ನವದೆಹಲಿ: ತಂಬಾಕು ಬೆಳೆ ಉತ್ಪಾದನೆ ಕುಸಿತ ಮತ್ತು ರೈತರು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ಸಂಸದ ಶ್ರೇಯಶ್ ಪಟೇಲ್ ಅವರು ಇಂದು ನವದೆಹಲಿಯ ವಾಣಿಜ್ಯ ಭವನದಲ್ಲಿ ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಮುಖ್ಯ ಕಾರ್ಯದರ್ಶಿ ರಾಜೇಶ್ ಅಗರವಾಲ್ ಹಾಗೂ ಅಪರ ಕಾರ್ಯದರ್ಶಿ (ಕೃಷಿ) ನಿತಿನ್ ಕುಮಾರ್ ಯಾದವ್ ಅವರೊಂದಿಗೆ ಸುಧೀರ್ಘ ಚರ್ಚೆ ನಡೆಸಿದರು.
ತಂಬಾಕು ಉತ್ಪಾದನೆ ಕುಸಿತದಿಂದ ರೈತರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟ, ಮಾರುಕಟ್ಟೆಯಲ್ಲಿ ತಂಬಾಕಿಗೆ ಸಮರ್ಪಕ ಬೆಲೆ ಸಿಗದಿರುವುದು ಹಾಗೂ ಜಿಎಸ್ಟಿ ಜಾರಿಗೆ ಬಂದ ಬಳಿಕ ಉಂಟಾದ ತೆರಿಗೆ ಸಂಬಂಧಿತ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ವಿವರವಾಗಿ ಚರ್ಚಿಸಲಾಯಿತು. ರೈತರಿಗೆ ನ್ಯಾಯಸಮ್ಮತ ಮತ್ತು ಉತ್ತಮ ಬೆಲೆ ಕಲ್ಪಿಸುವ ಅಗತ್ಯತೆಯನ್ನು ಸಂಸದರು ಒತ್ತಿಹೇಳಿದರು.

ಈ ಸಂದರ್ಭದಲ್ಲಿ ತಂಬಾಕು ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡಲು ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು. ಸಮಸ್ಯೆಗಳ ಸಮಗ್ರ ಪರಿಶೀಲನೆ ನಡೆಸಿ, ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ತಂಬಾಕು ಬೆಳೆಗಾರರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಲು ಕೇಂದ್ರ ಮಟ್ಟದಲ್ಲಿ ಕ್ರಮ ಕೈಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.
