ತುಮಕೂರು: ಅಡುಗೆ ಅನಿಲ ದರ ಏರಿಕೆ ಖಂಡಿಸಿ, ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯವೇ ಕಾರಣವೆಂದು ಆಪಾದಿಸಿ, ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಮುಖಂಡರು ಗುರುವಾರ ನಗರದ ಜಿಜಿಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಡಾ.ಎಸ್.ರಫೀಕ್ಅಹ್ಮದ್ ಮಾತನಾಡಿ, ಮಧ್ಯಪ್ರಾಚ್ಯಯುದ್ಧದ ಪರಿಣಾಮ ಅಡುಗೆ ಅನಿಲದ ಸಮಸ್ಯೆ ಎದುರಾಗಿದೆ.ಯುದ್ಧ ನಡೆಯುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಗೊತ್ತಿದ್ದರೂ ಯಾವುದೇ ಪೂರ್ವ ತಯಾರಿ ಮಾಡಿಕೊಳ್ಳದ ಕಾರಣ ಇಂದು ಜನಸಾಮಾನ್ಯರಿಗೆ ಅಡುಗೆ ಅನಿಲದ ಸಮಸ್ಯೆ ಎದುರಾಗಿದೆ.ಈ ನಡುವೆ ಸರ್ಕಾರ ಅಡುಗೆ ಅನಿಲ ಬೆಲೆ ಹೆಚ್ಚಳ ಮಾಡಿ ಗಾಯದ ಮೇಲೆ ಬರೆ ಎಳೆದಿದೆ.ಕೆಲವು ಕಡೆ ಹೆಚ್ಚು ಹಣಕೊಟ್ಟರೂ ಅನಿಲ ಸಿಲಿಂಡರ್ ಸಿಗದಂತಹ ಪರಿಸ್ಥಿತಿ ಎದುರಾಗಿದೆ ಎಂದರು.
ಯುದ್ಧ ಹೀಗೆ ಮುಂದುವರೆದರೆ ಪೆಟ್ರೋಲ್, ಡೀಸೆಲ್ ಬೆಲೆಯೂ ಹೆಚ್ಚಾಗುವ ಆತಂಕವಿದೆ.ಇಂಧನದರ ಹೆಚ್ಚಿದರೆ ಸರಕು ಸಾಗಾಣಿಕೆ ವೆಚ್ಚ ಅಧಿಕವಾಗಿ ಎಲ್ಲಾ ಪದಾರ್ಥಗಳ ಬೆಲೆ ಹೆಚ್ಚಾಗಿ ಜನಸಾಮಾನ್ಯರಿಗೆ ಹೊರೆಯಾಗುತ್ತದೆ.ಇದೆಲ್ಲವೂ ಪ್ರಧಾನಿ ಮೋದಿ ಸರ್ಕಾರದ ಆಡಳಿತ ವೈಫಲ್ಯದ ಫಲ.ಕೇಂದ್ರ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸಮಸ್ಯೆಗಳನ್ನು ಪರಿಹರಿಸಬೇಕು, ಇಲ್ಲವೇ ಪ್ರಧಾನಿ ಮೋದಿ ರಾಜೀನಾಮೆ ನೀಡಿ ಮನೆಗೆ ಹೋಗಬೇಕು ಎಂದು ಡಾ.ರಫೀಕ್ಅಹ್ಮದ್ ಒತ್ತಾಯಿಸಿದರು.
ಮುಖಂಡ ಇಕ್ಬಾಲ್ಅಹ್ಮದ್ ಮಾತನಾಡಿ, ಅಮೆರಿಕಾ ಅಧ್ಯಕ್ಷ ಟ್ರಂಪ್ ಹೇಳಿದಂತೆ ನಡೆದುಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರಿಗೆ ದೇಶದ ಜನರ ಹಿತ ಬೇಕಾಗಿಲ್ಲ, ಅಡುಗೆ ಅನಿಲ ದರ ಏರಿಸಿ ಜನರಿಗೆ ಹೊರೆ ಮಾಡುತ್ತಿರುವಕೇಂದ್ರ ಸರ್ಕಾರ ಮತ್ತೆ ಎತ್ತಿನಗಾಡಿ, ಜಟಕಾಗಾಡಿ, ಸೌದೆ ಒಲೆ ವ್ಯವಸ್ಥೆಗೆ ಜನರನ್ನು ಒಯ್ಯುತ್ತಿದೆ.ಇದೇನಾ ಇವರ ವಿಕಸಿತ ಭಾರತ?ಎಂದು ಟೀಕೆ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ,ಟಿ.ಎಂ.ಮಹೇಶ್, ಫಯಾಜ್ಅಹ್ಮದ್, ನಯಾಜ್ಅಹ್ಮದ್, ಮೆಹಬೂಬ್ ಪಾಷಾ, ಆಟೋರಾಜು, ಸುಜಾತ, ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
– ಕೆ.ಬಿ.ಚಂದ್ರಚೂಡ
