
ಹಾಸನ: ರಾಜ್ಯದ ತೆರಿಗೆ ಹಣವನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ಹಂಚುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ರಾಜ್ಯದ ತೆರಿಗೆ ಹಣವನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ಹಂಚುವ ಕೆಲಸ ಮಾಡುತ್ತಿದೆ. ಗ್ಯಾರಂಟಿ ಅನುಷ್ಠಾನ ಸಮಿತಿ ಹೆಸರಿನಲ್ಲಿ ಹಣ ಹಂಚುತ್ತಿದ್ದಾರೆ. ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷನಿಗೆ ಐವತ್ತು ಸಾವಿರ, ತಾಲ್ಲೂಕು ಅಧ್ಯಕ್ಷನಿಗೆ ಇಪ್ಪತ್ತೈದು, ಸದಸ್ಯರಿಗೆ ಎರಡು ಸಾವಿರ ರೂ. ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಹಾಸನ ಕೃಷಿ ಕಾಲೇಜನ್ನು ಬೆಂಗಳೂರಿನಿಂದ ಮಂಡ್ಯ ವಿಶ್ವ ವಿದ್ಯಾಲಯಕ್ಕೆ ಸೇರ್ಪಡೆ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದ ಅವರು, ಬೆಂಗಳೂರು ಯುನಿವರ್ಸಿಟಿಯಲ್ಲೇ ಹಾಸನ ಕೃಷಿ ಕಾಲೇಜು ಇರಬೇಕು. ಇದರಲ್ಲಿ ರಾಜಕೀಯ ಮಾಡಬಾರದು. ಈಗಾಗಲೇ ಹಾಸನ ಜಿಲ್ಲೆಯ ನಾಲ್ವರು ಶಾಸಕರು ಈ ಕುರಿತು ಪತ್ರ ಬರೆದಿದ್ದೇವೆ. ಒಂದು ವೇಳೆ ಮಂಡ್ಯ ಯುನಿವರ್ಸಿಟಿಗೆ ಸೇರಿಸಿದರೆ ಕಾನೂನು ಹೋರಾಟ ಮಾಡಬೇಕಾಗುತ್ತದೆ. ಬೇಕಾದರೆ ಮಂಡ್ಯದಲ್ಲಿ ಹೊಸ ಕಾಲೇಜು ಮಾಡಲಿ. ಯಡಿಯೂರಪ್ಪ ಅವರು ಶಿವಮೊಗ್ಗಕೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದರು. ಅಧಿವೇಶನದಲ್ಲಿ ಹೋರಾಟ ಮಾಡಿ ಹಾಸನದಲ್ಲಿ ಉಳಿಸಿದ್ದೇನೆ. ಒಂದು ವೇಳೆ ಮಂಡ್ಯ ಯುನಿವರ್ಸಿಟಿಗೆ ಸೇರಿಸಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.