ಬೆಂಗಳೂರು: ಪ್ರಸಕ್ತ 2025-26ನೇ ಆರ್ಥಿಕ ವರ್ಷಕ್ಕೆ ದಾಖಲೆಯ 4.09 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಮಂಡನೆಯಾಗಿದ್ದರೂ, ರಾಜ್ಯ ಸರ್ಕಾರದ ಸ್ವಂತ ತೆರಿಗೆ ಮೂಲಗಳಿಂದ ವಾರ್ಷಿಕ ಗುರಿಯಷ್ಟು ಆದಾಯ ಸಂಗ್ರಹವಾಗುವುದು ಕಷ್ಟಸಾಧ್ಯವೆನಿಸಿದೆ. ಗುರಿ ತಲುಪಲು ಮಾರ್ಚ್ ಅಂತ್ಯದೊಳಗೆ 48,306 ಕೋಟಿ ರೂ. ಸಂಗ್ರಹವಾಗಬೇಕಿದ್ದು, ಅಬಕಾರಿ ಇಲಾಖೆ ಹೊರತುಪಡಿಸಿ ಉಳಿದ ಪ್ರಮುಖ ಮೂಲಗಳಿಂದ ಗುರಿ ಸಾಧನೆ ಅನುಮಾನದಲ್ಲಿದೆ.
ವಾಣಿಜ್ಯ ತೆರಿಗೆ, ಮುದ್ರಾಂಕ ಮತ್ತು ನೋಂದಣಿ, ಮೋಟಾರು ವಾಹನ ತೆರಿಗೆಗಳಿಂದ ಸುಮಾರು 15,000 ಕೋಟಿ ರೂ. ಆದಾಯ ಕೈತಪ್ಪುವ ಲಕ್ಷಣಗಳು ಗೋಚರಿಸುತ್ತಿವೆ. ಇದರಿಂದ ಸರ್ಕಾರದ ವೆಚ್ಚ ಹಾಗೂ ಬಜೆಟ್ ಗಾತ್ರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಬಂಡವಾಳ ವೆಚ್ಚಕ್ಕೆ 83,200 ಕೋಟಿ ರೂ. ವಿನಿಯೋಗಿಸುವುದಾಗಿ ಸರ್ಕಾರ ಹೇಳಿದ್ದರೂ ತೆರಿಗೆ ಆದಾಯ ಕುಂಠಿತವಾದರೆ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಕಡಿತವಾಗುವ ಸಾಧ್ಯತೆ ಇದೆ.
ಅಬಕಾರಿ ಇಲಾಖೆಯಿಂದ ಮಾತ್ರ ಉತ್ತಮ ಸಂಗ್ರಹ
ಅಬಕಾರಿ ಇಲಾಖೆಯಿಂದ ವಾರ್ಷಿಕ 40,000 ಕೋಟಿ ರೂ. ಗುರಿಯಲ್ಲಿ ಜನವರಿ ಅಂತ್ಯದ ವೇಳೆಗೆ 33,371 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಶೇ.13.27ರಷ್ಟು ಹೆಚ್ಚಳ ಕಂಡುಬಂದಿದ್ದು, ಮಾರ್ಚ್ ಅಂತ್ಯದೊಳಗೆ ಗುರಿ ಮೀರುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ವಾಣಿಜ್ಯ ತೆರಿಗೆ ಕುಂಠಿತ
ಜನವರಿ ಅಂತ್ಯದವರೆಗೆ ವಾಣಿಜ್ಯ ತೆರಿಗೆಯಿಂದ 90,229 ಕೋಟಿ ರೂ. ಸಂಗ್ರಹವಾಗಿದೆ. ಜಿಎಸ್ಟಿ ದರ ರಚನೆಯಲ್ಲಿ ಬದಲಾವಣೆಗಳಿಂದ ರಾಜ್ಯಕ್ಕೆ ವಾರ್ಷಿಕ 9,000 ಕೋಟಿ ರೂ. ನಷ್ಟವಾಗುವ ಆತಂಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ವ್ಯಕ್ತಪಡಿಸಿದ್ದಾರೆ.
ಮುದ್ರಾಂಕ, ಸಾರಿಗೆ ತೆರಿಗೆ ಗುರಿ ಸವಾಲು
ಮುದ್ರಾಂಕ ಮತ್ತು ನೋಂದಣಿ ಶುಲ್ಕಗಳಿಂದ ಜನವರಿವರೆಗೆ 20,500 ಕೋಟಿ ರೂ. ಮಾತ್ರ ಸಂಗ್ರಹವಾಗಿದ್ದು, 3,000 ಕೋಟಿ ರೂ. ಕೊರತೆ ಸಾಧ್ಯತೆ ಇದೆ. ಮೋಟಾರು ವಾಹನ ತೆರಿಗೆಯಲ್ಲಿ 15,000 ಕೋಟಿ ರೂ. ಗುರಿ ನೀಡಲಾಗಿದ್ದರೂ 13,000 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆಯಿದ್ದು, 2,000 ಕೋಟಿ ರೂ. ಕೊರತೆ ಸಂಭವಿಸಬಹುದು.
ಅಭಿವೃದ್ಧಿ ಕಾರ್ಯಗಳ ಮೇಲೆ ಪರಿಣಾಮ?
ಸರಕಾರಿ ನೌಕರರ ವೇತನ, ಪಿಂಚಣಿ, ಸಾಮಾಜಿಕ ಭದ್ರತಾ ಯೋಜನೆಗಳು ಹಾಗೂ ಸಾಲ ಪಾವತಿ ವೆಚ್ಚಗಳಲ್ಲಿ ಕಡಿತ ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ, ತೆರಿಗೆ ಆದಾಯದಲ್ಲಿ ದೊಡ್ಡ ಮಟ್ಟದ ಕೊರತೆ ಉಂಟಾದರೆ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಾದ ಅನುದಾನದಲ್ಲೇ ಕಡಿತ ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.
