ಕೆ.ಆರ್.ಪೇಟೆ,ಅ.06: ನಾಡಿನ ಹೆಸರಾಂತ ಕಥೆಗಾರರು ಹಾಗೂ ಸಾಹಿತಿಗಳಾದ ಮೊಗಳ್ಳಿ ಗಣೇಶ್ ಅವರ ಅಕಾಲಿಕ ನಿಧನದಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ಅಪಾರ ನಷ್ಟವಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಹೇಳಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ತಾಲ್ಲೂಕು ಜಾನಪದ ಪರಿಷತ್, ತಾಲ್ಲೂಕು ಪತ್ರಕರ್ತರ ಸಂಘ, ತಾಲ್ಲೂಕು ಛಲವಾದಿ ಮಹಾಸಭಾ, ಸೇರಿದಂತೆ ಪ್ರಗತಿಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಾಡಿನ ಖ್ಯಾತ ಕಥೆಗಾರರು ಹಾಗೂ ಸಾಹಿತಿಗಳಾದ ಮೊಗಳ್ಳಿ ಗಣೇಶ್ ಅವರ ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿ ಮೊಗಳ್ಳಿ ಗಣೇಶ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಇದನ್ನು ಓದಿ: ಕೆ.ಆರ್.ಪೇಟೆ: ವಕೀಲನ ಪತ್ನಿಗೆ ಕಬ್ಬಿಣದ ರಾಡಿನಿಂದ ಮಾರಣಾಂತಿಕ ಹಲ್ಲೆ- ಜೀವಂತ ದಹನ ಮಾಡಲು ಯತ್ನ
ದಲಿತ ಸಾಹಿತ್ಯ ಕ್ಷೇತ್ರದಲ್ಲಿ ದೇವನೂರು ಮಹಾದೇವ ಸಿದ್ದಲಿಂಗಯ್ಯ ಅವರ ನಂತರ ಮೊಗಳ್ಳಿ ಗಣೇಶ್ ಅವರು ದಲಿತ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಅಪಾರ ಕೊಡುಗೆಯನ್ನು ನೀಡಿದ್ದಾರೆ. ದಲಿತರು ಶೋಷಿತರು ಹಾಗೂ ತುಳಿತಕ್ಕೊಳಗಾದವರ ನೋವು ನಲಿವುಗಳು ಹಾಗೂ ಭಾವನೆಗಳನ್ನು ಕಥಾಹಂದರದ ಮೂಲಕ ಶ್ರೀಸಾಮಾನ್ಯರ ಮನ ಮುಟ್ಟುವಂತೆ ಕಥೆಗಳನ್ನು ಬರೆದು ಸೈ ಅನಿಸಿಕೊಂಡಿದ್ದ ಗಣೇಶ್ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ.
ಚನ್ನಪಟ್ಟಣ ತಾಲೂಕಿನ ಮೊಗಳ್ಳಿ ಗ್ರಾಮದಲ್ಲಿ ಜನಿಸಿದ್ದರೂ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಾದನಾಯಕನಹಳ್ಳಿ ಗ್ರಾಮದಲ್ಲಿ ಅವರ ಇಚ್ಛೆಯಂತೆಯೇ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಗಿದೆ. ಪ್ರಜಾವಾಣಿ ಸೇರಿದಂತೆ ನಾಡಿನ ವಿವಿಧ ಪತ್ರಿಕೆಗಳಿಗೆ ನಿರಂತರವಾಗಿ ಅಂಕಣಗಳನ್ನು ಬರೆಯುವ ಮೂಲಕ ಅಪಾರ ಓದುಗರನ್ನು ಹೊಂದಿದ್ದರು. ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಸತತವಾಗಿ ಮೂರು ಕಥೆಗಳನ್ನು ಮೂರು ವರ್ಷಗಳ ಕಾಲ ನಿರಂತರವಾಗಿ ಪತ್ರಿಕೆಯಲ್ಲಿ ಬರೆದು ಬಹುಮಾನ ಗೆಲ್ಲುವ ಮೂಲಕ ಕಥಾ ಕ್ಷೇತ್ರಕ್ಕೆ ತಮ್ಮ ಅಮೂಲ್ಯವಾದ ಕೊಡುಗೆಯನ್ನು ನೀಡಿರುವ ಮೊಗಳ್ಳಿ ಗಣೇಶ್ ಅವರ ಕಾಲಿಕ ಸಾವು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಪೂರ್ಣಚಂದ್ರ ತೇಜಸ್ವಿ ಕಂಬನಿ ಮಿಡಿದರು.

ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಕತ್ತರಘಟ್ಟ ವಾಸು, ಕಸಾಪ ಮಾಜಿ ಅಧ್ಯಕ್ಷ ಕೆ.ಆರ್.ನೀಲಕಂಠ, ಬಲ್ಲೇನಹಳ್ಳಿ ಮಂಜುನಾಥ್, ಸಾಹಿತಿಗಳಾದ ಮಾರೇನಹಳ್ಳಿ ಲೋಕೇಶ್, ಚಾ.ಶಿ.ಜಯಕುಮಾರ್ ಮೊಗಳ್ಳಿ ಗಣೇಶ್ ಅವರ ಜೀವನ ಸಾಧನೆಗಳನ್ನು ಕುರಿತು ಮಾತನಾಡಿದರು.
ಶ್ರದ್ದಾಂಜಲಿ ಸಭೆಯಲ್ಲಿ ವಿಶ್ರಾಂತ ಪೊಲೀಸ್ ಅಧಿಕಾರಿ ರಮೇಶ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳಾದ ಶೀಳನೆರೆ ಶಿವಕುಮಾರ್, ದೈಹಿಕ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ನಾಗರಾಜು, ರೇವಣ್ಣ, ಕರವೇ ಮಂಡ್ಯ ಜಿಲ್ಲಾಧ್ಯಕ್ಷ ಡಿ.ಎಸ್.ವೇಣು, ತಾಲ್ಲೂಕು ಕರವೇ ಅಧ್ಯಕ್ಷ ಟೆಂಪೋ ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿ ಕೊಮ್ಮೇನಹಳ್ಳಿ ಅನಿಲ್, ಸುನಿಲ್, ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಊಚನಹಳ್ಳಿ ನಟರಾಜ್, ಗೌರವಾಧ್ಯಕ್ಷ ಸೋಮಸುಂದರ್, ಗ್ರಾ.ಪಂ.ಸದಸ್ಯ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
ಕೆ.ಆರ್.ಪೇಟೆ: ವಕೀಲನ ಪತ್ನಿಗೆ ಕಬ್ಬಿಣದ ರಾಡಿನಿಂದ ಮಾರಣಾಂತಿಕ ಹಲ್ಲೆ- ಜೀವಂತ ದಹನ ಮಾಡಲು ಯತ್ನ
