“..ಲೋ ಲೋಕೀ, ಹತ್ತು ನಿಮಿಷದಲ್ಲಿ ರೆಡಿಯಾಗಿ ಬರ್ತೀವಿ ಅಂತ ವಾಷ್ ರೂಮ್ಗೆ ಹೋದ ಅವರಿಬ್ಬರೂ ಮೂವತ್ತು ನಿಮಿಷ ಆದ್ರೂ ಪತ್ತೆ ಇಲ್ವಲ್ಲೋ, ಕಾಲ್ ಮಾಡಿ ಕೇಳು ಬೇಗ.. ಆ ಗುಡಿ ಪೂಜಾರಿ ,ಹೆಚ್ಚು ಹೊತ್ತು ಕಾಯ್ತಾ ನಿಲ್ಲಲ್ಲ ಕಣೋ, ಈಗಾಗ್ಲೇ ಎರಡು ಸರಿ ಫೋನ್ ಮಾಡ್ದ ನನಗೆ.. ಸ್ವಲ್ಪ ಜಾಸ್ತಿನೇ ದುಡ್ಡು ಕೊಡ್ತೀವಿ ಅಂದಿದ್ದಕ್ಕೆ ಇಷ್ಟು ಹೊತ್ತು ಕಾಯ್ತಾ ಇದ್ದಾನೆ..” ಎಂದು ಚಡಪಡಿಸಿದ ವಿಚಿತ್ರ ಜೀನ್ಸ್ ಪ್ಯಾಂಟ್ ಮೇಲೆ ಪರಿಶುದ್ಧ ಬಿಳಿ ಬಣ್ಣದ ಶರಟನ್ನು ತೊಟ್ಟುಕೊಂಡಿದ್ದ ಇಬ್ಬರೂ ಯುವಕರಲ್ಲಿ ತುಸು ಕುಳ್ಳಗಿದ್ದವ ಒಬ್ಬ. ಅವನ ಪೇಚಾಟವನ್ನು ಉದಾಸೀನ ಮಾಡುತ್ತಾ ಇನ್ನೊಬ್ಬ ತುಸು ಹ್ಯಾಂಡ್ಸಮ್ ಆಗಿದ್ದ ಎತ್ತರದ ನಿಲುವಿನ ಯುವಕ ನಗುತ್ತಾ…
“..ಇರೋ ಬರ್ತಾರೆ, ಸೀರೆಗೀರೆ ಉಟ್ಕೊಂಡು ರೆಡಿ ಆಗೋದು ಅಂದ್ರೆ ಸುಮ್ಮನೆ ಅಲ್ಲ. ಅರ್ಧ ಗಂಟೆ.., ಇಲ್ಲ ಅಂದ್ರೆ ಒಂದು ಗಂಟೆ ,ಆಗ್ಲಿ ಬಿಡು…, ಆ ಪೂಜಾರಿಗೆ ಇನ್ನು ಸ್ವಲ್ಪ ಜಾಸ್ತಿ ದುಡ್ಡು ಬಿಸಾಕಿದ್ರೆ ಆಯ್ತು.. ಇಡೀ ದಿನ ಎಲ್ಲಾ ನಮಗೋಸ್ಕರ ಕಾಯ್ತಾನೆ ಬೇಕಾದ್ರೆ..” ಎಂದು ಧಿಮಾಕಿನಿಂದ ನುಡಿದು ಜೇಬಿನಿಂದ ಚ್ಯುಯಿಂಗಮ್ ತೆಗೆದು ಕುಳ್ಳನಿಗೊಂದು ಕೊಟ್ಟು ತಾನೊಂದು ಬಾಯಿಗೆ ಹಾಕಿಕೊಂಡು ಅಗಿಯತೊಡಗಿದ. ತನ್ನ ಗೆಳೆಯ ಯಾವುದೇ ಚಿಂತೆ ಇಲ್ಲದೆ ಆರಾಮವಾಗಿ ಇರುವುದನ್ನು ಕಂಡು ಮತ್ತಷ್ಟು ಸಹನೆ ಕಳೆದುಕೊಂಡ ಆ ಕುಳ್ಳ ಯುವಕ.
