ಮಡಿಕೇರಿ: ರಾಜ್ಯದಲ್ಲಿ ಪಡಿತರ ಚೀಟಿದಾರರ ಅರ್ಹತೆ ಪರಿಶೀಲನೆ ವೇಳೆ, ಒಂದು ಪಡಿತರ ಚೀಟಿಯಲ್ಲಿನ ಎಲ್ಲಾ ಸದಸ್ಯರು ಹೊಂದಿರುವ ಒಟ್ಟು ಜಮೀನು 7 ಎಕರೆಗೂ ಹೆಚ್ಚು ಇದ್ದಲ್ಲಿ, ಅಂತಹ ಕುಟುಂಬಗಳು ಬಿ.ಪಿ.ಎಲ್ ಅಥವಾ ಅಂತ್ಯೋದಯ ಪಡಿತರ ಚೀಟಿಗೆ ಅನರ್ಹರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಡಿಕೇರಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಅಧ್ಯಕ್ಷ ಎಂ.ಜಿ. ಮೋಹನ್ ದಾಸ್ ಅವರು ಅಧ್ಯಕ್ಷತೆ ವಹಿಸಿದರು. ಸಭೆಯಲ್ಲಿ ಮಾತನಾಡಿದ ಅವರು, “ತಾಲ್ಲೂಕಿನಲ್ಲಿ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಉತ್ತಮ ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಸಹ ಅಧಿಕಾರಿ ವರ್ಗ ಮತ್ತು ಸಮಿತಿಯ ಸದಸ್ಯರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು” ಎಂದು ಹೇಳಿದರು. ಗ್ರಾಮಪಂಚಾಯಿತಿ ಮಟ್ಟದಲ್ಲಿ ಫಲಾನುಭವಿಗಳ ಕುಂದುಕೊರತೆ ಸಭೆಗಳನ್ನು ಆಯೋಜಿಸುವಂತೆ ಸೂಚಿಸಿದರು.
ಸಭೆಯಲ್ಲಿ ಅಧಿಕಾರಿಗಳು ಅನರ್ಹ ಫಲಾನುಭವಿಗಳ ಪಟ್ಟಿ ಕುರಿತು ವಿವರಿಸಿದರು —
4 ಚಕ್ರ ವಾಹನ ಹೊಂದಿರುವವರು, ಜಿ.ಎಸ್.ಟಿ ಅಥವಾ ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ಅಥವಾ ಸಹಕಾರಿ ಸಂಸ್ಥೆಗಳಲ್ಲಿ ಖಾಯಂ ನೌಕರರಾಗಿರುವವರು, ವೃತ್ತಿಪರ ನೌಕರರು (ವೈದ್ಯರು, ಎಂಜಿನಿಯರ್ಗಳು, ವಕೀಲರು), ಗುತ್ತಿಗೆದಾರರು, ಎಪಿಎಂಸಿ ಟ್ರೇಡರ್ಗಳು, ಕಮಿಷನ್ ಏಜೆಂಟರು, ಬೀಜ ಮತ್ತು ಗೊಬ್ಬರ ಡೀಲರ್ಗಳು, ಅನುದಾನಿತ ಶಾಲೆ-ಕಾಲೇಜು ನೌಕರರು ಹಾಗೂ ಸರ್ಕಾರಿ ನಿಗಮ/ಮಂಡಳಿ ನೌಕರರ ಕುಟುಂಬ ಸದಸ್ಯರು ಬಿ.ಪಿ.ಎಲ್ ಅಥವಾ ಅಂತ್ಯೋದಯ ಪಡಿತರ ಚೀಟಿಗೆ ಅರ್ಹರಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನು ಓದಿ: ಭಾರತದ ಮೊದಲ ಖಗೋಳ ವೀಕ್ಷಣಾ ಉಪಗ್ರಹ Astrosatಗೆ 10 ವರ್ಷ
ವಿವಿಧ ಯೋಜನೆಗಳ ಪ್ರಗತಿ:
-
ಗೃಹಲಕ್ಷ್ಮಿ ಯೋಜನೆ: ಮಡಿಕೇರಿ ತಾಲ್ಲೂಕಿನಲ್ಲಿ ಒಟ್ಟು 30,307 ಫಲಾನುಭವಿಗಳಿಗೆ ರೂ.6.06 ಕೋಟಿ ಪಾವತಿಯಾಗಿದ್ದು, 784 ಐಟಿ/ಜಿಎಸ್ಟಿ ಪಾವತಿದಾರರನ್ನು ಅನರ್ಹರೆಂದು ತಿರಸ್ಕರಿಸಲಾಗಿದೆ.
-
ಶಕ್ತಿ ಯೋಜನೆ: ಸೆಪ್ಟೆಂಬರ್ ತಿಂಗಳಲ್ಲಿ 1.34 ಕೋಟಿ ಮಹಿಳಾ ಪ್ರಯಾಣಿಕರು ಯೋಜನೆ ಪ್ರಯೋಜನ ಪಡೆದಿದ್ದು, ಸಂಸ್ಥೆಗೆ ರೂ.56.97 ಕೋಟಿ ಆದಾಯ ಬಂದಿದೆ.
-
ಯುವನಿಧಿ ಯೋಜನೆ: ಆಗಸ್ಟ್ವರೆಗೆ 493 ವಿದ್ಯಾರ್ಥಿಗಳು ನೋಂದಾಯಿತರಾಗಿದ್ದು, ರೂ.12.04 ಲಕ್ಷ ಬಿಡುಗಡೆ ಮಾಡಲಾಗಿದೆ.
-
ಗೃಹಜ್ಯೋತಿ ಯೋಜನೆ: ಮಡಿಕೇರಿಯಲ್ಲಿ 51,521 ಸ್ಥಾವರಗಳು ನೋಂದಣಿಗೊಂಡಿದ್ದು, 99.23% ಪ್ರಗತಿ ಸಾಧಿಸಲಾಗಿದೆ.
-
ಅನ್ನಭಾಗ್ಯ ಯೋಜನೆ: ತಾಲ್ಲೂಕಿನಲ್ಲಿ ಒಟ್ಟು 38,363 ಪಡಿತರ ಚೀಟಿಗಳಿದ್ದು, 1,20,865 ಫಲಾನುಭವಿಗಳಿದ್ದಾರೆ. ಇವರಲ್ಲಿ 441 ಪಡಿತರ ಚೀಟಿದಾರರನ್ನು ಅನರ್ಹರೆಂದು ಗುರುತಿಸಲಾಗಿದೆ.
ಸಭೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಅಧಿಕಾರಿಗಳು, ಶಿಶು ಅಭಿವೃದ್ದಿ ಇಲಾಖೆ ಅಧಿಕಾರಿಗಳು, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ, ಕೆಎಸ್ಆರ್ಟಿಸಿ ವ್ಯವಸ್ಥಾಪಕರು ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.
