ್ಮ್ ಅಲ್ ಜಹ್ತಾನ್ ಮತ್ತು ವಾಡಿ ಅಲ್ ಬಾಟಿನ್ ಇವುಗಳನ್ನು “ಕುವೈತ್ ನದಿ” ಎಂದೂ ಕರೆಯುತ್ತಾರೆ. ಆದರೆ ಇವುಗಳು ಕೇವಲ ಕೆಲ ಗಂಟೆ ಅಥವಾ ದಿನಗಳಷ್ಟೇ ನೀರನ್ನು ಹಿಡಿದಿಟ್ಟುಕೊಳ್ಳುತ್ತವೆ. ದೀರ್ಘಾವಧಿಗೆ ಇವು ಪರಿಹಾರವಾಗಿಲ್ಲ.
ಉಪ್ಪು ನೀರೇ ಕುವೈತ್ನ ಜೀವನಾಡಿ
ನೈಸರ್ಗಿಕ ನೀರಿನ ಮೂಲಗಳೇ ಇಲ್ಲದ ಕಾರಣ, ಕುವೈತ್ ತನ್ನ ಬದುಕನ್ನು ಸಂಪೂರ್ಣವಾಗಿ ಸಮುದ್ರದ ನೀರಿನ ಲವಣರಹಿತೀಕರಣದ ಮೇಲೆ ಅವಲಂಬಿಸಿದೆ. 1953ರಲ್ಲಿ ಮೊದಲ ಉಪ್ಪುನೀರು ಶುದ್ಧೀಕರಣ ಘಟಕ ಆರಂಭವಾದ ಬಳಿಕ, ಈ ತಂತ್ರಜ್ಞಾನವೇ ದೇಶದ ನೀರಿನ ಬೆನ್ನೆಲುಬಾಗಿದೆ.
ಶುವೈಖ್, ದೋಹಾ ಪೂರ್ವ ಮತ್ತು ಅಜ್-ಝೌರ್ ಮೊದಲಾದ ದೊಡ್ಡ ಘಟಕಗಳು ದಿನನಿತ್ಯ ಲಕ್ಷಾಂತರ ಘನ ಮೀಟರ್ ನೀರನ್ನು ಉತ್ಪಾದಿಸುತ್ತಿವೆ. MEED ವರದಿ ಪ್ರಕಾರ, ಅಜ್-ಝೌರ್ ಉತ್ತರ ಘಟಕವು ಈ ಪ್ರದೇಶದಲ್ಲೇ ಅತಿದೊಡ್ಡಗಳಲ್ಲಿ ಒಂದಾಗಿದೆ. ಮನೆಗಳು, ಕೈಗಾರಿಕೆಗಳು, ಆಸ್ಪತ್ರೆಗಳು, ಶಾಲೆ ಸೇರಿ ಕುವೈತ್ನ ದೈನಂದಿನ ಜೀವನದ ಬಹುತೇಕ ಎಲ್ಲಾ ಅಂಶಗಳು ಇಂದು ಉಪ್ಪುನೀರಿನ ಶುದ್ಧೀಕರಣದ ಮೇಲೆ ನಿಂತಿವೆ.
ಯುಎಇ ಮತ್ತು ಬಹ್ರೇನ್ನಂತಹ ದೇಶಗಳು ಸ್ವಲ್ಪಮಟ್ಟಿಗೆ ಅಂತರ್ಜಲ ಅಥವಾ ಕಾಲೋಚಿತ ವಾಡಿಗಳನ್ನು ಹೊಂದಿದ್ದರೂ, ಕುವೈತ್ ಪ್ರತಿ ಹನಿ ನೀರಿಗೂ ಮಾನವ ನಿರ್ಮಿತ ವ್ಯವಸ್ಥೆಗಳ ಮೇಲೆ ಅವಲಂಬಿತವಾಗಿದೆ.
ತ್ಯಾಜ್ಯ ನೀರಿಗೂ ಇಲ್ಲಿದೆ ಮಹತ್ವ
ಕುಡಿಯುವ ನೀರಿನ ಮೇಲೆ ಒತ್ತಡ ಕಡಿಮೆ ಮಾಡಲು, ಕುವೈತ್ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೃಷಿ, ಉದ್ಯಾನಗಳು ಮತ್ತು ಹಸಿರು ಪ್ರದೇಶಗಳ ನೀರಾವರಿಗೆ ಬಳಸುತ್ತಿದೆ.
