ರಾಮನಾಥಪುರ, ಮಾ.18: ರಾಜ್ಯದ ತಂಬಾಕು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬೆಲೆ ಕುಸಿತದಿಂದ ಉಂಟಾದ ಅನ್ಯಾಯವನ್ನು ಸರಿಪಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ತಂಬಾಕು ಖರೀದಿ ಸಾಧ್ಯವಾಗದಿದ್ದಲ್ಲಿ ಕನಿಷ್ಠ ರೈತರ ಸಾಲ ಮನ್ನಾ ಮಾಡಬೇಕು ಹಾಗೂ ಬೆಳೆವಿಮೆ ಪರಿಹಾರ ಒದಗಿಸಬೇಕು ಎಂದು ಮಾಜಿ ಸಚಿವ ಕೆ.ಬಿ. ಮಲ್ಲಪ್ಪ ಅವರ ಪುತ್ರ ಹಾಗೂ ರೈತ ಮುಖಂಡ ಡಾ. ಕೆ.ಎಂ. ಮೋಹನ್ ಮಲ್ಲಪ್ಪ ಒತ್ತಾಯಿಸಿದರು.
ರಾಮನಾಥಪುರದ ಶ್ರೀ ಸುಬ್ರಹ್ಮಣ್ಯನಗರದಲ್ಲಿರುವ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಪ್ರಪಂಚದಲ್ಲೆಲ್ಲಾ ಮುಕ್ತ ಮಾರುಕಟ್ಟೆ ವ್ಯವಸ್ಥೆ ಜಾರಿಯಲ್ಲಿದ್ದರೂ ಭಾರತದಲ್ಲಿ ವಾಣಿಜ್ಯ ಪದಾರ್ಥಗಳ ವ್ಯಾಪಾರವನ್ನು ಕೆಲವೇ ದೇಶಗಳಿಗೆ ಸೀಮಿತಗೊಳಿಸಿರುವುದು ರೈತರಿಗೆ ಹಾನಿಯಾಗಿದೆ ಎಂದು ಆರೋಪಿಸಿದರು.

ಕೇವಲ ಕೆಲವು ಕಂಪನಿಗಳ ಮೇಲೆ ಅವಲಂಬಿಸದೇ, ಬೇಡಿಕೆ ಇರುವ ಇತರೆ ದೇಶಗಳಿಗೆ ತಂಬಾಕು ರಫ್ತು ಮಾಡುವಂತೆ ಕೇಂದ್ರ ಸರ್ಕಾರ ಮುಂದಾಗಬೇಕು. ತಂಬಾಕು ಮೇಳಗಳನ್ನು ಆಯೋಜಿಸಿ, ಹೆಚ್ಚಿನ ವಿದೇಶಿ ಕಂಪನಿಗಳು ನೇರ ಖರೀದಿಯಲ್ಲಿ ಪಾಲ್ಗೊಳ್ಳುವಂತೆ ಮಾಡಿ, ಮುಕ್ತ ಮಾರುಕಟ್ಟೆ ಸೌಲಭ್ಯ ಕಲ್ಪಿಸಿದರೆ ರೈತರಿಗೆ ಲಾಭವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಅಂಧ್ರ ಪ್ರದೇಶದ ವರ್ತಕರು ತಂಬಾಕು ಬೆಲೆಯಲ್ಲಿ ತಾರತಮ್ಯ ಮಾಡುತ್ತಿದ್ದು, ಕರ್ನಾಟಕದ ರೈತರಿಗೆ ಹಿಂದಿನಿಂದಲೂ ಅನ್ಯಾಯವಾಗುತ್ತಿದೆ. ಈ ಅನೀತಿಯನ್ನು ತಕ್ಷಣ ಸರಿಪಡಿಸಬೇಕು ಎಂದು ಡಾ. ಮೋಹನ್ ಆಗ್ರಹಿಸಿದರು.
