ತುಮಕೂರು:ಕೃತಕ ಬುದ್ಧಿಮತ್ತೆ ಮತ್ತು ಮಿಷನ್ ಲರ್ನಿಂಗ್(ಎಐ ಮತ್ತು ಎಂ.ಎಲ್.)ತಂತ್ರಜ್ಞಾನದಿಂದ ನಿರುದ್ಯೋಗ ಹೆಚ್ಚಾಗಲಿದೆ ಎಂಬುದು ತಪ್ಪು ತಿಳುವಳಿಕೆ. ಎಐ ಮತ್ತು ಎಂಎಲ್ನಿಂದ ಭವಿಷ್ಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಐಐಐಟಿ ಧಾರವಾಡದ ನಿರ್ದೇಶಕ ಡಾ.ಎಸ್.ಆರ್.ಮಹದೇವಪ್ರಸನ್ನ ಅಭಿಪ್ರಾಯಪಟ್ಟಿದ್ದಾರೆ.
ನಗರದ ಶ್ರೀಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಎಐಸಿಟಿಇ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ “ಎಕ್ಸ್ಪ್ಲೋರಿಂಗ್ ಎಐ ಅಂಡ್ ಎಂಎಲ್ ಫಾರ್ ಬೆಟರ್ ಟುಮಾರೋ” ಎಂಬ ವಿಷಯ ಕುರಿತು ರಾಷ್ಟçಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ,ದಿಕ್ಸೂಚಿ ಭಾಷಣ ಮಾಡಿದ ಅವರು, 90ರ ದಶಕದಲ್ಲಿ ಕಂಪ್ಯೂಟರ್ ಬಂದಾಗಲೂ ಇದೇ ರೀತಿಯ ಚರ್ಚೆಗಳು ನಡೆದವು.ಆದರೆ ಇಂದು ಅತಿ ಹೆಚ್ಚು ಉದ್ಯೋಗ ಸೃಷ್ಠಿ ಮಾಡುವ ಕ್ಷೇತ್ರಗಳಲ್ಲಿ ಮಾಹಿತಿ ತಂತ್ರಜ್ಞಾನವೂ ಒಂದಾಗಿದೆ.ಹಾಗೆಯೇ ಎಐ ಮತ್ತು ಎಂಎಲ್ ಬಳಕೆಯಿಂದ ಉದ್ಯೋಗ ನಷ್ಟವಾಗುವುದಿಲ್ಲ ಎಂಬುದು ಸ್ಪಷ್ಟ ಎಂದರು.

ಎಐ ಮತ್ತು ಎಂಎಲ್ ಹಾಗೂ ಕಂಪ್ಯೂಟರ್ ಇಂಜಿನಿಯರಿಂಗ್ ಒಂದಕ್ಕಂದು ಪೂರಕವಾಗಿವೆ.ಆದರೆ ಸಾಫ್ಟ್ ವೇರ್ ಎಂಜಿನಿಯರ್ಗಿಂತ ವೇಗವಾಗಿ ಮತ್ತು ನಿಖರವಾಗಿ ಎಐ ಮತ್ತು ಎಂಎಲ್ ಕೆಲಸ ಮಾಡಲಿವೆ.ಡೆಟಾ ಮಾನ್ಯೇಜ್ಮೆಂಟ್ ಮತ್ತು ಅನಾಲಿಸಿಸ್ನಲ್ಲಿ ಎಐ ಅತ್ಯಂತ ಪ್ರಕರವಾಗಿ ಕಾರ್ಯನಿರ್ವಹಿಸಲಿದೆ.ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನ ಗೊತ್ತಿಲ್ಲದವರು ಕೆಲಸ ಮಾಡುವುದು ಕೊಂಚ ದುಸ್ತರವಾಗಿದೆ. ಆದರೆ ಎಐ ಮತ್ತು ಎಂ.ಎಲ್ ಬಳಕೆಯಿಂದ ಸರಾಗವಾಗಿ ಡಿಜಿಟಲ್ ತಂತ್ರಜ್ಞಾನವನ್ನು ಬಳಕೆ ಮಾಡಬಹುದು.ಎಐ ಮತ್ತು ಎಂಎಲ್ ವ್ಯಕ್ತಿಯ ಕೋರಿಕೆಯನ್ನು ಅರ್ಥ ಮಾಡಿಕೊಂಡು ಆತನದ್ದೇ ಸ್ಥಳೀಯ ಭಾಷೆಯಲ್ಲಿ ಮಾತನಾಡಿ, ಆತನ ಕೆಲಸವನ್ನು ಸುಲಭಗೊಳಿಸಲಿದೆ.ಇದರಿಂದ ಸಮಯದ ಉಳಿತಾಯದ ಜೊತೆಗೆ, ಕೆಲಸದ ವೇಗವು ಹೆಚ್ಚಲಿದೆ.ಮದ್ಯವರ್ತಿಯಿಲ್ಲದೆ ಜನಸಾಮಾನ್ಯರು ತಮ್ಮ ದೈನಂದಿನ ಕೆಲಸವನ್ನು ನಿರ್ವಹಿಸಬಹುದಾಗಿದೆ. ಇದರಿಂದ ಭವಿಷ್ಯದ ಸಮಾಜಕ್ಕೆ ಹೆಚ್ಚಿನ ಉಪಯೋಗವಾಗಲಿದೆ ಎಂದು ಡಾ.ಎಸ್.ಆರ್.ಮಹದೇವಪ್ರಸನ್ನ ತಿಳಿಸಿದರು.
