ಕೃಷ್ಣ ರಾಜ ಸಾಗರ (ಕೆಆರ್ಎಸ್) ಅಣೆಕಟ್ಟಿಗೆ ಮೊದಲು ಅಡಿಪಾಯ ಹಾಕಿದವರು ಟಿಪ್ಪು ಸುಲ್ತಾನ್ (Tipu Sultan)ಎಂಬ ಕರ್ನಾಟಕ ಸಮಾಜ ಕಲ್ಯಾಣ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್ಸಿ ಮಹದೇವಪ್ಪ (Minister HC Mahadevappa) ಅವರ ಹೇಳಿಕೆ ವಿವಾದಕ್ಕೆ ಕಾರಣ ಆಗಿದೆ.
ಶ್ರೀರಂಗಪಟ್ಟಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನಕ್ಕೆ ಶಿಲಾನ್ಯಾಸ ನೆರವೇರಿಸಿದ ನಂತರ, ಮಹಾದೇವಪ್ಪ, “ಟಿಪ್ಪು ಸುಲ್ತಾನ್ ಶಿಲಾನ್ಯಾಸ ಮಾಡಿದರು, ಆದರೆ ಇದನ್ನು ಒಪ್ಪಿಕೊಳ್ಳಲು ಯಾರೂ ಧೈರ್ಯ ಮಾಡುವುದಿಲ್ಲ. ಕೆ.ಆರ್.ಎಸ್. ಅಣೆಕಟ್ಟಿನ ಮುಖ್ಯ ದ್ವಾರದಲ್ಲಿ ಇದಕ್ಕೆ ಸ್ಪಷ್ಟ ಪುರಾವೆಗಳಿವೆ” ಎಂದು ಹೇಳಿದರು.
ಇತಿಹಾಸವನ್ನು ಅರ್ಥಮಾಡಿಕೊಳ್ಳದವರು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಟಿಪ್ಪು ಜಾತ್ಯತೀತ ಆಡಳಿತಗಾರ. ಮಸೀದಿ ಮತ್ತು ದೇವಸ್ಥಾನ ಪಕ್ಕದಲ್ಲೇ ಇವೆ. ಮಸೀದಿಯಲ್ಲಿ ಅಲ್ಲಾಹು ಅಕ್ಬರ್ ಎಂಬ ಘೋಷಣೆ ಕೇಳಿಬರುತ್ತದೆ ಮತ್ತು ದೇವಸ್ಥಾನದ ಗಂಟೆಗಳು ಒಂದೇ ಸಮಯದಲ್ಲಿ ಮೊಳಗುತ್ತವೆ. ಟಿಪ್ಪು ಶಾಂತತೆ ಮತ್ತು ಸ್ವೀಕಾರದಿಂದ ಎರಡನ್ನೂ ಆಲಿಸಿದನು ಎಂದು ಹೇಳಿದರು.
ಇನ್ನು ಆಡಳಿತಗಾರನ ಕೊಡುಗೆಗಳನ್ನು ಶ್ಲಾಘಿಸಿದ ಮಹಾದೇವಪ್ಪ, ಅವರು ಶೋಷಣಾ ದೇವದಾಸಿ ಪದ್ಧತಿಯನ್ನು ರದ್ದುಗೊಳಿಸಿದರು, ಶ್ರೀಮಂತರಿಗೆ ಭೂಮಿ ನೀಡುವುದನ್ನು ವಿರೋಧಿಸಿದರು, ಗುಬ್ಬಿ ಮತ್ತು ಹರಿಹರ ವಾಣಿಜ್ಯ ಕೇಂದ್ರಗಳನ್ನು ಮಾಡಿದರು ಮತ್ತು ಭಾರತಕ್ಕೆ ರೇಷ್ಮೆ ಕೃಷಿಯನ್ನು ಪರಿಚಯಿಸಿದರು ಎಂದು ಹೇಳಿದರು. “ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರ. ಮೈಸೂರು ಸಾಮ್ರಾಜ್ಯದ ಅರಮನೆ ಶ್ರೀರಂಗಪಟ್ಟಣದಲ್ಲಿದೆ ಎಂದು ಅವರು ಹೇಳಿದರು.
ಈ ಹೇಳಿಕೆ ವಿವಾದಕ್ಕೆ ಕಾರಣ ಆಗಿದ್ದು ಹೇಗೆ?
ಈ ಡ್ಯಾಂ ಅನ್ನು ಸಂಪೂರ್ಣವಾಗಿ ಆರಂಭದಿಂದ ಅಂತ್ಯದವರೆಗೆ ನಾಲ್ವಡಿಯವರೇ ನಿರ್ಮಾಣ ಮಾಡಿದರು ಎಂದು ಹೇಳಲಾಗುತ್ತಿದೆ. ಇದಕ್ಕೆ ಇತಿಹಾಸ ತಜ್ಞರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಐತಿಹಾಸಿಕವಾಗಿ ಅವರ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ಹಾಗಂದ ಮಾತ್ರಕ್ಕೆ ಅದನ್ನು ಟೀಕೆ ಸಹ ಮಾಡಲು ಆಗುವುದಿಲ್ಲ.

