ಎಟಿಎಂನಿಂದ ಪದೇ ಪದೇ ಹಣ ತೆಗೆಯುವ ಅಭ್ಯಾಸ ಹೊಂದಿದ್ದರೆ ನಿಮಗೊಂದು ಕೆಟ್ಟ ಸುದ್ದಿಯಿದೆ. ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಬ್ಯಾಂಕಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಇನ್ಮುಂದೆ ಎಟಿಎಂನಿಂದ ಹಣ ಪಡೆಯುವುದು ತುಸು ದುಬಾರಿಯಾಗಲಿದ್ದು, ಉಚಿತ ವಹಿವಾಟಿನ ಮಿತಿಗಳನ್ನು ಪರಿಷ್ಕರಿಸಲಾಗಿದೆ .
ಯುಪಿಐ (UPI) ವಿತ್ಡ್ರಾ ಕೂಡ ಇನ್ಮುಂದೆ ಉಚಿತ ಮಿತಿಯೊಳಗೆ
ಇದುವರೆಗೆ ಎಟಿಎಂ ಕಾರ್ಡ್ ಬಳಸಿ ಮಾಡುವ ವಹಿವಾಟುಗಳನ್ನು ಮಾತ್ರ ಉಚಿತ ಮಿತಿಯಲ್ಲಿ ಲೆಕ್ಕ ಹಾಕಲಾಗುತ್ತಿತ್ತು. ಆದರೆ ಈಗ ಯುಪಿಐ (UPI) ಮೂಲಕ ಎಟಿಎಂನಿಂದ ನಗದು ಪಡೆಯುವ ಸೇವೆಯನ್ನೂ ಸಹ ಈ ಉಚಿತ ಮಿತಿಯೊಳಗೆ ಸೇರಿಸಲಾಗಿದೆ. ಅಂದರೆ, ನೀವು ಕಾರ್ಡ್ ಬಳಸಿ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ತೆಗೆದರೂ, ಎರಡನ್ನೂ ಒಟ್ಟಾಗಿಯೇ ಲೆಕ್ಕ ಮಾಡಲಾಗುತ್ತದೆ.
5 ಉಚಿತ ವಹಿವಾಟುಗಳು ಮತ್ತು ದಂಡ
ಸಾಮಾನ್ಯವಾಗಿ ನಿಮ್ಮದೇ ಬ್ಯಾಂಕಿನ ಎಟಿಎಂಗಳಲ್ಲಿ ತಿಂಗಳಿಗೆ 5 ಉಚಿತ ವಹಿವಾಟುಗಳನ್ನು (ಹಣಕಾಸು ಮತ್ತು ಹಣಕಾಸೇತರ) ಮಾಡಬಹುದು. ಇತರ ಬ್ಯಾಂಕ್ಗಳ ಎಟಿಎಂಗಳಲ್ಲಿ ಮೆಟ್ರೋ ನಗರಗಳಲ್ಲಿ 3 ಮತ್ತು ಇತರ ನಗರಗಳಲ್ಲಿ 5 ಉಚಿತ ವಹಿವಾಟುಗಳ ಮಿತಿಯಿದೆ. ಈ ಮಿತಿ ಮೀರಿದ ನಂತರ ಪ್ರತಿ ಹೆಚ್ಚುವರಿ ವಹಿವಾಟಿಗೆ ₹23 ಮತ್ತು ತೆರಿಗೆ (Tax) ವಿಧಿಸಲಾಗುತ್ತದೆ.
ವಿವಿಧ ಬ್ಯಾಂಕ್ಗಳ ಹೊಸ ನಿಯಮಗಳು:
• ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB): ರೂಪೇ, ವೀಸಾ ಮತ್ತು ಮಾಸ್ಟರ್ ಕಾರ್ಡ್ಗಳ ದೈನಂದಿನ ವಿತ್ಡ್ರಾ ಮಿತಿಯನ್ನು ₹1,00,000 ರಿಂದ ₹50,000ಕ್ಕೆ ಇಳಿಸಿದೆ. ಪ್ರೀಮಿಯಂ ಕಾರ್ಡ್ಗಳ ಮಿತಿಯನ್ನು ₹1.5 ಲಕ್ಷದಿಂದ ₹75,000ಕ್ಕೆ ಕಡಿತಗೊಳಿಸಲಾಗಿದೆ.