ಶ್ರೀಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ.ಶಿವಕುಮಾರಯ್ಯ ಮಾತನಾಡಿ, ನಾವೆಲ್ಲರೂ ಇಂದು ತಂತ್ರಜ್ಞಾನದ ಯುಗದಲ್ಲಿದ್ದೇವೆ.ಹೊಸ ತಂತ್ರಜ್ಞಾನಗಳು ಬಂದಾಗ ಆತಂಕ ಉಂಟಾಗುವುದು ಸಹಜ. ಲಭ್ಯವಿರುವ ಮತ್ತು ಹೊಸದಾಗಿ ಬರುವ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು, ಆ ಮೂಲಕ ಸ್ಮಾರ್ಟ್ ವರ್ಲ್ಡ್ ಕಟ್ಟುವ ನಿಟ್ಟಿನಲ್ಲಿ ಮುನ್ನೆಡೆಯಬೇಕಿದೆ ಎಂದರು.
ಎಕ್ಸ್ ಪ್ಲೋರಿಂಗ್ ಎಐ ಅಂಡ್ಎಂಎಲ್ ಫಾರ್ ಬೆಟರ್ಟುಮಾರೋ ವಿಚಾರ ಸಂಕಿರಣದ ಕುರಿತು ಪ್ರಸ್ತಾವಿಕ ನುಡಿಗಳನ್ನಾಡಿದ ಸಂಯೋಜಕರಾದ ಶ್ರೀಮತಿ ಮಮತ ಎಂ.,ಬೇರೆ ಬೇರೆ ಕ್ಷೇತ್ರಗಳಲ್ಲಿ ಹೇಗೆ ಎಐ ಬಳಕೆ ಮಾಡಬಹುದು, ಎಐ ಬಳಕೆ ಮಾಡುವ ನಿಟ್ಟಿನಲ್ಲಿಜನರಲ್ಲಿಜಾಗೃತಿ ಮೂಡಿಸುವುದು, ಮಿಡಿಯಾ, ಕಾನೂನು,ಆರೋಗ್ಯ, ಶಿಕ್ಷಣ ಹಾಗೂ ಸೈಬರ್ ಕ್ರೈಂ ತಡೆಯಲು ಹೇಗೆ ಬಳಕೆ ಮಾಡಬಹುದು ಎಂಬುದರ ಕುರಿತು ಇಂದಿನ ವಿಚಾರ ಸಂಕಿರಣ ಹೆಚ್ಚಿನ ಬೆಳಕು ಚಲ್ಲಲಿದೆ.ವಿವಿಧ ಇಂಜಿನಿಯರಿಂಗ್ ಕಾಲೇಜುಗಳು ಸುಮಾರು 93ಕ್ಕೂ ಹೆಚ್ಚು ಪ್ರಂಬಂಧಗಳು ಮಂಡನೆಯಾಗಲಿವೆ.ಸುಮಾರು 200ಕ್ಕು ಹೆಚ್ಚು ಪ್ರತಿನಿಧಿಗಳು ಈ ವಿಚಾರಸಂಕಿರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ ಮಾತನಾಡಿ,ಎಐಸಿಟಿಇ ಅಡಿಯಲ್ಲಿ ನಡೆಯುತ್ತಿರುವ ಈ ವಿಚಾರ ಸಂಕಿರಣ ಭವಿಷ್ಯದ ಭಾರತವನ್ನು ಕುರಿತಾಗಿದೆ.ತಂತ್ರಜ್ಞಾನ ಬಳಕೆಯಿಂದ ಜನಸಾಮಾನ್ಯರ ಭವಣೆ ತೀರಿಸುವ ಕೆಲಸಕ್ಕೆ ಇಂತಹ ವಿಚಾರ ಸಂಕೀರಣಗಳು ಮುನ್ನುಡಿ ಬರೆಯಲಿ ಎಂದು ಶುಭ ಹಾರೈಸಿದರು.
ಶ್ರೀಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಟಿ.ಬಿ.ನಿಜಲಿಂಗಪ್ಪ ಸ್ವಾಗತಿಸಿದರು.ಗಣಕ ಯಂತ್ರ ವಿಭಾಗದ ಮುಖ್ಯಸ್ಥರಾದ ಕೆ.ಎಸ್.ಲಿಂಗದೇವರಪ್ಪ, ಡಾ.ಹೇಮಲತಾ,ಸಂಶೋಧನಾ ವಿದ್ಯಾರ್ಥಿಗಳು,ಕಾಲೇಜಿನ ವಿದ್ಯಾರ್ಥಿಗಳು,ಅಧ್ಯಾಪಕರು ಮತ್ತಿತರರು ಉಪಸ್ಥಿತರಿದ್ದರು.ಪಲ್ಲವಿ ಪ್ರಾರ್ಥಿಸಿ,ಸೌಜನ್ಯ ವಂದಿಸಿದರು.
ವರದಿ : ಕೆ ಬಿ ಚಂದ್ರಚೂಡ್