ಮೇವಿನ ಬೆಳೆಗಳು, ಖರ್ಜೂರ ತೋಟಗಳು ಮತ್ತು ನಗರ ಉದ್ಯಾನಗಳಿಗೆ ಈ ಮರುಬಳಕೆ ನೀರನ್ನು ಉಪಯೋಗಿಸುವ ಮೂಲಕ, ಶುದ್ಧ ಕುಡಿಯುವ ನೀರನ್ನು ಉಳಿಸಿಕೊಳ್ಳಲಾಗುತ್ತಿದೆ.
ತಲಾ ನೀರಿನ ಬಳಕೆ ಹೆಚ್ಚು
ಇಂತಹ ಅತಿ-ಶುಷ್ಕ ಪರಿಸ್ಥಿತಿಗಳ ನಡುವೆಯೂ, ಕುವೈತ್ ವಿಶ್ವದಲ್ಲೇ ಅತಿ ಹೆಚ್ಚು ತಲಾ ನೀರಿನ ಬಳಕೆಯ ದೇಶಗಳಲ್ಲಿ ಒಂದಾಗಿದೆ ಅನ್ನೋದು ವಿಚಿತ್ರ ನೋಡಿ. ಇದು ದೇಶ ಎಷ್ಟು ಅಭಿವೃದ್ಧಿ ಹೊಂದಿದ ಮೂಲಸೌಕರ್ಯ ಹೊಂದಿದೆ ಎಂಬುವುದಕ್ಕೆ ನಿದರ್ಶನವಾಗಿದೆ.
ಸೌರಶಕ್ತಿ ಚಾಲಿತ ಲವಣರಹಿತೀಕರಣ, ಸುಧಾರಿತ ರಿವರ್ಸ್ ಆಸ್ಮೋಸಿಸ್ ವ್ಯವಸ್ಥೆಗಳು ಮತ್ತು ತ್ಯಾಜ್ಯ ನೀರಿನ ಮರುಬಳಕೆ ತಂತ್ರಜ್ಞಾನಗಳ ಮೇಲೆ ದೇಶ ಹೆಚ್ಚಿನ ಹೂಡಿಕೆ ಮಾಡುತ್ತಿದೆ.
ಕುವೈತ್ನ ಎಂಜಿನಿಯರಿಂಗ್ ಗೆಲುವು
ಈ ಎಲ್ಲಾ ತಂತ್ರಜ್ಞಾನ, ಬುದ್ಧಿವಂತಿಕೆ ದೇಶಕ್ಕೆ ನೀರನ್ನು ಪೂರೈಸುತ್ತಿದೆ ಹೌದು, ಆದರೆ ಲವಣರಹಿತೀಕರಣವು ಶಕ್ತಿ-ತೀವ್ರ ಪ್ರಕ್ರಿಯೆಯು ಭವಿಷ್ಯದಲ್ಲಿ ಇಂಧನ ಬೆಲೆ ಏರಿಕೆ, ವಿದ್ಯುತ್ ಕೊರತೆ ಅಥವಾ ಭೌಗೋಳಿಕ ರಾಜಕೀಯ ಅಶಾಂತಿಗಳು ನೀರಿನ ಪೂರೈಕೆಯ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಸುತ್ತಾರೆ ತಜ್ಞರು.
ನದಿ, ಸರೋವರ, ಮಳೆಯೂ ಇಲ್ಲದಿರುವ ಪರಿಸ್ಥಿತಿ ಕುವೈತ್ಗೆ ಅಡಚಣೆಯಂತೆ ಕಂಡು ಬಂದಿಲ್ಲ. ಈ ದೇಶವು ತನ್ನ ಭೌಗೋಳಿಕ ಅನಾನುಕೂಲತೆಯನ್ನು ಎಂಜಿನಿಯರಿಂಗ್ ಗೆಲುವನ್ನಾಗಿ ಪರಿವರ್ತಿಸಿದೆ. ಉಪ್ಪುನೀರಿನ ಶುದ್ಧೀಕರಣ ಮತ್ತು ಆಧುನಿಕ ನೀರಿನ ನಿರ್ವಹಣೆಯ ಮೂಲಕ ಕುವೈತ್ ಬದುಕನ್ನು ಕಟ್ಟಿಕೊಂಡಿದೆ. ಸೌರಶಕ್ತಿ ಮತ್ತು ಸುಧಾರಿತ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುವ ಮೂಲಕ ಕುವೈತ್ ಭವಿಷ್ಯದಲ್ಲಿ ಹೆಚ್ಚು ಸ್ಥಿರ ನೀರಿನ ವ್ಯವಸ್ಥೆ ನಿರ್ಮಿಸಲು ಪ್ರಯತ್ನಿಸುತ್ತಿದೆ.
