ಭೂಮಿಯನ್ನು ಅಗೆದು, ಬಗೆದು ಕಿತ್ತು ತಂದು ಇನ್ನೆಲ್ಲೋ ಸುರಿಯುತ್ತಿರುವುದು ಈ ಭೂಮಿಯ ಮೇಲೆ ಅಮಾನುಷವಾಗಿ ನಡೆಯುತ್ತಿರುವ ಅತ್ಯಾಚಾರ.
ಅವ್ಯಾಹತವಾಗಿ ನಡೆಯುತ್ತಿರುವ ಭೂ-ಪರಿವರ್ತನೆಯ ನೇರ ಪರಿಣಾಮ ಇದು.
ತುಂಬಿದ ಜಾಗ ಹಾಗೂ ತುಂಬಲು ಮಣ್ಣು ತೆಗೆದ ಜಾಗ ಎರಡೂ ತನ್ನ ನಿಜಸ್ವರೂಪವನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತದೆ.
ಹಿಟಾಚಿ ಹಾಗೂ ಜೇಸೀಬೀ ಮುಂತಾದ ಮಣ್ಣು ಗೋ(ಘೋ)ರಕಗಳ ಬಳಕೆಯನ್ನು ಸರ್ಕಾರ ತನ್ನ ಪರಿವೇಕ್ಷಣೆಯ ಪರಿಧಿಯೊಳಗೆ ತಂದುಕೊಂಡು, ಪ್ರತೀ ಕೆಲಸದ ಸ್ಥಳ, ಸ್ವರೂಪ ಹಾಗೂ ಆ ಕೆಲಸದಿಂದುಂಟಾಗುವ ಇಕಾಲಜಿಕಲ್ ಇಂಪ್ಯಾಕ್ಟ್ ಮುಂತಾದುವುಗಳನ್ನು ಅಧ್ಯಯನ ನಡೆಸಿ ಸೂಕ್ತ ಹಾಗೂ ಫೀಸಿಬಲ್ ಅನಿಸಿದರೆ ಮಾತ್ರ ಕೆಲಸ ನಡೆಸಲು ಅನುಮತಿ ನೀಡುವ ಅಗತ್ಯವಿದೆ.
ಇಡೀ ಜೀವಜಾಲಕ್ಕೆ ಸೇರಿದ ಸಂಪನ್ಮೂಲವನ್ನು ಯಾಕೆ ಮತ್ತು ಹೇಗೆ ನಿರ್ವಹಿಸಬೇಕೆಂಬ ಕನಿಷ್ಠ ತಿಳುವಳಿಕೆಯೂ ಇಲ್ಲದವರ ಕೈಗೇ ಈ ಜಗತ್ತಿನ ಆಗುಹೋಗುಗಳನ್ನು ನಿರ್ಧರಿಸುವ ಅಪೂರ್ವ ಅವಕಾಶಗಳು ಹೋಗಿ ಸೇರುತ್ತಿವೆ.
ಸಹಜ ವಿವೇಕವೂ ಇಲ್ಲದ ಇಂತಹ ಸ್ವಹಿತಾಸಕ್ತಿಕೇಂದ್ರಿತ ಆಲೋಚನೆಯಿಂದ ಇಡೀ ಜಗತ್ತೇ ಅವನತಿಯತ್ತ ಸರಿಯುತ್ತಿದೆ.
ಸಜ್ಜನರ ಮುಂದಾಲೋಚನೆ, ಅಭಿಪ್ರಾಯ ಹಾಗೂ ಮಾರ್ಗದರ್ಶನವು ಸ್ವಪ್ರತಿಷ್ಠೆಯ ಕಾರಣಕ್ಕೆ ಉದ್ದೇಶಪೂರ್ವಕ ಉಪೇಕ್ಷೆಗೆ ಒಳಗಾಗಿವೆ.
ಈ ಭೂಮಿ ಮಿಲಿಯಾಂತರ ವರ್ಷಗಳಿಂದ ಸಹಜವಾಗಿ ಬೆಟ್ಟ-ಗುಡ್ಡ, ಮರುಭೂಮಿ, ಹಿಮಪ್ರದೇಶ, ಹುಲ್ಲುಗಾವಲು, ಕಣಿವೆ, ಬಂಜರುಭೂಮಿ, ಸಮುದ್ರತೀರ, ದಟ್ಟಕಾಡು ಹೀಗೆ ತನ್ನದೇ ಆದ ಕ್ರಮದಲ್ಲಿ ತನ್ನ ಭೂಮೇಲ್ಮೈಯನ್ನು ವಿನ್ಯಾಸ ಮಾಡಿಕೊಂಡಿದೆ.
ನೀರಿನ ಸರೋವರ ಎಲ್ಲಿರಬೇಕು, ಹರಿಯುವ ತೊರೆ ಹೇಗಿರಬೇಕು, ನದಿಯ ಅಕ್ಕ-ಪಕ್ಕ ಏನೇನಿರಬೇಕು, ಯಾವ ಪ್ರದೇಶದಲ್ಲಿ ಯಾವ ಸಸ್ಯ ಬೆಳೆಯಬೇಕು, ನೀರೆಲ್ಲಿ ಶೇಖರವಾಗಬೇಕು, ಮನುಷ್ಯನೆಂಬ ಜೀವಿಯ ವ್ಯಾಪ್ತಿ ಏನು, ವನ್ಯಜೀವಿಗಳ ಆವಾಸದ ವಿಸ್ತಾರವೇನು, ಸಮಸ್ತ ಭೂಮಿಯ ಯಾವ-ಯಾವ ಘಟಕಗಳು ಯಾವ ಉದ್ದೇಶಕ್ಕೆ, ಹೇಗೆ, ಎಷ್ಟು ಮತ್ತು ಯಾಕೆ ಬಳಕೆಯಾಗಬೇಕೆಂದು ಸಹಜ-ಸ್ವಾಭಾವಿಕವಾಗಿ ನಿರ್ಧರಿಸಲ್ಪಟ್ಟಿದೆ.
ಭೂಕುಸಿತ, ಹೊಳೆಗಳ ಮಾರ್ಗಪಲ್ಲಟ, ಕೆರೆ-ಕಟ್ಟೆಗಳಲಿ ಹೂಳು ತುಂಬಿಕೊಳ್ಳಲು ಈ ಮಣ್ಣು ಗಣಿಗಾರಿಕೆಯೇ ಕಾರಣ.
ಸರ್ಕಾರಿ ಜಮೀನಾಗಿರಬಹುದು ಅಥವಾ ಖಾಸಗಿ ಸ್ವತ್ತಾಗಿರಬಹುದು ಭೂಮಿ ಅಗೆದು ಮಣ್ಣು ಸಾಗಿಸಲು ಪರವಾನಿಗೆ ಅಗತ್ಯ.
ಭೂಮಿಯನು ಎತ್ತರಿಸಿಕೊಂಡ ಭೂ ಮಾಲೀಕರಿಂದ ಮಣ್ಣನ್ನೆಲ್ಲಿಂದ ತರಿಸಿಕೊಂಡರೆಂಬ ವಿವರ ಪಡೆದು ಮಣ್ಣನು ತೆಗೆದವರು ಹಾಗೂ ತುಂಬಿಸಿಕೊಂಡವರ ಮೇಲೆ ಕ್ರಮ ಕೈಗೊಳ್ಳಬೇಕಿದೆ.
ಹಾಗಂತ,
ಈ ಭೂಗರ್ಭ ಇಲಾಖೆ ಏನು ಮಾಡುತ್ತಿದೆ?
- ಧನಂಜಯ ಜೀವಾಳ
