ತುಮಕೂರು:“ಶ್ರಮ, ಶಿಸ್ತು ಮತ್ತು ಸ್ಪಷ್ಟ ಗುರಿ ಇದ್ದಲ್ಲಿ ಯಶಸ್ಸು ಖಚಿತ” ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಸಮಾಜದ ಹಿತಕ್ಕಾಗಿ ಬಳಸಿಕೊಳ್ಳಬೇಕು ಎಂದು ವಿದ್ಯಾವಾಹಿನಿ ಸಮೂಹ ಸಂಸ್ಥೆಗಳ ಸಂಸ್ಥಾಪಕ, ಅಧ್ಯಕ್ಷರಾದ ಶ್ರೀಯುತ ಕೆ.ಬಿ.ಜಯಣ್ಣನವರು ಹೇಳಿದರು.
ಅವರು ವೈಸಿರಿ ಕಾಲೇಜಿನಲ್ಲಿ 2025-2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲು ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿ-ಟೆಕ್ನೋ ಸೆಲ್ಯೂಷನ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿನಾಗಪ್ರಿಯರವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಮಹತ್ವಪೂರ್ಣವಾದದ್ದು. ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಸಕಾರಾತ್ಮಕವಾಗಿ ಬಳಸಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದರು.
ವೈಸಿರಿ ಕಾಲೇಜಿನ ಮಮತ ಎಸ್.ಎಂ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ 97.5% ಅಂಕಗಳನ್ನು ಗಳಿಸುವುದರೊಂದಿಗೆ 2025-26 ನೇ ಸಾಲಿನ ಪರೀಕ್ಷೆಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿಒಟ್ಟು 29 ಮಂದಿ ಅತ್ಯುನ್ನತ ಶ್ರೇಣಿ, 40 ಮಂದಿ ಪ್ರಥಮಶ್ರೇಣಿ ಮತ್ತು 05 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವೈಸಿರಿ ಕಾಲೇಜಿನಲ್ಲಿ ಕಲಿತಿರುವುದಕ್ಕೆ ನಮಗೆ ಸಂತೋಷವಿದೆ. ಇಲ್ಲಿಯ ಕಲಿಕಾ ಪೂರಕ ವಾತಾವರಣ ನಮಗೆ ಅತ್ಯಂತ ಉಲ್ಲಾಸದಾಯಕವಾಗಿತ್ತು. ಶಿಸ್ತುಬದ್ಧ ಬೋಧನೆ, ತರಗತಿಯ ಸುವ್ಯವಸ್ಥೆ ನಮ್ಮನ್ನು ಸದಾ ಓದಿ ನೆಡೆಗೆ ಗಮನ ಹರಿಸುವಂತೆ ಮಾಡಿತ್ತು. ಓದುವಾಗ ಸ್ವಲ್ಪ ಒತ್ತಡ ಎಂದು ಎನಿಸಿದರೂ ಈ ಕ್ಷಣದಲ್ಲಿ ನಿಂತು ಯೋಚಿಸುವಾಗ ಅಷ್ಟೊಂದು ತಾಳ್ಮೆಯಿಂದ ನಮಗೆ ಸಿದ್ಧತಾ ಪರೀಕ್ಷೆಗಳನ್ನು ನಡೆಸಿ, ಮೌಲ್ಯಮಾಪನ ಮಾಡಿಕೊಟ್ಟು, ನಮ್ಮನ್ನು ತಿದ್ದಿದ ಉಪನ್ಯಾಸಕ ವೃಂದಕ್ಕೆ ನಾವು ಆಭಾರಿಗಳಾಗಿದ್ದೇವೆ.ಪ್ರಾಂಶುಪಾಲರಿಗೂ ಆಡಳಿತ ವೃಂದಕ್ಕೂ ನಮ್ಮ ಕೃತಜ್ಞತೆಗಳು ಎಂದು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಪೋಷಕರು ತಮ್ಮ ಮಕ್ಕಳ ಸಾಧನೆಗೆ ಸಂತೋಷ ವ್ಯಕ್ತಪಡಿಸಿ, ಕಾಲೇಜಿನ ಶೈಕ್ಷಣಿಕ ವಾತಾವರಣ ಮತ್ತು ಶಿಸ್ತುಬದ್ಧ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
– ಕೆ.ಬಿ.ಚಂದ್ರಚೂಡ