“ಲೋ, ಏನು ನೀನು.. ಹೀಗೆ ಅಂತಿದ್ದೀಯಾ! ಒಳ್ಳೆಯ ಮುಹೂರ್ತ ಮೀರಿ ಹೋಗುತ್ತೆ ಅಂತ ಪೂಜಾರಿ ಬಡ್ಕೋತಿದ್ದಾನೆ.. ನೀನು ನೋಡಿದ್ರೆ ಇಷ್ಟು ಆರಾಮವಾಗಿ ಇದ್ದೀಯಾ..ಛೇ” ಎಂದು ಬೇಸರ ಭಾವ ವ್ಯಕ್ತಪಡಿಸಿದಾಗ ಅವನ ಗೆಳೆಯ,
“..ಮುಹೂರ್ತ ಅಂತೆ.. ಮುಹೂರ್ತ!! ಅಲ್ಲ ಕಣೋ ಮದುವೆ ಏನು ನಂದಾ ..? ಇಲ್ಲ… ಆ ಪೂಜಾರಿದಾ? ಸುಮ್ನಿರು ಅಂತ ಹೇಳು ಅವ್ನಿಗೆ.. ನಾನು ಯಾವುದಾದ್ರು ಪಾರ್ಕಲ್ಲಿ ಅವಳಿಗೆ ತಾಳಿ ಕಟ್ಟಣ ಅಂತ ಇದ್ದೆ! ನೀನೇ ಗುಡಿಲಿ ಮದುವೆ ಆಗಿ ಅಂದಿದ್ದು, ಇನ್ನೊಂದು ಹತ್ತು ನಿಮಿಷ ಕಾಯೋಕೆ ಹೇಳು ಅವ್ನಿಗೆ. ಈಗಾಗಲೇ ಎರಡು ಮದುವೆಯಾಗಿ ಕೈ ಕೊಟ್ಟಿರೋ ನನಗೆ ಗೊತ್ತಿಲ್ವಾ ?ಒಳ್ಳೆಯ ಮುಹೂರ್ತ ಯಾವುದು ಅಂತ..” ಎಂದು ಉದಾಸೀನ ಭಾವ ವ್ಯಕ್ತಪಡಿಸುತ್ತಲೇ ಕರೆ ಮಾಡಿದ. ಅತ್ತಲಿಂದ ಕರೆ ಸ್ವೀಕರಿಸದಿದ್ದಾಗ ‘ತಥ್’ ಎಂದು ಉದ್ಗರಿಸುತ್ತ ಬೇಸರಗೊಂಡು ಮೊಬೈಲನ್ನು ಜೇಬಿಗೆ ತುರುಕಿಕೊಂಡು
“..ನೋಡು ಕಾಲ್ ಮಾಡಿದ್ರೆ ರಿಸೀವ್ ಮಾಡ್ತಿಲ್ಲ ಅವ್ಳು..” ಅಂದಾಗ ಆ ಕುಳ್ಳ ಗೆಳೆಯ ಆಘಾತಕ್ಕೆ ಒಳಗಾದವನಂತೆ ಎವೆಯಿಕ್ಕದೆ ತನ್ನ ಗೆಳೆಯನನ್ನೇ ನೋಡುತ್ತಿದ್ದ. ಅದನ್ನು ಕಂಡು
“..ಯಾಕೋ!! ಏನಾಯ್ತು ನಿಂಗೆ!! ಒಳ್ಳೆ ಗರ ಬಡಿದೋನಂಗೆ ಕೂತಿದ್ದೀಯಾ..?” ಎಂದು ಅವನ ಬೆನ್ನಿನ ಮೇಲೆ ಗುದ್ದುತ್ತಾ ಪ್ರಶ್ನಿಸಿದಾಗ ವಾಸ್ತವಕ್ಕೆ ಬಂದವನಂತೆ ಆ ಕುಳ್ಳ ಮೈ ಕೊಡುವುತ್ತ
“..ಏಯ್ ಲೋಕಿ, ಏನಂದೆ ನೀನು?! ಈಗಾಗಲೇ ನೀನು ಎರಡು ಮದುವೆಯಾಗಿದ್ದೀಯಾ!!! ಅಥವಾ ತಮಾಷೆ ಮಾಡ್ತಿದ್ದೀ ಏನೋ..?” ಎಂದು ನಂಬದವನಂತೆ ಕೇಳಿದಾಗ ಅವನು ಜೋರಾಗಿ ನಗುತ್ತಾ ಕುಳ್ಳನ ಬೆನ್ನನ್ನು ವಿಚಿತ್ರವಾಗಿ ಸವರುತ್ತಾ