ರೈತರ ಆಕ್ರೋಶಕ್ಕೆ ಬೆಂಕಿ ಸಾಕ್ಷಿ
ರಾಮನಾಥಪುರದ ತಂಬಾಕು ಮಾರುಕಟ್ಟೆಯಲ್ಲಿ ಈ ಬಾರಿ ಇತಿಹಾಸದಲ್ಲೇ ಕಾಣದಷ್ಟು ಬೆಲೆ ಪಾತಾಳ ಕಂಡಿದೆ. ಬೆಲೆ ಕುಸಿತದಿಂದ ಆಕ್ರೋಶಗೊಂಡ ರೈತರು ಹಲವು ಬಾರಿ ಮಾರುಕಟ್ಟೆ ಬಂದ್ ಮಾಡಿಸಿ, ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿದ್ದರು. ಮಂಡಳಿ ಕಡಿಮೆ ದರಕ್ಕೆ ತಂಬಾಕು ಖರೀದಿ ಮಾಡುತ್ತಿರುವುದಕ್ಕೆ ವಿರೋಧವಾಗಿ ರೈತರು ಇತ್ತೀಚೆಗೆ ತಂಬಾಕು ಬೇಲ್ಗಳಿಗೆ ಬೆಂಕಿ ಹಚ್ಚಿ ರಸ್ತೆಯಲ್ಲೇ ಸುಟ್ಟು ಪ್ರತಿಭಟನೆ ನಡೆಸಿದ್ದರು.

ಕಷ್ಟಪಟ್ಟು ಬೆಳೆದ ತಂಬಾಕಿಗೆ ಸರಿಯಾದ ಬೆಲೆ ಸಿಗದೆ, ಬ್ಯಾಂಕ್ಗಳಲ್ಲಿ ಸಾಲ ಮಾಡಿ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನೇಕ ಬಾರಿ ಮನವಿ ಮಾಡಿದರೂ ತಂಬಾಕು ಮಂಡಳಿ ಬೆಂಬಲ ಬೆಲೆ ಘೋಷಿಸದಿರುವುದು ರೈತರಿಗೆ ಮಾಡುತ್ತಿರುವ ಮೋಸವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಭಾಗದ ಪ್ರಮುಖ ವಾಣಿಜ್ಯ ಬೆಳೆ ಆಗಿರುವ ತಂಬಾಕು ಬೆಲೆ ಕುಸಿತದಿಂದ ರೈತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸಮಾಜ ಸೇವಕರು ಹಾಗೂ ರೈತ ಮುಖಂಡರು ಒತ್ತಾಯಿಸಿದ್ದಾರೆ.
ಈ ಬಾರಿ 85 ಮಿಲಿಯನ್ ಕೆಜಿ ಖರೀದಿ ಗುರಿ
ತಂಬಾಕು ಮಾರುಕಟ್ಟೆಯ ಪ್ರಾದೇಶಿಕ ವ್ಯವಸ್ಥಾಪಕ ಮಾರಣ್ಣ ಮಾತನಾಡಿ, ಕರ್ನಾಟಕದಲ್ಲಿ ಈ ಬಾರಿ 85 ಮಿಲಿಯನ್ ಕೆಜಿ ತಂಬಾಕು ಖರೀದಿ ಗುರಿ ನಿಗದಿಪಡಿಸಲಾಗಿದೆ. ಇದರಲ್ಲಿ ಸುಮಾರು ಶೇ.50 ರಷ್ಟು ತಂಬಾಕನ್ನು ಐಟಿಸಿ ಕಂಪನಿ ಖರೀದಿಸುತ್ತಿದೆ ಎಂದು ತಿಳಿಸಿದರು.
ಬೆಲೆ ಏರಿಕೆ ಮಾಡುವಂತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಹಾಗೂ ಶಾಸಕ ಎ. ಮಂಜು ಅವರು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಕೇಂದ್ರ ಸರ್ಕಾರದ ಮುಂದಿನ ಕ್ರಮವನ್ನು ಕಾದು ನೋಡಬೇಕಾಗಿದೆ ಎಂದರು.
ಕಳೆದ ವರ್ಷ ಅಂಧ್ರ ಪ್ರದೇಶದಲ್ಲಿ ಕೆಜಿ ತಂಬಾಕು ₹450 ರವರೆಗೆ ಮಾರಾಟವಾಗಿತ್ತು. ಆದರೆ ಕರ್ನಾಟಕದಲ್ಲಿ ಈ ಬಾರಿ ಉತ್ಪಾದನೆ ಹೆಚ್ಚಾಗಿದ್ದು, ಬೇಡಿಕೆ ಕುಸಿದ ಹಿನ್ನೆಲೆ ಬೆಲೆ ಇಳಿಕೆಯಾಗಿರುವುದಾಗಿ ವಿವರಿಸಿದರು.
ವರದಿ – ಕುಮಾರಸ್ವಾಮಿ
