ಟಿ.ನರಸೀಪುರ : ತಾಲ್ಲೂಕಿನ ಮೂಗೂರು ಗ್ರಾಮದ ಐತಿಹಾಸಿಕ ಪ್ರಸಿದ್ಧಿ ಪಡೆದ ಶ್ರೀ ತ್ರಿಪುರ ಸುಂದರಿ ಅಮ್ಮ ನವರ ಜಾತ್ರಾ ಮಹೋತ್ಸವದ ಅಂಗವಾಗಿ ಕಡೆಯ ದಿನ ಬುಧವಾರದ ನಡೆದ ವೈಮಾಳಿಗೆ ಉತ್ಸವ ವೈಭವದಿಂದ ಸಹಸ್ರಾರು ಮಂದಿ ಗ್ರಾಮಸ್ಥರ ಸಮ್ಮುಖದಲ್ಲಿ ನಡೆಯಿತು.
ಚಿಗುರು ಕಡಿಯುವ ಕಾರ್ಯಕ್ರಮದ ಮಾರನೇ ದಿನ ಅಮ್ಮ ನವರಿಗೆ ದೇಗುಲದಲ್ಲಿ ವಿಶೇಷವಾಗಿ ಹೂವಿನ ಅಲಂಕಾರ ದೊಂದಿಗೆ ಬೆಳಗಿನ ಜಾವ ಅಭಿಷೇಕ ವಿಶೇಷ ಪೂಜೆಗಳು ನಡೆದವು ಜಾತ್ರೆ, ಧಾರ್ಮಿಕ ಆಚರಣೆಯಲ್ಲಿ ಸಂತೃಷ್ಠಿ ಹೊಂದಿದ ಅಮ್ಮ ನವರನ್ನು ರಾಜಗೋಪುರದ ಎದುರಿನ ಮಂಟಪದಲ್ಲಿ ಉಯ್ಯಾಲೆಯಲ್ಲಿದ್ದ ವೇಳೆ ಮಹಿಳೆಯರು ಅಮ್ಮ ನವರ ದರ್ಶನ ಪಡೆದು ನಮಿಸಿದರು.
ವಾದ್ಯ, ಗೋಷ್ಛಿಗಳ ನಡುವೆ ಅಮ್ಮನವರ ಉತ್ಸವ
ಬಳಿಕ ಗ್ರಾಮದ ಬಂಡಿ ಬೀದಿಯ ನಿವಾಸಿ ಬಸವಣ್ಣ ಸುಕಂದಮ್ಮ ರವರು ಪ್ರತಿ ವರ್ಷದಂತೆ ಈ ಬಾರಿಯೂ ಆಳು ಪಲ್ಲಕ್ಕಿ ಉತ್ಸವದ ಸೇವಾರ್ಥದಾರರಾಗಿ ಧಾರ್ಮಿಕ ಕಾರ್ಯ ನೇರವೇರಿಸಿದರು.
ಬೆಳಿಗ್ಗೆ 11. ಗಂಟೆಗೆ ವಿವಿಧ ಹೂವಿನಿಂದ ಅಲಂಕೃತಗೊಂಡ ಸೇವಕಿಯರ ಪಲ್ಲಕ್ಕಿ ಯಲ್ಲಿ ಅಮ್ಮ ನವರನ್ನು ಕೂರಿಸಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ತಮಟೆ, ವಾದ್ಯ ಗೋಷ್ಠಿ, ಗೊರವನ ಕುಣಿತ ದೊಂದಿಗೆ ಉತ್ಸವ ಸಾಗಿತು.

ದಾರಿಯುದ್ದಕ್ಕೂ ಬೆಲ್ಲದಾರತಿ
ದಾರಿಯುದ್ದಕ್ಕೂ ಅಮ್ಮ ನವರಿಗೆ ಸ್ಥಳೀಯರು ಬೆಲ್ಲದಾರತಿ, ಪೂಜೆ ಸಲ್ಲಿಸಿ ಅಲ್ಲಲ್ಲಿ ಸಿಹಿ ವಿತರಿಸಿದರು. ಜಾತ್ರೆಯ ವೈಮಾಳಿಗೆ ದಿನ ಗ್ರಾಮಸ್ಥರು ಗ್ರಾಮ ಹಾಗೂ ಕುಟುಂಬಸ್ಥರ ಒಳಿತಿಗಾಗಿ ಅಲ್ಲಲ್ಲಿ ಫಲಾಮೃತ ಪುಷ್ಪಾರ್ಚನೆ ಸಲ್ಲಿಸಿ ಭಕ್ತಿಯಿಂದ ನಮಿಸಿದರು.