“..ತಮಾಷೆಯಲ್ಲ ಮಗಾ! ನಿಜ ಕಣೋ, ನಾಲ್ಕು ವರ್ಷದ ಹಿಂದೆ ತಮಿಳ್ನಾಡಲ್ಲಿ ಸಿಮೆಂಟ್ ಗೋಡನ್ನಲ್ಲಿ ಕೆಲಸ ಮಾಡುವಾಗ ಅದರ ಓನರ್ ಮಗಳನ್ನು ಲವ್ ಮಾಡಿ ಮದುವೆಯಾಗಿ ಕೈಗೊಂದು ಮಗು ಕೊಟ್ಟು ಎಸ್ಕೇಪ್ ಆಗಿ ಮಂಗಳೂರಿಗೆ ಬಂದೆ.. ಅಲ್ಲಿ ಒಂದು ಗ್ಯಾರೇಜ್ ಅಲ್ಲಿ ಕೆಲಸಕ್ಕೆ ಸೇರಿ ಮೂರೇ ತಿಂಗಳಿಗೆ ಪಕ್ಕದಲ್ಲೇ ಇದ್ದ ಹಾರ್ಡ್ವೇರ್ ಅಂಗಡಿ ಓನರ್ ಮಗಳನ್ನು ಕ್ಯಾಚ್ ಹಾಕಿ ಮದುವೆ ಮಾಡಿಕೊಂಡು ಬೆಂಗಳೂರಿಗೆ ಕರ್ಕೊಂಡು ಹೋಗಿ ನಾಲ್ಕು ತಿಂಗಳು ಸಂಸಾರ ಮಾಡಿ ಅವಳು ಮನೆ ಬಿಟ್ಟು ಬರುವಾಗ ತಂದಿದ್ದ ಐದು ಲಕ್ಷ ರೂಪಾಯಿ ಮತ್ತೆ ಒಡವೆನಾ ನಾಜೂಕಾಗಿ ಕಿತ್ಕೊಂಡು ಅಲ್ಲಿಂದ ಕಾಲ್ ಕಿತ್ತೆ!! ಈಗ ಇವಳು. ರಿಟೈರ್ಡ್ ಮಾಷ್ಟ್ರು ಮಗಳು! ಅವರ ಅಕ್ಕನ ಮದುವೆಗೆ ಅಂತ ಮಾಡ್ಸಿರೋ ಅಷ್ಟು ಒಡವೆ ಮತ್ತೆ ಮದ್ವೆ ಖರ್ಚಿಗೆ ಅಂತ ಬೀರುನಲ್ಲಿ ಇಟ್ಟಿದ್ದ ಹತ್ತು ಲಕ್ಷ ರೂಪಾಯಿ ಎತ್ಕೊಂಡು ಬಂದಿದ್ದಾಳಂತೆ! ಇನ್ನೊಂದು ವಿಚಿತ್ರ ಏನು ಗೊತ್ತ ಮಗ?, ನನಗೆ ತಾಳಿ ತರೋ ಕಷ್ಟಾನೂ ಕೊಟ್ಟಿಲ್ಲ.. ಅವಳೇ ತಂದಿದ್ದಾಳಂತೆ ಗೊತ್ತಾ! ಇರ್ಲಿ ಅಂತ ನಾನು ರೇಷ್ಮೆ ಸೀರೆ, ಹೂವು, ಬಳೆ ಕೊಡಿಸಿದ್ದೀನಿ ಏನಾದರೂ ಅಂದುಕೊಂಡುಬಿಟ್ಟಾಳು ಅಂತ. ಈಗ ಸದ್ಯಕ್ಕೆ ಎರಡು ಹೂವಿನ ಹಾರ ತಗೋಬೇಕು ಅಷ್ಟೇ. ಮದುವೆ ಮಾಡಿಕೊಂಡು ಸೀದಾ ಬಾಂಬೆ ಬಸ್ ಹತ್ತೋದೇ! ಅಲ್ಲಿ ನನ್ ಫ್ರೆಂಡ್ ಇದ್ದಾನೆ. ಎಲ್ಲಾ ವ್ಯವಸ್ಥೆ ಆಗಿದೆ. ಇನ್ನು ಆರು ತಿಂಗಳು ಕಾಟ ಕೊಟ್ಟು ಟಾಟಾ ಹೇಳಿ ವಾಪಸ್ಸು ಬರ್ತೀನಿ.. ನೋಡ್ತಿರೋ!” ಎಂದು ವಿಚಿತ್ರವಾಗಿ ನಕ್ಕು ತನ್ನ ದೂರ್ತಬುದ್ಧಿಯ..