ತಿರುವನಂತಪುರ: ಕೇರಳದ ರಾಜಧಾನಿಯಲ್ಲಿರುವ ವಿಶ್ವಪ್ರಸಿದ್ಧ ಪದ್ಮನಾಭಸ್ವಾಮಿ ದೇಗುಲದಲ್ಲಿ 270 ವರ್ಷಗಳ ಅನಂತರ ಮಹಾ ಕುಂಭಾಭಿಷೇಕವು ಜೂ. 8ರಂದು ನಡೆಯಲಿದೆ. ಈ ಮೂಲಕ ಅನಂತಪದ್ಮನಾಭ ಸ್ವಾಮಿಗೆ ಮತ್ತೆ ಪ್ರಾಣ ಶಕ್ತಿ ತುಂಬಲಾಗುತ್ತಿದೆ. ದೇಗುಲದ ಜೀರ್ಣೋದ್ಧಾರ ಕಾರ್ಯಗಳು ಸಂಪೂರ್ಣಗೊಂಡಿದ್ದು, ಈ ಹಿನ್ನೆಲೆ ಯಲ್ಲಿ ಮಹಾ ಕುಂಭಾಭಿಷೇಕ ಜರಗಲಿದೆ.
270 ವರ್ಷಗಳ ಸುದೀರ್ಘ ಅವಧಿಯ ಬಳಿಕ ದೇಗುಲದಲ್ಲಿ ಇಂತಹ ಜೀರ್ಣೋದ್ಧಾರ ಕಾರ್ಯ ಮತ್ತು ಮಹಾ ಕುಂಭಾಭಿಷೇಕ ನಡೆಯುತ್ತಿದ್ದು, ಭವಿಷ್ಯದಲ್ಲಿ ಕೆಲವಾರು ದಶಕಗಳ ಬಳಿಕವಷ್ಟೇ ಭಕ್ತರಿಗೆ ಇಂಥದ್ದೊಂದು ಪುಣ್ಯಕಾರ್ಯಕ್ಕೆ ಸಾಕ್ಷಿ ಯಾಗುವ ಭಾಗ್ಯ ಲಭಿಸಲಿದೆ ಎಂದು ದೇಗುಲದ ಮ್ಯಾನೇಜರ್ ಬಿ. ಶ್ರೀಕುಮಾರ್ ತಿಳಿಸಿದ್ದಾರೆ.
ಜೀರ್ಣೋದ್ಧಾರದ ಅಂಗವಾಗಿ ನೂತನ ಗೋಪುರ ಕಲಶಗಳನ್ನು ಸ್ಥಾಪಿಸಲಾಗಿದೆ, ವಿಶ್ವಕ ಸೇನ ದೇವರ ಪುನರ್ಪ್ರತಿಷ್ಠೆ ಹಾಗೂ ಅನಂತ ಪದ್ಮನಾಭಸ್ವಾಮಿ ದೇಗುಲ ಸಮುಚ್ಚಯದ ಒಳಗೆ ಇರುವ ತಿರುವಂಬಾಡಿ ಶ್ರೀ ಕೃಷ್ಣ ದೇವಸ್ಥಾನದ ಅಷ್ಠಬಂಧ ಬ್ರಹ್ಮಕಲಶವೂ ನೆರವೇರಲಿದೆ ಎಂದು ಶ್ರೀಕುಮಾರ್ ತಿಳಿಸಿದ್ದಾರೆ.
2017ರಲ್ಲೇ ಆರಂಭ
ಸುಪ್ರೀಂ ಕೋರ್ಟ್ ನೇಮಿಸಿದ್ದ ತಜ್ಞರ ಸಮಿತಿಯು 2017ರಲ್ಲಿ ನೀಡಿದ್ದ ಸೂಚನೆಯ ಮೇರೆಗೆ ದೇಗುಲ ಜೀರ್ಣೋದ್ಧಾರವನ್ನು ಕೈಗೆತ್ತಿ ಕೊಳ್ಳಲಾಗಿತ್ತು. 2017ರಲ್ಲೇ ಕಾಮಗಾರಿ ಆರಂಭಿಸ ಲಾಗಿತ್ತಾದರೂ ಕೋವಿಡ್ನಿಂದ ನಿರೀಕ್ಷಿಸಿದಷ್ಟು ಪ್ರಗತಿ ಸಾಧನೆಯಾಗಿರಲಿಲ್ಲ. 2021ರಿಂದ ಹಂತಹಂತವಾಗಿ ಸಂಪೂರ್ಣಗೊಳಿಸಲಾಗಿದೆ ಎಂದು ಶ್ರೀಕುಮಾರ್ ತಿಳಿಸಿದರು.
ಈ ಅಪೂರ್ವ ಸಂದರ್ಭವನ್ನು ಸ್ಮರಣಾರ್ಹ ವಾಗಿಸಲು ಹಾಗೂ ಮಹಾಕುಂಭಾಭಿಷೇಕ ಮತ್ತಿತರ ಕಾರ್ಯಗಳು ಸುಸೂತ್ರವಾಗಿ ನಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
