ಇವತ್ತು ಅದೇನೋ
ಅಪ್ಪಂದಿರ ದಿನವಂತೆ !
ಈ ನೆಪದಲ್ಲೇ ನನ್ನೊಳಗೆ
ಮತ್ತು ನನ್ನೊಳಗನ್ನು ಅಪ್ಪ
ಮತ್ತೊಮ್ಮೆ ಆವರಿಸಿಕೊಳ್ಳಲಿ…
ಅಪ್ಪನ ಮಾತು, ಕ್ರಿಯೆ
ಎಲ್ಲ ಸೇರಿ ನನ್ನೊಳಗೆ ಅಪ್ಪ
ಈಗಲೂ ಬದುಕಿದ್ದಾನೆ!
ಎಡವಿದಾಗ ನೆಲ ನೋಡಿ
ನಡೆಯೆಂದು ಎಚರಿಸುತ್ತಿದ್ದ ಅಪ್ಪ;
ಗೆದ್ದಾಗ ಆಕಾಶ ನೋಡುತ್ತ
ಕೂರಬೇಡವೆಂದು ಗದರಿಸುತ್ತಿದ್ದ ಅಪ್ಪ,
ಮನಸಿನಲ್ಲೆ ಮಂಡಿಗೆ ತಿನ್ನಬೇಡವೆಂದು
ಉರಿದುಬೀಳುತ್ತಿದ್ದ ಅಪ್ಪ,
ಈಗ ಇಲ್ಲ ಎಂದರೆ….
ನಂಬಲಾರೆ…ಅಪ್ಪ!
ಸ್ಪರ್ಧೆಗೆ ಮುನ್ನವೇ ಸೋಲೊಪ್ಪಿಕೊಂಡವನಲ್ಲೂ
ಗೆಲ್ಲುವ ಹುಮ್ಮಸ್ಸು ತುಂಬುತ್ತಿದ್ದ ಅಪ್ಪ
ಸೋಲನೆಂದೂ ಒಪ್ಪಿಕೊಳ್ಳಲೇ ಇಲ್ಲ!
ತಾನು ವಿಜ್ಞಾನದ ವಿದ್ಯಾರ್ಥಿ
ಎಂದು ಹೆಮ್ಮೆಯಿಂದ ಬೀಗುತ್ತಿದ್ದ ಅಪ್ಪ..
ಮೇಲು ಕೀಳುಗಳನ್ನು ಧಿಕ್ಕರಿಸಿದ!
ಮೂಢನಂಬಿಕೆಗಳನ್ನು ಹೀಗಳೆದ!
ಮೂಢರನ್ನು ಹೀಯಾಳಿಸಿದ..!!
ವಿಜ್ಞಾನವೆಂದರೆ ಪ್ರಯೋಗಗಳ ನಂತರದ
ಫಲಿತಾಂಶ ಎಂಬುದೇನೋ ನಿಜ..
ಆದರೆ ಅದೇ ಆಖೈರಲ್ಲ!
ಎಂಬುದನ್ನು ಅರ್ಥ ಮಾಡಿಕೊಳ್ಳದೇ ಹೋದ ಅಪ್ಪ
ಬದುಕನ್ನೇ ಪ್ರಯೋಗಶಾಲೆಯನ್ನಾಗಿಸಿಕೊಂಡ ಬೆಪ್ಪ!
ಅಪ್ಪ ದಣಿವನರಿಯದ ಶ್ರಮಿಕ;
ಪ್ರತಿಫಲವ ಬಯಸದೇ ಹೋದ ಸೇವಕ!
ಸೋತಾಗ ಅಳುತ್ತ ಕೂರಲಿಲ್ಲ;
ಗೆದ್ದಾಗ ತೋಳೇರಿಸಿ ಬೀಗಲಿಲ್ಲ..
ಅಪ್ಪನಿಗೆ ಅಪ್ಪನೇ ಸಾಟಿ!
ಈಗ ನಾನೂ ಅಪ್ಪನೇ……
ಅಪ್ಪನ ಒಪ್ಪು ತಪ್ಪುಗಳ ಹಾದಿಯಲ್ಲಿ….
ಹೆಜ್ಜೆ ತಾನೆ ಮೂಡುತಿವೆ..
ಅಪ್ಪನ ಜೊತೆಗೆ ನನ್ನ ಹಾದಿಯ ಹುಡುಕಿ ನಡೆದಿರುವೆ….
** ಚಂಸು
( ನನ್ನ ಅಪ್ಪ ಸುಭಾಸಗೌಡ ಪಾಟೀಲರನ್ನು ನೆನೆದು)