ಕೀಚಕ ಕೆಲಸಗಳ ಯಶೋಗಾಥೆಗೆ ತಾನೇ ಕಾಲರ್ ಕುಣಿಸಿಕೊಂಡು ಗಹಗಹಿಸಿ ನಕ್ಕ. ಅವನ ಮಾತುಗಳನ್ನು ಆಲಿಸಿ ದಿಗ್ಭ್ರಾಂತಿಗೆ ಒಳಗಾದವನಂತೆ ಆ ಕುಳ್ಳ ದಿಢೀರನೆ ಅಲ್ಲಿಂದ ಎದ್ದುನಿಂತು ಅಪರಾಧಿ ಭಾವದಿಂದ
“..ಲೋ ಲೋಕೀ, ಬ್ಯಾಡ ಮಗಾ!! ಪಾಪ ಕಣೋ ಅವ್ಳು ನಿನ್ನೆ ನಂಬಿ ಬಂದಿದ್ದಾಳೆ.. ಕೈ ಬಿಡಬೇಡ ಕಣೋ.. ನಾನು ಬೇರೆ ನಿನ್ನ ಆರೇಂಜಿಗೆ ಹೊಗಳಿದ್ದೇನೆ ಅವಳ ಮುಂದೆ. ನೋಡು ಹಿಂದೆ ಏನಾದ್ರೂ ಮಾಡಿರು ನೀನು, ಆದ್ರೇ ಇವಳಿಗೆ ಅನ್ಯಾಯ ಮಾಡಬೇಡ ಪ್ಲೀಸ್, ಅವ್ರಪ್ಪ ನನ್ಗೆ ಟೀಚರ್ ಆಗಿದ್ರು ಕಣೋ..” ಎಂದು ಅವಲತ್ತುಕೊಂಡ. ಕುಳ್ಳನ ಅವಸ್ಥೆ ನೋಡಿ ಮತ್ತಷ್ಟು ಮಜಾ ತೆಗೆದುಕೊಳ್ಳುತ್ತ ತಾನು ಮೇಲೆದ್ದು ಅವನ ಕೈ ಹಿಡಿದು ನಾಟಕೀಯವಾಗಿ ತಲೆ ಆಡಿಸುತ್ತ
“..ಸರಿ ..,ಸರಿ. ಬಾ.. ಕೂತ್ಕೋ, ನಿನಗೋಸ್ಕರ ಅವಳ ಜೊತೆ ಕಷ್ಟಪಟ್ಟು ಸಂಸಾರ ಮಾಡ್ಕೊಂಡು ಕೊನೆವರೆಗೂ ಬಾಳೋಕೆ ಪ್ರಯತ್ನ ಪಡ್ತೀನಿ ಆಯ್ತಾ..” ಎಂದು ಮಹದುಪಕಾರ ಮಾಡಿದವನಂತೆ ಪೋಸು ಕೊಡುತ್ತಾ ಮರಳಿ ಬೆಂಚಿನ ಮೇಲೆ ಕುಳ್ಳನನ್ನು ಕೂರಿಸಿಕೊಂಡು ಕುಳಿತ. ಅದೇ ಬೆಂಚಿನ ಇನ್ನೊಂದು ತುದಿಯಲ್ಲಿ ಓರ್ವ ನಡು ವಯಸ್ಸಿನ ಮಹಿಳೆ ಕಣ್ಣುಮುಚ್ಚಿ ಕುಳಿತಿದ್ದಳು. ಬೇಡವೆಂದರೂ ಇವರಿಬ್ಬರ ಅಸಹನೀಯ ನಡವಳಿಕೆ, ವಿಚಿತ್ರ ಮಾತುಗಳು ಅವಳ ಗಮನಕ್ಕೆ ಬಂದಿದ್ದವು. ತುಸು ಅನುಮಾನ ಹುಟ್ಟಿಸುತ್ತ ಕುತೂಹಲವನ್ನು ಕೆರಳಿಸಿದ್ದವು. ತಕ್ಷಣ ತನ್ನ ಕೈಲಿದ್ದ ಮೊಬೈಲ್ ಆನ್ ಮಾಡಿ ವಿಡಿಯೋ ರೆಕಾರ್ಡ್ ಮಾಡುತ್ತ ಇವರಿಬ್ಬರ ಗಮನಕ್ಕೆ ಬಾರದಂತೆ ನಿದ್ರೆ ಆವರಿಸಿದವಳಂತೆ ನಟಿಸುತ್ತಾ ಬೆಂಚಿಗೆ ಒರಗಿದ್ದಳು.