ಇಂದಿನ ಮಂಡ್ಯ ಜಿಲ್ಲೆ ಹಾಗೂ ಹಿಂದಿನ ಮೈಸೂರು ರಾಜ್ಯದಲ್ಲಿ ಆಳ್ವಿಕೆ ಮಾಡಿದ ಎಲ್ಲರೂ ಉತ್ತಮವಾದ ಕೊಡುಗೆ ನೀಡಿದ್ದಾರೆ. ಪಾಂಡವಪುರದ ತಲೆನೆರೆ ಗ್ರಾಮದಲ್ಲಿ ೯೦೫ ನಲ್ಲಿ ಪ್ರಪ್ರಥಮ ಬಾರಿಗೆ ಮೊದಲ ಡ್ಯಾಂ ಅನ್ನು ಕಾವೇರಿ ನದಿಗೆ ಗಂಗರು ನಿರ್ಮಾಣ ಮಾಡಿದ್ದರು ಎಂಬ ಇತಿಹಾಸ ಇದೆ.
ಇದಾ ನಂತರ ಮಂಡ್ಯ ಜಿಲ್ಲೆಯಲ್ಲೇ ಮಾಧವ ಮಂತ್ರಿ ಎಂಬ ಡ್ಯಾಂ ಅನ್ನು ಹೊಯ್ಸಳರು ನಿರ್ಮಾಣ ಮಾಡಿದರು. ಈ ಎರಡೂ ಡ್ಯಾಂ ನಿರ್ಮಾಣದ ಬಗ್ಗೆ ಶಾಸನ ಇದೆ. ಇನ್ನು ಇತಿಹಾಸ ಪ್ರಕಾರ ಮೂರನೇ ಡ್ಯಾಂ ಅನ್ನು ಸಹ ನಿರ್ಮಾಣ ಮಾಡಬೇಕು ಎಂದು ೧೭೯೧ ರಲ್ಲಿ ಟಿಪ್ಪು ಸುಲ್ತಾನ್ ಅವರು ಯೋಜನೆ ಹಾಕಿದ್ದರು. ಅದಕ್ಕೆ ಶಂಕಿ ಸ್ಥಾಪನೆಯನ್ನೂ ಸಹ ಮಾಡಲಾಗುತ್ತದೆ.

ಆ ಡ್ಯಾಂ ನಿರ್ಮಾಣಕ್ಕೆ ಬೇಕಾದ ದುಡ್ಡನ್ನು ಸಹ ಅವರು ಸಿದ್ಧ ಮಾಡಿಕೊಂಡಿರುತ್ತಾರೆ. ಇದಾದ ಬಳಿಕ ಮೂರನೇ ಮೈಸೂರು ಯುದ್ಧ ಆರಂಭ ಆಗುತ್ತದೆ. ಆ ಸಮಯದಲ್ಲಿ ಟಿಪ್ಪುವಿಗೆ ಸೋಲು ಉಂಟಾಗುತ್ತದೆ. ಇದೇ ಟಿಪ್ಪುವನ್ನು ಈ ಡ್ಯಾಂ ನಿರ್ಮಾಣ ಕಾರ್ಯದಿಂದ ಹಿಂದೆ ಸರಿಯುವಂತೆ ಮಾಡುತ್ತದೆ. ಅಂದರೆ ಯುದ್ಧದ ನಷ್ಟಕ್ಕೆ ಮೂರುವರೆ ಕೋಟಿ ಹಾಗೂ ಎರಡು ಮಕ್ಕಳನ್ನು ಒತ್ತೆಯಾಳಾಗಿ ಇಡಬೇಕು ಎಂಬ ನಿರ್ಧಾರ ಮಾಡಲಾಗುತ್ತದೆ.
ಈ ಸಮಯದಲ್ಲಿ ಟಿಪ್ಪು ಸುಲ್ತಾನ್ ಅವರ ಸಂಪೂರ್ಣ ಗಮನ ಈ ದುಡ್ಡು ಹೊಂದಿಸುವ ಹಾಗೂ ಮಕ್ಕಳನ್ನು ಒತ್ತೆಯಾಳು ಮಾಡಬೇಕಾದ ಪರಿಸ್ಥಿತಿ ನೆನೆದು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ. ಪರಿಣಾಮ ಈ ಡ್ಯಾಂ ನಿರ್ಮಾಣದ ಯೋಜನೆಯನ್ನು ಕೈ ಬಿಡುತ್ತಾರೆ.
ಇದೆಲ್ಲಾ ಆದ ಹಲವು ವರ್ಷಗಳ ನಂತರ ಡ್ಯಾಂ ಅನ್ನು ನಿರ್ಮಾಣ ಮಾಡುವ ಕೆಲಸ ನಾಲ್ವಡಿ ಅವರ ನೇತೃತ್ವದಲ್ಲಿ ಆರಂಭ ಆಗುತ್ತದೆ. ಅದುವೇ ಕೆಆರ್ಎಸ್ ಡ್ಯಾಂ. ಆ ಸಮಯದಲ್ಲಿ ನಾಲ್ವಡಿ ಅವರ ಸಹೋದರಿ ಹಾಗೂ ಅವರ ಪತ್ನಿ ದೊಡ್ಡ ಮಟ್ಟದ ಸಹಕಾರ ಮಾಡಿದರು. ಇದರಿಂದ ಕಾವೇರಿಗೆ ದೊಡ್ಡ ಅಣೆಕಟ್ಟು ನಿರ್ಮಾಣ ಆಯ್ತು ಎಂದು ಇತಿಹಾಸಕಾರರಾದ ತಲಕಾಡು ಚಿಕ್ಕರಂಗೇಗೌಡ ಅವರು ಹೇಳಿದ್ದಾರೆ. ಜೊತೆಗೆ ಅವರ ಟಿಪ್ಪು ಸಾಧನೆ ಏನು ಕಡಿಮೆ ಇಲ್ಲ ಅನ್ನೋದನ್ನು ಸಹ ತಿಳಿಸಿದ್ದಾರೆ.
