ಹಾಸನ: ಜಿಲ್ಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಉದ್ಯೋಗಕ್ಕಾಗಿ ಅಲೆದಾಡುತ್ತಿರುವ ಯುವಕರಿಗೆ ನೇರವಾಗಿ ಕಂಪನಿಗಳ ಮೂಲಕ ಉದ್ಯೋಗಾವಕಾಶ ಒದಗಿಸುವ ಉದ್ದೇಶದಿಂದ ಈ ರೀತಿಯ ಉದ್ಯೋಗ ಮೇಳಗಳನ್ನು ನಿಯಮಿತವಾಗಿ ಆಯೋಜಿಸಲಾಗುತ್ತಿದೆ ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ತಿಳಿಸಿದರು.
ಜಿಲ್ಲೆಯ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಯುವ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿ,
ಈ ಬಾರಿ ಸುಮಾರು 150ಕ್ಕೂ ಹೆಚ್ಚು ಖ್ಯಾತ ಕಂಪನಿಗಳು ಮೇಳದಲ್ಲಿ ಭಾಗವಹಿಸಿ ವಿವಿಧ ಕ್ಷೇತ್ರಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿರುವುದು ಸಂತೋಷದ ವಿಷಯ ಎಂದು ಸಂಸದರು ಹೇಳಿದರು. ಯುವಕರು ತಮ್ಮ ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯಾಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪದವಿ ಪಡೆದರೆ ಸಾಕಾಗುವುದಿಲ್ಲ. ತಾಂತ್ರಿಕ ಜ್ಞಾನ, ಸಂವಹನ ಕೌಶಲ್ಯ ಹಾಗೂ ವೃತ್ತಿಪರ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದು ಸಲಹೆ ನೀಡಿದರು.
ಉದ್ಯೋಗಾವಕಾಶಗಳನ್ನು ಹುಡುಕುವ ಜೊತೆಗೆ ಉದ್ಯಮಶೀಲತೆ ಕಡೆಗೂ ಯುವಕರು ಗಮನ ಹರಿಸಬೇಕು. ಉದ್ಯೋಗ ಹುಡುಕುವವರಾಗುವುದಕ್ಕಿಂತ ಉದ್ಯೋಗ ಸೃಷ್ಟಿಸುವವರಾಗಬೇಕು ಎಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಮಾತನಾಡಿ, ಉದ್ಯೋಗ ಮೇಳದಂತಹ ಕಾರ್ಯಕ್ರಮಗಳು ಯುವಕರ ಭವಿಷ್ಯ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಜಿಲ್ಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಉದ್ಯೋಗಕ್ಕಾಗಿ ನಗರಗಳಿಗೆ ತೆರಳಬೇಕಾದ ಪರಿಸ್ಥಿತಿ ಕಡಿಮೆಯಾಗಬೇಕು. ಈ ರೀತಿಯ ಉದ್ಯೋಗ ಮೇಳಗಳ ಮೂಲಕ ಸ್ಥಳೀಯ ಯುವಕರಿಗೆ ಜಿಲ್ಲೆ ಮಟ್ಟದಲ್ಲೇ ಉದ್ಯೋಗ ದೊರಕುವಂತಾಗಬೇಕು ಎಂದು ಹೇಳಿದರು.
ಕನಿಷ್ಠ ನೂರಕ್ಕೂ ಹೆಚ್ಚು ಯುವಕರಿಗೆ ನೇರವಾಗಿ ಉದ್ಯೋಗ ದೊರೆಯುವಂತಾಗಬೇಕು ಎಂಬುದು ನಮ್ಮ ಗುರಿ ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಮಾತನಾಡಿ, ಉದ್ಯೋಗ ಮೇಳಕ್ಕೆ ಈಗಾಗಲೇ ಆನ್ಲೈನ್ ಮೂಲಕ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಸ್ಥಳದಲ್ಲಿಯೂ ಸಾವಿರಾರು ಯುವಕರು ಭಾಗವಹಿಸಿದ್ದಾರೆ ಎಂದು ಹೇಳಿದರು. ಜಿಲ್ಲೆಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಜಿಲ್ಲಾಡಳಿತದ ಪ್ರಮುಖ ಆದ್ಯತೆಯಾಗಿದ್ದು, ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ವಿಶೇಷ ಚೇತನರಿಗೆ ಶೇಕಡಾ 5ರಷ್ಟು ಮೀಸಲಾತಿಯನ್ನು ನೀಡಲಾಗಿದೆ ಎಂದು ಅವರು ಹೇಳಿದರು.
ಮೇಳದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸಾವಿರಾರು ಯುವಕರು ಭಾಗವಹಿಸಿ ವಿವಿಧ ಕಂಪನಿಗಳ ಪ್ರತಿನಿಧಿಗಳ ಎದುರು ಸಂದರ್ಶನಗಳಿಗೆ ಹಾಜರಾದರು. ಕಾರ್ಯಕ್ರಮಕ್ಕೆ ಉದ್ಯೋಗಾಸಕ್ತ ಯುವಕರಿಂದ ಭಾರಿ ಸ್ಪಂದನೆ ವ್ಯಕ್ತವಾಯಿತು.