**************
ಒಬ್ಬ ದುರುಳನ ಮೋಹದ ಪಾಶಕ್ಕೆ ಸಿಕ್ಕು ಅಮಾಯಕ ಹೆಣ್ಣುಮಗಳು ಬಲಿಯಾಗಬಾರದು..ಹೇಗಾದರು ತನಗೆ ತಡೆಯಲು ಸಾಧ್ಯ ಆದರೆ ಸಾಕು ಎಂದುಕೊಳ್ಳುತ್ತಲೇ ಬಸ್ ನಿಲ್ದಾಣದ ಮಹಿಳಾ ಸೌಚಾಲಯದ ಒಳಗೆ ಪ್ರವೇಶಿಸುತ್ತಿದ್ದಂತೆ ಆ ಮಹಿಳೆಗೆ ಅಲ್ಲಿಕಂಡ ದೃಶ್ಯ ಅವಳ ಊಹೆಯನ್ನು ನಿಜವಾಗಿಸಿತ್ತು. ಕಡೆಯದಾಗಿ ಎಂಬಂತೆ ವಧುವಿನ ಅಲಂಕಾರ ಮುಗಿದು ಅವಳ ಸೀರೆಯ ನೆರಿಗೆಯನ್ನು ತೀಡಿ ಹಿಡಿಯುತ್ತಿದ್ದಳು ಇನ್ನೋರ್ವ ಯುವತಿ. ಇನ್ನು ತಡಮಾಡುವುದು ಸರಿಯಲ್ಲ ಎಂದು ಭಾವಿಸಿದ ಆ ಮಹಿಳೆ ವಧುವಿನ ವೇಷದಲ್ಲಿದ್ದ ಯುವತಿಯ ಸಮೀಪಕ್ಕೆ ಧಾವಿಸಿ ಅವಸರವಸರವಾಗಿ ತನ್ನ ಮೊಬೈಲ್ ಆನ್ ಮಾಡಿ ಅವಳ ಎದುರು ಹಿಡಿದಳು. ಅದರಲ್ಲಿ ಸೆರಿಯಾಗಿದ್ದ ಆ ಯುವಕರ ಮಾತುಕತೆ, ಸನ್ನಿವೇಶವನ್ನು ಕಣ್ತುಂಬಿಕೊಂಡ ಆ ಯುವತಿಗೆ ದುಗುಡ ಉಮ್ಮಳಿಸಿಬಂದು ಕಣ್ಣೀರು ಆವರಿಸಿಕೊಂಡು ದೃಷ್ಟಿ ಮಂಜಾಯಿತು. ಆಕೆಯ ದೇಹ ಪೂರ ಬಿಸಿಯೇರಿ ಬೆವರಲಾರಂಭಿಸಿದಳು. ಭಯ ಹಾಗೂ ಅವಮಾನ, ಅಪಮಾನ, ಅಪರಾಧಿ..ಹೀಗೆ ಎಲ್ಲಾ ವಿಪ್ಲವಗಳು ಒಮ್ಮೆಲೆ ಆವರಿಸಿ ತತ್ತರಕ್ಕೆ ಒಳಗಾಗಿ ಪಶ್ಚಾತ್ತಾಪ ಭಾವದಿಂದ ಕಂಪಿಸಲಾರಂಭಿಸಿದಳು. ಆ ಯುವತಿಯ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡ ಆ ಮಹಿಳೆ ಅತ್ಯಂತ ಆಪ್ತ ಭಾವದಿಂದ ನಡುಗುತ್ತಿದ್ದ ಅವಳ ಕೈ ಹಿಡಿದು