• HDFC ಬ್ಯಾಂಕ್: ಯುಪಿಐ ಆಯಪ್ ಬಳಸಿ ಎಟಿಎಂನಿಂದ ಹಣ ತೆಗೆಯುವುದನ್ನು ತಿಂಗಳ 5 ಉಚಿತ ವಹಿವಾಟುಗಳ ಮಿತಿಯಲ್ಲೇ ಪರಿಗಣಿಸಲಾಗುತ್ತದೆ. ಮಿತಿ ಮೀರಿದರೆ ಪ್ರತಿ ವಹಿವಾಟಿಗೆ ₹23 ಶುಲ್ಕ ಅನ್ವಯಿಸುತ್ತದೆ.
• ಬಂಧನ್ ಬ್ಯಾಂಕ್: ತನ್ನದೇ ಎಟಿಎಂಗಳಲ್ಲಿ 5 ಉಚಿತ ವಹಿವಾಟುಗಳನ್ನು ನೀಡುತ್ತದೆ (ಹಣಕಾಸೇತರ ವಹಿವಾಟಿಗೆ ಮಿತಿಯಿಲ್ಲ). ಇತರ ಬ್ಯಾಂಕ್ ಎಟಿಎಂಗಳಲ್ಲಿ ಮೆಟ್ರೋ ನಗರಗಳಲ್ಲಿ 3 ಮತ್ತು ಮೆಟ್ರೋಯೇತರ ನಗರಗಳಲ್ಲಿ 5 ಉಚಿತ ವಹಿವಾಟುಗಳ ಮಿತಿಯಿದೆ.
ಹೆಚ್ಚುವರಿ ಶುಲ್ಕದಿಂದ ತಪ್ಪಿಸಿಕೊಳ್ಳುವುದು ಹೇಗೆ ?
ಒಂದೇ ಬಾರಿ ವಿತ್ಡ್ರಾ ಮಾಡಿ: ಸಣ್ಣ ಸಣ್ಣ ಮೊತ್ತವನ್ನು ಪದೇ ಪದೇ ತೆಗೆಯುವ ಬದಲಿಗೆ, ತಿಂಗಳಿಗೆ ಬೇಕಾಗುವ ಹಣವನ್ನು ಒಂದೇ ಬಾರಿ ಅಥವಾ ಎರಡು ಬಾರಿ ವಿತ್ಡ್ರಾ ಮಾಡಿಕೊಳ್ಳಿ. ಇದರಿಂದ ವಹಿವಾಟಿನ ಸಂಖ್ಯೆ ಕಡಿಮೆಯಾಗುತ್ತದೆ.
ನಿಮ್ಮದೇ ಬ್ಯಾಂಕ್ ಬಳಸಿ: ಉಚಿತ ಮಿತಿ ಹೆಚ್ಚಿರುವ ಕಾರಣ ಸಾಧ್ಯವಾದಷ್ಟು ನಿಮ್ಮದೇ ಬ್ಯಾಂಕಿನ ಎಟಿಎಂ ಕೇಂದ್ರಗಳನ್ನು ಬಳಸಿ.
ಡಿಜಿಟಲ್ ಪಾವತಿ ಹೆಚ್ಚಿಸಿ: ಸಣ್ಣ ಪುಟ್ಟ ಖರ್ಚುಗಳಿಗೆ ನಗದು ಬಳಸುವ ಬದಲು ಯುಪಿಐ (PhonePe, Google Pay) ಅಥವಾ ಮೊಬೈಲ್ ಬ್ಯಾಂಕಿಂಗ್ ಆಯಪ್ಗಳನ್ನು ಬಳಸಿ.
ಬ್ಯಾಲೆನ್ಸ್ ಚೆಕ್ ಮಾಡಲು ಆಯಪ್ ಬಳಸಿ: ಎಟಿಎಂಗೆ ಹೋಗಿ ಬ್ಯಾಲೆನ್ಸ್ ಚೆಕ್ ಅಥವಾ ಮಿನಿ ಸ್ಟೇಟ್ಮೆಂಟ್ ಪಡೆಯುವ ಬದಲು ಮೊಬೈಲ್ ಆಯಪ್ ಬಳಸಿ. ಇದರಿಂದ ಉಚಿತ ವಹಿವಾಟಿನ ಮಿತಿ ಉಳಿಯುತ್ತದೆ.