ಅಮ್ಮನವರಿಗೆ ವಿವಿಧ ಬಗೆಯ ಹೂಗಳಿಂದ ಅಲಂಕಾರ
ದೇವಾಲಯದ ಬಳಿ ಆಗಮಿಸುತ್ತಿದ್ದಂತೆ ಉತ್ಸವದ ಸೇವಾರ್ಥದಾರರು ಪ್ರಸಾದ ವಿತರಿಸಿದರು. ನಂತರ ಅಮ್ಮ ನವರ ಉತ್ಸವ ಮೂರ್ತಿಯನ್ನು ದೇಗುಲಕ್ಕೆ ಕೊಂಡೊಯ್ದು ಮಧ್ಯಾಹ್ನ 3.30ರಲ್ಲಿ ಅಮ್ಮ ನವರ ಉತ್ಸವ ಮೂರ್ತಿ ಗೆ ವಿವಿಧ ಬಗೆಯ ಹೂವಿನಿಂದ ವಿಶೇಷ ಅಲಂಕಾರದೊಂದಿಗೆ ದೇಗುಲದ ಸುತ್ತ 12 ಸುತ್ತು ಪ್ರದಕ್ಷಿಣೆ ಯೊಂದಿಗೆ ಉತ್ಸವ ಸಾಗಿತು.
ಅಸಂಖ್ಯಾತ ಮಹಿಳಾ ಭಕ್ತರು ಹಾಜರಿ
ಜಾತ್ರೆಯ ಕಡೆಯ ದಿನ ಗ್ರಾಮದಲ್ಲಿನ ಎಲ್ಲಾ ಸ್ತ್ರೀಯರು ತಮ್ಮ ಕುಟುಂಬಸ್ಥರ ಜೊತೆಗೂಡಿ ದೇಗುಲದ ಆವರಣದಲ್ಲಿ ಜಮಾಯಿಸಿದ್ದರು. ಅಸಂಖ್ಯಾತ ಭಕ್ತರು ಇಷ್ಟಾರ್ಥ ಈಡೇರಲ್ಲೆಂದು ವೀಳ್ಯದೆಲೆ, ಹೂ, ಹಣ್ಣನ್ನು ಅಮ್ಮ ನವರಿಗೆ ಅರ್ಪಿಸಿ ಧನ್ಯತೆ ಮೆರೆದರು.ವೈಮಾಳಿಗೆಯ ಕೊನೆಯ ಸುತ್ತಿನಲ್ಲಿ ಅಮ್ಮ ನವರ ಅನುಗ್ರಹ ದೊರೆಯುವಂತೆ ಅರ್ಚಕರು ಪಂಚ ಪತ್ರ ಪುಷ್ಪಾರ್ಚ ದೊರೆಯುವಂತೆ ಅರ್ಚಕರು ಪಂಚ ಪತ್ರ ಪುಷ್ಪಾರ್ಚನೆ ಮಾಡುವರು. ದೇವಾಲಯದಲ್ಲಿ ನೆರೆದಿದ್ದ ಜನತೆ ವೈಮಾಳಿಗ ಉತ್ಸವದ ವೇಳೆ ದಕ್ಷಿಣ ದ್ವಾರದ ಮೂಲಕ ಅಮ್ಮ ನವರು ಒಳಪ್ರವೇಶಿಸುವಾಗ ಈಡುಗಾಯಿ ಸುರಿಮಳೆಗೈದು ಝೇಂಕಾರ ಮೊಳಗಿಸಿ ವೈಮಾಳಿಗೆ ಉತ್ಸವದ ವೈಭವವನ್ನು ಕಣ್ತುಂಬಿಕೊಂಡರು.

ಪೂರ್ಣಾಭಿಷೇಕಕ್ಕೆ ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ಮತ್ತು ಕುಟುಂಬ ವರ್ಗ ಹಾಜರು
ರಾತ್ರಿ ದೇಗುಲದಲ್ಲಿ ಅಮ್ಮ ನವರಿಗೆ ಪೂರ್ಣಾಭಿಷೇಕ ಹಾಗೂ ವಿಶೇಷ ಪೂಜೆಗೆ ಮಾಜಿ ಸಚಿವರಾದ ಸಿ.ಎಸ್. ಪುಟ್ಟ ರಾಜು ಹಾಗೂ ಕುಟುಂಬ ವರ್ಗದವರು ಆಗಮಿಸಿದರು. ಗ್ರಾಮಸ್ಥರ ಸಮ್ಮುಖದಲ್ಲಿ ಮಹಾ ಮಂಗಳಾರತಿ ನೆರವೇರಿಸಿ ಮೂಗೂರು ಗ್ರಾಮ ಸೇರಿದಂತೆ ರಾಜ್ಯದ ಜನತೆಗೆ ಸನ್ಮಂಗಳ ಉಂಟು ಮಾಡಲೆಂದು ಅಮ್ಮನವರ ಬಳಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.
ವೈಭವದ ವೈಯಾರದ ವೈಮಾಳಿಗೆ ಉತ್ಸವದೊಂದಿಗೆ ಮೂಗೂರು ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿತು.
ಎಂ.ನಾಗೇಂದ್ರಕುಮಾರ್