“..ನೋಡಮ್ಮ, ಇನ್ನೂ ಸಮಯ ಮಿಂಚಿಲ್ಲ! ಒಂದು ಒಳ್ಳೆಯ ನಿರ್ಧಾರ ಮಾಡಿ ನಿನ್ನ ಜೀವನ ರೂಪಿಸಿಕೋ..ಹೆಣ್ಣು ಮಕ್ಕಳು ನಾವು ಚೆನ್ನಾಗಿ ಆಲೋಚಿಸಿ ಹಿಂದೆ ಮುಂದೆ ಏನು ಎತ್ತ ಎಂದು ಅವಲೋಕಿಸಿ ನಮ್ಮ ಜೀವನದ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒಳಿತು. ನೀನು ಯಾರೋ ನನಗೆ ಗೊತ್ತಿಲ್ಲ, ಆದರೆ ಒಬ್ಬ ಅಮಾಯಕ ಹೆಣ್ಣು ಮಗಳಿಗೆ ಅನ್ಯಾಯ ಆಗಬಾರದು ಎಂಬುದು ನನ್ನ ಉದ್ದೇಶ. ನಿಮ್ಮ ತಂದೆ ಶಾಲಾ ಶಿಕ್ಷಕರು ಎಂದು ತಿಳಿಯಿತು.. ನಿನಗೂ ಒಳ್ಳೆಯ ಸಂಸ್ಕಾರ ಹೇಳಿಕೊಟ್ಟಿರುತ್ತಾರೆ ಎಂದು ಭಾವಿಸುತ್ತೇನೆ. ನನಗೆ ಗೊತ್ತಿದೆ ಈ ಹರೆಯದಲ್ಲಿ ದುಡುಕುವುದು ಸಹಜ. ಕೆಲವು ಸಲ ನಮ್ಮ ಬುದ್ಧಿಯನ್ನು ಮೀರಿ ಮನಸ್ಸು ಆಕರ್ಷಣೆಗಳತ್ತ ವಾಲೋದು ಸಹಜ. ನೋಡೋಕೆ ನೀನು ಒಳ್ಳೆಯ ಹುಡುಗಿಯಂತೆ ಕಾಣುತ್ತೀಯಾ.. ಯೋಚನೆ ಮಾಡು, ನಿನ್ನ ತಂದೆ ನಿಮ್ಮ ಅಕ್ಕನ ಮದುವೆಗೆ ಅಂತ ಕೂಡಿಟ್ಟ ಹಣ, ಮಾಡಿಸಿರುವ ಒಡವೆಯ ಮೌಲ್ಯ ಎಂತದ್ದು ಅಂತ ಯೋಚನೆ ಮಾಡು, ನಿನ್ನನ್ನ ಪಾಪದ ಕೂಪಕ್ಕೆ ತಳ್ಳೋಕೆ ಸಿದ್ದನಾಗಿರುವ ಆ ಪಾಪಿಷ್ಟನ ಜೊತೆ ಹೋಗ್ತೀಯೋ? ಅಥವಾ ಮನೆ, ಕುಟುಂಬದ ಮನಸ್ಸುಗಳ ಜೊತೆಗೆ ನಿನ್ನ ಸ್ವಾಭಿಮಾನದ, ಸ್ವ ಗೌರವಗಳನ್ನು ಉಳಿಸಿಕೊಳ್ತಿಯೋ?, ಅದು ನಿನಗೆ ಬಿಟ್ಟದ್ದು..” ಎಂದು ಹೇಳಿ ಅತ್ಯಂತ ಮಮತೆಯಿಂದ ಆ ಯುವತಿಯ ತಲೆದಡವಿ ಇನ್ನು ತನ್ನ ಉದ್ದೇಶ ಈಡೇರುವುದು ಆ ದೇವರಿಗೆ ಬಿಟ್ಟದ್ದು ಎಂದುಕೊಂಡು ಆ ಮಹಿಳೆ ಹಿಂತಿರುಗಿ ನೋಡದೇ ಹೊರಗೆ ಬಂದು ತಾನು ಮೊದಲು ಕುಳಿತಿದ್ದ ಜಾಗದತ್ತ ಕಣ್ಣು ಹಾಯಿಸಿದಾಗ ಈ ಮೊದಲೇ ತಾನು ಮಾಡಿದ್ದ ವಿಡಿಯೋ ಅನ್ನು ಬಸ್ ನಿಲ್ದಾಣದ ಪಕ್ಕವೇ ಇದ್ದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ಲ ಪರಿಚಯಸ್ಥ ಪೊಲೀಸ್ ಒಬ್ಬರಿಗೆ ಕಳುಹಿಸಿದುದರ ಪರಿಣಾಮ ಅದಾಗಲೇ ಆ ಪೊಲೀಸ್ ಅಧಿಕಾರಿ ಆಗಮಿಸಿ ಆ ಯುವಕರನ್ನು ವಿಚಾರಣೆಗೆ ಒಳಪಡಿಸುತ್ತ ಇಬ್ಬರನ್ನು ತಮ್ಮ ಜೊತೆ ಎಳೆದುಕೊಂಡು ಹೊರಟಿದ್ದ ದೃಶ್ಯವನ್ನು ಕಣ್ತುಂಬಿಕೊಂಡು ನೆಮ್ಮದಿಯ ನಿಟ್ಟುಸಿರು ಹೊರಹಾಕಿ ನಸುನಗುತ್ತಾ.. ವಿಪರೀತ ಬಿಸಿಲು ಶಕೆ, ದಾಹ ಎಂದುಕೊಳ್ಳುತ್ತಲೇ ಜ್ಯೂಸ್ ಅಂಗಡಿಗೆ ಹೋಗಿ ಒಂದು ಲೋಟ ತಣ್ಣನೆಯ ಹೆರಳೇಕಾಯಿ ಪಾನಕವನ್ನು ಕುಡಿದು ಹತ್ತು ನಿಮಿಷ ಕುಳಿತು ವಿಶ್ರಮಿಸಿಕೊಂಡು ಕುತೂಹಲ ತಡೆಯಲಾರದೆ ಮತ್ತೆ ಮಹಿಳಾ ಶೌಚಾಲಯಕ್ಕೆ ಹೋಗಿ ನೋಡಿದಾಗ ಒಳಗೆ ಆ ಯುವತಿಯರು ಕಾಣಿಸಲಿಲ್ಲ. ಬದಲಿಗೆ ಅಲ್ಲಿ ಮೂಲೆಯಲ್ಲಿದ್ದ ಕಸದ ಬುಟ್ಟಿಯ ಮೇಲೆ ಕಿತ್ತು ಎಸೆದ ಸ್ಥಿತಿಯಲ್ಲಿ ಬಿದ್ದಿದ್ದವು. ರೇಷ್ಮೆ ಸೀರೆ, ಮಲ್ಲಿಗೆ ಕನಕಾಂಬರ ಹೂಗಳ ದಂಡೆಯನ್ನು ಒಳಗೊಂಡಂತೆ ವಧುವಿನ ವೇಷದ ಅಲಂಕಾರಿಕ ಸಾಮಗ್ರಿಗಳು!
ಅಬ್ಬಾ…! ನನ್ನ ಸಮಯ ಪ್ರಜ್ಞೆಗೆ ಗೆಲುವಾಯಿತು. ಎಂದುಕೊಂಡು ಒಂದೊಳ್ಳೆ ಕೆಲಸ ಮಾಡಿದ ಸಾರ್ಥಕ ಭಾವದಿಂದ ಅದುವರೆಗೂ ತಡೆ ಹಿಡಿದಿದ್ದ ತನ್ನ ದೇಹದ ಜಲಭಾದೆಗೆ ಅಂತ್ಯ ಕಾಣಿಸಿ ಹಸನ್ಮುಖಿಯಾಗಿ ಹೊರಬಂದಳು.
********
🖊️ *ಜಯಂತಿ ಚಂದ್ರಶೇಖರ್*
*ಶ್ರವಣಬೆಳಗೊಳ*
