ತುಮಕೂರು- ನಗರದಲ್ಲಿರುವ ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಕುಂದುಕೊರತೆಗಳನ್ನು ನಿವಾರಿಸುವ ಜತೆಗೆ ಇಎಸ್ಐ ಆಸ್ಪತ್ರೆ ಪ್ರಾರಂಭಿಸುವುದು ಸೇರಿದಂತೆ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಶೀಘ್ರ ಈಡೇರಿಸಬೇಕು ಎಂದು ಕೋರಿ ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಸಲ್ಲಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಭೇಟಿ ಮಾಡಿದ ಟಿಡಿಸಿಸಿಐ ಅಧ್ಯಕ್ಷ ಪಿ.ಆರ್. ಕುರಂದವಾಡ ನೇತೃತ್ವದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಸಿ.ಎಸ್. ಸಂಜಯ್, ಖಜಾಂಚಿ ಜಿ.ಆರ್. ರವಿಶಂಕರ್, ನಿರ್ದೇಶಕರಾದ ಟಿ.ಆರ್. ಆನಂದ್, ಮಾಜಿ ಅಧ್ಯಕ್ಷ ಹಾಗೂ ನಿರ್ದೇಶಕ ಟಿ.ಜೆ. ಗಿರೀಶ್ ರವರು ಮನವಿ ಪತ್ರ ಸಲ್ಲಿಸಿ ತುಮಕೂರು ಕೈಗಾರಿಕಾ ನಗರವಾಗಿ ಬೆಳೆಯುತ್ತಿದ್ದು, ವಸಂತನರಸಾಪುರದಲ್ಲಿ ೧೪ ಸಾವಿರ ಎಕರೆ ಬೃಹತ್ ಕೈಗಾರಿಕಾ ಪ್ರದೇಶವನ್ನು ಹೊಂದಿದ್ದು, ಕೈಗಾರಿಕಾ ಕಾರಿಡಾರ್ ಕೂಡ ಆಗಮಿಸುತ್ತಿದೆ. ಜತೆಗೆ ಹಲವಾರು ಐಟಿ-ಬಿಟಿ ಕಂಪೆನಿಗಳು ತುಮಕೂರಿನಲ್ಲಿ ಕಂಪೆನಿ ಸ್ಥಾಪಿಸಲು ಹೆಚ್ಚು ಉತ್ಸುಕವಾಗಿವೆ. ಆದ್ದರಿಂದ ತುಮಕೂರಿಗೆ ಮಂಜೂರಾಗಿರುವ ಇಎಸ್ಐ ಆಸ್ಪತ್ರೆಗೆ ಅತಿ ಶೀಘ್ರದಲ್ಲಿ ನಗರದಲ್ಲೇ ಜಾಗ ನಿಗದಿ ಮಾಡಿ ಪ್ರಾರಂಭಿಸಬೇಕು ಎಂದು ಕೋರಿದರು.
ವರದಿ : ಕೆ ಬಿ ಚಂದ್ರಚೂಡ್
